
ಮುಂಬೈಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಆಗಮನ; ಪ್ರಧಾನಿ ಮೋದಿ ಜೊತೆ ಮಾತುಕತೆ
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮಂಗಳವಾರ ಮುಂಬೈಗೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಕ್ಷಣೆ, ಎಐ ಮತ್ತು ಬಾಹ್ಯಾಕಾಶ ಕ್ಷೇತ್ರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಮೂರು ದಿನಗಳ ಭಾರತ ಪ್ರವಾಸದ ಭಾಗವಾಗಿ ಮಂಗಳವಾರ (ಫೆಬ್ರವರಿ 17, 2026) ಮುಂಬೈಗೆ ಆಗಮಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಬಂದಿರುವ ಮ್ಯಾಕ್ರನ್, ಮುಂಬೈನಲ್ಲಿ ಪ್ರಧಾನಿಯವರನ್ನು ಭೇಟಿಯಾಗಿ ಭಾರತ-ಫ್ರಾನ್ಸ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿಯನ್ನು ಪರಾಮರ್ಶಿಸಲಿದ್ದಾರೆ.
ಭವ್ಯ ಸ್ವಾಗತ
ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಫ್ರೆಂಚ್ ಅಧ್ಯಕ್ಷರನ್ನು ಮಹಾರಾಷ್ಟ್ರ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಪ್ರೀತಿಯಿಂದ ಸ್ವಾಗತಿಸಿದರು. ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಸುನೇತ್ರಾ ಪವಾರ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮ್ಯಾಕ್ರನ್ ಅವರ ಆಗಮನದ ನಂತರ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ ಸಿಎಂ ಫಡ್ನವಿಸ್, "ಮುಂಬೈಗೆ ಸುಸ್ವಾಗತ! ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಅವರಿಗೆ ಮಹಾರಾಷ್ಟ್ರದ ಪರವಾಗಿ ಆತ್ಮೀಯ ಸ್ವಾಗತ. ನಿಮ್ಮ ಪ್ರವಾಸವು ಯಶಸ್ವಿಯಾಗಲಿ" ಎಂದು ಶುಭ ಹಾರೈಸಿದ್ದಾರೆ.
ಇನ್ನು ಮುಂಬೈಗೆ ಮ್ಯಾಕ್ರನ್ ಬಂದಿಳಿಯುತ್ತಿದ್ದಂತೆ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಪ್ರತಿಕ್ರಿಯಿಸಿ, "ಭಾರತ ಮತ್ತು ಫ್ರಾನ್ಸ್ ನಡುವಿನ ಬಾಂಧವ್ಯಕ್ಕೆ ಮಹಾರಾಷ್ಟ್ರವು ಸೇತುವೆಯಾಗುತ್ತಿದೆ. ಕೈಗಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಫ್ರೆಂಚ್ ಹೂಡಿಕೆದಾರರಿಗೆ ನಮ್ಮ ರಾಜ್ಯವು ಅತ್ಯುತ್ತಮ ತಾಣವಾಗಿದೆ" ಎಂದು ಹೇಳಿದರು.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಈ ಭೇಟಿಯು ಅತ್ಯಂತ ಮಹತ್ವದ ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ಇಂದು ಮಧ್ಯಾಹ್ನ ಮುಂಬೈನ ಲೋಕ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಉಭಯ ನಾಯಕರು ಜಂಟಿಯಾಗಿ 'ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷ 2026' (India-France Year of Innovation 2026) ಅನ್ನು ಉದ್ಘಾಟಿಸಲಿದ್ದು, ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಹೊಸ ಪರ್ವಕ್ಕೆ ನಾಂದಿ ಹಾಡಲಿದ್ದಾರೆ. ಮುಂಬೈನ ಕಾರ್ಯಕ್ರಮಗಳ ಮುಕ್ತಾಯದ ನಂತರ ಮ್ಯಾಕ್ರನ್ ಅವರು ನವದೆಹಲಿಗೆ ಪ್ರಯಾಣಿಸಲಿದ್ದು, ಅಲ್ಲಿ ಆಯೋಜಿಸಲಾಗಿರುವ ಪ್ರತಿಷ್ಠಿತ 'ಎಐ ಇಂಪ್ಯಾಕ್ಟ್ ಸಮ್ಮಿಟ್'ನಲ್ಲಿ (AI Impact Summit) ಭಾಗವಹಿಸಿ ಕೃತಕ ಬುದ್ಧಿಮತ್ತೆಯ ಜಾಗತಿಕ ಪರಿಣಾಮಗಳ ಕುರಿತು ಚರ್ಚಿಸಲಿದ್ದಾರೆ.
ಉಭಯ ನಾಯಕರು ರಕ್ಷಣಾ ಕ್ಷೇತ್ರದಲ್ಲಿನ ಸಹಕಾರದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ವಿಶೇಷವಾಗಿ ಭಾರತೀಯ ನೌಕಾಪಡೆಗೆ ಅಗತ್ಯವಿರುವ 26 ರಫೇಲ್-ಎಂ (Rafale-M) ಯುದ್ಧ ವಿಮಾನಗಳ ಖರೀದಿ ಒಪ್ಪಂದ ಮತ್ತು ಮೂರು ಹೆಚ್ಚುವರಿ ಸ್ಕಾರ್ಪೀನ್ ದರ್ಜೆಯ ಜಲಂತರ್ಗಾಮಿ ನೌಕೆಗಳ ತಯಾರಿಕೆಗೆ ಸಂಬಂಧಿಸಿದ ಪ್ರಗತಿಯ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.
ಬಾಹ್ಯಾಕಾಶ ಸಹಕಾರ
ಇಸ್ರೋ (ISRO) ಮತ್ತು ಫ್ರಾನ್ಸ್‌ನ ಬಾಹ್ಯಾಕಾಶ ಸಂಸ್ಥೆ (CNES) ನಡುವಿನ ಮುಂದಿನ ಹಂತದ ಸಹಕಾರ, ವಿಶೇಷವಾಗಿ ಜಂಟಿ ಉಪಗ್ರಹ ಉಡಾವಣೆ ಮತ್ತು ಗಗನಯಾನ ಯೋಜನೆಗೆ ಫ್ರಾನ್ಸ್‌ನ ಬೆಂಬಲದ ಬಗ್ಗೆ ಮಾತುಕತೆ ನಡೆಯಲಿದೆ.
ಮಹಾರಾಷ್ಟ್ರದ ಜೈತಾಪುರ ಪರಮಾಣು ವಿದ್ಯುತ್ ಯೋಜನೆಯ ವಿಳಂಬವನ್ನು ತಪ್ಪಿಸಿ, ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಫ್ರೆಂಚ್ ಕಂಪನಿ ಇಡಿಎಫ್ (EDF) ಮತ್ತು ಭಾರತೀಯ ಅಧಿಕಾರಿಗಳ ನಡುವಿನ ಮಾತುಕತೆಗೆ ಈ ಭೇಟಿ ಪುಷ್ಟಿ ನೀಡಲಿದೆ

