
3.25 ಲಕ್ಷ ಕೋಟಿ ರೂ. ವೆಚ್ಚದಲ್ಲಿ 114 ರಫೇಲ್ ಖರೀದಿ; ಮೇಕ್ ಇನ್ ಇಂಡಿಯಾಗೆ ಭಾರಿ ಬಲ!
100 ವಿಮಾನಗಳು ಭಾರತದಲ್ಲೇ ತಯಾರಾಗಲಿದ್ದು, ಟಾಟಾ ಮತ್ತು ಡಸಾಲ್ಟ್ ಸಹಯೋಗದಲ್ಲಿ ಹೈದರಾಬಾದ್‌ನಲ್ಲಿ ಉತ್ಪಾದನಾ ಘಟಕ ಸ್ಥಾಪನೆಯಾಗಲಿದೆ.
ಭಾರತೀಯ ವಾಯುಪಡೆಗಾಗಿ (IAF) ಸುಮಾರು 3.25 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಫ್ರಾನ್ಸ್ ನಿರ್ಮಿತ 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಬೃಹತ್ ಒಪ್ಪಂದಕ್ಕೆ ಈ ವಾರ ರಕ್ಷಣಾ ಸಚಿವಾಲಯವು ಅಂಕಿತ ಹಾಕುವ ಸಾಧ್ಯತೆಯಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ದೆಹಲಿಗೆ ಭೇಟಿ ನೀಡುವ ಕೆಲವೇ ದಿನಗಳ ಮೊದಲು ಈ ಮಹತ್ವದ ಬೆಳವಣಿಗೆ ನಡೆದಿದೆ ಎಂದು ಎನ್‌ಡಿಟಿವ ವರದಿ ಮಾಡಿದೆ.
'ಮೇಕ್ ಇನ್ ಇಂಡಿಯಾ'ಗೆ ಬಲ
ಈ ಒಪ್ಪಂದವು ಭಾರತದ ಅತಿದೊಡ್ಡ ಶಸ್ತ್ರಾಸ್ತ್ರ ಒಪ್ಪಂದವಾಗಲಿದೆ. ವಿಶೇಷವೆಂದರೆ, ಒಟ್ಟು 114 ವಿಮಾನಗಳಲ್ಲಿ ಸುಮಾರು 100 ವಿಮಾನಗಳನ್ನು ಭಾರತದಲ್ಲೇ ತಯಾರಿಸಲು ಉದ್ದೇಶಿಸಲಾಗಿದೆ. ಇದು ಉನ್ನತ ದರ್ಜೆಯ ಯುದ್ಧ ವಿಮಾನ ತಂತ್ರಜ್ಞಾನದ ವರ್ಗಾವಣೆ ಮತ್ತು 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ದೊಡ್ಡ ಬಲ ನೀಡಲಿದೆ.
ಭಾರತದ ರಕ್ಷಣಾ ಸಾಮರ್ಥ್ಯ
ರಫೇಲ್ ಅವಳಿ ಇಂಜಿನ್ ಹೊಂದಿರುವ ಬಹು-ಪಾತ್ರದ ಯುದ್ಧ ವಿಮಾನವಾಗಿದ್ದು, ವಿಶ್ವದ ಅತ್ಯಂತ ಭೀಕರ ಯುದ್ಧ ವಿಮಾನಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಭಾರತ ಈಗಾಗಲೇ 36 ರಫೇಲ್ ವಿಮಾನಗಳನ್ನು ಹೊಂದಿದ್ದು, ಕಳೆದ ಡಿಸೆಂಬರ್‌ನಲ್ಲಿ ಕೊನೆಯ ವಿಮಾನವನ್ನು ಪಡೆಯಲಾಗಿದೆ. ಇತ್ತೀಚೆಗೆ ಭಾರತದ ನೌಕಾಪಡೆಗಾಗಿ 26 ರಫೇಲ್ ವಿಮಾನಗಳನ್ನು 63,000 ಕೋಟಿ ರೂಪಾಯಿ ವೆಚ್ಚದಲ್ಲಿ ಆರ್ಡರ್ ಮಾಡಲಾಗಿದೆ. ಇವುಗಳನ್ನು ಐಎನ್ಎಸ್ ವಿಕ್ರಾಂತ್ ಮತ್ತು ವಿಕ್ರಮಾದಿತ್ಯ ಯುದ್ಧನೌಕೆಗಳಲ್ಲಿ ನಿಯೋಜಿಸಲಾಗುತ್ತದೆ.
ಯುದ್ಧದಲ್ಲಿ ರಫೇಲ್ ಅಬ್ಬರ
ಭಾರತದ ರಫೇಲ್ ವಿಮಾನಗಳು ಈಗಾಗಲೇ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಕಳೆದ ವರ್ಷ ಮೇ ತಿಂಗಳಲ್ಲಿ ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಪ್ರತಿಯಾಗಿ ನಡೆದ 'ಆಪರೇಷನ್ ಸಿಂಧೂರ್' ಮತ್ತು ಲಡಾಖ್ ಗಡಿಯಲ್ಲಿ ಇವುಗಳನ್ನು ಬಳಸಲಾಗಿತ್ತು. ಇವುಗಳು SCALP ನಂತಹ ಬಲಿಷ್ಠ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, 250 ಕಿ.ಮೀ ಗಿಂತಲೂ ದೂರದಲ್ಲಿರುವ ಗುರಿಯನ್ನು ನಿಖರವಾಗಿ ಧ್ವಂಸಗೊಳಿಸಬಲ್ಲವು.
ಟಾಟಾ ಮತ್ತು ಡಸಾಲ್ಟ್ ಸಹಯೋಗ
ಜೂನ್ 2024ರಲ್ಲಿ ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಮತ್ತು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ನಡುವೆ ಉತ್ಪಾದನಾ ಒಪ್ಪಂದ ಏರ್ಪಟ್ಟಿದೆ. ಇದರ ಅಡಿಯಲ್ಲಿ ಹೈದರಾಬಾದ್‌ನಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕ ಸ್ಥಾಪನೆಯಾಗಲಿದ್ದು, ರಫೇಲ್ ವಿಮಾನದ ಪ್ರಮುಖ ಭಾಗಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ. 2028ರ ವೇಳೆಗೆ ಇಲ್ಲಿಂದ ಮೊದಲ ಹಂತದ ಬಿಡಿಭಾಗಗಳು ಹೊರಬರುವ ನಿರೀಕ್ಷೆಯಿದೆ.

