The Cheesecake Factory Bakery enters Bengaluru: First store at Orion Mall
x

ಅಮೆರಿಕದ ಪ್ರಖ್ಯಾತ ಡೆಸರ್ಟ್ ಬ್ರಾಂಡ್ 'ದಿ ಚೀಸ್‌ಕೇಕ್ ಫ್ಯಾಕ್ಟರಿ ಬೇಕರಿ ಕೇಕ್‌ (ಫೋಟೋ: ಎಕ್ಸ್‌ ಕೃಪೆ)

ಬೆಂಗಳೂರಿಗೆ ಕಾಲಿಟ್ಟ 'ದಿ ಚೀಸ್‌ಕೇಕ್ ಫ್ಯಾಕ್ಟರಿ ಬೇಕರಿ': ಓರಿಯನ್ ಮಾಲ್‌ನಲ್ಲಿ ಮೊದಲ ಮಳಿಗೆ

1948ರಲ್ಲಿ ಅಮೆರಿಕದ ಡೆಟ್ರಾಯಿಟ್‌ನಲ್ಲಿ ಒಂದು ಸಣ್ಣ ಕುಟುಂಬದ ಬೇಕರಿಯಾಗಿ ಆರಂಭವಾದ ಈ ಬ್ರಾಂಡ್, ಇಂದು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.


Click the Play button to hear this message in audio format

ಅಮೆರಿಕದ ಪ್ರಖ್ಯಾತ ಡೆಸರ್ಟ್ ಬ್ರಾಂಡ್ 'ದಿ ಚೀಸ್‌ಕೇಕ್ ಫ್ಯಾಕ್ಟರಿ ಬೇಕರಿ' ಇದೀಗ ಅಧಿಕೃತವಾಗಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಭಾರತದ ಚೊಚ್ಚಲ ಮಳಿಗೆಯು ಸಿಲಿಕಾನ್ ಸಿಟಿ ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ ಕಾರ್ಯಾರಂಭ ಮಾಡಿದ್ದು, ಸ್ಥಳೀಯರ ಅಭಿರುಚಿಗೆ ತಕ್ಕಂತೆ ಮೊಟ್ಟೆ ರಹಿತ ಚೀಸ್‌ಕೇಕ್‌ಗಳನ್ನು ಪರಿಚಯಿಸಿದೆ ಎಂದು 'ದಿ ಹಿಂದೂ ಬ್ಯುಸಿನೆಸ್ ಲೈನ್' ವರದಿ ಮಾಡಿದೆ.

1948ರಲ್ಲಿ ಅಮೆರಿಕದ ಡೆಟ್ರಾಯಿಟ್‌ನಲ್ಲಿ ಒಂದು ಸಣ್ಣ ಕುಟುಂಬದ ಬೇಕರಿಯಾಗಿ ಆರಂಭವಾದ ಈ ಬ್ರಾಂಡ್, ಇಂದು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಪ್ರೀಮಿಯಂ ಸಿಹಿಖಾದ್ಯಗಳ ತಯಾರಿಕೆಯಲ್ಲಿ ದಶಕಗಳ ಇತಿಹಾಸ ಹೊಂದಿರುವ ಸಂಸ್ಥೆಯು, ಇದೀಗ ಜಾಗತಿಕ ವಿಸ್ತರಣೆಯ ಭಾಗವಾಗಿ ಭಾರತದತ್ತ ಮುಖಮಾಡಿದೆ. ಬೆಂಗಳೂರಿನ ಓರಿಯನ್ ಮಾಲ್‌ನಲ್ಲಿ ತಲೆಎತ್ತಿರುವ ನೂತನ ಮಳಿಗೆಯು, ಅತ್ಯಾಧುನಿಕ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ವಿಶೇಷವಾಗಿ ನಗರದ ಡೆಸರ್ಟ್ ಪ್ರಿಯರನ್ನು ಗುರಿಯಾಗಿಸಿಕೊಂಡು ಈ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ.

ಸ್ಥಳೀಯರ ಅಭಿರುಚಿಗೆ ತಕ್ಕಂತೆ ಮೆನು ಬದಲು

ಜಾಗತಿಕ ಬ್ರಾಂಡ್ ಆಗಿದ್ದರೂ, ಭಾರತೀಯ ಗ್ರಾಹಕರ ಆಹಾರ ಪದ್ಧತಿ ಮತ್ತು ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಮೆನುವಿನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಸ್ಥಳೀಯರ ಅಭಿರುಚಿಗೆ ಒತ್ತು ನೀಡುವ ನಿಟ್ಟಿನಲ್ಲಿ ಮೊಟ್ಟೆ ರಹಿತ (ಎಗ್‌ಲೆಸ್) ಚೀಸ್‌ಕೇಕ್‌ಗಳನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಸಂಸ್ಥೆಯ ಜನಪ್ರಿಯ ಮತ್ತು ಸಿಗ್ನೇಚರ್ ಸಿಹಿಖಾದ್ಯವಾದ 'ಬನಾನಾ ಕ್ಯಾರಮೆಲ್ ಚೀಸ್‌ಕೇಕ್' ಸೇರಿದಂತೆ ಹಲವು ಬಗೆಯ ಆಕರ್ಷಕ ಡೆಸರ್ಟ್‌ಗಳು ಗ್ರಾಹಕರಿಗೆ ಲಭ್ಯವಿವೆ. ಅಮೆರಿಕದ ಅಸಲಿ ರುಚಿಯನ್ನು ಉಳಿಸಿಕೊಂಡೇ, ಭಾರತೀಯರ ಬಾಯಿಗೆ ಸರಿಹೊಂದುವಂತೆ ಈ ಖಾದ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ.

250 ಕೋಟಿ ರೂ. ಆದಾಯದ ಗುರಿ

ಭಾರತದಲ್ಲಿ ತನ್ನ ವಹಿವಾಟು ವಿಸ್ತರಿಸಲು 'ದಿ ಚೀಸ್‌ಕೇಕ್ ಫ್ಯಾಕ್ಟರಿ ಬೇಕರಿ'ಯ ಜಾಗತಿಕ ಘಟಕವು, ಮುಂಬೈ ಮೂಲದ 'ದಿ ಗೌರ್ಮೆಟ್ ಕೆಫೆ' ಜೊತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತ ಒಟ್ಟು 55 ಮಳಿಗೆಗಳನ್ನು ತೆರೆಯುವ ಬೃಹತ್ ಗುರಿಯನ್ನು ಸಂಸ್ಥೆ ಹೊಂದಿದೆ. ಈ ವಿಸ್ತರಣೆಯ ಮೂಲಕ ಬರೋಬ್ಬರಿ 250 ಕೋಟಿ ರೂಪಾಯಿ ಆದಾಯ ಗಳಿಸುವ ಗುರಿಯನ್ನು ವ್ಯಾಪಾರ ಪಾಲುದಾರರು ನಿಗದಿಪಡಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಆಹಾರ ಮತ್ತು ಪಾನೀಯ (F&B) ಮಾರುಕಟ್ಟೆಯಲ್ಲಿ ಭದ್ರ ಬುನಾದಿ ಹಾಕಲು ಸಂಸ್ಥೆ ಸಜ್ಜಾಗಿದೆ.

ಜಾಗತಿಕ ಬ್ರಾಂಡ್‌ಗಳ ನೆಚ್ಚಿನ ತಾಣ ಬೆಂಗಳೂರು

ಅಂತಾರಾಷ್ಟ್ರೀಯ ಮಟ್ಟದ ಪ್ರೀಮಿಯಂ ಆಹಾರ ಮತ್ತು ಪಾನೀಯ (F&B) ಬ್ರಾಂಡ್‌ಗಳಿಗೆ ಭಾರತವನ್ನು ಪ್ರವೇಶಿಸಲು ಬೆಂಗಳೂರು ನಗರವು ಪ್ರಮುಖ ಹೆಬ್ಬಾಗಿಲಾಗಿ ಮಾರ್ಪಟ್ಟಿದೆ ಎಂಬುದನ್ನು ಈ ಬೆಳವಣಿಗೆ ಮತ್ತೊಮ್ಮೆ ಸಾಬೀತುಪಡಿಸಿದೆ. ಐಷಾರಾಮಿ ಮತ್ತು ಹೊಸ ಬಗೆಯ ಖಾದ್ಯಗಳನ್ನು ಸವಿಯಲು ಇಷ್ಟಪಡುವ ಗ್ರಾಹಕರ ದೊಡ್ಡ ವರ್ಗವೇ ಬೆಂಗಳೂರಿನಲ್ಲಿದ್ದು, ಮುಂಬೈ ಅಥವಾ ದೆಹಲಿಗಿಂತ ಮುಂಚಿತವಾಗಿ ಜಾಗತಿಕ ಬ್ರಾಂಡ್‌ಗಳು ಈ ನಗರವನ್ನೇ ತಮ್ಮ ಮೊದಲ ಆಯ್ಕೆಯನ್ನಾಗಿ ಮಾಡಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ.

Read More
Next Story