ಅಮೆರಿಕ ಜೊತೆ ಆಟವಾಡುವ ಪ್ರಯತ್ನ ಮಾಡಿದ್ರೆ ಸುಂಕ ಮತ್ತಷ್ಟು ಹೆಚ್ಚಳ- ಟ್ರಂಪ್‌ ಬೆದರಿಕೆ
x
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಅಮೆರಿಕ ಜೊತೆ ಆಟವಾಡುವ ಪ್ರಯತ್ನ ಮಾಡಿದ್ರೆ ಸುಂಕ ಮತ್ತಷ್ಟು ಹೆಚ್ಚಳ- ಟ್ರಂಪ್‌ ಬೆದರಿಕೆ

ಯಾವ ದೇಶಗಳು ಸುಪ್ರೀಂ ಕೋರ್ಟ್ ತೀರ್ಪನ್ನು ಇಟ್ಟುಕೊಂಡು ನಮ್ಮೊಂದಿಗೆ ಆಟವಾಡಲು ಯತ್ನಿಸುತ್ತಿವೆಯೋ, ಅವುಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಸುಂಕ ವಿಧಿಸಲಾಗುವುದು," ಎಂದು ಟ್ರಂಪ್‌ ಗುಡುಗಿದ್ದಾರೆ.


Click the Play button to hear this message in audio format

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ (ಫೆಬ್ರವರಿ 23, 2026) ವಿಶ್ವದ ವಿವಿಧ ದೇಶಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದು, ಸುಪ್ರೀಂ ಕೋರ್ಟ್ ತಮ್ಮ ಸುಂಕದ ನಿರ್ಧಾರವನ್ನು ರದ್ದುಗೊಳಿಸಿದ್ದರೂ ಮತ್ತೆ ಸಮರ ಸಾರಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಮದು ತೆರಿಗೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಹಾಸ್ಯಾಸ್ಪದ ಎಂದು ಕರೆದಿದ್ದಾರೆ. ಕೋರ್ಟ್ ತೀರ್ಪಿನ ಹೊರತಾಗಿಯೂ, ಅವರು ಜಾಗತಿಕ ಸುಂಕವನ್ನು ಈ ಹಿಂದೆ ಘೋಷಿಸಿದ್ದ ಶೇ. 10ರಿಂದ ಶೇ. 15ಕ್ಕೆ ಏರಿಸುವುದಾಗಿ ಸೋಮವಾರ ಘೋಷಿಸಿದ್ದಾರೆ.

ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಬರೆದುಕೊಂಡಿರುವ ಟ್ರಂಪ್, "ಯಾವ ದೇಶಗಳು ಅಮೆರಿಕವನ್ನು ದಶಕಗಳಿಂದ ಲೂಟಿ ಮಾಡುತ್ತಿವೆಯೋ ಮತ್ತು ಸುಪ್ರೀಂ ಕೋರ್ಟ್ ತೀರ್ಪನ್ನು ಇಟ್ಟುಕೊಂಡು ನಮ್ಮೊಂದಿಗೆ ಆಟವಾಡಲು ಯತ್ನಿಸುತ್ತಿವೆಯೋ, ಅವುಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಸುಂಕ ವಿಧಿಸಲಾಗುವುದು," ಎಂದು ಗುಡುಗಿದ್ದಾರೆ. ಅಲ್ಲದೆ, ಪರವಾನಗಿಗಳ ಮೂಲಕ ವಿದೇಶಿ ರಾಷ್ಟ್ರಗಳಿಗೆ ಭೀಕರ ಪಾಠ ಕಲಿಸುವುದಾಗಿ ಅವರು ಬೆದರಿಕೆ ಹಾಕಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಮತ್ತು ಟ್ರಂಪ್ ಪ್ರತಿಕ್ರಿಯೆ

ಅಧ್ಯಕ್ಷರು ತುರ್ತು ಪರಿಸ್ಥಿತಿಯ ಅಧಿಕಾರವನ್ನು ಬಳಸಿ ಜಗತ್ತಿನ ಎಲ್ಲ ದೇಶಗಳ ಮೇಲೆ ಸುಂಕ ವಿಧಿಸುವುದು ತಪ್ಪು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಇದನ್ನು ಟ್ರಂಪ್ "ಹಾಸ್ಯಾಸ್ಪದ" ಎಂದು ಕರೆದಿದ್ದಾರೆ. ನ್ಯಾಯಾಲಯದ ಮೇಲೆ ತಮಗಿರುವ ಅಸಮಾಧಾನವನ್ನು ತೋರಿಸಲು ಅವರು ಸುಪ್ರೀಂ ಕೋರ್ಟ್ ಹೆಸರನ್ನು ಇನ್ನು ಮುಂದೆ ಸಣ್ಣ ಅಕ್ಷರಗಳಲ್ಲಿ ಬರೆಯುವುದಾಗಿ ಹೇಳಿದ್ದಾರೆ.

ಶೇ. 10ರಿಂದ ಶೇ. 15ಕ್ಕೆ ಏರಿಕೆ

ಸುಪ್ರೀಂ ಕೋರ್ಟ್ ತೀರ್ಪು ಬಂದ ಬೆನ್ನಲ್ಲೇ ಮೊದಲು ಶೇ. 10ರಷ್ಟು ಸುಂಕ ಘೋಷಿಸಿದ್ದ ಟ್ರಂಪ್, ಈಗ ಅದನ್ನು ಶೇ. 15ಕ್ಕೆ ಏರಿಸಿದ್ದಾರೆ. ಯಾವ ದೇಶಗಳು ಸುಪ್ರೀಂ ಕೋರ್ಟ್ ತೀರ್ಪನ್ನು ಮುಂದಿಟ್ಟುಕೊಂಡು ಅಮೆರಿಕಕ್ಕೆ ರಿಯಾಯಿತಿ ಕೇಳುತ್ತವೆಯೋ ಅಥವಾ "ಆಟವಾಡುತ್ತವೆಯೋ", ಅಂತಹ ದೇಶಗಳಿಗೆ "ಭೀಕರ" ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪರವಾನಗಿ ಅಸ್ತ್ರ

ಟ್ರಂಪ್ ಅವರು ಕೇವಲ ಸುಂಕ ಮಾತ್ರವಲ್ಲದೆ, ವಿದೇಶಿ ಕಂಪನಿಗಳಿಗೆ ನೀಡುವ ಪರವಾನಗಿಗಳ ಮೇಲೆ ಭಾರಿ ಶುಲ್ಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. "ದಶಕಗಳಿಂದ ಅಮೆರಿಕವನ್ನು ಲೂಟಿ ಮಾಡುತ್ತಿರುವ" ದೇಶಗಳಿಗೆ ಇದು ದೊಡ್ಡ ಹೊಡೆತ ನೀಡಲಿದೆ ಎಂಬುದು ಅವರ ವಾದ.

ಕಾಂಗ್ರೆಸ್ ಅನುಮತಿಯ ಅಗತ್ಯವಿಲ್ಲ!

ಸಾಮಾನ್ಯವಾಗಿ ಅಮೆರಿಕದಲ್ಲಿ ಯಾವುದೇ ತೆರಿಗೆ ಬದಲಾವಣೆಗೆ ಸಂಸತ್ತಿನ (Congress) ಅನುಮತಿ ಬೇಕು. ಆದರೆ ಟ್ರಂಪ್ ಅವರು "ನನಗೆ ಯಾರ ಅನುಮತಿಯೂ ಬೇಕಿಲ್ಲ, ಹಳೆಯ ಕಾನೂನುಗಳಲ್ಲೇ ನನಗೆ ಈ ಅಧಿಕಾರ ಸಿಕ್ಕಿದೆ" ಎಂದು ಪ್ರತಿಪಾದಿಸುತ್ತಿದ್ದಾರೆ.

ಇದರಿಂದ ಆಗುವ ಪರಿಣಾಮಗಳೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ಇತ್ತೀಚಿನ ಆಮದು ಸುಂಕದ ನೀತಿಯು ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ; ಈ ನಿರ್ಧಾರದಿಂದ ಭಾರತ ಸೇರಿದಂತೆ ಹಲವು ದೇಶಗಳಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳು ದುಬಾರಿಯಾಗಿ ಜಾಗತಿಕ ವ್ಯಾಪಾರಕ್ಕೆ ಪೆಟ್ಟು ಬೀಳಲಿದ್ದು, ಹೂಡಿಕೆದಾರರಲ್ಲಿ ಮೂಡಿರುವ ಆತಂಕದಿಂದಾಗಿ ಅಮೆರಿಕದ ಪ್ರಮುಖ ಷೇರು ಮಾರುಕಟ್ಟೆಗಳಾದ Dow Jones, S&P 500 ಮತ್ತು Nasdaq ಈಗಾಗಲೇ ಭಾರಿ ಕುಸಿತ ಕಂಡಿವೆ. ಅಲ್ಲದೆ, ಆಮದು ವಸ್ತುಗಳ ಮೇಲಿನ ತೆರಿಗೆ ಹೆಚ್ಚಳವು ಅಂತಿಮವಾಗಿ ಅಮೆರಿಕದ ಸಾಮಾನ್ಯ ಗ್ರಾಹಕರ ಮೇಲೆ ಬೆಲೆ ಏರಿಕೆಯ ಬರೆ ಎಳೆದು ಹಣದುಬ್ಬರಕ್ಕೆ ದಾರಿ ಮಾಡಿಕೊಡಲಿದೆ.

Read More
Next Story