ಸುಪ್ರೀಂ ಕೋರ್ಟ್ ತಡೆ ನಡುವೆಯೂ ಆಮದು ಸುಂಕವನ್ನು ಶೇ. 15ಕ್ಕೆ ಹೆಚ್ಚಿಸಲು ಟ್ರಂಪ್‌ಗೆ ಸಾಧ್ಯವೇ?
x

ಸುಪ್ರೀಂ ಕೋರ್ಟ್ ತಡೆ ನಡುವೆಯೂ ಆಮದು ಸುಂಕವನ್ನು ಶೇ. 15ಕ್ಕೆ ಹೆಚ್ಚಿಸಲು ಟ್ರಂಪ್‌ಗೆ ಸಾಧ್ಯವೇ?

ಸುಪ್ರೀಂ ಕೋರ್ಟ್​​ ತೀರ್ಪಿನಿಂದ ತೀವ್ರ ಅಸಮಾಧಾನಗೊಂಡಿರುವ ಟ್ರಂಪ್, ತಮ್ಮ ವಿರುದ್ಧ ತೀರ್ಪು ನೀಡಿದ ಡೆಮಾಕ್ರಟಿಕ್ ನ್ಯಾಯಮೂರ್ತಿಗಳನ್ನು "ರಾಷ್ಟ್ರಕ್ಕೆ ಕಳಂಕ" ಎಂದು ಜರಿದಿದ್ದಾರೆ.


Click the Play button to hear this message in audio format

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾರಿಗೆ ತಂದಿದ್ದ ಜಾಗತಿಕ ಆಮದು ಸುಂಕದ (Global Tariff) ಕಾರ್ಯಕ್ರಮವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ, ತಾನು ಹೊಸದಾಗಿ ವಿಧಿಸಿರುವ ಸುಂಕವನ್ನು ಶೇ. 15ಕ್ಕೆ ಹೆಚ್ಚಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ನಂತರವೂ, ಕಾನೂನಿನ ಮಿತಿಯೊಳಗೆ ಅವರು ಈ ರೀತಿ ಮಾಡಲು ಸಾಧ್ಯವೇ ಎಂಬ ಹೊಸಚರ್ಚೆಗೆ ಈ ಬೆಳವಣಿಗೆ ನಾಂದಿ ಹಾಡಿದೆ.

ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯ ಅಡಿಯಲ್ಲಿ ಕಳೆದ ವರ್ಷ ಟ್ರಂಪ್ ವಿಧಿಸಿದ್ದ ವಿವಾದಾತ್ಮಕ "ಪರಸ್ಪರ ಸುಂಕಗಳು" ಕಾನೂನುಬಾಹಿರ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ಶುಕ್ರವಾರ 6-3 ಬಹುಮತದ ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು. ಇಂತಹ ವ್ಯಾಪಕ ಆಧಾರಿತ ವ್ಯಾಪಾರ ಕ್ರಮಗಳಿಗೆ ತುರ್ತು ಅಧಿಕಾರ ಕಾಯ್ದೆ ಅನುಮತಿ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಈ ತೀರ್ಪಿನಿಂದ ತೀವ್ರ ಅಸಮಾಧಾನಗೊಂಡಿರುವ ಟ್ರಂಪ್, ತಮ್ಮ ವಿರುದ್ಧ ತೀರ್ಪು ನೀಡಿದ ಡೆಮಾಕ್ರಟಿಕ್ ನ್ಯಾಯಮೂರ್ತಿಗಳನ್ನು "ರಾಷ್ಟ್ರಕ್ಕೆ ಕಳಂಕ" ಎಂದು ಜರಿದಿದ್ದಾರೆ. ಅಲ್ಲದೆ, ಬಹುಮತದ ತೀರ್ಪನ್ನು ಬೆಂಬಲಿಸಿದ ಸಂಪ್ರದಾಯವಾದಿ ನ್ಯಾಯಮೂರ್ತಿಗಳ ಬಗ್ಗೆ ತಮಗೆ "ನಾಚಿಕೆಯಾಗುತ್ತಿದೆ" ಎಂದು ಕಿಡಿಕಾರಿರುವ ಅವರು, ಈ ತೀರ್ಪನ್ನು "ಭಯಾನಕ" ಮತ್ತು "ದೋಷಪೂರಿತ" ಎಂದು ಟೀಕಿಸಿದ್ದಾರೆ.

ಸೆಕ್ಷನ್ 122ರ ಮೊರೆ ಹೋದ ಡೊನಾಲ್ಡ್ ಟ್ರಂಪ್

'ಪೊಲಿಟಿಕೊ' ವರದಿಯ ಪ್ರಕಾರ, "ದೊಡ್ಡ ಮತ್ತು ಗಂಭೀರವಾದ ಪಾವತಿ-ಬಾಕಿ ಕೊರತೆಯನ್ನು" ಸರಿದೂಗಿಸಲು 150 ದಿನಗಳಿಗಿಂತ ಮೀರದಂತೆ ಗರಿಷ್ಠ ಶೇ. 15ರವರೆಗೆ ಸುಂಕ ವಿಧಿಸಲು ಅಧ್ಯಕ್ಷರಿಗೆ ಅನುಮತಿಸುವ '1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122' ಅನ್ನು ಟ್ರಂಪ್ ಶನಿವಾರ (ಫೆಬ್ರವರಿ 22) ಜಾರಿಗೆ ತಂದಿದ್ದಾರೆ. ಇದು ಅಮೆರಿಕದ ಇತಿಹಾಸದಲ್ಲಿ ಅಪರೂಪವಾಗಿ ಬಳಕೆಯಾಗುವ ನಿಬಂಧನೆಯಾಗಿದ್ದು, ಈ ಹಿಂದೆ ಯಾವುದೇ ಅಮೆರಿಕನ್ ಅಧ್ಯಕ್ಷರು ಸೆಕ್ಷನ್ 122 ಅನ್ನು ಬಳಸಿಲ್ಲ.

"ನಿನ್ನೆ ಸುಪ್ರೀಂ ಕೋರ್ಟ್ ನೀಡಿದ ಹಾಸ್ಯಾಸ್ಪದ, ಕಳಪೆಯಾಗಿ ಬರೆಯಲಾದ ಮತ್ತು ಅಸಾಮಾನ್ಯ ಅಮೆರಿಕ-ವಿರೋಧಿ ತೀರ್ಪಿನ ವಿವರವಾದ ವಿಮರ್ಶೆಯ ಆಧಾರದ ಮೇಲೆ, ಅಮೆರಿಕದ ಅಧ್ಯಕ್ಷನಾಗಿ ನಾನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಶ್ವಾದ್ಯಂತ ದೇಶಗಳ ಮೇಲಿನ ಶೇ. 10ರಷ್ಟು ಸುಂಕವನ್ನು, ಕಾನೂನುಬದ್ಧವಾಗಿ ಅನುಮತಿಸಲಾದ ಶೇ. 15ರ ಮಟ್ಟಕ್ಕೆ ಹೆಚ್ಚಿಸುತ್ತಿದ್ದೇನೆ" ಎಂದು ಟ್ರಂಪ್ ತಮ್ಮ 'ಟ್ರುತ್ ಸೋಶಿಯಲ್' ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಜಾಗತಿಕ ಸುಂಕವನ್ನು ಶೇ. 10ರಿಂದ ಶೇ. 15ಕ್ಕೆ ಹೆಚ್ಚಿಸುವ ಮೂಲಕ, ಟ್ರಂಪ್ ಆ ಕಾನೂನಿನಡಿ ಲಭ್ಯವಿರುವ ಗರಿಷ್ಠ ಅಧಿಕಾರವನ್ನು ಬಳಸಿಕೊಂಡಿದ್ದಾರೆ. ಕಾನೂನಿನ ಪ್ರಕಾರ, 150 ದಿನಗಳಿಗಿಂತ ಹೆಚ್ಚು ಕಾಲ ಇದನ್ನು ವಿಸ್ತರಿಸಬೇಕಾದರೆ, ಆ ನಿರ್ಧಾರಕ್ಕೆ ಸಂಸತ್ತಿನ (ಕಾಂಗ್ರೆಸ್) ಅನುಮೋದನೆ ಕಡ್ಡಾಯವಾಗಿದೆ.

ವಕೀಲ ನೀಲ್ ಕತ್ಯಾಲ್ ವಿರೋಧ

ಟ್ರಂಪ್ ಅವರಿಗೆ ಸುಂಕ ವಿಧಿಸುವ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ. ಬದಲಾಗಿ, ಅವರು ಅವಲಂಬಿಸಿದ್ದ ತುರ್ತು ಕಾನೂನು, ಏಕಪಕ್ಷೀಯವಾಗಿ ಎಲ್ಲದರ ಮೇಲೂ ಆಮದು ಸುಂಕ ವಿಧಿಸಲು ಅನುಮತಿಸುವುದಿಲ್ಲ ಎಂದು ಮಾತ್ರ ತೀರ್ಪು ನೀಡಿದೆ. ಸೆಕ್ಷನ್ 122, ವ್ಯಾಪಾರ ಅಸಮತೋಲನವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಕಾನೂನಾಗಿದ್ದು, ಇದು ಐಇಇಪಿಎಗಿಂತ ಭಿನ್ನವಾಗಿದೆ. ಆದರೆ, ಇತ್ತೀಚೆಗಷ್ಟೇ ಟ್ರಂಪ್ ಅವರ ಸುಂಕದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಜಯಗಳಿಸಿದ್ದ ಭಾರತೀಯ ಮೂಲದ ಅಮೆರಿಕನ್ ವಕೀಲ ನೀಲ್ ಕತ್ಯಾಲ್, ಸೆಕ್ಷನ್ 122ರ ಬಳಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

"ತುರ್ತು ಪರಿಸ್ಥಿತಿಯನ್ನು ಘೋಷಿಸುವಾಗ ಅಧ್ಯಕ್ಷರು ಗುರುತಿಸಿರುವ ಕಾಳಜಿಗಳು 'ವ್ಯಾಪಾರ ಕೊರತೆ'ಯಿಂದ ಉದ್ಭವಿಸಿವೆ. ಆದರೆ, ಸೆಕ್ಷನ್ 122 ಕೇವಲ 'ಪಾವತಿ-ಬಾಕಿ ಕೊರತೆ'ಗೆ ಅನ್ವಯಿಸುತ್ತದೆ. ಇವೆರಡೂ ಪರಿಕಲ್ಪನಾತ್ಮಕವಾಗಿ ವಿಭಿನ್ನವಾಗಿವೆ. ಹೀಗಿರುವಾಗ ಅಧ್ಯಕ್ಷರು ಸೆಕ್ಷನ್ 122 ಅನ್ನು ನೆಚ್ಚಿಕೊಳ್ಳುವುದು ಕಷ್ಟ. ಅವರಿಗೆ ವ್ಯಾಪಕವಾದ ಸುಂಕಗಳು ಬೇಕಾಗಿದ್ದರೆ, ಅವರು ನೇರವಾಗಿ ಕಾಂಗ್ರೆಸ್ (ಸಂಸತ್ತಿನ) ಬಳಿ ಹೋಗಬೇಕು. ಅವರ ಸುಂಕದ ಐಡಿಯಾ ಅಷ್ಟೊಂದು ಉತ್ತಮವಾಗಿದ್ದರೆ, ಕಾಂಗ್ರೆಸ್ ಮನವೊಲಿಸಲು ಅವರಿಗೆ ಯಾವುದೇ ತೊಂದರೆಯಾಗಬಾರದು. ನಮ್ಮ ಸಂವಿಧಾನ ಬಯಸುವುದು ಇದನ್ನೇ" ಎಂದು ಕತ್ಯಾಲ್ 'ಎಕ್ಸ್' (X) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇತರ ಕಾನೂನು ಮಾರ್ಗಗಳು ಮತ್ತು ಮರುಪಾವತಿ ಸವಾಲು

ಸುಂಕ ವಿಧಿಸಲು ಟ್ರಂಪ್‌ಗೆ ಇತರ ಕಾನೂನು ಮಾರ್ಗಗಳಿದ್ದರೂ, ಯಾವುದೂ ಸರಳವಾಗಿಲ್ಲ. ಉದಾಹರಣೆಗೆ, 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 301ರ ಅಡಿ ಸುಂಕ ವಿಧಿಸಬಹುದಾದರೂ, ಅದಕ್ಕೆ ಮುನ್ನ 'ಅನ್ಯಾಯದ ವ್ಯಾಪಾರ ಪದ್ಧತಿಗಳ' ಬಗ್ಗೆ ಔಪಚಾರಿಕ ತನಿಖೆ ನಡೆಯಬೇಕು. ಈ ಪ್ರಕ್ರಿಯೆಗೆ ತಿಂಗಳುಗಳೇ ಬೇಕಾಗಬಹುದು. ಅಂತೆಯೇ, 1962ರ ವ್ಯಾಪಾರ ವಿಸ್ತರಣೆ ಕಾಯ್ದೆಯ ಸೆಕ್ಷನ್ 232ರ ಅಡಿ ರಾಷ್ಟ್ರೀಯ ಭದ್ರತೆಯ ಆಧಾರದ ಮೇಲೆ ನಿರ್ದಿಷ್ಟ ಉತ್ಪನ್ನಗಳ ಮೇಲೆ ಸುಂಕ ವಿಧಿಸಬಹುದು (2018ರಲ್ಲಿ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ವಿಧಿಸಿದಂತೆ). ಆದರೆ, ಇದನ್ನು ಬಳಸಿಕೊಂಡು ಒಟ್ಟಾರೆಯಾಗಿ ಜಾಗತಿಕ ಸುಂಕ ವಿಧಿಸುವಂತಿಲ್ಲ.

ಇನ್ನೊಂದೆಡೆ, ಐಇಇಪಿಎ ಅಡಿ ಸಂಗ್ರಹಿಸಲಾದ ಸುಂಕಗಳು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದರಿಂದ, ಸುಮಾರು 175 ಬಿಲಿಯನ್ ಡಾಲರ್ ಮರುಪಾವತಿ ಮಾಡಬೇಕಾದ (Refund) ಭಾರಿ ಆರ್ಥಿಕ ಸವಾಲು ಎದುರಾಗಿದೆ. ಮರುಪಾವತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಸುಪ್ರೀಂ ಕೋರ್ಟ್ ವಿವರಿಸಿಲ್ಲವಾದ್ದರಿಂದ, ಈ ಜವಾಬ್ದಾರಿ ಕೆಳ ನ್ಯಾಯಾಲಯಗಳ ಹೆಗಲೇರಿದೆ. ಒಟ್ಟಾರೆಯಾಗಿ, ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಟ್ರಂಪ್ ಸುಂಕವನ್ನು ಶೇ. 15ಕ್ಕೆ ಹೆಚ್ಚಿಸಬಹುದೇ ಎಂಬ ಪ್ರಶ್ನೆಗೆ ಉತ್ತರ; ಸದ್ಯಕ್ಕೆ ಅವರು 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122ರ ಅಡಿಯಲ್ಲಿ ಕೇವಲ 150 ದಿನಗಳವರೆಗೆ ಮಾತ್ರ ಈ ಕ್ರಮ ಕೈಗೊಳ್ಳಬಹುದು. ಆ ಅವಧಿ ಮೀರಿದರೆ, ಕಾಂಗ್ರೆಸ್ ಅನುಮೋದನೆ ಕಡ್ಡಾಯ.

Read More
Next Story