
ಒಬ್ಬಾತ ಯುವತಿ ಹಾಗೂ ಪತ್ರಕರ್ತನೆಂದು ಹೇಳಿಕೊಂಡ ವ್ಯಕ್ತಿಯ ವಿರುದ್ಧ ಸುಲಿಗೆ ಹಾಗೂ ಬ್ಲ್ಯಾಕ್‌ಮೇಲ್ ಯತ್ನದ ದೂರು ದಾಖಲಿಸಿರುವುದು ಪೊಲೀಸ್ ದಾಖಲೆಗಳಿಂದ ಬಹಿರಂಗವಾಗಿದೆ.
ಬೆಂಗಳೂರು ವಿಲ್ಲಾ ಪಾರ್ಟಿ ಗ್ಯಾಂಗ್‌ರೇಪ್ ಕೇಸ್‌ಗೆ ತಿರುವು: ಸಂತ್ರಸ್ತೆ ವಿರುದ್ಧವೇ ಸುಲಿಗೆ ದೂರು
ಪ್ರತಿಷ್ಠಿತ ಜಕ್ಕೂರಿನ ವಿಲ್ಲಾವೊಂದರಲ್ಲಿ ನಡೆದ ಪಾರ್ಟಿಯ ವೇಳೆ 19 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಈಗ ಅನಿರೀಕ್ಷಿತ ತಿರುವು ಸಿಕ್ಕಿದೆ.
ಪ್ರತಿಷ್ಠಿತ ಜಕ್ಕೂರಿನ ವಿಲ್ಲಾವೊಂದರಲ್ಲಿ ನಡೆದ ಪಾರ್ಟಿಯ ವೇಳೆ 19 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಈಗ ಅನಿರೀಕ್ಷಿತ ತಿರುವು ಸಿಕ್ಕಿದೆ. ಅತ್ಯಾಚಾರದ ದೂರು ದಾಖಲಾಗುವ ಒಂದು ದಿನ ಮುನ್ನವೇ, ಆರೋಪಿಗಳಲ್ಲಿ ಒಬ್ಬಾತ ಯುವತಿ ಹಾಗೂ ಪತ್ರಕರ್ತನೆಂದು ಹೇಳಿಕೊಂಡ ವ್ಯಕ್ತಿಯ ವಿರುದ್ಧ ಸುಲಿಗೆ ಹಾಗೂ ಬ್ಲ್ಯಾಕ್‌ಮೇಲ್ ಯತ್ನದ ದೂರು ದಾಖಲಿಸಿರುವುದು ಪೊಲೀಸ್ ದಾಖಲೆಗಳಿಂದ ಬಹಿರಂಗವಾಗಿದೆ.
ಫೆಬ್ರವರಿ 21ರಂದು ದೂರು ದಾಖಲಿಸಿರುವ ಆರೋಪಿ, ಪ್ರಾದೇಶಿಕ ಸುದ್ದಿ ವಾಹಿನಿಯೊಂದರ ಪತ್ರಕರ್ತ 'ಇಮ್ರಾನ್' ಎಂದು ಹೇಳಿಕೊಂಡ ವ್ಯಕ್ತಿ ಹಾಗೂ ಯುವತಿ ಸೇರಿಕೊಂಡು ತನ್ನ ಬಳಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಹಣ ನೀಡದಿದ್ದರೆ ಮಾನಹಾನಿಕರ ಕಂಟೆಂಟ್ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾನೆ. ಯುವತಿಯು ಡಿಕ್ಸನ್ ಸ್ಯಾಂಡೋ ಮತ್ತು ನಿಖಿಲ್ ಎಂಬುವವರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡುವ ಒಂದು ದಿನ ಮುಂಚಿತವಾಗಿಯೇ ಈ ಸುಲಿಗೆಯ ದೂರು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗಳ ನಿಖರ ಅನುಕ್ರಮವನ್ನು ಅರಿಯಲು ಪೊಲೀಸರು ಇದೀಗ ಎರಡೂ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ಬ್ಲ್ಯಾಕ್‌ಮೇಲ್ ಆರೋಪ
ದೂರುದಾರ ನಿಖಿಲ್ ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, ಆತ ಕಳೆದ ಎರಡು ದಶಕಗಳಿಂದ ಪ್ರಸ್ತುತ ವಿಳಾಸದಲ್ಲಿ ವಾಸವಿದ್ದು, ರಾಜಾಜಿನಗರದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟದ ವ್ಯವಹಾರ ನಡೆಸುತ್ತಿದ್ದಾನೆ. ಜೊತೆಗೆ ಜಕ್ಕೂರಿನಲ್ಲಿ ಗುತ್ತಿಗೆ ಪಡೆದಿರುವ ವಿಲ್ಲಾವೊಂದನ್ನು ಸಣ್ಣಪುಟ್ಟ ಕಾರ್ಯಕ್ರಮಗಳು ಹಾಗೂ ಪಾರ್ಟಿಗಳಿಗೆ ಬಾಡಿಗೆಗೆ ನೀಡುತ್ತಿರುವುದಾಗಿ ತಿಳಿಸಿದ್ದಾನೆ. ಆತನ ಸ್ನೇಹಿತ ಡಿಕ್ಸನ್ ಪ್ರೇಮಿಗಳ ದಿನಾಚರಣೆ (ವ್ಯಾಲೆಂಟೈನ್ಸ್ ಡೇ) ಪ್ರಯುಕ್ತ ಫೆಬ್ರವರಿ 14 ರಿಂದ 16 ರವರೆಗೆ ಪಾರ್ಟಿಗಾಗಿ ಈ ವಿಲ್ಲಾವನ್ನು ಕಾಯ್ದಿರಿಸಿದ್ದ. ಫೆಬ್ರವರಿ 14ರ ಮುಂಜಾನೆ 2 ಗಂಟೆ ಸುಮಾರಿಗೆ ತಾನು ಪಾರ್ಟಿಗೆ ಹೋದಾಗ ಅಲ್ಲಿ ಯುವತಿಯ ಪರಿಚಯವಾಯಿತು ಎಂದು ಆತ ವಿವರಿಸಿದ್ದಾನೆ.
ಪಾರ್ಟಿ ವೇಳೆ ಯುವತಿ ತನ್ನ ವೈಯಕ್ತಿಕ ಸಮಸ್ಯೆಗಳನ್ನು ಹಂಚಿಕೊಂಡಿದ್ದಲ್ಲದೆ, ಅತಿ ಸಲುಗೆಯಿಂದ ವರ್ತಿಸಿದಳು. ಆದರೆ ತಾನು ಅದಕ್ಕೆ ಪ್ರೋತ್ಸಾಹ ನೀಡಲಿಲ್ಲ. ಬಳಿಕ ಬೆಳಿಗ್ಗೆ 4 ಗಂಟೆಗೆ ಪಾರ್ಟಿ ಮುಗಿದಾಗ ಯುವತಿ ತನ್ನನ್ನು ಡ್ರಾಪ್ ಮಾಡುವಂತೆ ಕೇಳಿಕೊಂಡಿದ್ದಳು. ಕಾರಿನಲ್ಲಿ ಹೋಗುವಾಗ ಆಕೆ ತನ್ನನ್ನು ತಾನು "ಶುಗರ್ ಬೇಬಿ" ಎಂದು ಬಣ್ಣಿಸಿಕೊಂಡು, "ಶುಗರ್ ಡ್ಯಾಡಿ" ಹುಡುಕಾಟದಲ್ಲಿರುವುದಾಗಿ ಹೇಳಿದ್ದಳು. ಅಲ್ಲದೆ, ಸಂಭಾವ್ಯ ವ್ಯಕ್ತಿಗಳನ್ನು ಸಂಪರ್ಕಿಸುವಂತೆ ಕೋರಿದ್ದಳು ಎಂದು ಆತ ಆರೋಪಿಸಿದ್ದಾನೆ. ಫೆಬ್ರವರಿ 18ರಂದು ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ, ಪಾರ್ಟಿಯಲ್ಲಿ ತನಗೆ ಮಾದಕ ದ್ರವ್ಯ ನೀಡಿ ಇಬ್ಬರು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಳು.
ಇದಾದ ಸ್ವಲ್ಪ ಸಮಯದಲ್ಲೇ ಎರಡು ಫೋನ್ ನಂಬರ್‌ಗಳಿಂದ ಕರೆ ಬರಲಾರಂಭಿಸಿತು. ಕರೆ ಮಾಡಿದ ವ್ಯಕ್ತಿ ತನ್ನನ್ನು "ಟಿವಿಯೊಂದರ ಕ್ರೈಮ್ ಬ್ರಾಂಚ್ ಹೆಡ್ ಇಮ್ರಾನ್" ಎಂದು ಪರಿಚಯಿಸಿಕೊಂಡಿದ್ದ. ವಿಷಯವನ್ನು 'ಇತ್ಯರ್ಥ' ಮಾಡಲು ತನ್ನನ್ನು ಏಕಾಂಗಿಯಾಗಿ ಭೇಟಿಯಾಗಿ ಯುವತಿಗೆ ಹಣ ನೀಡುವಂತೆ ಆತ ಬೇಡಿಕೆಯಿಟ್ಟಿದ್ದ. ಅಲ್ಲದೆ, ಈಗಾಗಲೇ ಮಾನಹಾನಿಕರ ಟಿವಿ ಪ್ರೋಮೋ ಸಿದ್ಧಪಡಿಸಲಾಗಿದೆ ಎಂದು ಎಚ್ಚರಿಕೆ ನೀಡಿದ್ದ. ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ಭಾಗಿಯಾಗಿರುವ ಯುವತಿ, ಕರೆ ಮಾಡಿದ ವ್ಯಕ್ತಿ ಮತ್ತು ಇತರರ ವಿರುದ್ಧ ಕ್ರಮಕೈಗೊಳ್ಳುವಂತೆ ಆರೋಪಿ ತನ್ನ ದೂರಿನಲ್ಲಿ ಕೋರಿದ್ದಾನೆ.
ವಿದ್ಯಾರ್ಥಿನಿಯ ದೂರಿನಲ್ಲೇನಿದೆ?
19 ವರ್ಷದ ಕಾಲೇಜು ವಿದ್ಯಾರ್ಥಿನಿ ತನ್ನ ದೂರಿನಲ್ಲಿ, ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯ ಖಾಸಗಿ ವಿಲ್ಲಾದಲ್ಲಿ ಬಲವಂತವಾಗಿ ಮಾದಕ ದ್ರವ್ಯ ಸೇವಿಸುವಂತೆ ಮಾಡಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾಳೆ. ಮೂಲತಃ ತಮಿಳುನಾಡಿನವಳಾದ ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿ, ವ್ಯಾಸಂಗಕ್ಕಾಗಿ ಸುಮಾರು ಐದು ತಿಂಗಳಿನಿಂದ ಬೆಂಗಳೂರಿನಲ್ಲಿ ವಾಸವಿದ್ದಾಳೆ. ಎಫ್‌ಐಆರ್ ಪ್ರಕಾರ, ಜನವರಿಯಲ್ಲಿ ಇನ್‌ಸ್ಟಾಗ್ರಾಮ್ ಮೂಲಕ 21 ವರ್ಷದ ಡಿಕ್ಸನ್ ಸ್ಯಾಂಡೋ ಪರಿಚಯವಾಗಿತ್ತು ಮತ್ತು ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು.
ಫೆಬ್ರವರಿ 14 ರ ರಾತ್ರಿ ಕಾಲೇಜು ಮುಗಿಸಿ ಸ್ನೇಹಿತೆಯೊಂದಿಗೆ ಊಟ ಮಾಡಿದ ನಂತರ, ಉತ್ತರ ಬೆಂಗಳೂರಿನ 'ರೆಕ್ಸ್ ವಿಲ್ಲಾ'ದಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಬರುವಂತೆ ಡಿಕ್ಸನ್ ಕರೆ ಮಾಡಿದ್ದ. ಅದರಂತೆ ಫೆಬ್ರವರಿ 15 ರ ಮುಂಜಾನೆ ಆಕೆ ಸ್ನೇಹಿತೆಯೊಂದಿಗೆ ಅಲ್ಲಿಗೆ ತಲುಪಿದ್ದಳು. ಪಾರ್ಟಿಯಲ್ಲಿ ಡಿಕ್ಸನ್ ಆಕೆಗೆ 35 ವರ್ಷದ ನಿಖಿಲ್‌ನನ್ನು ಪರಿಚಯಿಸಿದ್ದ. ಆನಂತರ ಅವರಿಬ್ಬರು ತನಗೆ ಬಲವಂತವಾಗಿ ಗುಲಾಬಿ ಬಣ್ಣದ ಮಾತ್ರೆಯೊಂದನ್ನು ನುಂಗಿಸಿದರು. ಅದಾದ ಬಳಿಕ ತಲೆತಿರುಗಿ ಪ್ರಜ್ಞೆ ತಪ್ಪಿದ್ದಾಗಿ ಯುವತಿ ಆರೋಪಿಸಿದ್ದಾಳೆ.
ಮಾದಕ ದ್ರವ್ಯ, ಅತ್ಯಾಚಾರ ಹಾಗೂ ಬೆದರಿಕೆ
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ವಿಲ್ಲಾದ ಕೊಠಡಿಯೊಳಗೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಘಟನೆಯ ನಡುವೆ ಸ್ವಲ್ಪ ಹೊತ್ತು ಎಚ್ಚರವಾದಾಗ ತನ್ನನ್ನು ಕೂಡಿಹಾಕಿರುವುದು ಅರಿವಿಗೆ ಬಂದಿತು ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ನಂತರ ಆಕೆಯನ್ನು ಮಾಲ್ ಬಳಿ ಬಿಟ್ಟು ಹೋಗಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಯದ ಕಾರಣಕ್ಕೆ ಯುವತಿ ತಕ್ಷಣವೇ ಪೊಲೀಸರ ಬಳಿ ಹೋಗಿರಲಿಲ್ಲ. ಆದರೆ ಫೆಬ್ರವರಿ 17ರಂದು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ನಂತರ ತನ್ನ ಸಹೋದರನಿಗೆ ವಿಷಯ ತಿಳಿಸಿ ದೂರು ದಾಖಲಿಸಿದ್ದಾಳೆ. ಆಕೆಯ ಹೇಳಿಕೆ ಆಧರಿಸಿ, ಡಿಕ್ಸನ್ ಸ್ಯಾಂಡೋ ಮತ್ತು ನಿಖಿಲ್ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಕ್ರಿಮಿನಲ್ ಬೆದರಿಕೆ ಸಂಬಂಧಿತ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪ ಹಾಗೂ ಸುಲಿಗೆಯ ಪ್ರತಿದೂರು ಎರಡೂ ಪ್ರಕರಣಗಳ ಕುರಿತು ಸಮಗ್ರವಾಗಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

