
ಹಂಪಿ ಬಳಿ ವಿದೇಶಿ ಮಹಿಳೆಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ- ಸಂತ್ರಸ್ತೆಯ ಮೊದಲ ಪ್ರತಿಕ್ರಿಯೆ
Hampi Horror|ಕಳೆದ ವರ್ಷ ಇಸ್ರೇಲ್ ಮಹಿಳೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಗಂಗಾವತಿ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ.
ಏನಿದು ಪ್ರಕರಣ?
ಕಳೆದ ವರ್ಷ ಮಾರ್ಚ್ 6ರಂದು ಹಂಪಿ ಪ್ರವಾಸಿ ತಾಣದ ಸಮೀಪವಿರುವ ಸಾನಾಪುರ ಗ್ರಾಮದ ತುಂಗಭದ್ರಾ ಎಡದಂಡೆ ನಾಲೆ ಬಳಿ ಈ ಅಮಾನವೀಯ ಘಟನೆ ನಡೆದಿತ್ತು. ಮಲ್ಲೇಶ ಅಲಿಯಾಸ್ ಹಂದಿಮಲ್ಲ, ಸಾಯಿ ಮತ್ತು ಶರಣಪ್ಪ ಎಂಬ ಮೂವರು ಆರೋಪಿಗಳು ಹಣಕ್ಕಾಗಿ ಪ್ರವಾಸಿಗರ ಗುಂಪನ್ನು ಅಡ್ಡಗಟ್ಟಿದ್ದರು. ಹಣ ನೀಡಲು ನಿರಾಕರಿಸಿದಾಗ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ, ಇಸ್ರೇಲ್ ಮೂಲದ ಪ್ರವಾಸಿ ಮಹಿಳೆ ಸೇರಿದಂತೆ ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಇದೇ ವೇಳೆ ಮೂವರು ಪುರುಷ ಪ್ರವಾಸಿಗರನ್ನು ಕಾಲುವೆಗೆ ತಳ್ಳಲಾಗಿದ್ದು, ಈ ಪೈಕಿ ಒಡಿಶಾ ಮೂಲದ ಓರ್ವ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನು. ಉಳಿದ ಇಬ್ಬರು ಈಜಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಹಂಪಿ ಬಳಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಅರೋಪಿಗಳು
ಇದಕ್ಕೆ ಸಂಬಂಧಿಸಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಹಾಗೂ ಶರಣಪ್ಪ ಮೂವರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಅತ್ಯಂತ ಚುರುಕಾಗಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಗಂಗಾವತಿಯ ಹೆಚ್ಚುವರಿ ಸತ್ರ ನ್ಯಾಯಾಲಯವು, ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಈ ಮೂವರನ್ನೂ ದೋಷಿಗಳು ಎಂದು ತಿಳಿಸಿತ್ತು. ಇದೀಗ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಈ ಕೃತ್ಯವು ಅತ್ಯಂತ ಕ್ರೂರವಾಗಿದ್ದು 'ಅಪರೂಪದಲ್ಲಿ ಅಪರೂಪದ' ಪ್ರಕರಣ ಎಂದು ಪರಿಗಣಿಸಿದ್ದಾರೆ. ಸಮಾಜದಲ್ಲಿ ಸಂಚಲನ ಮೂಡಿಸಿದ್ದ ಈ ಘಟನೆಯಲ್ಲಿ ಅಪರಾಧಿಗಳ ವಿರುದ್ಧ ಹೊರಿಸಲಾಗಿದ್ದ ಅತ್ಯಾಚಾರ ಮತ್ತು ಕೊಲೆ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಈ ಕಠಿಣ ಶಿಕ್ಷೆಯನ್ನು ಪ್ರಕಟಿಸಲಾಗಿದೆ.

