ಅಮೇಥಿಯಿಂದ ಸ್ಪರ್ಧೆ: ಪಕ್ಷದ ನಿರ್ಧಾರಕ್ಕೆ ಬದ್ಧ- ರಾಹುಲ್

Update: 2024-04-17 09:57 GMT

ಏಪ್ರಿಲ್‌ 17- ಉತ್ತರ ಪ್ರದೇಶದ ಅಮೇಥಿಯಿಂದ ಲೋಕಸಭೆ ಚುನಾವಣೆಗೆ ಉಮೇದುವಾರಿಕೆಗೆ ಸಂಬಂಧಪಟ್ಟಂತೆ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ. 

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ನಡೆಸಿಕೊಟ್ಟ ಜಂಟಿ ಪತ್ರಿಕಾಗೋಷ್ಠಿಯಲ್ಲಿ ರಾಹುಲ್‌ ಈ ಹೇಳಿಕೆ ನೀಡಿದ್ದಾರೆ. 

ವಯನಾಡ್ ಹೊರತುಪಡಿಸಿ ಅಮೇಥಿಯಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ʻಅಮೇಥಿಯಲ್ಲಿ ಸ್ಪರ್ಧೆ ಬಗ್ಗೆ ಪಕ್ಷ ನಿರ್ಧರಿಸುತ್ತದೆ. ಯಾವುದೇ ಆದೇಶ ಬಂದರೂ, ನಾನು ಅದನ್ನು ಪಾಲಿಸುತ್ತೇನೆ. ನಮ್ಮ ಪಕ್ಷದಲ್ಲಿ ಈ ನಿರ್ಧಾರಗಳನ್ನು ಸಿಇಸಿ (ಕೇಂದ್ರ ಚುನಾವಣಾ ಸಮಿತಿ) ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆʼ ಎಂದು ಅವರು ಹೇಳಿದರು. 

ಕೇರಳದ ವಯನಾಡ್‌ ಜೊತೆಗೆ, ಈ ಹಿಂದೆ ಸತತ ಮೂರು ಅವಧಿಗೆ ಪ್ರತಿನಿಧಿಸಿದ್ದ ಅಮೇಥಿ ಕ್ಷೇತ್ರದಿಂದ ರಾಹುಲ್ ಮತ್ತು ಈ ಹಿಂದೆ ಅವರ ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್‌ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಬಹುದು ಎಂಬ ಊಹಾ‌ ಪೋಹವಿದೆ. ಎರಡೂ ಸ್ಥಾನಗಳನ್ನು ಗಾಂಧಿ ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದು, ಕುಟುಂಬದ ಇಬ್ಬರು ಅಲ್ಲಿಂದ ಸ್ಪರ್ಧಿಸುವಂತೆ ಕಾಂಗ್ರೆಸ್‌ನ ಸ್ಥಳೀಯ ಘಟಕಗಳು ಒತ್ತಾಯಿಸಿವೆ. 

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, 17 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಅಮೇಥಿ ಮತ್ತು ವಯನಾಡ್ ಎರಡು ಕ್ಷೇತ್ರಕ್ಕೂ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ.

Tags:    

Similar News