ಇಂಡಿಯ ಒಕ್ಕೂಟ ಅಧಿಕಾರಕ್ಕೆ ಬಂದರೆ ಎನ್‌ಆರ್‌ಸಿ, ಸಿಎಎ ರದ್ದು: ಮಮತಾ
ಸಿಲ್ಚಾರ್ (ಅಸ್ಸಾಂ), ಏಪ್ರಿಲ್ 17- ಬಿಜೆಪಿ ಇಡೀ ದೇಶವನ್ನು ʻಬಂಧನ ಶಿಬಿರʼ ವನ್ನಾಗಿ ಮಾಡಿದೆ. ಇಂಡಿಯ ಒಕ್ಕೂಟ ಅಧಿಕಾರಕ್ಕೆ ಬಂದರೆ, ಸಿಎಎ ಮತ್ತು ಎನ್‌ಆರ್‌ಸಿಯನ್ನು ರದ್ದುಗೊಳಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದರು.
ಅಸ್ಸಾಂನಲ್ಲಿ ನಾಲ್ವರು ಟಿಎಂಸಿ ಅಭ್ಯರ್ಥಿಗಳನ್ನು ಬೆಂಬಲಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ, ಪ್ರಜಾಪ್ರಭುತ್ವ ಮತ್ತು ಚುನಾವಣೆ ಇರುವುದಿಲ್ಲ.ಬಿಜೆಪಿ ಇಡೀ ದೇಶವನ್ನು ಶಿಬಿರವನ್ನಾಗಿ ಮಾಡಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಎರಡು ರಾಜ್ಯಗಳಲ್ಲಿನ ಬಂಗಾಳಿ ಜನರನ್ನು ಬೆಂಬಲಿಸಲು ಪಶ್ಚಿಮ ಬಂಗಾಳದಲ್ಲಿ ಚಳವಳಿ ನಡೆಸಿದಾಗ ತಮ್ಮ ಮೇಲೆ ಹಲವು ಪೊಲೀಸ್ ಪ್ರಕರಣಗಳನ್ನು ದಾಖಲಿಸಿದ್ದಾರೆʼ ಎಂದು ಹೇಳಿದ್ದಾರೆ.
ʻಇದರಲ್ಲೀ ನನ್ನ ತಪ್ಪೇನು? ನನ್ನನ್ನು ಜೈಲಿಗೆ ಹಾಕುತ್ತೀರಾ, ಕೊಲ್ಲುತ್ತೀರಾ ಅಥವಾ ಶಿಬಿರದಲ್ಲಿ ಇರಿಸುತ್ತೀರಾ? ಎನ್ಆರ್‌ಸಿಯಿಂದ 17 ಲಕ್ಷ ಬೆಂಗಾಲಿ ಅಸ್ಸಾಮಿಗಳನ್ನು ಹೊರಗಿಟ್ಟಾಗ, ನಾನು ಜನರಿಗಾಗಿ ಚಳವಳಿ ಮಾಡಲು ಅಲ್ಲಿದ್ದೆʼ ಎಂದು ಬ್ಯಾನರ್ಜಿ ಹೇಳಿದರು.
ʻ ಟಿಎಂಸಿ ಎಲ್ಲಾ ಧರ್ಮಗಳನ್ನು ಪ್ರೀತಿಸುತ್ತದೆ ಮತ್ತು ಜನರು ಧಾರ್ಮಿಕ ಆಧಾರದ ಮೇಲೆ ವಿಭಜನೆಯಾಗುವುದನ್ನು ಬಯಸುವುದಿಲ್ಲ. ಇಂಡಿಯ ಒಕ್ಕೂಟ ಗೆದ್ದರೆ, ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ), ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಏಕರೂಪ ನಾಗರಿಕ ಸಂಹಿತೆ ಇರುವುದಿಲ್ಲ. ನಾವು ಎಲ್ಲ ತಾರತಮ್ಯ ಕಾನೂನುಗಳನ್ನು ರದ್ದುಗೊಳಿಸುತ್ತೇವೆʼ ಎಂದು ಹೇಳಿದರು.
ಮಣಿಪುರದಲ್ಲಿ ಮೇ 2023 ರಿಂದ 219 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಜನಾಂಗೀಯ ಹಿಂಸಾಚಾರವನ್ನು ಉಲ್ಲೇಖಿಸಿ,ʻಮಣಿಪುರದಲ್ಲಿ 200 ಚರ್ಚ್‌ಗಳನ್ನು ಸುಡಲಾಯಿತು, ಮಸೀದಿಗಳನ್ನು ಸುಡಲಾಯಿತು. ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾಯಿತು. ಸಂತ್ರಸ್ತರು ನ್ಯಾಯಕ್ಕಾಗಿ ಹುಡುಕಾಟದಲ್ಲಿದ್ದಾರೆʼ ಎಂದು ಹೇಳಿದರು.
400 ಲೋಕಸಭೆ ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಗುರಿಯನ್ನು ಲೇವಡಿ ಮಾಡಿ,ʻಮೊದಲು ನೀವು 200 ಸ್ಥಾನಗಳಿಗೆ ಪ್ರಯತ್ನಿಸಿ.ಅವರು ದಯನೀಯವಾಗಿ ಸೋಲುತ್ತಾರೆ ಎಂದು ನಾನು ನಂಬುತ್ತೇನೆʼ ಎಂದು ಹೇಳಿದರು. ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವಂತೆ ಅವರು ಮನವಿ ಮಾಡಿದರು. 2026 ರಲ್ಲಿ ಪಕ್ಷ ಎಲ್ಲಾ 126 ವಿಧಾನಸಭೆ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದರು.
ಸಿಲ್ಚಾರ್ ಕ್ಷೇತ್ರದಲ್ಲಿ ರಾಧಾಶ್ಯಾಮ್ ಬಿಸ್ವಾಸ್, ಕೊಕ್ರಜಾರ್ ನಿಂದ ಗೌರಿ ಶಂಕರ್ ಸರನಿಯಾ, ಬಾರ್ಪೇಟಾದಿಂದ ಅಬುಲ್ ಕಲಾಂ ಆಜಾ ದ್ ಮತ್ತು ಲಖಿಂಪುರದಿಂದ ಘಾನಾ ಕಾಂತಾ ಚುಟಿಯಾ ಸ್ಪರ್ಧಿಸುತ್ತಿದ್ದಾರೆ.