ಬಿಜೆಪಿ ಪ್ರಣಾಳಿಕೆಯನ್ನುನಂಬುವುದಿಲ್ಲ: ರಾಕೇಶ್ ಟಿಕಾಯತ್

ರೈತ ಸಂಘಟನೆಗಳು ಬಲಿಷ್ಠವಾದರೆ, ಎಲ್ಲವೂ ಆಗುತ್ತದೆ;

Update: 2024-04-17 12:29 GMT

ಹೊಸದಿಲ್ಲಿ, ಏಪ್ರಿಲ್‌ 17 : ಬಿಜೆಪಿಯ 2024ರ ಲೋಕಸಭೆ ಚುನಾವಣೆ ಪ್ರಣಾಳಿಕೆಯನ್ನು ರೈತರು ನಂಬುವುದಿಲ್ಲ.ಕೇಂದ್ರ ಸರಕಾರ ಬಂಡವಾಳಶಾಹಿಗಳ ಹಿತಾಸಕ್ತಿ ರಕ್ಷಿಸಲು ಕೆಲಸ ಮಾಡುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.

ದೇಶವನ್ನು ಅಗ್ಗದ ಕಾರ್ಮಿಕ ಶಕ್ತಿಯ ಮೂಲವಾಗಿ ನೋಡಲಾಗುತ್ತಿದೆ. ಸರ್ಕಾರದ ಮೇಲೆ ಕಾರ್ಪೊರೇಟ್‌ಗಳ ನಿಯಂತ್ರಣ ಹೆಚ್ಚಿದೆ. ರೈತ ಸಂಘಟನೆಗಳು ಸಮಸ್ಯೆಗಳನ್ನು ಎದುರಿಸಲು ಮತ್ತು ತಮ್ಮ ಗುರಿ ಸಾಧಿಸಲು ಬಲ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು. 

ಬಿಜೆಪಿ ಪ್ರಣಾಳಿಕೆ ಬಗ್ಗೆ ಕೇಳಿದಾಗ, ಪ್ರಣಾಳಿಕೆ ಮೇಲೆ ನಮಗೆ ನಂಬಿಕೆ ಇಲ್ಲ. 2014ರಲ್ಲೂ ಸ್ವಾಮಿನಾಥನ್ ಸಮಿತಿ ಶಿಫಾರಸುಗಳನ್ನು ಜಾರಿಗೆ ತರುವುದಾಗಿ ಹೇಳಲಾಗಿತ್ತು. 10 ವರ್ಷ ಕಳೆದರೂ ಶಿಫಾರಸುಗಳು ಜಾರಿಯಾಗಿಲ್ಲ. ಎಂಎಸ್ಪಿಗೆ ಎ2+ಎಫ್‌ಎಲ್‌ ಸೂತ್ರ ಬಳಸುತ್ತಿದ್ದಾರೆ. ಶಿಫಾರಸುಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ಸೂತ್ರ ರೈತ ಮತ್ತು ಕುಟುಂಬದ ದುಡಿಮೆಯ ಮೌಲ್ಯವನ್ನು ಒಳಗೊಂಡಿರುತ್ತದೆ. ಸಮಗ್ರ ಉತ್ಪಾದನಾ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳುವ ಸಿ2+50 ಶೇಕಡಾ ಸೂತ್ರವನ್ನು ಆಯೋಗ ಶಿಫಾರಸು ಮಾಡಿದೆ ಎಂದು ವಿವರಿಸಿದರು. 

2020-21ರ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿವಿಧ ರೈತ ಸಂಘಗಳ ಸಂಯೋಜನೆಯಾದ ಸಂಯುಕ್ತ ಕಿಸಾನ್ ಮೋರ್ಚಾ, ಸ್ವಾಮಿನಾಥನ್ ಆಯೋಗ ಸೂಚಿಸಿದ ಸೂತ್ರದನ್ವಯ ಎಂಎಸ್‌ಪಿ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಹೇಳಿದೆ . ʻ2014ರಲ್ಲಿ ತಾನಾಗಲಿ ಅಥವಾ ಸಂಘಟನೆಯಾಗಲಿ ಬಿಜೆಪಿಗೆ ಬೆಂಬಲ ನೀಡಿಲ್ಲ. ಆದರೆ, ಕೆಲವು ವೈಯಕ್ತಿಕ ಅಭ್ಯರ್ಥಿಗಳನ್ನು ಬೆಂಬಲಿಸಿದ್ದೇವೆ. ಬಿಜೆಪಿ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದೆ. ಬಂಡವಾಳಶಾಹಿಗಳ ಹಿತಾಸಕ್ತಿಗೆ ಕೆಲಸ ಮಾಡುತ್ತಿದೆʼ ಎಂದು ದೂರಿದರು. 

ʻಪ್ರಧಾನಿ 2047 ರ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ತನ್ನ ಉದ್ದೇಶದಲ್ಲಿ ಯಶಸ್ವಿಯಾದರೆ, ದೇಶದ ಶೇ.70 ರಷ್ಟು ಭೂಮಿ ಬಂಡವಾಳಶಾಹಿಗಳಿಗೆ ಸೇರುತ್ತದೆ. ಭೂಮಿ ಅವರ ಮುಂದಿನ ಗುರಿ,ʼ ಅವರು ಹೇಳಿದರು. 

ʻ ಹೆದ್ದಾರಿ ಪಕ್ಕದಲ್ಲಿ ಭೂಮಿ ಇದ್ದರೆ, ಕೃಷಿ ಚಟುವಟಿಕೆಗೆ ಅಡ್ಡಿಪಡಿಸುತ್ತಾರೆ ಮತ್ತು ಗೋಡೆಗಳನ್ನು ನಿರ್ಮಿಸುತ್ತಾರೆ. ಆನಂತರ ಕಡಿಮೆ ದರದಲ್ಲಿ ಭೂಮಿ ಖರೀದಿಸುತ್ತಾರೆ. ದೇಶವನ್ನು ಅಗ್ಗದ ಕಾರ್ಮಿಕರ ಮೂಲವಾಗಿ ನೋಡಲಾಗುತ್ತಿದೆ. ಕಾರ್ಪೊರೇಟ್‌ಗಳಿಗೆ ಹೆಚ್ಚು ಜನಸಂಖ್ಯೆ ಇರುವ ದೇಶ ಬೇಕು. ಕಳೆದ ಎಂಟು-ಹತ್ತು ವರ್ಷಗಳಲ್ಲಿ ಏನಾಗಿದೆ ನೋಡಿ. ಅವರು ಜನರಿಗೆ ಉಚಿತ ಆಹಾರಧಾನ್ಯ ಕೊಡುತ್ತಿದ್ದಾರೆ; ಜನರು ಉದ್ಯೋಗಾವಕಾಶಗಳಿಂದ ವಂಚಿತರಾಗಿದ್ದಾರೆ ... ದೆಹಲಿ ತುಂಬಾ ದುಬಾರಿಯಾಗಿದೆ. ಜನರು ತಮ್ಮ ಹಳ್ಳಿಗಳಿಗೆ ಮರಳುತ್ತಿದ್ದಾರೆʼ ಎಂದು ಹೇಳಿದರು. 

ʻರೈತ ಸಂಘಟನೆಗಳು ಬಲಿಷ್ಠವಾದರೆ, ಎಲ್ಲವೂ ಆಗುತ್ತದೆ; ದುರ್ಬಲವಾದರೆ ಏನೂ ಆಗುವುದಿಲ್ಲ. ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ರೈತರನ್ನು ಪ್ರಸ್ತಾಪಿಸಲು ಆರಂಭಿಸಿವೆ. ಪ್ರತಿಯೊಬ್ಬ ರಾಜಕಾರಣಿ ಬಡವರು, ರೈತರು, ಯವಜನರು ಮತ್ತು ಆದಿವಾಸಿಗಳ ಬಗ್ಗೆ ಮಾತಾಡುತ್ತಿದ್ದಾರೆʼ ಎಂದು ಹೇಳಿದರು.

Tags:    

Similar News