ಆಗಸಕ್ಕೇರಿದ ಚುನಾವಣಾ ವೆಚ್ಚ!

ರಾಜ್ಯದಲ್ಲಿ 2014ರಲ್ಲಿ ಇದ್ದ ಮತದಾರರ ಸಂಖ್ಯೆ 4.6 ಕೋಟಿಯಿಂದ 5.4 ಕೋಟಿಗೆ ಹೆಚ್ಚಳಗೊಂಡಿದೆ. ಮತಗಟ್ಟೆಗಳ ಸಂಖ್ಯೆ 54,264ರಿಂದ 58,871ಕ್ಕೆ ಹೆಚ್ಚಿದೆ. 2024ರಲ್ಲಿ ಚುನಾವಣೆ ನಡೆಸಲು 5,331.7 ಕೋಟಿ ರೂ ವೆಚ್ಚವಾಗುವ ಅಂದಾಜಿದೆ.;

Update: 2024-04-19 10:56 GMT

ಮೊದಲ ಹಂತದ ಚುನಾವಣೆ ಮತದಾನ ನಡೆಯುತ್ತಿದೆ. ದೇಶದ ಮತದಾರರಿಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅವಕಾಶ ಮಾಡಿಕೊಡುವ ಚುನಾವಣೆಗಳು ಕಾಲಕ್ರಮೇಣ ದುಬಾರಿಯಾಗುತ್ತಿವೆ. ಈವರೆಗೆ 17 ಲೋಕಸಭೆ, 400ಕ್ಕೂ ಅಧಿಕ ವಿಧಾನಸಭೆ ಚುನಾವಣೆ ಮತ್ತು 16 ರಾಷ್ಟ್ರಪತಿ-ಉಪ ರಾಷ್ಟ್ರಪತಿ ಚುನಾವಣೆಗಳು ನಡೆದಿವೆ.

ರಾಜ್ಯದಲ್ಲಿ 2024ರ ಲೋಕಸಭೆ ಚುನಾವಣೆ ನಡೆಸಲು 520 ಕೋಟಿ ರೂ. ಬೇಕಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಈಗಾಗಲೇ ವಿತ್ತ ಇಲಾಖೆ 400 ಕೋಟಿ ರೂ ಬಿಡುಗಡೆಗೊಳಿಸಿದ್ದು, ಉಳಿಕೆ ಮೊತ್ತವನ್ನು ಚುನಾವಣೆ ಅಂತ್ಯಗೊಂಡ ಬಳಿಕ ವಾಸ್ತವಿಕ ವೆಚ್ಚವನ್ನು ಆಧರಿಸಿ, ಬಿಡುಗಡೆಗೊಳಿಸ ಲಾಗುತ್ತದೆ ಎಂದು ವಿತ್ತ ಇಲಾಖೆ ಮೂಲಗಳು ತಿಳಿಸಿವೆ. ಚುನಾವಣೆ ಆಯೋಗದ ಅಂದಾಜಿನ ಪ್ರಕಾರ, ಸಂಸದನೊಬ್ಬನ ಆಯ್ಕೆಗೆ 18.5 ಕೋಟಿ ರೂ ತಗುಲಲಿದೆ. 2023ರ ವಿಧಾನಸಭೆ ಚುನಾವಣೆಗೆ ಚುನಾವಣೆ ಆಯೋಗ 511 ಕೋಟಿ ರೂ ವೆಚ್ಚ ಮಾಡಿತ್ತು. ಅಂದರೆ, ಶಾಸಕನೊಬ್ಬನ ಆಯ್ಕೆಗೆ 2.2 ಕೋಟಿ ರೂ. ವೆಚ್ಚವಾಗಿತ್ತು. ಒಂದು ವರ್ಷದ ಹಿಂದೆ ಚುನಾವಣೆ ನಡೆದಿರುವುದರಿಂದ, ಎಂಎಲ್‌ಎ ಚುನಾವಣೆಗಿಂತ 7-8 ಕೋಟಿ ಹೆಚ್ಚು(ಅಂದರೆ, ಅಂದಾಜು 10 ಕೋಟಿ ರೂ) ವೆಚ್ಚ ಆಗಬಹುದು ಎಂದು ಮೂಲಗಳು ಹೇಳಿವೆ. 2023ರ ವಿಧಾನಸಭೆ ಚುನಾವಣೆಗೆ 394 ಕೋಟಿ ರೂ., ಅಂದರೆ, ಪ್ರತಿಯೊಂದು ವಿಧಾನಸಭೆ ಕ್ಷೇತ್ರಕ್ಕೆ 1.75 ಕೋಟಿ ರೂ. ವೆಚ್ಚವಾಗಿತ್ತು. 2013ರಲ್ಲಿ ಇದು 160 ಕೋಟಿ ರೂ. ಅಂದರೆ, ತಲಾ 65 ಲಕ್ಷ ರೂ. ವೆಚ್ಚವಾಗಿತ್ತು.

2019ರ ಲೋಕಸಭೆ ಚುನಾವಣೆಗೆ ಅಂದಾಜಿಸಿದ ವೆಚ್ಚ 413 ಕೋಟಿ ರೂ. ಅಂದರೆ, ಕ್ಷೇತ್ರವೊಂದಕ್ಕೆ 14.75 ಕೋಟಿ ರೂ. 2014ಕ್ಕೆ ಹೋಲಿಸಿದರೆ, ಇದು ತೀವ್ರ ಹೆಚ್ಚಳ. 2014ರಲ್ಲಿ 320.16 ಕೋಟಿ ರೂ ಖರ್ಚಾಗಿತ್ತು. ಅಂದರೆ, ಕ್ಷೇತ್ರವೊಂದಕ್ಕೆ ತಲಾ 11 ಕೋಟಿ ರೂ.,

ಇದಕ್ಕೆ ಹಲವು ಕಾರಣ: ಹಣದುಬ್ಬರ ಮತ್ತು ಬೆಲೆ ಹೆಚ್ಚಳದಿಂದ, ಚುನಾವಣೆ ನಡೆಸುವ ಮತ್ತು ಮೂಲಸೌಲಭ್ಯದ ವೆಚ್ಚ ಅಧಿಕಗೊಂಡಿದೆ. ಇದರಿಂದ ಚುನಾವಣೆ ನಡೆಸಲು ತಗಲುವ ವೆಚ್ಚ ನಿರಂತರವಾಗಿ ಹೆಚ್ಚುತ್ತಿದೆ. ವೆಚ್ಚದ ಹೆಚ್ಚಿನ ಪಾಲು ಸಿಬ್ಬಂದಿ ವೇತನ ಹಾಗೂ ಮತ ಅಧಿಕಾರಿಗಳ ತರಬೇತಿಗೆ ವೆಚ್ಚವಾಗುತ್ತದೆ. ಅನುದಾನದ ಹೆಚ್ಚಿನ ಪಾಲು ಪೋಲಿಂಗ್‌ ಅಧಿಕಾರಿ-ಸಿಬ್ಬಂದಿ(ಅಂದಾಜು 3 ಲಕ್ಷ)ಗಳು ಮತ್ತು ಚುನಾವಣೆ ವೀಕ್ಷಕರ ವೇತನ ಮತ್ತು ತರಬೇತಿ, ವಿಶೇಷಚೇತನರು ಮತ್ತು ಮತಗಟ್ಟೆ ಸಾಮಗ್ರಿಗಳ ಸಾಗಣೆ, ಮಸಿ, ಮತಪಟ್ಟಿ ಹಾಗೂ ಮತಗಟ್ಟೆಗಳನ್ನು ಸಿದ್ಧಗೊಳಿಸುವಿಕೆ ಹಾಗೂ ಮತದಾರರ ಜಾಗೃತಿ ಆಂದೋಲನಕ್ಕೆ ವೆಚ್ಚವಾಗಲಿದೆ. ಕೆಎಸ್‌ಆರ್‌ಟಿಸಿ ಬಸ್‌ ಸೇರಿದಂತೆ ವಾಹನಗಳನ್ನು ಬಾಡಿಗೆಗೆ ತೆಗೆದುಕೊಳ್ಳುವುದು(ಕ್ಷೇತ್ರವೊಂದಕ್ಕೆ ಅಂದಾಜು 40 ಬಸ್)ಮತ್ತು ಮತ ಚಲಾವಣೆ ದಿನದಂದು ವಿಡಿಯೋ ಚಿತ್ರೀಕರಣ, ಮತ ಚೀಟಿಗಳ ಮುದ್ರಣ, ವಿವಿಪ್ಯಾಟ್‌ ಚೀಟಿಗಳು ಮತ್ತು ಎಪಿಕ್‌ ಕಾರ್ಡುಗಳ ಮುದ್ರಣಕ್ಕೆ ಬಳಕೆಯಾಗುತ್ತದೆ.

ಪಾರದರ್ಶಕ ಮತ್ತು ನ್ಯಾಯಬದ್ಧ ಚುನಾವಣೆಯನ್ನು ಖಾತ್ರಿಪಡಿಸಿಕೊಳ್ಳಲು, ಪ್ರಮುಖ ಮತ್ತು ಸೂಕ್ಷ್ಮ ಮತಗಟ್ಟೆಗಳು, ಎಣಿಕೆ ಕೇಂದ್ರಗಳು ಹಾಗೂ ಪೊಲೀಸ್‌ ಚೆಕ್‌ ಪೋಸ್ಟ್‌ಗಳಲ್ಲಿ ಅಂತರ್ಜಾಲ ಸೌಲಭ್ಯವಿರುವೆಡೆ ವೆಬ್‌ ಚಿತ್ರೀಕರಣ ಹಾಗೂ ಉಳಿದೆಡೆ ಕ್ಯಾಮೆರಾದಿಂದ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಮತ ಎಣಿಕೆ ದಿನದಂದು ಮತಪೆಟ್ಟಿಗೆಗಳನ್ನು ಇರಿಸುವ ಭದ್ರತಾ ಕೊಠಡಿಗಳ ವೆಚ್ಚವನ್ನೂ ಸೇರಿಸಬೇಕಾಗುತ್ತದೆ.

ಮತದಾರರ ಜಾಗೃತಿ ಆಂದೋಲನಗಳು, ಚುನಾವಣೆಗೆ ಮುನ್ನ ಮತಗಟ್ಟೆಗಳ ವಿವರವಿರುವ ಮತಚೀಟಿಗಳ ಮುದ್ರಣ ಹಾಗೂ ವಿವಿಪ್ಯಾಟ್‌(2014ರ ಚುನಾವಣೆಯಲ್ಲಿ ಮೊದಲ ಬಾರಿಗೆ ಬಳಕೆ)ಗಳು ವೆಚ್ಚವನ್ನು ಹೆಚ್ಚಿಸಿವೆ. ಇಷ್ಟಲ್ಲದೆ, ರಾಜ್ಯದಲ್ಲಿ 2014ರಲ್ಲಿ ಇದ್ದ ಮತದಾರರ ಸಂಖ್ಯೆ 4.6 ಕೋಟಿಯಿಂದ 5.4 ಕೋಟಿಗೆ ಹೆಚ್ಚಳಗೊಂಡಿದೆ. ಮತಗಟ್ಟೆಗಳ ಸಂಖ್ಯೆ 54,264ರಿಂದ 58,871ಕ್ಕೆ ಹೆಚ್ಚಿದೆ. 2024ರಲ್ಲಿ ಚುನಾವಣೆ ನಡೆಸಲು 5,331.7 ಕೋಟಿ ರೂ ವೆಚ್ಚವಾಗುವ ಅಂದಾಜಿದೆ.

ʻಅಂದಾಜು 1500 ಮತದಾರರಿಗೆ ಒಂದು ಮತಗಟ್ಟೆ ತೆರೆಯಲಾಗುತ್ತದೆ. ಮತಗಟ್ಟೆಯಲ್ಲಿ ಒಬ್ಬರು ಪ್ರಿಸೈಡಿಂಗ್‌ ಅಧಿಕಾರಿ, ಇಬ್ಬರು ಅಧಿಕಾರಿಗಳು, ಒಬ್ಬರು ಸ್ಥಳೀಯ ಸಿಬ್ಬಂದಿಯಲ್ಲದೆ, ರಕ್ಷಣಾ ಸಿಬ್ಬಂದಿ ಇರುತ್ತಾರೆ. ಸೂಕ್ಷ್ಮ ಮತಗಟ್ಟೆಯಾದಲ್ಲಿ ಹೆಚ್ಚುವರಿ ಪೊಲೀಸ್/ಕೇಂದ್ರ ಪಡೆಯನ್ನು ನಿಯೋಜಿಸಲಾಗುತ್ತದೆ. ಇವಿಎಂ-ವಿವಿಪ್ಯಾಟ್‌ ಯಂತ್ರಗಳು, ಮತಗಟ್ಟೆಗೆ ನಿಯೋಜನೆಗೊಂಡ ಅಧಿಕಾರಿಗಳನ್ನು ಮತಗಟ್ಟೆಗೆ ಕರೆದೊಯ್ಯಲು ಹಾಗೂ ವಾಪಸ್‌ ಕರೆತರಲು ವಾಹನದ ವ್ಯವಸ್ಥೆ ಮಾಡಬೇಕಾಗುತ್ತದೆ. ಅಧಿಕಾರಿ-ಸಿಬ್ಬಂದಿಗಳಿಗೆ ವೇತನವಲ್ಲದೆ, ಆಡಳಿತಾತ್ಮಕ ವೆಚ್ಚವೂ ಇರುತ್ತದೆ. ಜನಸಂಖ್ಯೆ ಹೆಚ್ಚಿದಂತೆ ಮತಗಟ್ಟೆಗಳ ಸಂಖ್ಯೆಯೂ ಹೆಚ್ಚಲಿದ್ದು, ಚುನಾವಣೆ ವೆಚ್ಚವೂ ಹೆಚ್ಚುತ್ತದೆ. ಜಿಲ್ಲಾಧಿಕಾರಿ ಜಿಲ್ಲೆಯ ಚುನಾವಣೆ ಅಧಿಕಾರಿಯಾಗಿರಲಿದ್ದು,ಈ ಎಲ್ಲದರ ಮೇಲುಸ್ತುವಾರಿ ಜವಾಬ್ದಾರಿ ಹೊಂದಿರು ತ್ತಾರೆʼ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ್‌ ನಾಯಕ್‌ ಹೇಳುತ್ತಾರೆ.

ರಾಷ್ಟ್ರ ಮಟ್ಟದಲ್ಲಿ ವೆಚ್ಚ 1951ರಲ್ಲಿದ್ದ 10.5 ಕೋಟಿ ರೂ.ಗಳಿಂದ 2014ಕ್ಕೆ 3,870 ಕೋಟಿ ರೂ.ಗೆ ಹೆಚ್ಚಳಗೊಂಡಿದೆ. ಅದೇ ಹೊತ್ತಿನಲ್ಲಿ ಮತದಾರರ ಸಂಖ್ಯೆ 17.32 ಕೋಟಿಯಿಂದ 91.2 ಕೋಟಿಗೆ ಹೆಚ್ಚಿದೆ. 2019ರ ಲೋಕಸಭೆ ಚುನಾವಣೆಗೆ ಎಷ್ಟು ವೆಚ್ಚವಾಗಿದೆ ಎಂಬುದನ್ನು ಚುನಾವಣೆ ಆಯೋಗ ಈವರೆಗೆ ಬಹಿರಂಗಗೊಳಿಸಿಲ್ಲ. 2004ರ ಬಳಿಕ ಇವಿಎಂ ಬಳಸಲಾಗುತ್ತಿದೆ. 2019ರ ಬಳಿಕ ಇವಿಎಂ ಖರೀದಿ-ನಿರ್ವಹಣೆ ವೆಚ್ಚ ಹೆಚ್ಚಿದೆ. ಇತ್ತೀಚಿನ ಬಜೆಟ್‌ನಲ್ಲಿ ಇವಿಎಂಗೆ 1,891.8 ಕೋಟಿ ರೂ. ನಿಗದಿಗೊಳಿಸಲಾಗಿದೆ. ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ವಿತ್ತ ಸಚಿವರು ಹೆಚ್ಚುವರಿ 611.27 ಕೋಟಿ ರೂ. ಪ್ರಸ್ತಾಪ ಮಂಡಿಸಿದರು.

ಮಾರ್ಚ್‌ 2023ರ ಮಾಹಿತಿ ಪ್ರಕಾರ, ಚುನಾವಣೆ ಆಯೋಗದ ಬಳಿ 22.15 ಲಕ್ಷ ನಿಯಂತ್ರಣ ಘಟಕ ಮತ್ತು 31.03 ಬ್ಯಾಲಟ್‌ ಘಟಕಗಳಿದ್ದವು. 2014ರಲ್ಲಿ 2.5 ಲಕ್ಷ ನಿಯಂತ್ರಣ ಘಟಕ ಹಾಗೂ 3.82 ಬ್ಯಾಲಟ್‌ ಘಟಕಗಳನ್ನು ಖರೀದಿಸಲಾಗಿತ್ತು. ಇವಿಎಂಗಳ ಜೀವಿತಾವಧಿ 15 ವರ್ಷ. 2018-23ರ ಅವಧಿಯಲ್ಲಿ ಹೆಚ್ಚುವರಿ 13 ಲಕ್ಷ ಬ್ಯಾಲಟ್‌ ಘಟಕ ಹಾಗೂ 10 ಲಕ್ಷ ನಿಯಂತ್ರಣ ಘಟಕಗಳನ್ನು ಚುನಾವಣೆ ಆಯೋಗ ಖರೀದಿಸಿದೆ. 2024 ರಲ್ಲಿ 55 ಲಕ್ಷ ಇವಿಎಂ ಮತ್ತು 1.5 ಕೋಟಿ ಮತಗಟ್ಟೆ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. 2014ರಲ್ಲಿ ಶೇ.66 ಮತ್ತು 2019ರಲ್ಲಿ ಶೇ.67ರಷ್ಟು ಮತಚಲಾವಣೆ ಆಗಿತ್ತು ಎಂದು ಚುನಾವಣೆ ಆಯೋಗದ ಮೂಲಗಳು ತಿಳಿಸಿವೆ.

ಇಷ್ಟಲ್ಲದೆ, ಚುನಾವಣೆ ಆಯೋಗಕ್ಕೆ ನೀಡುವ ಅನುದಾನ ಕೂಡ ಹೆಚ್ಚುತ್ತಿದೆ. 2019ರ ಚುನಾವಣೆಗೆ ಮುನ್ನ 236.6 ಕೋಟಿ ರೂ. ನೀಡಲಾಗಿತ್ತು. 2024ರಲ್ಲಿ ಅದು 340 ಕೋಟಿ ರೂ.ಗೆ ಹೆಚ್ಚಿದೆ.

ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳ: ದೇಶದ ಜನಸಂಖ್ಯೆ ಹೆಚ್ಚಿದಂತೆ, ಚುನಾವಣೆಗೆ ಸ್ಪರ್ಧಿಸುವವರು ಕೂಡ ಹೆಚ್ಚುತ್ತಿದ್ದಾರೆ. 1952ರಲ್ಲಿ ದೇಶದ 401 ಕ್ಷೇತ್ರಗಳಿಂದ 53 ಪಕ್ಷಗಳ 1,874 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇದಕ್ಕಾಗಿ 1.96 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 2014ರ ಲೋಕಸಭೆ ಚುನಾವಣೆಗೆ ವೆಚ್ಚವಾದ ಮೊತ್ತ 3,70.37 ಕೋಟಿ ರೂ. 2019ರಲ್ಲಿ 543 ಕ್ಷೇತ್ರಗಳಲ್ಲಿ 673 ಪಕ್ಷಗಳ 8,054 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 10.37 ಪಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 2014ರಲ್ಲಿ 8251 ಹಾಗೂ 2019ರಲ್ಲಿ 8054 ಅಭ್ಯರ್ಥಿಗಳು ಕಣದಲ್ಲಿದ್ದರು. 1996ರಲ್ಲಿ ಅತಿ ಹೆಚ್ಚು ಅಂದರೆ, 13,952 ಅಭ್ಯರ್ಥಿಗಳು ಕಣದಲ್ಲಿದ್ದರು. 2019ರವಲ್ಲಿ 673 ಹಾಗೂ 2014ರಲ್ಲಿ 464 ಪಕ್ಷಗಳು ಸ್ಪರ್ಧಿಸಿದ್ದವು. 2024ರ ಚುನಾವಣೆಯಲ್ಲಿ 97 ಕೋಟಿ ಮತದಾರರಿದ್ದು, ಇದರಲ್ಲಿ ಪುರುಷರು 49.7 ಕೋಟಿ, ಸ್ತ್ರೀಯರು 47.1 ಕೋಟಿ, ಮೊದಲ ಬಾರಿ ಮತದಾರರು 1.8 ಕೋಟಿ, ಯುವಜನರು 19.74 ಕೋಟಿ ಹಾಗೂ 48,000 ಟ್ರಾನ್ಸ್‌ಜೆಂಡರ್‌ಗಳು ಇದ್ದಾರೆ. ಮಾರ್ಚ್‌ 2023ರ ಅನ್ವಯ 2360 ರಾಜಕೀಯ ಪಕ್ಷಗಳಿವೆ. ಇದರಲ್ಲಿ 5 ರಾಷ್ಟ್ರೀಯ, 52 ರಾಜ್ಯ ಹಾಗೂ 2,301 ಅಧಿಕೃತವಲ್ಲದ ಪಕ್ಷಗಳು.

2013 ವಿಧಾನಸಭೆ ಚುನಾವಣೆ-160 ಕೋಟಿ ರೂ.

2014 ಲೋಕಸಭೆ ಚುನಾವಣೆ-320.16 ಕೋಟಿ ರೂ.

2018 ವಿಧಾನಸಭೆ ಚುನಾವಣೆ-394 ಕೋಟಿ ರೂ.

2019 ಲೋಕಸಭೆ ಚುನಾವಣೆ-413 ಕೋಟಿ ರೂ.

2023 ವಿಧಾನಸಭೆ ಚುನಾವಣೆ-511 ಕೋಟಿ ರೂ.

2024 ಲೋಕಸಭೆ ಚುನಾವಣೆ (ಅಂದಾಜು)-520 ಕೋಟಿ ರೂ.

Tags:    

Similar News