ಶಿವಕುಮಾರ್, ಬಿ ವೈ ವಿಜಯೇಂದ್ರ, ಎಚ್‌ ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್

Update: 2024-04-20 13:41 GMT

ಚುನಾವಣೆ ಆಯೋಗವು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಜೆಡಿ(ಎ‌ಸ್)‌ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಶನಿವಾರ ಎಫ್‌ಐಆರ್‌ ದಾಖಲಿಸಿದೆ.

ಶಿವಕುಮಾರ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್ 171 (ಬಿ) (ಸಿ) (ಇ) (ಎಫ್) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಹೌಸಿಂಗ್ ಸೊಸೈಟಿಯ ಮತದಾರರಿಗೆ ಲಂಚ ನೀಡಿದ್ದಾರೆ ಎಂದು ಆರೋಪಿಸಿದೆ. ಆರ್.ಆರ್.ನಗರದಲ್ಲಿ ಅಪಾರ್ಟ್‌ಮೆಂಟ್ ಮಾಲೀಕರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಎಂಸಿಸಿ ಉಲ್ಲಂಘನೆ ಮಾಡಿದ್ದಾರೆ. ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಲಂಚ ಮತ್ತು ಚುನಾವಣೆಯಲ್ಲಿ ಅನಗತ್ಯ ಪ್ರಲೋಭನೆ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಟ್ವೀಟ್ ಮಾಡಿದ್ದಾರೆ.

ಆರ್.ಆರ್.ನಗರದ ಹೌಸಿಂಗ್ ಸೊಸೈಟಿಯ ನಿವಾಸಿಗಳಿಗೆ,ʻನಿಮಗೆ ಕಾವೇರಿ ನೀರು ಮತ್ತು ಸಿಎ ಸೈಟ್ ಬೇಕು. ನಿಮ್ಮ ಇತರ ಸಮಸ್ಯೆಗಳು ಸಣ್ಣವು. ನಾನು ಇವುಗಳನ್ನು ಪೂರೈಸಿದರೆ, ನೀವು ನನಗೆ ಏನು ಮಾಡುತ್ತೀರಿ? ಈ ವಿಚಾರವಾಗಿ ಆಯುಕ್ತರ ಜತೆ ಮಾತನಾಡಿದ್ದೇನೆʼ ಎಂದು ಹೇಳುತ್ತಿರುವ ಎನ್‌ ಡಿ ಟಿವಿ  ವಿಡಿಯೋ ಕ್ಲಿಪ್‌ನ್ನು ಉಲ್ಲೇಖಿಸಿದೆ. 

ಜೆಡಿಎಸ್‌ ಮುಖ್ಯಸ್ಥರ ವಿರುದ್ಧ ಎಫ್‌ಐಆರ್: ಜೆಡಿಎಸ್ ನಾಯಕ ಕುಮಾರಸ್ವಾಮಿ ವಿರುದ್ಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆ (ಆರ್‌ಪಿ) ಸೆಕ್ಷನ್ 123(4) ಮತ್ತು 171(ಜಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 'ಚುನಾವಣೆಗೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಗುಬ್ಬಿ, ತುಮಕೂರಿನ ಎಫ್‌ಎಸ್‌ಟಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆʼ ಎಂದು ಮುಖ್ಯ ಚುನಾವಣಾಧಿಕಾರಿ ಎಕ್ಸ್‌ನಲ್ಲಿಮಾಹಿತಿ ನೀಡಿದ್ದಾರೆ.

ವಿಜಯೇಂದ್ರ ವಿರುದ್ಧ ಎಫ್‌ಐಆ‌ರ್:  ರಾಜ್ಯ ಬಿಜೆಪಿಯ ಅಧಿಕೃತ ಹ್ಯಾಂಡಲ್‌ನಲ್ಲಿ ಅವಹೇಳನಕಾರಿ ಕಾಮೆಂಟ್ ಪೋಸ್ಟ್ ಮಾಡಿದ ಮತ್ತು ಸಾರ್ವಜನಿಕ ಸಾಮರಸ್ಯವನ್ನು ಕದಡಿದ್ದಕ್ಕಾಗಿ ವಿಜಯೇಂದ್ರ ವಿರುದ್ಧ ಚುನಾವಣಾ ಆಯೋಗವು ಇದೇ ರೀತಿಯ ಕ್ರಮ ಕೈಗೊಂಡಿದೆ. ಬಿಜೆಪಿ ನಾಯಕನ ವಿರುದ್ಧ ಆರ್‌ಪಿ ಕಾಯ್ದೆಯ ಸೆಕ್ಷನ್ 125 ಮತ್ತು ಐಪಿಸಿಯ 505 ಮತ್ತು 153 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ʻ ಮಲ್ಲೇಶ್ವರ ಪಿಎಸ್‌ನಲ್ಲಿ ಎಫ್‌ಐಆರ್ ನಂ.60/2024 ಅನ್ನು ಆರ್‌ಪಿ ಆಕ್ಟ್‌ನ 125 ಮತ್ತು ಐಪಿಸಿಯ 505, 153(ಎ) ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಕುರಿತು ದಾಖಲಿಸಲಾಗಿದೆ,ʼ ಎಂದು ಮುಖ್ಯ ಚುನಾವಣಾಧಿಕಾರಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

Tags:    

Similar News