ಕಾಂಗ್ರೆಸ್‌ ನಿಂದ 30 ಲಕ್ಷ ಸರ್ಕಾರಿ ಉದ್ಯೋಗ: ರಾಹುಲ್

Update: 2024-04-13 06:57 GMT

ತಿರುನೆಲ್ವೇಲಿ (ತಮಿಳುನಾಡು), ಏ.12- ಯುವಜನರಿಗೆ ಶಿಷ್ಯವೇತನ ಮತ್ತು ಖಾಲಿ ಇರುವ 30 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡುವ ಶಾಸನವನ್ನು ತರುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. 

ತಮಿಳುನಾಡಿನಲ್ಲಿ ತಮ್ಮ ಮೊದಲ ಚುನಾವಣೆ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಇಂಡಿಯ ಒಕ್ಕೂಟ ಅಧಿಕಾರಕ್ಕೆ ಬಂದರೆ ಯುವಜನರಿಗೆ ಉದ್ಯೋಗಾವಕಾಶ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಸರ್ಕಾರದಲ್ಲಿ ಖಾಲಿ ಇರುವ 30 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡಲಾಗುವುದು. ಪದವೀಧರರು ಮತ್ತು ಡಿಪ್ಲೊಮದಾರರಿಗೆ ಶಿಷ್ಯವೇತನ ನೀಡಲು ಕಾನೂನು ಅಂಗೀಕರಿಸಲಾಗುವುದು ಎಂದು ಹೇಳಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ʻಕೇಸರಿ ಪಕ್ಷ ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಂಡರೆ, ಅವರು ಸಂವಿಧಾನವನ್ನು ಬದಲಿಸಲಿದ್ದಾರೆ. ಪ್ರಪಂಚದ ಉಳಿದ ದೇಶಗಳು ಭಾರತವನ್ನು ಪ್ರಜಾಪ್ರಭುತ್ವದ ದಾರಿದೀಪವಾಗಿ ನೋಡುತ್ತಿರುವಾಗ; ಭಾರತದ ಪ್ರಜಾಪ್ರಭುತ್ವ ಇನ್ನು ಮುಂದೆ ಪ್ರಜಾಪ್ರಭುತ್ವವಲ್ಲ ಎಂಬ ಅಭಿಪ್ರಾಯವಿದೆʼ ಎಂದು ಆರೋಪಿಸಿದರು. 

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ʻಅವರು ಕಾಳಜಿ ವಹಿಸುವ ಏಕೈಕ ವಿಷಯವೆಂದರೆ ಹಣಕಾಸು ಮತ್ತು ಸಂವಹನ ವ್ಯವಸ್ಥೆ ಮೇಲೆ ಏಕಸ್ವಾಮ್ಯ ಹೊಂದುವುದು. ರಾಷ್ಟ್ರ ಇಂದು ಸೈದ್ಧಾಂತಿಕ ಯುದ್ಧ ಎದುರಿಸುತ್ತಿದ್ದು, ಸುಧಾರಣಾವಾದಿ ನಾಯಕ ಪೆರಿಯಾರ್ ಇ.ವಿ. ರಾಮಸ್ವಾಮಿ ಅವರು ಪ್ರತಿಪಾದಿಸುವ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆ ವಿರುದ್ಧ ಆರ್‌ಎಸ್‌ಎಸ್, ಪ್ರಧಾನಿ ಮತ್ತು ಅವರ ಸರ್ಕಾರದ ಕಲ್ಪನೆಗಳಾದ ʻಒಂದು ರಾಷ್ಟ್ರ, ಒಬ್ಬ ನಾಯಕ ಮತ್ತು ಒಂದು ಭಾಷೆʼ ಇದೆ ಎಂದು ಆರೋಪಿಸಿದರು. 

ʻತಮಿಳುನಾಡಿಗೆ ಭೇಟಿ ನೀಡುವುದನ್ನು ನಿಜವಾಗಿಯೂ ಇಷ್ಟಪಡುತ್ತೇನೆ ಮತ್ತು ರಾಜ್ಯದ ಜನರನ್ನು ಪ್ರೀತಿಸುತ್ತೇನೆ. ತಮಿಳು ಸಂಸ್ಕೃತಿ, ಇತಿಹಾಸ ಮತ್ತು ಭಾಷೆ ʻದೊಡ್ಡ ಶಿಕ್ಷಕʼ. ಪೆರಿಯಾರ್, ಸಿ.ಎನ್. ಅಣ್ಣಾದೊರೈ, ಕಾಮರಾಜ್ ಮತ್ತು ಎಂ.ಕರುಣಾನಿಧಿ ಸೇರಿದಂತೆ ತಮಿಳುನಾಡಿನ ನಾಯಕರು ಸಾಮಾಜಿಕ ನ್ಯಾಯದ ಹಾದಿಯಲ್ಲಿ ಹೇಗೆ ನಡೆಯಬೇಕು ಎಂಬುದನ್ನು ದೇಶಕ್ಕೆ ತೋರಿಸಿದ್ದಾರೆ. ಹೀಗಾಗಿ, ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯನ್ನು ತಮಿಳುನಾಡಿನಿಂದ ಪ್ರಾರಂಭಿಸಿತುʼ ಎಂದು ಶ್ಲಾಘಿಸಿದರು. 

Tags:    

Similar News