21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭೆ ಸ್ಥಾನಗಳಿಗೆ ಮೊದಲ ಹಂತದ ಚುನಾವಣೆಯ ಪ್ರಚಾರ ಬುಧವಾರ (ಏಪ್ರಿಲ್ 17) ಸಂಜೆ ಮುಕ್ತಾಯಗೊಂಡಿದೆ. ಮೊದಲ ಹಂತದ ಚುನಾವಣೆ ಏಪ್ರಿಲ್ 19 ರಂದು ನಡೆಯಲಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಇಂಡಿಯ ಒಕ್ಕೂಟ ಮತದಾರರನ್ನು ಓಲೈಸಲು ಕೊನೆಯ ಪ್ರಯತ್ನ ಮಾಡುತ್ತಿದ್ದಾರೆ.
ದೂರುವ ಆಟ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ ಕೆಲವು ದಿನಗಳಲ್ಲಿ ವಿವಿಧ ರಾಜ್ಯಗಳ ಹಲವು ಕ್ಷೇತ್ರಗಳಲ್ಲಿ ಸುಂಟರಗಾಳಿ ಪ್ರವಾಸ ಕೈಗೊಂಡು, ಸಭೆ, ರೋಡ್‌ಶೋ ನಡೆಸಿದರು. ʻದೇಶದಾದ್ಯಂತ ಮೋದಿ ಗ್ಯಾರಂಟಿ ಇದೆ. ನಾನು ಈ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇನೆʼ ಎಂದು ಆಶ್ವಾಸನೆ ನೀಡಿದರು. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅವರ ಹಲವಾರು ಸಂಪುಟದ ಸಹೋದ್ಯೋಗಿಗಳು ಭ್ರಷ್ಟಾಚಾರ, ವಂಶ ರಾಜಕೀಯ, ಸಂವಿಧಾನ ಮತ್ತು ಹಿಂದೂ ಧರ್ಮವನ್ನು ಅವಮಾನಿಸಿದ ಆರೋಪವನ್ನು ಬಿಜೆಪಿ, ಇಂಡಿಯ ಒಕ್ಕೂಟದ ಮೇಲೆ ಹಾಕಿದೆ.
ಮೋದಿ ಗ್ಯಾರಂಟಿ: ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಅಭಿವೃದ್ಧಿ ಮತ್ತು ಜನಕಲ್ಯಾಣಕ್ಕೆ ಆದ್ಯತೆ ನೀಡಿದ್ದು, ಎನ್‌ಆರ್‌ಸಿ ಮತ್ತಿತರ ವಿವಾದಾತ್ಮಕ ವಿಷಯಗಳನ್ನು ದೂರವಿಟ್ಟಿದೆ. ʻಮೋದಿ ಕಿ ಗ್ಯಾರಂಟಿʼ ಎಂಬ ಹೆಸರಿನ ಪ್ರಣಾಳಿಕೆಯು ಸಮಾಜದ ವಿವಿಧ ವರ್ಗಗಳನ್ನು ಗುರಿಯಾಗಿಸಿಕೊಂಡು, ಸರ್ಕಾರದ ಜನಕಲ್ಯಾಣ ಯೋಜನೆಗಳನ್ನು ಕೇಂದ್ರೀಕರಿಸಿದೆ. ಒಂದು ರಾಷ್ಟ್ರ ಒಂದು ಚುನಾವಣೆ ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಈ ಎರಡು ವಿಷಯಗಳು 2019 ರ ಪ್ರಣಾಳಿಕೆಯಲ್ಲೂ ಇದ್ದವು.
ಕಾಂಗ್ರೆಸಿನ ನ್ಯಾಯಪತ್ರ: ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಇತರ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಪ್ರತಿಪಕ್ಷದ ನಾಯಕರು ಎಲೆಕ್ಟೋರಲ್ ಬಾಂಡ್‌ಗಳು, ತನಿಖಾ ಏಜೆನ್ಸಿಗಳ ದುರುಪಯೋಗ, ಹಣದುಬ್ಬರ ಮತ್ತು ನಿರುದ್ಯೋಗ ಇನ್ನಿತರ ವಿಷಯಗಳನ್ನು ಪ್ರಸ್ತಾಪಿಸಿವೆ.
'ನ್ಯಾಯಪತ್ರ' ಎಂಬ 45 ಪುಟಗಳ ಪ್ರಣಾಳಿಕೆಯು ಐದು ʻನ್ಯಾಯದ ಸ್ತಂಭಗಳುʼ ಮತ್ತು ಅವುಗಳ ಅಡಿಯಲ್ಲಿ 25 ಖಾತರಿಗಳ ಮೇಲೆ ಕೇಂದ್ರೀಕರಿಸಿದೆ. ಶಿಷ್ಯವೇತನದ ಹಕ್ಕು, ಎಂಎಸ್‌ಪಿ ಖಾತ್ರಿಗೆ ಕಾನೂನು, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲು ಮಿತಿ ಶೇ.50ರಿಂದ ಹೆಚ್ಚಳಕ್ಕೆ ಸಾಂವಿಧಾನಿಕ ತಿದ್ದುಪಡಿ, ರಾಷ್ಟ್ರವ್ಯಾಪಿ ಜಾತಿ ಗಣತಿ ಮತ್ತು ಅಗ್ನಿಪಥ್ ಯೋಜನೆಯನ್ನು ರದ್ದು ಪಕ್ಷ ನೀಡಿದ ಭರವಸೆಗಳಲ್ಲಿ ಸೇರಿವೆ. ಆದರೆ, ಕಾಂಗ್ರೆಸ್ ಪ್ರಣಾಳಿಕೆಯು ಮುಸ್ಲಿಂ ಲೀಗ್‌ನ ಮುದ್ರೆಯನ್ನು ಹೊಂದಿದೆ ಎಂದು ಮೋದಿ ಟೀಕಿಸಿದರು.
ಪ್ರಮುಖ ಅಭ್ಯರ್ಥಿಗಳು: ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಕಿರಣ್ ರಿಜಿಜು, ಸರ್ಬಾನಂದ ಸೋನೋವಾಲ್, ಸಂಜೀವ್ ಬಲಿಯಾನ್, ಜಿತೇಂದ್ರ ಸಿಂಗ್, ಭೂಪೇಂದ್ರ ಯಾದವ್, ಅರ್ಜುನ್ ರಾಮ್ ಮೆಘ್ವಾಲ್ ಮತ್ತು ಎಲ್ ಮುರುಗನ್, ಮಾಜಿ ಮುಖ್ಯಮಂತ್ರಿಗಳಾದ ಬಿಪ್ಲಬ್ ಕುಮಾರ್ ದೇಬ್ (ತ್ರಿಪುರ) ಮತ್ತು ನಬಮ್ ತುಕಿ (ಅರುಣಾಚಲ ಪ್ರದೇಶ) ಮತ್ತು ಮಾಜಿ ಗವರ್ನರ್ ತಮಿಳಿಸೈ ಸೌಂದರರಾಜನ್ (ತೆಲಂಗಾಣ) ಕಣದಲ್ಲಿದ್ದಾರೆ.
2019 ರಲ್ಲಿ ಯುಪಿಎ ಈ 102 ಸ್ಥಾನಗಳಲ್ಲಿ 45 ಮತ್ತು ಎನ್‌ಡಿಎ 41 ಸ್ಥಾನಗಳನ್ನು ಗೆದ್ದಿತ್ತು. ಈ ಪೈಕಿ ಆರು ಸ್ಥಾನಗಳನ್ನು ಕ್ಷೇತ್ರ ವಿಂಗಡಣೆ ಡಿಲಿಮಿಟೇಶನ್ ಭಾಗವಾಗಿ ಮರುವಿನ್ಯಾಸ ಮಾಡಲಾಗಿದೆ. ತಮಿಳುನಾಡು (39), ಉತ್ತರಾಖಂಡ (5), ಅರುಣಾಚಲ ಪ್ರದೇಶ (2), ಮೇಘಾಲಯ (2), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1), ಮಿಜೋರಾಂ (1), ನಾಗಾಲ್ಯಾಂಡ್ (1), ಪುದುಚೇರಿ (1), ಸಿಕ್ಕಿಂ (1) ಮತ್ತು ಲಕ್ಷದ್ವೀಪ (1)ದ ಎಲ್ಲ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ರಾಜಸ್ಥಾನದ 12, ಉತ್ತರ ಪ್ರದೇಶದ 8, ಮಧ್ಯಪ್ರದೇಶದ 6, ಅಸ್ಸಾಂ ಮತ್ತು ಮಹಾರಾಷ್ಟ್ರದ ತಲಾ 5, ಬಿಹಾರ 4, ಪಶ್ಚಿಮ ಬಂಗಾಳ 3, ಮಣಿಪುರ 2 ಮತ್ತು ತ್ರಿಪುರ, ಜಮ್ಮು ಮತ್ತು ಕಾಶ್ಮೀರ ಮತ್ತು ಛತ್ತೀಸ್‌ಗಢದ ತಲಾ ಒಂದು ಸ್ಥಾನಕ್ಕೆ ಮತದಾನ ನಡೆಯಲಿದೆ.
ಮತದಾನಕ್ಕೆ 48 ಗಂಟೆಗಳ ಮೊದಲು ಈ ಕ್ಷೇತ್ರಗಳಲ್ಲಿ ಹೊರಗಿನವರು ಇರದಂತೆ ನೋಡಿಕೊಳ್ಳಲು ಚುನಾವಣೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಯಾವುದೇ ರೀತಿಯ ಪ್ರಚಾರ, ಸಾರ್ವಜನಿಕ ಸಭೆ, ಪತ್ರಿಕಾಗೋಷ್ಠಿ, ಸಂದರ್ಶನ ಮತ್ತು ವಿದ್ಯುನ್ಮಾನ ಅಥವಾ ಮುದ್ರಣ ಮಾಧ್ಯಮದಲ್ಲಿ ಪ್ಯಾನಲ್ ಚರ್ಚೆಗಳನ್ನು ನಿಷೇಧಿಸಲಾಗಿದೆ.
ಕೊನೆಯ ದಿನದ ಪ್ರಚಾರ : ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ʻಈ ಚುನಾವಣೆ ಎರಡನೇ ಸ್ವಾತಂತ್ರ್ಯ ಚಳವಳಿ ಮತ್ತು ಯಾರ ಆಡಳಿತವನ್ನು ಮುಂದುವರಿಸಬಾರದು ಎಂಬುದನ್ನು ನಿರ್ಧರಿಸುತ್ತದೆ. ಮೋದಿಯವರು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ದೇಶವನ್ನು ಹಾಳು ಮಾಡಿದ್ದಾರೆʼ ಎಂದು ಆರೋಪಿಸಿದರು. ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ತೀವ್ರ ಪ್ರಚಾರ ನಡೆಸಿದರು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಸಹರನ್‌ಪುರ ಮತ್ತು ಮೊರಾದಾಬಾದ್‌ನಲ್ಲಿ ಬುಧವಾರ ಸಭೆಗಳಲ್ಲಿ ಮಾತನಾಡಿದರು. ಛತ್ತೀಸ್‌ಗಢದ ನಕ್ಸಲ್ ಪೀಡಿತ ಬಸ್ತಾರ್ ನಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಮಂಗಳವಾರ ಕಂಕೇರ್ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 29 ಮಾವೋವಾದಿಗಳನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು.