ಹೆಚ್ಚು ನೀರು ಬಳಸುವ ಆಸ್ಪತ್ರೆ, ಕಂಪನಿಗಳಿಗೆ ನೀರು ಪೂರೈಕೆ ಶೇ.20ರಷ್ಟು ಕಡಿತ !

3 ಪ್ರಮುಖ ಆಸ್ಪತ್ರೆಗಳೂ ಇವೆ | ಮಾರ್ಚ್‌ 15 ರಿಂದ ಹಂತ ಹಂತವಾಗಿ ನೀರು ಪೂರೈಕೆ ಕಡಿತ ಮಾಡುವುದಾಗಿ ತಿಳಿಸಿರುವ ಜಲ ಮಂಡಳಿ;

Update: 2024-03-13 13:19 GMT
ಬೆಂಗಳೂರಿನ ವಸತಿ ಸಮುಚ್ಛಯ

ರಾಜ್ಯದಲ್ಲಿ ಮಳೆಯಾಗಿ ನೀರು ಸಂಗ್ರಹವಾಗುವವರೆಗೂ ಇರುವ ನೀರನ್ನು ಉಳಿಸಿಕೊಳ್ಳಲು ಹಾಗೂ ಎಲ್ಲರಿಗೂ ನೀರು ಪೂರೈಸುವ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಜಲಮಂಡಳಿ) ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇದೀಗ ಬೆಂಗಳೂರಿನಲ್ಲಿ ಹೆಚ್ಚು ನೀರು ಬಳಸುವವರಿಗೆ ಶೇ 20ರಷ್ಟು ನೀರು ಪೂರೈಕೆ ಕಡಿತ ಮಾಡಲು ಜಲ ಮಂಡಳಿ ಮುಂದಾಗಿದೆ. ಬೆಂಗಳೂರಿನಲ್ಲಿ ನಿತ್ಯ ಎರಡು ಕೋಟಿ ಲೀಟರ್‌ಗಿಂತಲೂ ಹೆಚ್ಚು ನೀರು ಬಳಸುವ ಸಂಸ್ಥೆಗಳನ್ನು ಬೃಹತ್‌ ಗ್ರಾಹಕರು ಎಂದು ವಿಂಗಡಿಸಿದೆ. ಈ ರೀತಿ ನೀರನ್ನು ಹೆಚ್ಚಾಗಿ ಬಳಸುವ ಸಂಸ್ಥೆಗಳಲ್ಲಿ ಬೆಂಗಳೂರಿನ 38 ಸಂಸ್ಥೆಗಳನ್ನು ಗುರುತಿಸಲಾಗಿದೆ. ಈ ಸಂಸ್ಥೆಗಳಿಗೆ ತಿಂಗಳಿಗೆ 1,765 ಮಿಲಿಯನ್‌ ಲೀಟರ್‌ ನೀರು ಬಳಕೆ ಆಗುತ್ತಿದೆ. ಅಂದರೆ ದಿನಕ್ಕೆ 59 ಮಿಲಿಯನ್ ಲೀಟರ್ (MLD) ಆಗಿದೆ.

ಇದೀಗ ಶೇ 20ರಷ್ಟು ನೀರು ಪೂರೈಕೆಯನ್ನು ಕಡಿತ ಮಾಡುವುದರಿಂದಾಗಿ ದಿನಕ್ಕೆ ಕನಿಷ್ಠ 10 MLD ನೀರನ್ನು ಉಳಿಸಬಹುದಾಗಿದೆ. ಈ ರೀತಿ ಉಳಿಸಿದ ನೀರನ್ನು ಬೆಂಗಳೂರಿನ ಕೊಳಗೇರಿ ಪ್ರದೇಶ ಹಾಗೂ ಟ್ಯಾಂಕರ್‌ ನೀರು ಖರೀದಿಸಲು ಸಾಧ್ಯವಿಲ್ಲದ ಬಡವರಿಗೆ ಪೂರೈಸಲು ಜಲಮಂಡಳಿ ನಿರ್ಧರಿಸಿದೆ. ಹೀಗಾಗಿ, ಮಾರ್ಚ್‌ 15ರಿಂದ ಹಂತ ಹಂತವಾಗಿ ನೀರು ಪೂರೈಕೆಯನ್ನು ಕಡಿಮೆ ಮಾಡಿ, ಏಪ್ರಿಲ್ 15ರ ವೇಳೆಗೆ ಶೇ.20ರಷ್ಟು ನೀರು ಪೂರೈಕೆ ಕಡಿತ ಮಾಡಲು ನಿರ್ಧರಿಸಲಾಗಿದೆ.

ಪ್ರಮುಖ ಮೂರು ಆಸ್ಪತ್ರೆಗಳಿಗೂ ನೀರು ಕಡಿತ

ನಗರದಲ್ಲಿ ಅತೀ ಹೆಚ್ಚು ನೀರನ್ನು ಬಳಸುವ ಸಂಸ್ಥೆಗಳು ಎಂದು ಜಲ ಮಂಡಳಿ ಗುರುತಿಸಿರುವುದರಲ್ಲಿ ನಗರದ 3 ಪ್ರಮುಖ ಆಸ್ಪತ್ರೆಗಳು ಸಹ ಸೇರಿವೆ. ಪ್ರಮುಖ ಆಸ್ಪತ್ರೆಗಳಾದ ನಿಮ್ಹಾನ್ಸ್, ವಿಕ್ಟೋರಿಯಾ ಹಾಗೂ ಕಮಾಂಡ್ ಆಸ್ಪತ್ರೆಗಳು ಈ ಗುಂಪಿನಲ್ಲಿ ಸೇರಿವೆ. ಇಲ್ಲೂ ನೀರು ಪೂರೈಕೆ ಕಡಿತವಾಗಲಿದೆ. ಇನ್ನುಳಿದ ಪ್ರಮುಖ ಸಂಸ್ಥೆಗಳು ಈ ರೀತಿ ಇವೆ: ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್ (ಐಐಎಸ್‌ಸಿ), ಏರ್ ಫೋರ್ಸ್ ಸ್ಟೇಷನ್‌ಗಳು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿ (ಎಚ್‌ಎಎಲ್), ಬಯೋಕಾನ್ ಪ್ರೈ.ಲಿ, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ರೈಲ್ವೆ ಇದರಲ್ಲಿ ಸೇರಿವೆ.

ಈಜುಕೊಳ ಮುಚ್ಚುವುದಕ್ಕೆ ಸೂಚನೆ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇರುವುದರಿಂದ ನಗರದ ಈಜುಕೊಳದ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಜಲ ಮಂಡಳಿ ಸೂಚನೆ ನೀಡಿದೆ. ನಿಯಮ ಉಲ್ಲಂಘನೆ ಮಾಡಿ ಈಜುಕೊಳ ತೆರೆದಿರುವುದು ಖಚಿತವಾದರೆ ದಂಡ ಹಾಕುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.

ನೀರು ಕಡಿತ ಅನಿವಾರ್ಯ: ಜಲ ಮಂಡಳಿ ಪ್ರತಿಪಾದನೆ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇರುವುದರಿಂದ ಬೃಹತ್‌ ಪ್ರಮಾಣದಲ್ಲಿ ನೀರು ಬಳಸುತ್ತಿರುವವರಿಗೆ ಶೇ 20ರಷ್ಟು ನೀರು ಕಡಿತ ಮಾಡುವುದು ಅನಿವಾರ್ಯವಾಗಿದೆ ಎಂದು ಜಲ ಮಂಡಳಿ ಅಧ್ಯಕ್ಷ ಡಾ.ರಾಮ್‌ ಪ್ರಸಾದ್‌ ಮನೋಹರ್‌ ತಿಳಿಸಿದ್ದಾರೆ. ನಗರದಲ್ಲಿ 1.4 ಕೋಟಿ ಜನರಿದ್ದಾರೆ. ಎಲ್ಲರ ಯೋಗಕ್ಷೇಮವೂ ಮುಖ್ಯ. ಬೃಹತ್ ಗ್ರಾಹಕರಿಗೆ ನೀರಿನ ಪೂರೈಕೆಯನ್ನು ಕಡಿಮೆ ಮಾಡಿ, ಕುಡಿಯುವ ನೀರಿನ ಕೊರತೆ ಇರುವ ಪ್ರದೇಶಗಳಿಗೆ ನೀರು ಮರುಹಂಚಿಕೆ ಮಾಡಲಾಗುವುದು. ಇದು ಅನಿವಾರ್ಯ ಸಹ ಎಂದಿದ್ದಾರೆ.

Tags:    

Similar News