US elections 2024 | ಅಮೆರಿಕ ಅಧ್ಯಕ್ಷೀಯ ಚುನಾವಣೆ: ಕಮಲಾ ಸೋಲಿಗೆ ಇಲ್ಲಿದೆ ಐದು ಕಾರಣಗಳು

2020 ರಲ್ಲಿ ಜೋ ಬೈಡನ್ ವಿರುದ್ಧ ಟ್ರಂಪ್ ಸೋಲೊಪ್ಪಿಕೊಂಡಿದ್ದರು. ಇಲ್ಲಿ ಒಂದು ಅಂಶ ಸ್ಪಷ್ಟವಾಗಿದೆ. ಅಮೆರಿಕನ್ನರು ಇನ್ನೂ ಮಹಿಳೆಯರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಮನಸ್ಸು ಮಾಡುತ್ತಿಲ್ಲ.;

Update: 2024-11-07 08:11 GMT
ಸೋಲಿನ ಬಳಿಕ ಹತಾಶೆಯ ಭಾವದಲ್ಲಿ ಕಂಡ ಕಮಲಾ ಹ್ಯಾರಿಸ್‌

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಚುನಾಯಿತರಾಗಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಿದ್ದ ಕಮಲಾ ಹ್ಯಾರಿಸ್‌ ಸೋಲೊಪ್ಪಿಕೊಂಡಿದ್ದಾರೆ. ಈ ಫಲಿತಾಂಶದಲ್ಲಿ ಮತ್ತು ಟ್ರಂಪ್‌ ಗೆಲುವಿನಲ್ಲಿ ಒಂದು ಸಾಮ್ಯತೆ ಕಾಣುತ್ತಿದೆ. ಅದೇನೆಂದರೆ ಡೊನಾಲ್ಡ್ ಟ್ರಂಪ್ ಎರಡು ಬಾರಿ ಯುಎಸ್ ಚುನಾವಣೆಯಲ್ಲಿ ಗೆದ್ದಾಗಲೂ ಅವರ ಪ್ರತಿಸ್ಪರ್ಧಿಗಳಾಗಿದ್ದವರು ಮಹಿಳೆಯರು!

2016ರಲ್ಲಿ ಹಿಲರಿ ಕ್ಲಿಂಟನ್ ಅವರನ್ನು ಸೋಲಿಸಿದ್ದ ಟ್ರಂಪ್ . 2024 ರಲ್ಲಿ ಟ್ರಂಪ್ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿದ್ದಾರೆ. ಅಂದ ಹಾಗೆ ಟ್ರಂಪ್ 2020 ರಲ್ಲಿ ಜೋ ಬೈಡನ್ ವಿರುದ್ಧ ಸೋಲೊಪ್ಪಿಕೊಂಡಿದ್ದರು. ಇಲ್ಲಿ ಒಂದು ಅಂಶ ಸ್ಪಷ್ಟವಾಗಿದೆ. ಇಷ್ಟೆಲ್ಲ ಮುಂದುವರಿದರೂ ಅಮೆರಿಕನ್ನರು  ಮಹಿಳೆಯರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಇನ್ನೂ ಮನಸ್ಸು ಮಾಡುತ್ತಿಲ್ಲ.

ನ್ಯೂಯಾರ್ಕ್ ಟೈಮ್ಸ್ ಉತ್ತರ ಕೆರೋಲಿನಾದ ಮಹಿಳೆಯೊಬ್ಬರ ಹೇಳಿಕೆಯನ್ನು ಫಲಿತಾಂಶದ ಬಳಿಕ ಪ್ರಕಟಿಸಿದೆ. ಆಕೆ ಹಲವು ವರ್ಷಗಳಿಂದ ಡೆಮಾಕ್ರಟಿಕ್‌ ಪಕ್ಷಕ್ಕೆ ಮತ ಚಲಾಯಿಸುತ್ತಿದ್ದಾರೆ. ಟ್ರಂಪ್‌ ಗೆಲುವಿನಂದ ಮತ್ತೆ ಹತಾಶರಾಗಿದ್ದಾರೆ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಟ್ರಂಪ್‌ ಬಗ್ಗೆ ಭಯವಿದೆ. ಯಾಕೆಂದರೆ ಶೇಕಡಾ 51ರಷ್ಟು ಜನರು ಮತಾಂಧ ಮತ್ತು ಸ್ತ್ರೀದ್ವೇಷಿ ವ್ಯಕ್ತಿಗೆ ಮತ ಚಲಾಯಿಸಿದ ದೇಶದಲ್ಲಿ ನಾನು ವಾಸಿಸುತ್ತಿದ್ದೇನೆ ಎಂಬುದೇ ಆತಂಕದ ಸಂಗತಿ. ದೇಶದ ಅರ್ಧದಷ್ಟು ಜನರು ಆತ ಸರಿ ಎಂದು ಭಾವಿಸಿದ್ದಾರೆ ಎಂಬುದು ಆತಂಕದ ವಿಷಯ ಎಂದು ಹೇಳಿದ್ದಾರೆ.

ಮಹಿಳೆಗೆ ಸೋಲು ಎಂಬ ನಿರ್ಣಾಯಕ ಅಂಶವನ್ನು ಬದಿಗಿಟ್ಟುಕೊಂಡು ನೋಡಿದರೂ , 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹ್ಯಾರಿಸ್ ಸೋಲಿಗೆ ಇನ್ನೂ ಹಲವಾರು ಕಾರಣಗಳಿವೆ. ಅವುಗಳ ಬಗ್ಗೆ ಗಮನ ಹರಿಸೋಣ. ಪ್ರಮುಖವಾಗಿ ಅಮೆರಿದಕ ಮತದಾರರು ವಲಸೆ, ಗಡಿ ಭದ್ರತೆ, ಬಂದೂಕು ನಿಯಂತ್ರಣ ಕಾನೂನುಗಳು, ಸಂತಾನೋತ್ಪತ್ತಿ ಹಕ್ಕುಗಳು ಮತ್ತು ವಿದೇಶಾಂಗ ನೀತಿಯ ಈ ಚುನಾವಣೆಯಲ್ಲಿ ನಿರ್ಣಾಯಕ ಅಂಶ ಎಂದು ಪರಿಗಣಿಸಿದ್ದರು ಎಂಬುದು ಫಲಿತಾಂಶದ ಬಳಿಕ ಸ್ಪಷ್ಟವಾಗಿದೆ.

1. ಆಡಳಿತಾತ್ಮಕ ನೀತಿಗಳ ಬಗ್ಗೆ ಸ್ಪಷ್ಟತೆಯ ಕೊರತೆ

ಅಧ್ಯಕ್ಷ ಜೋ ಬೈಡನ್ ಅವರನ್ನು ಡೆಮಾಕ್ರಟಿಕ್ ಪಕ್ಷವು ಅಧ್ಯಕ್ಷೀಯ ಚುನಾವಣೆಯ ಉಮೇದುವಾರಿಕೆಯಿಂದ ಇಳಿಯುವಂತೆ ಮನವೊಲಿಸಿದ ನಂತರ ಕಮಲಾ ಹ್ಯಾರಿಸ್ ತಡವಾಗಿ ಸ್ಪರ್ಧೆಗೆ ಇಳಿದಿದ್ದರು. ಹೀಗಾಗಿ ವಿವಿಧ ನೀತಿ ವಿಷಯಗಳ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅವರು ನೀತಿ ನಿರೂಪಣೆ ವಿಚಾರದಲ್ಲಿ ಗೊಂದಲಕ್ಕೊಳಗಾದಂತೆ ಕಂಡಿತು. ವೈಫಲ್ಯಗಳನ್ನು ನೇರವಾಗಿ ಪರಿಹರಿಸುವ ಬದಲು ಸಮಸ್ಯೆಗಳ ಸುತ್ತಲೇ ಸುತ್ತಿದ್ದರು. ಅನೇಕ ರಾಜಕೀಯ ವಿಶ್ಲೇಷಕರಿಗೆ ಅವರ ನಿಲುವು ಏನೆಂಬುದು ಸ್ಪಷ್ಟವಾಗಿರಲಿಲ್ಲ.

ತನ್ನ ಪ್ರಚಾರದ ಆರಂಭದಲ್ಲಿ, ಎಬಿಸಿಯ ಸಂದರ್ಶನದಲ್ಲಿ "ಕಳೆದ ನಾಲ್ಕು ವರ್ಷಗಳಲ್ಲಿ ಅಧ್ಯಕ್ಷ ಬೈಡೆನ್‌ ಮಾಡಿದ್ದಕ್ಕಿಂತ ಭಿನ್ನವಾಗಿ ನೀವು ಏನು ಮಾಡುತ್ತೀರಿ ಎಂದು ಪ್ರಶ್ನಿಸಲಾಗಿತ್ತು. ಅದಕ್ಕೆ ಹ್ಯಾರಿಸ್‌ "ಮನಸ್ಸಿಗೆ ಬರುವ ಒಂದು ವಿಷಯವೂ ಇಲ್ಲ" ಎಂದು ಉತ್ತರಿಸಿದ್ದರು. ಅಲ್ಲಿಗೆ ಅವರೇನೆಂಬುದು ಬಯಲಾಗಿತ್ತು. 

ಕಮಲಾ ವಿಭಿನ್ನ ಕಾರ್ಯತಂತ್ರವನ್ನೂ ಹೊಂದಿರಲಿಲ್ಲ. 2020ರಲ್ಲಿ ತನ್ನನ್ನು ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದ ಬೈಡೆನ್‌ ಬಗ್ಗೆ ಯಾವುದೇ ನಿಷ್ಠೆ ತೋರಲಿಲ್ಲ. ಅವರನ್ನೇ ಬದಿಗೆ ಸರಿಸಿ ಅಧ್ಯಕ್ಷ ಸ್ಥಾನದ ಸ್ಪರ್ಧಿಯಾದಾಗಲೂ ಅವರು ಆ ನಿಷ್ಠೆ ಉಳಿಸಿರಲಿಲ್ಲ.

2. ಹಣದುಬ್ಬರದ ಬಿಸಿ

ಅಮೆರಿಕದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತದ ಚುನಾವಣೆಗಳಲ್ಲಿ ಆಹಾರ ಮತ್ತು ಅಗತ್ಯ ವಸ್ತುಗಳ ಬೆಲೆ ನಿರ್ಣಾಯಕ ಎನಿಸುತ್ತದೆ. ರಷ್ಯಾ-ಉಕ್ರೇನ್ ಯುದ್ಧ ಮತ್ತು ಪ್ಯಾಲೆಸ್ತೀನ್‌ ಮತ್ತು ಇಸ್ರೇಲ್‌ ಯುದ್ಧದ ಪರಿಣಾಮದಿಂದಾಗಿ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಾಗಿತ್ತು. ಮೋಟಾರ್‌ ವಾಹನಗಳ ಗ್ಯಾಸ್‌ ಬೆಲೆ ಏರಿಕೆಯ ಪರಿಣಾಮ ಅಲ್ಲಿನ ಜನರಿಗೆ ತಟ್ಟಿತ್ತು. ತಮ್ಮ ತಮ್ಮ ಕಾರುಗಳಲ್ಲೇ ತಿರುಗಾಡುವ ಅಮೆರಿಕನ್ನರಿಗೆ ಇದು ಮುಖ್ಯ ವಿಷಯವಾಗಿತ್ತು.

ಅಮೆರಿಕವನ್ನು ಮತ್ತೆ ಶ್ರೇಷ್ಠರನ್ನಾಗಿಸುವುದು ಟ್ರಂಪ್‌ ನೀಡಿದ ಭರವಸೆ. ಹೀಗಾಗಿ ದುಡಿಯುವ ವರ್ಗದ ಬಿಳಿ ಅಮೆರಿಕನ್ನರಿಗೆ ಈ ಸಂಗತಿ ಹೆಚ್ಚು ಹಿಡಿಸಿತು. ಅವರು ಟ್ರಂಪ್‌ ಕಡೆಗೆ ಒಲವು ತೋರಿದರು.

ಕೆಲವು ಸಮೀಕ್ಷೆಗಳಲ್ಲಿ ಸುಮಾರು 30 ಪ್ರತಿಶತದಷ್ಟು ಅಮೆರಿಕನ್ ಮತದಾರರು ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಹಿಂದುಳಿದಿದೆ ಎಂದು ಹೇಳಿದ್ದರು. ಶೇಕಡಾ 90ರಷ್ಟು ಜನರು ದಿನಸಿ ವಸ್ತುಗಳ ಬೆಲೆ ಏರಿಕೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

ಟ್ರಂಪ್ ತನ್ನ ಮೊದಲ ಅಧಿಕಾರಾವಧಿಯಲ್ಲಿ ಆಮದುಗಳ ಮೇಲಿನ ಸುಂಕ ಹೆಚ್ಚಳ, ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಅಮೆರಿಕದಲ್ಲಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವುದು, ಚೀನಾದ ಬಗ್ಗೆ ಅವರ ಆಕ್ರಮಣಕಾರಿ ನಿಲುವು ಸೇರಿದಂತೆ ಹಲವಾರು ಪರಿಣಾಮಕಾರಿ ನಿಲವು ತೆಗೆದುಕೊಂಡಿದ್ದರು. ಅದು ಅಮೆರಿಕದ ಮೂಲ ನಿವಾಸಿಗಳಿಗೆ ಇಷ್ಟ ಎನಿಸಿತು. ಆರ್ಥಿಕತೆಯ ಸುಧಾರಣೆಗೆ ಟ್ರಂಪ್ ಅವರನ್ನು ಹೆಚ್ಚು ನಂಬಿದ್ದೇವೆ ಎಂದು ಹೆಚ್ಚಿನ ಮತದಾರರು ಹೇಳಿದ್ದರು.

3. ಅಕ್ರಮ ವಲಸೆ

ಟ್ರಂಪ್ ಅವರ ಬಹಿರಂಗ ಧರ್ಮಾಂಧತೆಯು ಜನರ ಆತಂಕ ಮೂಡಿಸಿದ್ದವು. ಆದಾಗ್ಯೂ, ಅವರು ಪ್ರಚಾರದ ಸಮಯದಲ್ಲಿ ವಲಸಿಗರ ವಿರುದ್ಧ ಪ್ರಕಟಿಸಿದ ಆಕ್ರೋಶ ಮೂಲ ನಿವಾಸಿಗಳಿಗೆ ಆಪ್ಯಾಯಮಾನವಾದವು. ʼವಲಸೆ ಬಂದವರು ಇಲ್ಲಿನ ಜನರ ಸಾಕುಪ್ರಾಣಿಗಳನ್ನು ಕದ್ದು ತಿನ್ನುತ್ತಿದ್ದಾರೆʼ ಎಂಬ ಆರೋಪದ ಹೊರತಾಗಿಯೂ ಟ್ರಂಪ್‌ ವಲಸಿಗರಿಂದ ಮತ್ತು ಮೂಲ ನಿವಾಸಿಗರಿಂದ ಹೆಚ್ಚಿನ ಮತ ಪಡೆದಿರುವುದು ಅಚ್ಚರಿಯೇ ಸರಿ. 

ಅಮೆರಿಕದ ಗಡಿಗಳಲ್ಲಿ ಅಕ್ರಮ ವಲಸಿಗರ ನುಸುಳುವಿಕೆಯನ್ನು ನಿಯಂತ್ರಿಸಲು ಬೈಡೆನ್-ಹ್ಯಾರಿಸ್ ವಿಫಲರಾಗಿದ್ದಾರೆ ಎಂದು ಟ್ರಂಪ್‌ ಪ್ರಚಾರದ ವೇಳೆ ದೂಷಿಸಿದ್ದರು. ಇದೇ ಕಾರಣಕ್ಕೆ 52 ವರ್ಷದ ಎಮಿಲಿ ಸ್ಕೇಫರ್ ಎಂಬ ಡೆಮಾಕ್ರಟಿಕ್‌ ಪಕ್ಷದ ಅಭಿಮಾನಿ ಟ್ರಂಪ್‌ಗೆ ಮತ ಚಲಾಯಿಸಿದ್ದರು. ಬಹಿರಂಗವಾಗಿ ಅದನ್ನು ಅವರು ಹೇಳಿಕೊಂಡಿದ್ದಾರೆ.

"ನಾನು ಎಂದಿಗೂ ರಿಪಬ್ಲಿಕನ್ ಪಕ್ಷಕ್ಕೆ ಮತ ಹಾಕಿದವಳಲ್ಲ. ಆದರೆ ದೇಶದ ನಾಗರಿಕರ ಅಗತ್ಯಗಳಿಗಿಂತ ವಲಸಿಗರಿಂದ ಸಮಸ್ಯೆ ಹೆಚ್ಚಾಗಿತ್ತು,ʼʼಎಂದು ಆಕೆ ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಳು.

ಅಕ್ರಮ ವಲಸೆ ವಿರುದ್ಧ ಟ್ರಂಪ್ ಅವರ ಕಠಿಣ ನಿಲವು ತನಗೆ ಇಷ್ಟವಾಯಿತು ಎಂದು ಎಮಿಲಿ ಹೆಮ್ಮೆ ಪಟ್ಟುಕೊಂಡಿದ್ದಾಳೆ. ಸಾಮೂಹಿಕ ಗಡಿಪಾರು ಮಾಡಬೇಕು ಎಂಬುದು ಆಕೆಯ ನಿಲುವು.

"ಫಲಿತಾಂಶಗಳು ಅಚ್ಚರಿಯೇನೂ ಅಲ್ಲ. ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದ ಬಗ್ಗೆ ಗಮನ ಹರಿಸಿದ್ದವರಿಗೆ ಈ ಗೆಲುವು ನಿಶ್ಚಿತ ಎಂದು ದಕ್ಷಿಣ ಕೆರೊಲಿನಾದ ಜೇಮ್ಸ್‌ ಬೆಜೆಂಜರ್‌ ಎಂಬುವರು ಹೇಳಿದ್ದಾರೆ.

4. ಯುದ್ಧಗಳಿಗೆ ಹಣ ವೆಚ್ಚ

ಉಕ್ರೇನ್ ಮತ್ತು ಪ್ಯಾಲೆಸ್ತೀನ್‌ ಯುದ್ಧಗಳು ಈ ಚುನಾವಣೆಯುದ್ದಕ್ಕೂ ಬಹಳ ವ್ಯಾಪಕವಾಗಿ ಚರ್ಚೆಗೊಳಗಾದ ವಿಷಯ. ಟ್ರಂಪ್ ಈ ಯುದ್ಧದ ವೆಚ್ಚಕ್ಕೆ ಕಡಿವಾಣ ಹಾಕುತ್ತಾರೆ ಮತ್ತು ಅಮೆರಿಕದ ಹಣವನ್ನು ಉಳಿಸುತ್ತಾರೆ ಎಂದು ಟ್ರಂಪ್‌ಗೆ ಮತ ಹಾಕಿದವರು ಭಾವಿಸಿದ್ದರು. ಬೈಡೆನ್‌ ಮತ್ತು ಕಮಲಾ ದೇಶದ ಹಣವನ್ನು ಬೇರೆ ದೇಶಗಳ ಯುದ್ಧಕ್ಕೆ ಖರ್ಚು ಮಾಡುತ್ತಾರೆ ಎಂದೇ ಮತದಾರರು ನಂಬಿದ್ದರು.

 ಯುಎಸ್ ಯಾವದೇ ಯುದ್ಧಕ್ಕೆ ಧನಸಹಾಯ ನೀಡಬೇಕು ಎಂದು ನಾನು ಭಾವಿಸುವುದಿಲ್ಲ. ನಮಗೆ ಅದರಲ್ಲಿ ಯಾವುದೇ ಆಸಕ್ತಿ ಇಲ್ಲ. ನಮ್ಮ ಹಿತಾಸಕ್ತಿಯನ್ನು ಪೂರೈಸದ ವಿದೇಶಿ ಯುದ್ಧಗಳಿಗೆ ಧನಸಹಾಯ ನೀಡಬಾರದು. ಜನರು ಇದರಿಂದ ಬೇಸತ್ತಿದ್ದಾರೆ ಮತ್ತು ಟ್ರಂಪ್ ಎರಡೂ ಯುದ್ಧಗಳನ್ನು ಕೊನೆಗೊಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಜೇಮ್ಸ್ ಬೆಸೆಂಜರ್ ಅಭಿಪ್ರಾಯಪಟ್ಟಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧ ಮತ್ತು ಪಶ್ಚಿಮ ಏಷ್ಯಾ ಸಂಘರ್ಷವು ಮತದಾರರ ಮೇಲೆ ಪ್ರಭಾವ ಬೀರಿರಬಹುದು ಎಂದು ಇಟಲಿಗೆ ಭಾರತದ ಮಾಜಿ ರಾಯಭಾರಿ ಕೆಪಿ ಫ್ಯಾಬಿಯನ್ ಹೇಳಿದ್ದಾರೆ.

5. ಬೈಡನ್ ವೈಫಲ್ಯ

ಯುಎಸ್ ಚುನಾವಣೆಯ ಫಲಿತಾಂಶದ ಬಗ್ಗೆ ಕೇಳಿದಾಗ, ಇಟಲಿಯ ಭಾರತದ ಮಾಜಿ ರಾಯಭಾರಿ ಕೆಪಿ ಫ್ಯಾಬಿಯನ್ ಮಾತನಾಡುತ್ತಾ, "ಕಮಲಾ ಹ್ಯಾರಿಸ್ ಅಭ್ಯರ್ಥಿಯಾಗಿದ್ದರೂ ಇದು ಬೈಡನ್ ವಿರುದ್ಧದ ತೀರ್ಪು ಎಂದು ಹೇಳಿದ್ದಾರೆ. ಬೈಡೆನ್‌ ಆಡಳಿತದಲ್ಲಿ ಕಮಲಾ ಉಪಾಧ್ಯಕ್ಷರಾಗಿದ್ದರು. ಬೈಡನ್ ಅವರಿಗೆ ನಾಮನಿರ್ದೇಶನ ಮಾಡಿದ್ದರು. ಬೈಡೆನ್‌ ವೈಫಲ್ಯಗಳಿಗೆ ಕಮಲಾ ಕೂಡ ಹೊಣೆ ಎಂದು ಜನ ಭಾವಿಸಿದರು ಎಂದಿದ್ದಾರೆ.  

ಅಧ್ಯಕ್ಷ ಬೈಡನ್ ಅವರ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಅವರ ಆಯ್ಕೆಯ ರೇಟಿಂಗ್‌ ಶೇಕಡಾ 50 ದಾಟಿ ಹೋಗಿರಲಿಲ್ಲ. ಇದು ಹ್ಯಾರಿಸ್‌ ಸೋಲಿಗೆ ಕಾರಣವಾಯಿತು. ಆರ್ಥಿಕ ಹತಾಶೆಗಳಿಗೆ ಬೈಡೆನ್‌ ಆಗಲಿ ಕಮಲಾ ಅವರೇ ಆಗಲಿ ಉತ್ತರ ಹೇಳಲಿಲ್ಲ. ಹೀಗಾಗಿ ಬೈಡೆನ್‌ ಸೋಲಿನಲ್ಲಿ ಕಮಲಾ ಅವರ ಪಾತ್ರವೂ ಇದೆ ಎಂಬುದನ್ನು ಮತದಾರರು ಕಂಡುಕೊಂಡಿದ್ದರು. ಇದು ಅವರಿಗೆ ಬೀಳುವ ಮತಗಳ ಪ್ರಮಾಣವನ್ನು ಕಡಿಮೆ ಮಾಡಿತು. 

Tags:    

Similar News