Donald Trump: ಸ್ವಿಂಗ್ ಸ್ಟೇಟ್ ಅರಿಜೋನಾದಲ್ಲೂ ಟ್ರಂಪ್‌ಗೆ ಗೆಲುವು
ಅರಿಜೋನಾ, ನೆವಾಡಾ, ವಿಸ್ಕಾನ್ಸಿನ್, ಮಿಚಿಗನ್, ಪೆನ್ಸಿಲ್ವೇನಿಯಾ, ಉತ್ತರ ಕೆರೊಲಿನಾ ಮತ್ತು ಜಾರ್ಜಿಯಾವನ್ನು ಸ್ವಿಂಗ್ ಸ್ಟೇಟ್ ಎಂದು ಕರೆಯಲಾಗುತ್ತದೆ. ಇದು ಆ ದೇಶದ ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕ ರಾಜ್ಯಗಳು.;
ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅರಿಜೋನಾದಲ್ಲಿ ನಡೆದ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿದ್ದಾರೆ. ಈ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಎಲ್ಲ (ಒಟ್ಟು ಏಳು) ಸ್ವಿಂಗ್ ಸ್ಟೇಟ್‌ಗಳಲ್ಲಿಅವರು ವಿಜಯ ಸಾಧಿಸಿದಂತಾಗಿದೆ.
ಅರಿಜೋನಾ, ನೆವಾಡಾ, ವಿಸ್ಕಾನ್ಸಿನ್, ಮಿಚಿಗನ್, ಪೆನ್ಸಿಲ್ವೇನಿಯಾ, ಉತ್ತರ ಕೆರೊಲಿನಾ ಮತ್ತು ಜಾರ್ಜಿಯಾವನ್ನು ಸ್ವಿಂಗ್ ಸ್ಟೇಟ್ ಎಂದು ಕರೆಯಲಾಗುತ್ತದೆ. ಇದು ಆ ದೇಶದ ನಿರ್ಣಾಯಕ ರಾಜ್ಯಗಳು. ಇಲ್ಲಿ ಎಲೆಕ್ಟೋರಲ್ ಮತಗಳ ಸಂಖ್ಯೆ ಹೆಚ್ಚಿದೆ. ಇಲ್ಲಿ ಗೆದ್ದವರಿಗೆ ಗೆಲುವು ಬಹುತೇಕ ನಿಶ್ಚಿತ.
ಅರಿಜೋನಾದಲ್ಲಿನ ಗೆಲುವು ಟ್ರಂಪ್ ಅವರ ಎಲೆಕ್ಟೋರಲ್ ಕಾಲೇಜ್ ಸಂಖ್ಯೆಯನ್ನು 312 ಕ್ಕೆ ಕೊಂಡೊಯಿದೆ. ಮಾಜಿ ಉಪಾಧ್ಯಕ್ಷೆ ಹ್ಯಾರಿಸ್ ಅವರಿಗೆ 226 ಸ್ಥಾನಗಳು ಸಿಕ್ಕಿದವು. ಅರಿಜೋನಾದಲ್ಲಿ 11 ಎಲೆಕ್ಟೋರಲ್ ಕಾಲೇಜ್ ಮತಗಳಿವೆ.
ಸೆನೆಟ್ ಮೇಲೆ ಹಿಡಿತ ಸಾಧಿಸಿದ ರಿಪಬ್ಲಿಕನ್ನರು
ರಿಪಬ್ಲಿಕನ್ ಪಕ್ಷವು ಅಮೆರಿಕಾದ ಸನೆಟ್ ಮೇಲೆ ನಿಯಂತ್ರಣ ಮರಳಿ ಪಡೆದುಕೊಂಡಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ (ಜನಪ್ರತಿನಿಧಿಗಳ ಸಭೆ) ಬಹುಮತ ಉಳಿಸಿಕೊಳ್ಳಲು ಸಜ್ಜಾಗಿದೆ.
ಪ್ರಸ್ತುತ, ಪಕ್ಷವು ಸೆನೆಟ್‌ನಲ್ಲಿ 52 ಸ್ಥಾನಗಳನ್ನು ಹೊಂದಿದ್ದು ಡೆಮಾಕ್ರಟಿಕ್ ಪಕ್ಷ 47 ಸ್ಥಾನಗಳನ್ನು ಹೊಂದಿದೆ.
ಸೆನಟ್‌ನಲ್ಲಿ ರಿಪಬ್ಲಿಕ್ ಪಕ್ಷ ಇಲ್ಲಿಯವರೆಗೆ 216 ಸ್ಥಾನಗಳನ್ನು ಗೆದ್ದಿದೆ. ಡೆಮಾಕ್ರಟಿಕ್ ಪಕ್ಷ 209 ಸ್ಥಾನಗಳನ್ನು ಹೊಂದಿದೆ. ಇಲ್ಲಿ ಬಹುಮತದ ಸಂಖ್ಯೆ 218. ರಿಪಬ್ಲಿಕನ್ ಪಕ್ಷ ಬಹುಮತ ಗಡಿ ದಾಟಲು ಅಗತ್ಯ ಸಂಖ್ಯೆಯ ಸ್ಥಾನ ಪಡೆಯುವ ವಿಶ್ವಾಸದಲ್ಲಿದೆ.
ಅರಿಜೋನಾದಲ್ಲಿ ಅಕ್ರಮ ವಲಸಿಗರ ಗಮನಾರ್ಹ
1996ರಲ್ಲಿ ಬಿಲ್ ಕ್ಲಿಂಟನ್ ಗೆದ್ದ ಬಳಿಕ ಅರಿಜೋನಾವನ್ನು ಗೆದ್ದ ಮತ್ತೊಬ್ಬ ಡೆಮಾಕ್ರಟ್ ಎಂಬ ಸಾಧನೆಗೆ ಹಿಂದಿನ ಅಧ್ಯಕ್ಷ ಜೋ ಬೈಡೆನ್ ಪಾತ್ರರಾಗಿದ್ದರು. ಆದರೆ ಈಗ ಟ್ರಂಪ್ ಅದನ್ನು ಮರಳಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಟ್ರಂಪ್ ಇಲ್ಲಿ ಚುನಾವಣಾ ಪ್ರಚಾರ ಮಾಡುವ ವೇಳೆ ಗಡಿ ಭದ್ರತೆ, ವಲಸೆ ಮತ್ತು ಅಕ್ರಮ ವಲಸಿಗರು ನಡೆಸಿದ ಅಪರಾಧಗಳ ಬಗ್ಗೆ ಧ್ವನಿ ಎತಿದ್ದರು. ಕಳೆದ ವರ್ಷ ದಾಖಲೆಯ ವಲಸಿಗರು ಇಲ್ಲಿಗೆ ಬಂದಿದ್ದಾರೆ ಎಂಬುದಾಗಿ ಬಣ್ಣಿಸಿದ್ದರು.
ನುಸುಳುಕೋರರನ್ನು ಸಾಮೂಹಿಕ ಗಡಿಪಾರು ಮಾಡುವುದಾಗಿ ಟ್ರಂಪ್ ಭರವಸೆ ನೀಡಿದ್ದರು. ಯುಎಸ್-ಮೆಕ್ಸಿಕೊ ಗಡಿಯಲ್ಲಿ ಗಸ್ತು ತಿರುಗಲು ಹೆಚ್ಚುವರಿ 10,000 ಗಡಿ ಭದ್ರತಾ ಪಡೆಯನ್ನು ನೇಮಿಸಿಕೊಳ್ಳುವುದಾಗಿ ಹೇಳಿದ್ದರು. ಗಡಿ ನಿಯಂತ್ರಣ ನಿಧಿಗೆ ಸೇನಾ ಬಜೆಟ್‌ನಲ್ಲಿ ಹೆಚ್ಚುವರಿ ಭಾಗವನ್ನು ಬಳಸುವುದಾಗಿ ಹೇಳಿದ್ದರು .
2020ರಲ್ಲಿ ಬೈಡನ್ ಅವರ ಎಲೆಕ್ಟೋರಲ್ ಕಾಲೇಜ್ ವಿಜಯದ ಬಳಿಕ ಟ್ರಂಪ್ ಕಡೆಗೆ ತಿರುಗಿದ ಆರನೇ ರಾಜ್ಯ ಆರನೇ ರಾಜ್ಯ ಅರಿಜೋನಾ. ಜಾರ್ಜಿಯಾ, ಮಿಚಿಗನ್, ನೆವಾಡಾ, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ಈ ವರ್ಷ ಟ್ರಂಪ್ ಗೆದ್ದ ಇತರ ರಾಜ್ಯಗಳು. ಟ್ರಂಪ್ 2020 ರಲ್ಲಿ ಅಲ್ಪ ಬಹುಮತ ಹೊಂದಿದ್ದ ಉತ್ತರ ಕೆರೊಲಿನಾವನ್ನೂ ಗೆದ್ದುಕೊಂಡಿದ್ದಾರೆ.
ಟ್ರಂಪ್ ಅವರನ್ನು ಶ್ವೇತಭವನಕ್ಕೆ ಆಹ್ವಾನಿಸಿದ ಬೈಡನ್
ಟ್ರಂಪ್ ಜನವರಿ 20ರಂದು ಅಮೆರಿಕದ 47 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಂತೆಯೇ ನಿರ್ಗಮಿತ ಅಧ್ಯಕ್ಷ ಬೈಡನ್, ನವೆಂಬರ್ 13 ರಂದು ಶ್ವೇತಭವನದಲ್ಲಿ ನಡೆಯಲಿರುವ ಸಭೆಗೆ ಬರುವಂತೆ ಟ್ರಂಪ್‌ಗೆ ಆಹ್ವಾನ ನೀಡಿದ್ದಾರೆ. ಇದು ಔಪಚಾರಿಕವಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆಯ ಆರಂಭವಾಗಿದೆ.
"ಅಧ್ಯಕ್ಷ ಬಿಡೆನ್ ಅವರ ಆಹ್ವಾನದ ಮೇರೆಗೆ ಅಧ್ಯಕ್ಷ ಬಿಡೆನ್ ಮತ್ತು ನಿಯೋಜಿತ ಅಧ್ಯಕ್ಷ ಟ್ರಂಪ್ ಬುಧವಾರ ಬೆಳಿಗ್ಗೆ 11 ಗಂಟೆಗೆ ಓವಲ್ ಕಚೇರಿಯಲ್ಲಿ ಭೇಟಿಯಾಗಲಿದ್ದಾರೆ" ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರಿನ್ ಜೀನ್-ಪಿಯರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿರ್ಗಮನ ಅಧ್ಯಕ್ಷರು ಮತ್ತು ಮುಂಬರುವ ಅಧ್ಯಕ್ಷರ ನಡುವಿನ ಸಭೆ ಔಪಚಾರಿಕವಾಗಿದೆ ಮತ್ತು ದಶಕಗಳಷ್ಟು ಹಳೆಯ ಸಂಪ್ರದಾಯ ಇದು . ಇದನ್ನು ಸಾಮಾನ್ಯವಾಗಿ ಓವಲ್ ಕಚೇರಿಯಲ್ಲಿ ನಡೆಸಲಾಗುತ್ತದೆ.