WOMEN'S DAY SPECIAL | ಕೃಷಿ ಉತ್ಪನ್ನ ಮೌಲ್ಯವರ್ಧನೆಗೆ ಮಾದರಿ ಎ.ವಿ ರತ್ನಮ್ಮ

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮೂಲಕ ಸ್ವಾವಲಂಬನೆ ಸಾಧಿಸುವ ಜೊತೆಗೆ ಹಲವು ಮಹಿಳೆಯರಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿರುವ ಕೋಲಾರದ ಎ ವಿ ರತ್ಮಮ್ಮ ಅವರ ಸಾಧನೆಯ ಪರಿಚಯ ಇಲ್ಲಿದೆ..;

By :  Hitesh Y
Update: 2024-03-08 01:00 GMT
ಕೃಷಿಯಲ್ಲಿ ಭರ್ಜರಿ ಆದಾಯು ಗಳಿಸುತ್ತಿರುವ ಎ.ವಿ ರತ್ನಮ್ಮ

ರೈತನನ್ನು ದೇಶದ ಬೆನ್ನೆಲುಬು ಎನ್ನುತ್ತೇವೆ. ಅದೇ ರೀತಿ ಕೃಷಿ ಕ್ಷೇತ್ರಕ್ಕೆ ರೈತ ಮಹಿಳೆ ಬೆನ್ನೆಲುಬು. ಕೃಷಿ ಕ್ಷೇತ್ರದಲ್ಲಿ ಮಹಿಳೆಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ, ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡು ಪ್ರಸಿದ್ಧಿ ಗಳಿಸಿದ್ದು ವಿರಳವೆಂದೇ ಹೇಳಬಹುದು. ಆದರೆ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗುಂಡಮನತ್ತ ಗ್ರಾಮದ ಪ್ರಗತಿಪರ ರೈತ ಮಹಿಳೆ ಎ.ವಿ ರತ್ನಮ್ಮ ಇದಕ್ಕೆ ತದ್ವಿರುದ್ಧ.

ಅವರು ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಇದೀಗ ಎಲ್ಲ ರೈತ ಮಹಿಳೆಯರಿಗೆ ಮಾದರಿಯಾಗಿದೆ.

ರತ್ನಮ್ಮ ಅವರು ಮಿಶ್ರಬೆಳೆಗಳನ್ನು ಬೆಳೆಯುವ ಮೂಲಕ ಕೃಷಿ ಆದಾಯವನ್ನು ವೃದ್ಧಿಸಿಕೊಂಡಿದ್ದಾರೆ. ಇವರು ಕೃಷಿಯಲ್ಲಿ ಹೆಚ್ಚು ಮನ್ನಣೆ ಗಳಿಸಲು ಮುಖ್ಯ ಕಾರಣ ಎಂದರೆ, ಬೆಳೆದು ಬೆಳೆಗಳಿಗೆ ಅವರೇ ಮಾರುಕಟ್ಟೆ ಸೃಷ್ಟಿಸಿರುವುದು. ಎ.ವಿ ರತ್ನಮ್ಮ ಅವರಿಗೆ ಮೂರು ಎಕರೆ ಜಮೀನಿದ್ದು, ಇಷ್ಟರಲ್ಲೇ ಹಲವು ಮಾದರಿಯ ಬೆಳೆಗಳನ್ನು ಬೆಳೆದು ಕೋಟ್ಯಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ರೈತ ಮಹಿಳೆ ಎ.ವಿ ರತ್ನಮ್ಮ ಅವರ ಜಮೀನಿನಲ್ಲಿ ಸಿರಿಧಾನ್ಯ ಬೆಳೆಗಳು, ರಾಗಿ, ನವಣೆ, ತೋಟಗಾರಿಕೆ ಬೆಳೆಗಳಾದ ಮಾವು ಹಾಗೂ ಕರಿಬೇವು ಸೇರಿದಂತೆ ಹಲವು ಮಾದರಿಯ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಸಿರಿಧಾನ್ಯ ಬೆಳೆಗಳನ್ನು ಬೆಳೆಯುವುದರ ಜೊತೆ ಜೊತೆಗೆ ಹಿಪ್ಪುನೇರಳೆ ವಿ-1 ತಳಿಯನ್ನು ಸಹ ಮಾವಿನ ಬೆಳೆಯ ಅಂತರ ಬೆಳೆಯಾಗಿ ಬೆಳೆದಿದ್ದು, ಲಾಭ ಮಾಡುತ್ತಿದ್ದಾರೆ.

ಮಹಿಳೆಯರು ಧೈರ್ಯ ಮಾಡಬೇಕು: ಎ.ವಿ ರತ್ನಮ್ಮ

ಮಹಿಳೆಯರು ಈಗ ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಕೃಷಿ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಇರುವ ಸಂಪನ್ಮೂಲಗಳನ್ನು ತಾಂತ್ರಿಕವಾಗಿಯೂ ಬಳಸಿಕೊಂಡು ಕೃಷಿಯಲ್ಲಿ ಮಹಿಳೆಯರು ಸಾಧನೆ ಮಾಡಬಹುದು. ಮುಖ್ಯವಾಗಿ ಮಹಿಳೆಯರು ಧೈರ್ಯ ಮಾಡಿದರೆ ಸಾಕು ಎನ್ನುತ್ತಾರೆ ಪ್ರಗತಿಪರ ಕೃಷಿ ಮಹಿಳೆ ಎ.ವಿ ರತ್ನಮ್ಮ.

ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, ಮಹಿಳೆಯರು ಮನಸ್ಸು ಮಾಡಿದರೆ ಮಹತ್ವದ ಸಾಧನೆ ಮಾಡಬಹುದು. ಕೃಷಿಯಲ್ಲಿ ಈಗ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು. ಮಹಿಳೆಯರಿಗೆ ಮೇಲೆ ಮನೆ ಹಾಗೂ ಕೆಲಸದ ಎರಡೂ ಜವಾಬ್ದಾರಿಗಳು ಇರುತ್ತವೆ. ಹೀಗಾಗಿ, ಎರಡನ್ನೂ ನಿಭಾಯಿಸಿಕೊಂಡು ಹೋಗುವುದು ಮುಖ್ಯ. ಮಹಿಳೆಯರು ಸಕಾರಾತ್ಮಕವಾಗಿ ಯೋಚಿಸಿ, ಧೈರ್ಯದಿಂದ ಕೃಷಿ ಹಾಗೂ ಉದ್ಯಮದಲ್ಲಿ ತೊಡಗಿಸಿಕೊಳ್ಳಬಹುದು. ಅದೇ ರೀತಿ ಯಾವುದೇ ಉದ್ಯಮವನ್ನು ಪ್ರಾರಂಭಿಸಿದರೂ, ಅದನ್ನು ಎಲ್ಲ ಹಂತಗಳಲ್ಲಿಯೂ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದರು.


ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವುದರಿಂದ ಲಾಭವಿದೆ ಎನ್ನುವುದನ್ನು ಅರಿತುಕೊಂಡ ರತ್ನಮ್ಮ ಅವರು ಸಿರಿಧಾನ್ಯಗಳ ಉತ್ಪನ್ನದೊಂದಿಗೆ ಉಪ್ಪಿನಕಾಯಿ, ನೆಲ್ಲಿಕಾಯಿ ತೊಕ್ಕು ಹಾಗೂ ನೆಲ್ಲಿಕಾಯಿ ಕ್ಯಾಂಡಿ ಎನ್ನುವುದು ಸೇರಿದಂತೆ ವಿವಿಧ ಮಾದರಿಯ ಮಸಾಲಾ ಪುಡಿಗಳನ್ನು ಸಹ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವುದರೊಂದಿಗೆ ಅದಕ್ಕೆ ಸೂಕ್ತ ಮಾರುಕಟ್ಟೆಯನ್ನೂ ಅವರು ಕಂಡುಕೊಂಡಿದ್ದಾರೆ.

ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿದ ನಂತರದಲ್ಲಿ ಅವುಗಳನ್ನು ಕೃಷಿಮೇಳ, ಸಿರಿಧಾನ್ಯ ಮೇಳ, ತೋಟಗಾರಿಕೆ ಮೇಳ ಹಾಗೂ ವಿವಿಧ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಆಯೋಜಿಸುವ ಮೇಳಗಳಲ್ಲೂ ಪ್ರದರ್ಶಿಸಿ ಮಾರಾಟ ಮಾಡುತ್ತಿದ್ದು, ಹೆಚ್ಚು ಪ್ರಚಾರಪಡಿಸುತ್ತಿದ್ದಾರೆ.


ವೇದಿಕ್ ಎಂಟರ್ ಪ್ರೈಸಸ್; ಡಬಲ್ ಸಕ್ಸಸ್

ರತ್ನಮ್ಮ ಅವರು ತಾವು ಬೆಳೆಯುವ ಬೆಳೆಗಳಿಗೆ ಒಳ್ಳೆಯ ಆದಾಯ ಸೃಷ್ಟಿಸಿಕೊಳ್ಳಬೇಕು ಹಾಗೂ ತಮ್ಮದೇ ಬ್ರ್ಯಾಂಡ್ ನಿರ್ಮಿಸಬೇಕು ಎಂದು ನಿರ್ಧರಿಸಿ, ಸ್ಥಾಪಿಸಿದ್ದೇ ವೇದಿಕ್ ಎಂಟರ್ ಪ್ರೈಸಸ್ ಎನ್ನುವ ಬ್ರ್ಯಾಂಡ್ ಈ ಸಂಸ್ಥೆಯ ಮೂಲಕ ಅವರು ತಾವು ಬೆಳೆಯುವ ಉತ್ಪನ್ನಗಳಿಗೆ ತಾವೇ ಮಾರುಕಟ್ಟೆಯನ್ನೂ ನಿರ್ಮಿಸಿಕೊಳ್ಳುತ್ತಿದ್ದಾರೆ.

ಅಷ್ಟೇ ಅಲ್ಲ ಈ ಸಂಸ್ಥೆಯ ಮೂಲಕ 10ಕ್ಕೂ ಹೆಚ್ಚು ರೈತ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ರತ್ನಮ್ಮ ಸ್ಥಾಪಿಸಿರುವ ಸಂಸ್ಥೆಯ ಮೂಲಕ ಸಿರಿಧಾನ್ಯ ಉತ್ಪನ್ನಗಳನ್ನು ಸಂಸ್ಕರಣೆ ಮಾಡುತ್ತಿದ್ದಾರೆ. ಸಿರಿಧಾನ್ಯದ ಬೆಳೆಗಳನ್ನು ಸಂಸ್ಕರಣೆ ಮಾಡಿ, ಮಾಲ್ಟ್, ಪಾಯಸಾ ಮಿಕ್ಸ್,ಉಪ್ಪಾ ಮಿಕ್ಸ್, ದೋಸೆ ಹಾಗೂ ಇಡ್ಲಿ ಮಿಶ್ರಣ,ವರ್‌ ಮಿಸೆಲ್ಲಿ, ಹಪ್ಪಳ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಈ ಸಂಸ್ಥೆಯ ಮೂಲಕ ಸಂಸ್ಕರಣೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ ಈ ಮೂಲಕ ವಾರ್ಷಿಕವಾಗಿ 1 ಕೋಟಿ ವ್ಯವಹಾರ ಮಾಡುತ್ತಿದ್ದಾರೆ.

ಬರಗಾಲವನ್ನೂ ವರವಾಗಿಸಿಕೊಂಡರು 

ರತ್ನಮ್ಮ ಅವರು ಬರಗಾಲವನ್ನೇ ವರವಾಗಿಸಿಕೊಂಡಿದ್ದು, ಮತ್ತೊಂದು ವಿಶೇಷ. ಕೋಲಾರದಲ್ಲಿ ಅಂತರ್ಜಲ ಕುಸಿದ ಕಾರಣ ಅವರು ಮಾಡುತ್ತಿದ್ದ ರೇಷ್ಮೆ ಕೃಷಿಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿ ಅವರು ಕೋಲಾರದ ಕೃಷಿ ವಿಜ್ಞಾನ ಕೇಂದ್ರದಿಂದ ಕೃಷಿ ಬೆಳೆಗಳ ಮೌಲ್ಯವರ್ಧನೆ ಕುರಿತು ತರಬೇತಿ ಪಡೆದರು. ಸಿರಿಧಾನ್ಯಗಳ ಮೌಲ್ಯವರ್ಧನೆಗೆ ಮುಂದಾದರು. ಸಿರಿಧಾನ್ಯ ಘಟಕ ಸ್ಥಾಪಿಸಿ, ಸಂಸ್ಕರಣಾ ಯಂತ್ರಗಳನ್ನೂ ಅಳವಡಿಸಿಕೊಂಡಿದ್ದಾರೆ.

ಮಿಶ್ರ ಬೆಳೆಗೆ ಆದ್ಯತೆ

ರತ್ನಮ್ಮ ಅವರು ಮಿಶ್ರ ಬೆಳೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಮಾವಿನ ಬೆಳೆ ಹಾಗೂ ತೋಟಗಾರಿಕೆ ಬೆಳೆಗಳ ಜೊತೆಗೆ ಹೈನುಗಾರಿಕೆಗೆಯನ್ನೂ ಮಾಡುತ್ತಿದ್ದಾರೆ. 2 ಎಮ್ಮೆ ಮತ್ತು 5 ಕುರಿ ಸಾಕಣೆಯನ್ನೂ ಮಾಡುತ್ತಿದ್ದಾರೆ. ಮಳೆ ನೀರನ್ನು ಸಂಗ್ರಹಿಸುತ್ತಿದ್ದು, ತಮ್ಮ ಜಮೀನಿನಲ್ಲೇ ಕೃಷಿ ಹೊಂಡವನ್ನು ನಿರ್ಮಿಸಿದ್ದಾರೆ. ತಮ್ಮ ಜಮೀನಿನಲ್ಲಿ ಬಿದ್ದ ಮಳೆ ನೀರಿನ ಸಂಗ್ರಹಣೆಗಾಗಿ ಕೃಷಿ ಹೊಂಡವನ್ನು ನಿರ್ಮಿಸಿದ್ದು, ಅದರಲ್ಲಿ ಮೀನು ಸಾಕಣೆಯನ್ನೂ ಮಾಡುತ್ತಿದ್ದಾರೆ.


ರತ್ನಮ್ಮ ಅವರಿಗೆ ಹಲವು ಪ್ರಶಸ್ತಿ

ಎ.ವಿ ರತ್ನಮ್ಮ ಅವರು ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ, ಹಲವು ಸಂಸ್ಥೆಗಳು ಹಾಗೂ ಕೃಷಿ ವಿಶ್ವವಿದ್ಯಾಲಯಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಪ್ರತಿ ವರ್ಷ ನೀಡುವ ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಮಹಿಳೆ ಪ್ರಶಸ್ತಿಗೆ ರತ್ನಮ್ಮ ಅವರು 2018ರಲ್ಲಿ ಪಾತ್ರರಾಗಿದ್ದಾರೆ. 2020ರಲ್ಲಿ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ, 2020- 2021ನೇ ಸಾಲಿನಲ್ಲಿ ಕೃಷಿ ಇಲಾಖೆ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ಶ್ರೇಷ್ಠಕೃಷಿಕ ಪ್ರಶಸ್ತಿ, 2021ರಲ್ಲಿ ಕೋಲಾರ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು 2022-23ನೇ ಸಾಲಿನ ಕ್ಯಾನ್ (ಕೆನರಾ ಬ್ಯಾಂಕ್)ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಮಹಿಳಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಶಿಕ್ಷಕಿಯಾಗುವ ಕನಸು ಕಂಡಿದ್ದರು

ಎ.ವಿ ರತ್ನಮ್ಮ ಅವರು ಶಿಕ್ಷಣ ತರಬೇತಿ ಪಡೆದು ಶಾಲಾ ಶಿಕ್ಷಕಿಯಾಗಬೇಕು ಎಂದು ಕನಸು ಕಂಡಿದ್ದರು. ಆದರೆ, ಆ ಕನಸು ನನಸಾಗಲಿಲ್ಲ. ಕೃಷಿಯ ಮೇಲಿನ ಒಲವು ಅವರನ್ನು ಕೃಷಿ ಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು ಎನ್ನುತ್ತಾರೆ ರತ್ನಮ್ಮ ಅವರು.

Tags:    

Similar News