Tirupati Temple: ತಿರುಪತಿ ದೇವಾಲಯದಲ್ಲಿದ್ದ 18 ಹಿಂದೂಯೇತರ ನೌಕರರ ವಿರುದ್ಧ ಕ್ರಮ
Tirupati Temple: ಉದ್ಯೋಗಿಗಳಿಗೆ ದೇವಾಲಯದ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ. ದೇವಾಲಯಕ್ಕೆ ಸಂಬಂಧಿಸಿದಲ್ಲದ ಹುದ್ದೆಗಳಿಗೆ ತಕ್ಷಣ ವರ್ಗಾವಣೆಯಾಗುವಂತೆ ಸೂಚನೆ ನೀಡಲಾಗಿದೆ.;
ತಿರುಪತಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ 18 ಹಿಂದೂಯೇತರ ಸಿಬ್ಬಂದಿಗಳ ವಿರುದ್ಧ ತಿರುಮಲ ತಿರುಪತಿ ದೇವಸ್ಥಾನಂ (TTD) ಟ್ರಸ್ಟ್ ಕ್ರಮ ಕೈಗೊಂಡಿದೆ. ಅವರು ಕೆಲಸಕ್ಕೆ ಸೇರುವಾಗ ಹಿಂದೂ ಧರ್ಮ ಪಾಲಿಸುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಬೇರೆ ಧಾರ್ಮಿಕ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ಟ್ರಸ್ಟ್‌ಆರೋಪಿಸಿದೆ. ತಕ್ಷಣದಿಂದಲೇ ವರ್ಗಾವಣೆ ಪಡೆಯಬೇಕು ಅಥವಾ ನಿವೃತ್ತಿ ಪಡೆಯಬೇಕು ಎಂದು ಅವರಿಗೆ ಸೂಚಿಸಲಾಗಿದೆ.
ಉದ್ಯೋಗಿಗಳಿಗೆ ದೇವಾಲಯದ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ. ದೇವಾಲಯಕ್ಕೆ ಸಂಬಂಧಿಸಿದಲ್ಲದ ಹುದ್ದೆಗಳಿಗೆ ತಕ್ಷಣ ವರ್ಗಾವಣೆಯಾಗುವಂತೆ ಸೂಚನೆ ನೀಡಲಾಗಿದೆ. ಈ ನಿರ್ಧಾರವು ದೇವಾಲಯದ ಪಾವಿತ್ರ್ಯತೆ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಕಾಯ್ದುಕೊಳ್ಳುವ ಉದ್ದೇಶ ಹೊಂದಿದೆ ಎಂದು ಮಂಡಳಿ ತಿಳಿಸಿದೆ.
ಟಿಟಿಡಿಯ ಮಂಡಳಿಯು ಕಳೆದ ಸಭೆಯಲ್ಲಿ ಅನ್ಯ ಧರ್ಮೀಯ ಉದ್ಯೋಗಿಗಳನ್ನು ಬೇರೆ ಸರ್ಕಾರಿ ಸರಕಾರಿ ಇಲಾಖೆಗೆ ವರ್ಗಾವಣೆ ಮಾಡುವುದಕ್ಕೆ ತೀರ್ಮಾನ ಕೈಗೊಳ್ಳಲಾಗಿತ್ತು.
ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ಅವರು ಮಾತನಾಡಿ "ತಿರುಮಲವು ಹಿಂದೂ ಧರ್ಮದ ಪಾವಿತ್ರ್ಯ ಮತ್ತು ಭಕ್ತಿಯ ಸಂಕೇತವಾಗಿರಬೇಕು ಎಂಬುದು ನಮ್ಮ ಉದ್ದೇಶ " ಎಂದು ಹೇಳಿದ್ದಾರೆ.
ಹಿಂದೂ ಭಕ್ತರಿಗೆ ಅಗೌರವ
18 ಉದ್ಯೋಗಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ. ಅವರು ಹಿಂದೂ ಧಾರ್ಮಿಕ ಜಾತ್ರೆ, ಹಬ್ಬ, ಉತ್ಸವಗಳಲ್ಲಿ ಭಾಗವಹಿಸುವ ಜತೆಗೆ ಹಿಂದೂಯೇತ ಧಾರ್ಮಿಕ ಚಟುವಟಿಕೆಗಳಲ್ಲೂ ಪಾಲ್ಗೊಂಡಿದ್ದಾರೆ ಎಂಬ ಆರೋಪವಿದೆ. ಇದು ಕೋಟಿ ಕೋಟಿ ಹಿಂದೂ ಭಕ್ತರ ಭಾವನೆಗಳಿಗೆ ಹಾಗೂ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ತರುತ್ತದೆ" ಎಂದು ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ದೇವಾಲಯದ ಉದ್ಯೋಗಿಗಳು ಶ್ರೀ ವೆಂಕಟೇಶ್ವರ ಸ್ವಾಮಿಯ ಭಾವಚಿತ್ರ ಅಥವಾ ವಿಗ್ರಹದ ಮುಂದೆ ನಿಂತು ಹಿಂದೂ ಧರ್ಮವನ್ನು ಅನುಸರಿಸುವಂತೆ ಪ್ರಮಾಣ ವಚನ ನೀಡಬೇಕು ಎಂಬ ನಿಯಮವಿದೆ ಎಂದು ಮಂಡಳಿ ಹೇಳಿದೆ. ಈಗ ಆ 18 ಮಂದಿ ಉದ್ಯೋಗಿಗಳ ವರ್ತನೆಯಿಂದ ತಿರುಮಲ ತಿರುಪತಿ ದೇವಸ್ಥಾದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಅವರು ಹೇಳಿದ್ದಾರೆ.
18 ಉದ್ಯೋಗಿಗಳ ಹುದ್ದೆಗಳನ್ನು ಪರಿಶೀಲಿಸಲು ಇಬ್ಬರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರನ್ನು ತಿರುಮಲ ದೇವಾಲಯದ ಅಥವಾ ಯಾವುದೇ ಧಾರ್ಮಿಕ ಕಾರ್ಯಕ್ರಮಗಳ ಕಾರ್ಯಾಚರಣೆಯಿಂದ ಹೊರಗೆ ಇರಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮಂಡಳಿ ಹೇಳಿದೆ.