ಬೆಂಗಳೂರಿನಲ್ಲಿ ತೀರ್ಥಹಳ್ಳಿ ತಹಶೀಲ್ದಾರ್‌ ಸಾವು

ಹೈಕೋರ್ಟ್‌ ಪ್ರಕರಣವೊಂದರಲ್ಲಿ ಸಾಕ್ಷ್ಯ ನುಡಿಯಲು ತೀರ್ಥಹಳ್ಳಿ ತಹಶೀಲ್ದಾರ್‌ ಜಕ್ಕನಗೌಡರ್‌ ಅವರು ಬೆಂಗಳೂರಿಗೆ ಬಂದು ವಸತಿಗೃಹವೊಂದರಲ್ಲಿ ಉಳಿದುಕೊಂಡಿದ್ದರು

Update: 2024-10-16 18:06 GMT

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಹಶೀಲ್ದಾರ್‌ ಜಿ.ಬಿ.ಜಕ್ಕನಗೌಡರ್‌ (54) ಅವರು ಬುಧವಾರ ಬೆಂಗಳೂರಿನಲ್ಲಿ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೂಲತಃ ಗದಗ ಜಿಲ್ಲೆಯವರಾದ ಜಕ್ಕನಗೌಡರ್‌ ಅವರು ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ತೀರ್ಥಹಳ್ಳಿ ತಹಶೀಲ್ದಾರ್‌ ಆಗಿ ನೇಮಕಗೊಂಡಿದ್ದರು. ಹೈಕೋರ್ಟ್‌ ಪ್ರಕರಣವೊಂದರಲ್ಲಿ ಸಾಕ್ಷ್ಯ ನುಡಿಯಲು ಮಂಗಳವಾರ ಬೆಂಗಳೂರಿಗೆ ಬಂದಿದ್ದರು. ಮೆಜೆಸ್ಟಿಕ್‌ ಪ್ರದೇಶದ ಕಪಾಲಿ ಚಿತ್ರಮಂದಿರದ ಎದುರಿನ ವಸತಿ ಗೃಹವೊಂದರಲ್ಲಿ ತಂಗಿದ್ದರು. ಮಂಗಳವಾರದಿಂದಲೂ ಜಕ್ಕನಗೌಡರ್‌ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ ಎನ್ನಲಾಗಿದೆ.

ವಸತಿಗೃಹಗದಲ್ಲಿ ತೀವ್ರತರದ ಹೃದಯಾಘಾತ ಕಾಣಿಸಿಕೊಂಡು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಮರಣೋತ್ತರ ಪರೀಕ್ಷೆ ಬಳಿಕವೇ ಸಾವಿನ ನಿಖರ ಕಾರಣ ತಿಳಿಯಲಿದೆ.

ಗುರುವಾರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಆ ಬಳಿಕ ಅವರ ಕುಟುಂಬಸ್ಥರು ಪಾರ್ಥೀವ ಶರೀರವನ್ನು ಗದಗಿಗೆ ಹೊಯ್ಯಲಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್‌ ಹೆಗಡೆ ತಿಳಿಸಿದ್ದಾರೆ.

ತೀರ್ಥಹಳ್ಳಿಯಲ್ಲಿ ತಹಶೀಲ್ದಾರ್‌ ಅಮೃತ್‌ ಅತ್ರೇಶ್‌ ಬೆಂಗಳೂರಿಗೆ ವರ್ಗಾವಣೆಯಾದ ಬಳಿಕ ಜಕ್ಕನಗೌಡರ್‌ ಅವರು 2023 ಅ.22 ರಂದು ನೂತನ ತಹಶೀಲ್ದಾರ್‌ ಆಗಿ ಅಧಿಕಾರ ಸ್ವೀಕರಿಸಿದ್ದರು. ತೀರ್ಥಹಳ್ಳಿ ತಹಶೀಲ್ದಾರ್‌ ಕಚೇರಿಯಲ್ಲಿ ವಿಪರೀತವಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದರು.

Tags:    

Similar News