ಹೊಸದಿಲ್ಲಿ,ಮಾ.3- ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆಗೊಳಿಸಿದ ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರನ್ನು ಹೊಸ ಮುಖಗಳಿಂದ ಬದಲಿಸಿದೆ.
ಅಸ್ಸಾಂ: ರಾಜ್ಯದ 11 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಅವರಲ್ಲಿ ಆರು ಮಂದಿ ಹಾಲಿ ಸಂಸದರು ಹಾಗೂ ಉಳಿದ ಐವರು ಹೊಸ ಮುಖಗಳು. ರಾಜದೀಪ್ ರಾಯ್ ಅವರು ಗೆದ್ದ ಸಿಲ್ಚಾರ್ ಕ್ಷೇತ್ರದಿಂದ ಪರಿಮಲ್ ಸುಕ್ಲಬೈಧ್ಯ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಆಟನಾಮಸ್ ಜಿಲ್ಲೆ(ಎಸ್ ಟಿ)ಯಿಂದ ಸಂಸದ ಹೋರೆನ್ ಸಿಂಗ್ ಬೇ ಬದಲು ಅಮರ್ ಸಿಂಗ್ ಟಿಸ್ಸೊ ಸ್ಪರ್ಧಿಸಲಿದ್ದಾರೆ. ಬಿಜುಲಿ ಕಲಿತಾ ಮೇಧಿ ಅವರು ರಾಣಿ ಓಜಾ ಅವರ ಬದಲು ಗೌಹಾಟಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಪಲ್ಲಬ್ ಲೋಚನ್ ದಾಸ್ ಗೆದ್ದಿದ್ದ ತೇಜ್‌ಪುರ ಕ್ಷೇತ್ರದಿಂದ ರಂಜಿತ್ ದತ್ತಾ ಸ್ಪರ್ಧಿಸಲಿದ್ದಾರೆ. ದಿಬ್ರುಗಢ ಕ್ಷೇತ್ರದ ಹಾಲಿ ಸಂಸದ ರಾಮೇಶ್ವರ್ ತೇಲಿ ಅವರ ಬದಲು ಕೇಂದ್ರ ಸಚಿವ ಸರ್ಬಾನಂದ್ ಸೋನೊವಾಲ್ ಅವರು ಅಭ್ಯರ್ಥಿಯಾಗಿರುವರು.
ಛತ್ತೀಸ್‌ಗಢ: ಛತ್ತೀಸ್‌ಗಢದ 11 ಸ್ಥಾನಗಳಲ್ಲಿ ನಾಲ್ಕು ಹೊಸ ಮುಖಗಳಿವೆ. ಜಾಂಜ್‌ಗೀರ್ ಚಂಪಾ (ಎಸ್‌ಸಿ) ಕ್ಷೇತ್ರದಿಂದ ಹಾಲಿ ಸಂಸದ ಗುಹರಾಮ್ ಅಜ್ಗಲ್ಲಿ ಬದಲು ಕಮಲೇಶ್ ಜಂಗ್ಡೆ, ರಾಯ್‌ಪುರದಿಂದ ಸುನಿಲ್ ಕುಮಾರ್ ಸೋನಿ ಬದಲು ಬಿಜೆಪಿಯ ಹಿರಿಯ ನಾಯಕ ಬ್ರಿಜ್‌ಮೋಹನ್ ಅಗರವಾಲ್, ಮಹಾಸಮುಂಡ್ ಕ್ಷೇತ್ರದಿಂದ ಚುನ್ನಿ ಲಾಲ್ ಸಾಹು ಬದಲು ರೂಪ್ ಕುಮಾರಿ ಚೌಧರಿ ಹಾಗೂ ಕಂಕೇರ್ (ST) ಸ್ಥಾನದಿಂದ ಮೋಹನ್ ಮಾಂಡವಿ ಬದಲು ಭೋಜರಾಜ್ ನಾಗ್ ಸ್ಪರ್ಧಿಸಲಿದ್ದಾರೆ.
ದೆಹಲಿ: ದೆಹಲಿಯ ಐದು ಲೋಕಸಭಾ ಸ್ಥಾನಗಳಲ್ಲಿ ನಾಲ್ವರು ಹಾಲಿ ಸಂಸದರನ್ನು ಬದಲಿಸಲಾಗಿದೆ. ಎರಡು ಅವಧಿಯ ಸಂಸದ, ಮಾಜಿ ಕೇಂದ್ರ ಸಚಿವ ಹರ್ಷವರ್ಧನ್ ಬದಲು ಚಾಂದನಿ ಚೌಕ್ ಕ್ಷೇತ್ರದಿಂದ ಪ್ರವೀಣ್ ಖಂಡೇಲ್ವಾಲ್, ಪಶ್ಚಿಮ ದೆಹಲಿ ಸ್ಥಾನಕ್ಕೆ ಎರಡು ಅವಧಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಬದಲು ಕಮಲಜೀತ್ ಸೆಹ್ರಾವತ್, ನವದೆಹಲಿ ಕ್ಷೇತ್ರದಿಂದ ಸಚಿವೆ ಮೀನಾಕ್ಷಿ ಲೇಖಿ ಬದಲು ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಹಾಗೂ ದಕ್ಷಿಣ ದೆಹಲಿಯಿಂದ ರಮೇಶ್ ಬಿಧುರಿ ಬದಲು ರಾಮವೀರ್ ಸಿಂಗ್ ಬಿಧುರಿಯನ್ನು ಹೆಸರಿಸಿದೆ.
ಗುಜರಾತ್: 15 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಿದ್ದು, ಐದು ಹಾಲಿ ಸಂಸದರನ್ನು ಕೈಬಿಟ್ಟಿದೆ. ಬನಸ್ಕಾಂತ ಕ್ಷೇತ್ರದಿಂದ ಪ್ರಭಾತಭಾಯ್ ಸಾವಭಾಯಿ ಪಟೇಲ್ ಬದಲು ರೇಖಾಬೆನ್ ಹಿತೇಶ್‌ಭಾಯಿ ಚೌಧರಿ, ಅಹಮದಾಬಾದ್ ಪಶ್ಚಿಮ (ಎಸ್‌ಸಿ) ಸ್ಥಾನದಿಂದ ಮೂರು ಅವಧಿಯ ಸಂಸದ ಕಿರಿತ್ ಸೋಲಂಕಿ ಬದಲು ದಿನೇಶ್ಭಾಯ್ ಕಿದರ್ಭಾಯಿ ಮಕ್ವಾನಾ, ರಾಜ್‌ಕೋಟ್ ಸ್ಥಾನಕ್ಕೆ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ ಬದಲು ಕೇಂದ್ರ ಸಚಿವ ಪರಶೋತ್ತಮ್ ರೂಪಾಲಾ, ಪೋರಬಂದರ್ ಸ್ಥಾನಕ್ಕೆ ರಮೇಶ್‌ಭಾಯ್ ಲಾವ್‌ಜಿಭಾಯಿ ಧದುಕ್ ಬದಲು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಹಾಗೂ ಪಂಚಮಹಲ್ ಕ್ಷೇತ್ರದಿಂದ ರತನ್‌ಸಿನ್ಹ ಮಗನ್‌ಸಿನ್ಹ್ ರಾಥೋಡ್ ಬದಲು ರಾಜಪಾಲ್‌ಸಿನ್ಹ್ ಮಹೇಂದ್ರಸಿಂಗ್ ಜಾಧವ್ ಕಣಕ್ಕೆ ಇಳಿಯಲಿದ್ದಾರೆ.
ಜಾರ್ಖಂಡ್: ಹಜಾರಿಬಾಗ್ ಕ್ಷೇತ್ರದಿಂದ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಅವರ ಪುತ್ರ ಜಯಂತ್ ಸಿನ್ಹಾಬದಲು ಮನೀಶ್ ಜೈಸ್ವಾಲ್ ಹಾಗೂ ಲೋಹರ್ದಗಾ (ಎಸ್‌ಟಿ) ಸ್ಥಾನಕ್ಕೆ ಮೂರು ಬಾರಿ ಸಂಸದರಾಗಿದ್ದ ಸುದರ್ಶನ್ ಭಗತ್ ಬದಲು ಸಮೀರ್ ಓರಾನ್ ಅವರನ್ನುಕಣಕ್ಕಿಳಿಸಿದೆ.
ಮಧ್ಯಪ್ರದೇಶ: ಏಳು ಹಾಲಿ ಸಂಸದರನ್ನು ಬದಲಿಸಿದೆ. ಗ್ವಾಲಿಯರ್ ಸ್ಥಾನಕ್ಕೆ ಹಾಲಿ ಸಂಸದ ವಿವೇಕ್ ನಾರಾಯಣ್ ಶೆಜ್ವಾಲ್ಕರ್ ಬದಲು ಭರತ್ ಸಿಂಗ್ ಕುಶ್ವಾಹ, ಗುಣಾದಿಂದ ಹಾಲಿ ಸಂಸದ ಕೃಷ್ಣಪಾಲ್ ಸಿಂಗ್ ಯಾದವ್ ಬದಲು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಸಾಗರ್ ಕ್ಷೇತ್ರದಿಂದ ರಾಜ್‌ಬಹದ್ದೂರ್ ಸಿಂಗ್ ಬದಲು ಲತಾ ವಾಂಖೆಡೆ, ವಿದಿಶಾ ಸಂಸದ ರಮಾಕಾಂತ್ ಭಾರ್ಗವ ಬದಲು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಭೋಪಾಲ್ ಕ್ಷೇತ್ರದಿಂದ ಸಾಧ್ವಿ ಪ್ರಜ್ಞಾ ಸಿಂಗ್ ಬದಲು ಅಲೋಕ್ ಶರ್ಮಾ ಹಾಗೂ ರತ್ಲಾಮ್ (ಎಸ್‌ಟಿ) ಕ್ಷೇತ್ರದಿಂದ ಗುಮಾನ್ ಸಿಂಗ್ ದಾಮೋರ್ ಬದಲು ಅನಿತಾ ನಗರ್ ಸಿಂಗ್ ಚೌಹಾಣ್ ಸ್ಪರ್ಧಿಸಲಿದ್ದಾರೆ. ವೀರೇಂದ್ರ ಖಾಟಿಕ್ ಅವರು ಟಿಕಮ್‌ಗಢ (ಎಸ್‌ಸಿ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ರಾಜಸ್ಥಾನ: 15 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಚುರು, ಭರತ್‌ಪುರ, ಜಲೋರ್, ಉದಯಪುರ ಮತ್ತು ಬನ್ಸ್ವಾರಾ ಕ್ಷೇತ್ರದ ಸಂಸದರನ್ನು ಬದಲಿ ಸಿದೆ.
ತ್ರಿಪುರ-ಪಶ್ಚಿಮ ಬಂಗಾಳ: ತ್ರಿಪುರಾ ಪಶ್ಚಿಮ ಕ್ಷೇತ್ರದಿಂದ ಪ್ರತಿಮಾ ಭೂಮಿಕ್ ಬದಲು ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಹಾಗೂ ಪಶ್ಚಿಮ ಬಂಗಾಳದ ಅಲಿಪುರ್ದೂರ್(ಎಸ್ ಟಿ)ನಿಂದ ಜಾನ್ ಬಾರ್ಲಾ ಬದಲು ಮನೋಜ್ ತಿಗ್ಗಾ ಅವರನ್ನು ಕಣಕ್ಕಿಳಿಸಲಿದೆ.