ಚಂದ್ರಶೇಖರನ್ ಹಂತಕರಿಗೆ ಜೀವಾವಧಿ

ರಾಜಕೀಯ ಪ್ರೇರಿತ ಕೊಲೆಗಳಿಂದ ಪ್ರಜಾಪ್ರಭುತ್ವ ದುರ್ಬಲ: ಕೇರಳ ಹೈಕೋರ್ಟ್

Update: 2024-02-27 14:53 GMT
ಕೆ ಕೆ ಕೃಷ್ಣನ್ ಮತ್ತು ಜಿಯೋತಿ ಬಾಬು ಅವರಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಇವರನ್ನು ವಿಚಾರಣೆ ನ್ಯಾಯಾಲಯ ಖುಲಾಸೆಗೊಳಿಸಿತ್ತು.

ಕೊಚ್ಚಿ, ಫೆ. 27 - ಟಿ.ಪಿ. ಚಂದ್ರಶೇಖರನ್‌ ಅವರ ಹತ್ಯೆ ಪ್ರಕರಣದ 12 ಅಪರಾಧಿಗಳಿಗೆ ಕೇರಳ ಹೈಕೋರ್ಟ್ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಮೇ 4, 2012 ರಂದು ಕೋಯಿಕ್ಕೋಡ್ ಜಿಲ್ಲೆಯ ಒಂಚಿಯಂನಲ್ಲಿ ರೆವಲ್ಯೂಷನರಿ ಮಾರ್ಕ್ಸ್‌ವಾದಿ ಪಕ್ಷ (ಆರ್‌ಎಂಪಿ)ದ ನಾಯಕ ಚಂದ್ರಶೇಖರನ್ ಅವರ ಹತ್ಯೆ ಪ್ರಕರಣದ 11 ಆರೋಪಿಗಳಲ್ಲಿ 10 ಮಂದಿಗೆ ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿತ್ತು. ತೀರ್ಪು ಎತ್ತಿಹಿಡಿದ ನ್ಯಾಯಮೂರ್ತಿಗಳಾದ ಎ.ಕೆ. ಜಯಶಂಕರನ್ ನಂಬಿಯಾರ್ ಮತ್ತು ಕೌಸರ್ ಎಡಪ್ಪಗತ್ ಅವರ ವಿಭಾಗೀಯ ಪೀಠವು,ʻ ಸಂವಿಧಾನ ಖಾತರಿಪಡಿಸಿದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ಮುಕ್ತವಾಗಿ ಚಲಾಯಿಸದಂತೆ ತಡೆಯುವ ಅಪರಾಧಗಳನ್ನು ದೃಢವಾಗಿ ನಿರ್ವಹಿಸಬೇಕು. ಇಂಥವುಗಳನ್ನು ಕಾನೂನಿನ ನಿಯಮಗಳನ್ನು ಅನುಸರಿಸುವ ಸಮಾಜ ಸಹಿಸಿಕೊಳ್ಳುವುದಿಲ್ಲʼ ಎಂದು ಹೇಳಿತು. 

ʻಪ್ರಜಾಪ್ರಭುತ್ವದ ತತ್ವಗಳನ್ನು ಹಾಳುಮಾಡುವ ರಾಜಕೀಯ ಕೊಲೆಗಳನ್ನು ಗಂಭೀರವಾಗಿ ಪರಿಗಣಿಸುವ ಸಮಯ ಬಂದಿದೆʼ ಎಂದು ಅಭಿಪ್ರಾಯಪಟ್ಟಿದೆ. 

ಕೆ.ಕೆ. ಕೃಷ್ಣನ್ ಮತ್ತು ಜಿಯೋತಿ ಬಾಬು ಎಂಬ ಇಬ್ಬರಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ಅವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತ್ತು.

2014ರಲ್ಲಿ ವಿಚಾರಣಾ ನ್ಯಾಯಾಲಯ ಶಿಕ್ಷೆ ನೀಡಿದ ಕುಂಹನಂದನ್ ಮೃತಪಟ್ಟಿದ್ದಾರೆ. ಸಾಕ್ಷ್ಯ ನಾಶಕ್ಕಾಗಿ ಪ್ರದೀಪ್‌ಗೆ ನೀಡಿದ್ದ ಮೂರು ವರ್ಷ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಜೀವಾವಧಿ ಶಿಕ್ಷೆಗೆ ಒಳಗಾದ 12 ಅಪರಾಧಿಗಳ ಪೈಕಿ ಅನೂಪ್, ಮನೋಜ್ ಅಲಿಯಾಸ್ ಕಿರ್ಮಾನಿ ಮನೋಜ್, ಎನ್‌ಕೆ ಸುನೀಲ್ ಕುಮಾರ್ ಅಲಿಯಾಸ್ ಕೋಡಿ ಸುನಿ, ಟಿಕೆ ರಾಜೇಶ್, ಕೆಕೆ ಮಹಮ್ಮದ್ ಶಫಿ, ಎಸ್ ಸಿಜಿತ್, ಕೆ ಶಿನೋಜ್, ಕೆಸಿ ರಾಮಚಂದ್ರನ್ ಮತ್ತು ಮನೋಜನ್ ಸೇರಿದಂತೆ ಒಂಬತ್ತು ಮಂದಿಯ ಶಿಕ್ಷೆಯನ್ನು ಹೈಕೋರ್ಟ್ ಹೆಚ್ಚಿಸಿದೆ. ಆದರೆ, ಕೃಷ್ಣನ್ (76) ಮತ್ತು ಬಾಬು(62) ಅವರಿಗೆ ಷರತ್ತು ವಿಧಿಸಿಲ್ಲ. ʻರಫೀಕ್(ಅಪರಾಧಿ ಸಂಖ್ಯೆ 18) ಶಿಕ್ಷೆಯನ್ನು ಹೆಚ್ಚಿಸುವ ಅಗತ್ಯ ಕಾಣುತ್ತಿಲ್ಲʼ ಎಂದು ಹೇಳಿದೆ. 

ಸಂತ್ರಸ್ತನ ವಿಧವೆ ಕೆ.ಕೆ. ರೆಮಾ ಮತ್ತು ಅವರ ಪುತ್ರ ಅಭಿನಂದ್‌ಗೆ ನೀಡಬೇಕಾದ ಪರಿಹಾರ 7.5 ಲಕ್ಷ ಮತ್ತು 5 ಲಕ್ಷ ರೂ. ಸಮಂಜಸವಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಪಿ.ಮೋಹನನ್ ಸೇರಿದಂತೆ 24 ಆರೋಪಿಗಳನ್ನು ಕೋಯಿಕ್ಕೋಡ್ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ 2014ರಲ್ಲಿ ಖುಲಾಸೆ ಗೊಳಿಸಿತ್ತು. ಚಂದ್ರಶೇಖರನ್ (52) ಅವರನ್ನು ಬೈಕಿನಲ್ಲಿ ಮನೆಗೆ ವಾಪಸಾಗುತ್ತಿದ್ದಾಗ ಕಡಿದು ಹತ್ಯೆ ಮಾಡಲಾಗಿತ್ತು.

ಕೇರಳದ ಅಂದಿನ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸರ್ಕಾರವು ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.

Tags:    

Similar News