ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಖ್ಯಾತ ಉರ್ದು ಕವಿ ಗುಲ್ಜಾರ್ ಗೆ ಬೆಂಗಳೂರಿನೊಂದಿಗಿನ ನಂಟು..
ಪ್ರಸಿದ್ಧ ಉರ್ದು ಕವಿ ಮತ್ತು ಗೀತರಚನೆಕಾರ ಗುಲ್ಜಾರ್ ಮತ್ತು ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರು 58ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಖ್ಯಾತ ಉರ್ದು ಕವಿ ಗುಲ್ಜಾರ್ ಮತ್ತು ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರು 58ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಜ್ಞಾನಪೀಠ ಆಯ್ಕೆ ಸಮಿತಿ ಶನಿವಾರ ಪ್ರಕಟಿಸಿದೆ.
ಗುಲ್ಜಾರ್ ಅವರು ಹಿಂದಿ ಚಿತ್ರರಂಗದಲ್ಲಿ ಸಿನಿಮಾ ಸಾಹಿತಿ, ಗೀತೆ ರಚನೆಕಾರರಾಗಿ ಗುರುತಿಸಿಕೊಂಡಿದ್ದು, ಅತ್ಯುತ್ತಮ ಉರ್ದು ಕವಿಗಳಲ್ಲಿ ಒಬ್ಬರು. ಗಜಲ್ ಮತ್ತು ಕಾವ್ಯ ಕ್ಷೇತ್ರದಲ್ಲಿ ಖ್ಯಾತಿಯನ್ನು ಗಳಿಸಿರುವ ಗುಲ್ಜಾರ್ ಅವರ ನಿಜವಾದ ಹೆಸರು ಸಂಪೂರ್ಣ ಸಿಂಗ್ ಕಲ್ರಾ. ಅವಿಭಜಿತ ಭಾರತದ ಝೇಲಂ ಜಿಲ್ಲೆಯ ದೇನಾ ಗ್ರಾಮದಲ್ಲಿ 18 ಆಗಸ್ಟ್ 1934 ರಂದು ಜನಿಸಿದ ಗುಲ್ಜಾರ್ ಅವರಿಗೆ ಶಾಲಾ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ. 12 ನೇ ಪರೀಕ್ಷೆಯಲ್ಲಿಯೂ ಅನುತ್ತೀರ್ಣರಾಗಿದ್ದ ಗುಲ್ಜಾರ್ಗೆ ಸಾಹಿತ್ಯದಲ್ಲಿ ಅಪಾರ ಒಲವು ಇತ್ತು.
ಬೆಂಗಳೂರಿನೊಂದಿಗಿನ ಗುಲ್ಜಾರ್ ಅವರಿಗಿದ್ದ ಬಾಂಧವ್ಯ
ʼʼಬೆಂಗಳೂರು ನನ್ನ ಬರಹಕ್ಕೆ ಸ್ಪೂರ್ತಿ ನೀಡಿದೆ. ನನಗೂ ಬೆಂಗಳೂರಿಗೂ ಆರು ದಶಕಗಳ ಸಂಬಂಧವಿದೆ ಎಂದು ಗುಲ್ಜಾರ್ 2012ರಲ್ಲಿ ನಡೆದ ಬೆಂಗಳೂರು ಸಾಹಿತ್ಯ ಹಬ್ಬದಲ್ಲಿ ಮಾತನಾಡುತ್ತಾ ಹೇಳಿದ್ದನ್ನು ಹಿರಿಯ ಪತ್ರಕರ್ತರೊಬ್ಬರು ನೆನಪಿಸಿಕೊಂಡಿದ್ದಾರೆ. ಅಂದು ಗುಲ್ಜಾರ್ ಹೇಳಿದ ಮಾತುಗಳನ್ನು ನೆನಪಿಸಿಕೊಂಡಿದ್ದು ಹೀಗೆ: ʼʼ1950-60ರಲ್ಲಿ ನಾನು (ಗುಲ್ಜಾರ್) ಬೆಂಗಳೂರಿನ ವೆಸ್ಟ್ ಎಂಡ್ ಹೊಟೆಲ್ ನ ಕೋಣೆ ಸಂಖ್ಯೆ 50ರಲ್ಲಿ ಕುಳಿತು ಹಲವು ಗೀತೆಗಳನ್ನು ಬರೆದಿದ್ದೇನೆ. ಅವು ಇಂದಿಗೂ ಜನಪ್ರೀಯʼʼ ಎಂದು ಹೇಳಿರುವುದನ್ನು ಪತ್ರಕರ್ತರು ನೆನಪಿಸಿಕೊಂಡರು.
ರವೀಂದ್ರನಾಥ ಟ್ಯಾಗೋರ್ ಮತ್ತು ಶರತ್ ಚಂದ್ ಅವರ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ, ಪ್ರೀತಿ ಹೊಂದಿದ್ದ ಗುಲ್ಜಾರ್ ಅವರಿಗೆ 2002 ರಲ್ಲಿ ಉರ್ದುಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2013 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 2004 ರಲ್ಲಿ ಪದ್ಮಭೂಷಣ ನೀಡಿ ಗೌರವಿಸಲಾಗಿದೆ. ಗುಲ್ಜಾರ್ ಸಾಬ್ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪ್ರಶಸ್ತಿಗೆ ಭಾಜನರಾದ ಚಿತ್ರಕೂಟದ ತುಳಸಿ ಪೀಠದ ಸಂಸ್ಥಾಪಕ ಮತ್ತು ಮುಖ್ಯಸ್ಥರಾದ ರಾಮಭದ್ರಾಚಾರ್ಯರು ಹೆಸರಾಂತ ಹಿಂದೂ ಆಧ್ಯಾತ್ಮಿಕ ನಾಯಕ, ಶಿಕ್ಷಣತಜ್ಞ ಮತ್ತು 100 ಕ್ಕೂ ಹೆಚ್ಚು ಪುಸ್ತಕಗಳ ಬರಹಗಾರರಾಗಿದ್ದಾರೆ. ಜನಿಸಿದ 2 ತಿಂಗಳಲ್ಲೇ ದೃಷ್ಟಿ ಕಳೆದುಕೊಂಡ ಜಗದ್ಗುರು ರಾಮಭದ್ರಾಚಾರ್ಯರು ಅತ್ಯುತ್ತಮ ಶಿಕ್ಷಕ ಮತ್ತು ಸಂಸ್ಕೃತ ಭಾಷಾ ಪಂಡಿತರಾಗಿದ್ದಾರೆ. ಜಗದ್ಗುರು ರಾಮಭದ್ರಾಚಾರ್ಯರಿಗೆ 22 ಭಾಷೆಗಳ ಜ್ಞಾನವಿದೆ. ಜಗದ್ಗುರು ರಾಮಭದ್ರಾಚಾರ್ಯರಿಗೆ ಭಾರತ ಸರ್ಕಾರ 2015 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
“ಸಂಸ್ಕೃತ ಸಾಹಿತಿ ಜಗದ್ಗುರು ರಾಮಭದ್ರಾಚಾರ್ಯ ಮತ್ತು ಪ್ರಸಿದ್ಧ ಉರ್ದು ಸಾಹಿತಿ ಗುಲ್ಜಾರ್ ಎಂಬ ಎರಡು ಭಾಷೆಗಳ ಖ್ಯಾತ ಬರಹಗಾರರಿಗೆ (2023 ಕ್ಕೆ) ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಜ್ಞಾನಪೀಠದ ಆಯ್ಕೆ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ. ಗೋವಾದ ಬರಹಗಾರ ದಾಮೋದರ್ ಮೌಜೊ ಅವರು 2022 ರ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿದ್ದಾರೆ.