ಗಾಜಾದಲ್ಲಿ ಇಸ್ರೇಲ್ ವೈಮಾನಿಕ ದಾಳಿಗೆ 5 ಅಲ್ ಜಜೀರಾ ಪತ್ರಕರ್ತರ ಸಾವು

ದಾಳಿಯಲ್ಲಿ ಮೃತಪಟ್ಟ ಇತರ ಪತ್ರಕರ್ತರನ್ನು ವರದಿಗಾರ ಮೊಹಮ್ಮದ್ ಕ್ರೆಕೇ, ಮತ್ತು ಕ್ಯಾಮೆರಾಮೆನ್​ಗಳಾದ ಮೊಮೆನ್ ಅಲಿವಾ, ಮೊಹಮ್ಮದ್ ನೌಫಲ್ ಮತ್ತು ಇಬ್ರಾಹಿಂ ಜಹೇರ್ ಎಂದು ಗುರುತಿಸಲಾಗಿದೆ.;

Update: 2025-08-11 06:17 GMT

ಗಾಜಾದ ಅಲ್-ಶಿಫಾ ಆಸ್ಪತ್ರೆಯ ಬಳಿ ಇಸ್ರೇಲ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಐವರು ಅಲ್ ಜಜೀರಾ ಪತ್ರಕರ್ತರು ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ. ಭಾನುವಾರ (ಆಗಸ್ಟ್ 10) ಮಾಧ್ಯಮ ಪ್ರತಿನಿಧಿಗಳಿಗಾಗಿಯೇ ಹಾಕಲಾಗಿದ್ದ ಟೆಂಟ್ ಮೇಲೆ ಈ ದಾಳಿ ನಡೆದಿದ್ದು, ಮೃತ ಪತ್ರಕರ್ತರಲ್ಲೊಬ್ಬ 'ಹಮಾಸ್ ಉಗ್ರ' ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ.

ಈ ದಾಳಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪತ್ರಕರ್ತರ ರಕ್ಷಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದಾಳಿಯ ನಂತರ ಹೇಳಿಕೆ ಬಿಡುಗಡೆ ಮಾಡಿದ ಇಸ್ರೇಲಿ ಮಿಲಿಟರಿ, ತಾವು ಪತ್ರಕರ್ತ ಅನಸ್ ಅಲ್-ಶರೀಫ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾಗಿ ಒಪ್ಪಿಕೊಂಡಿದೆ. "ಅನಸ್ ಅಲ್-ಶರೀಫ್ ಒಬ್ಬ ಪತ್ರಕರ್ತನಲ್ಲ, ಆತ ಹಮಾಸ್ನ ಭಯೋತ್ಪಾದಕ ಕೋಶದ ಮುಖ್ಯಸ್ಥನಾಗಿದ್ದ" ಎಂದು ಇಸ್ರೇಲ್ ಆರೋಪಿಸಿದೆ.

ದಾಳಿಯಲ್ಲಿ ಮೃತಪಟ್ಟ ಇತರ ಪತ್ರಕರ್ತರನ್ನು ವರದಿಗಾರ ಮೊಹಮ್ಮದ್ ಕ್ರೆಕೇ, ಮತ್ತು ಕ್ಯಾಮೆರಾಮೆನ್​ಗಳಾದ ಮೊಮೆನ್ ಅಲಿವಾ, ಮೊಹಮ್ಮದ್ ನೌಫಲ್ ಮತ್ತು ಇಬ್ರಾಹಿಂ ಜಹೇರ್ ಎಂದು ಗುರುತಿಸಲಾಗಿದೆ.

'ನನ್ನನ್ನು ಕೊಲ್ಲುವಲ್ಲಿ ಇಸ್ರೇಲ್ ಯಶಸ್ವಿ' - ಕೊನೆಯ ಮಾತು

ಮೃತಪಟ್ಟ 28 ವರ್ಷದ ಪತ್ರಕರ್ತ ಅನಸ್ ಅಲ್-ಶರೀಫ್ ಅವರ ಎಕ್ಸ್ ಖಾತೆಯಲ್ಲಿ, ಅವರ ಮರಣದ ನಂತರ ಸ್ನೇಹಿತರೊಬ್ಬರು ಪ್ರಕಟಿಸಿದ ಸಂದೇಶವೊಂದು ವೈರಲ್ ಆಗಿದೆ. "ನನ್ನ ಈ ಮಾತುಗಳು ನಿಮ್ಮನ್ನು ತಲುಪಿದ್ದರೆ, ನನ್ನನ್ನು ಕೊಂದು, ನನ್ನ ಧ್ವನಿಯನ್ನು ಅಡಗಿಸುವಲ್ಲಿ ಇಸ್ರೇಲ್ ಯಶಸ್ವಿಯಾಗಿದೆ ಎಂದು ತಿಳಿಯಿರಿ" ಎಂದು ಆ ಸಂದೇಶದಲ್ಲಿ ಬರೆಯಲಾಗಿತ್ತು.

ಕತಾರ್ ಮೂಲದ ಅಲ್ ಜಜೀರಾ ವಾಹಿನಿಯು, "ಇದು ಪತ್ರಕರ್ತರನ್ನು ಗುರಿಯಾಗಿಸಿಕೊಂಡು ನಡೆಸಿದ ಉದ್ದೇಶಪೂರ್ವಕ ದಾಳಿ" ಎಂದು ಖಂಡಿಸಿದೆ. ಕಳೆದ 22 ತಿಂಗಳುಗಳಿಂದ ಗಾಜಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಸುಮಾರು 200 ಮಾಧ್ಯಮ ಸಿಬ್ಬಂದಿ ಸೇರಿದ್ದಾರೆ ಎಂದು ಮಾಧ್ಯಮ ಕಾವಲು ಸಂಸ್ಥೆಗಳು ವರದಿ ಮಾಡಿವೆ.

ಅಂತಾರಾಷ್ಟ್ರೀಯ ವೇದಿಕೆಯಿಂದ ಖಂಡನೆ

ಈ ದಾಳಿಯನ್ನು 'ಪತ್ರಕರ್ತರನ್ನು ರಕ್ಷಿಸುವ ಸಮಿತಿ' (Committee to Protect Journalists - CPJ) ತೀವ್ರವಾಗಿ ಖಂಡಿಸಿದೆ. "ಯಾವುದೇ ಬಲವಾದ ಸಾಕ್ಷ್ಯಾಧಾರಗಳನ್ನು ನೀಡದೆ ಪತ್ರಕರ್ತರನ್ನು ಉಗ್ರರು ಎಂದು ಹಣೆಪಟ್ಟಿ ಕಟ್ಟುವ ಇಸ್ರೇಲ್​ನ ಪ್ರಯತ್ನ, ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಅದಕ್ಕಿರುವ ಗೌರವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಪತ್ರಕರ್ತರು ನಾಗರಿಕರು, ಅವರನ್ನು ಎಂದಿಗೂ ಗುರಿಯಾಗಿಸಬಾರದು. ಈ ಕೃತ್ಯಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು" ಎಂದು ಸಿಪಿಜೆಯ ಪ್ರಾದೇಶಿಕ ನಿರ್ದೇಶಕಿ ಸಾರಾ ಖುದಾಹ್ ಆಗ್ರಹಿಸಿದ್ದಾರೆ.

ವಾಷಿಂಗ್ಟನ್ ಮೂಲದ 'ನ್ಯಾಷನಲ್ ಪ್ರೆಸ್ ಕ್ಲಬ್' ಕೂಡ ಈ ಘಟನೆಯ ಬಗ್ಗೆ ತೀವ್ರ ದುಃಖ ಮತ್ತು ಕಳವಳ ವ್ಯಕ್ತಪಡಿಸಿದ್ದು, ಪತ್ರಕರ್ತರ ಸಾವಿನ ಬಗ್ಗೆ ಪಾರದರ್ಶಕ ಮತ್ತು ಸಂಪೂರ್ಣ ತನಿಖೆಗೆ ಒತ್ತಾಯಿಸಿದೆ.

Tags:    

Similar News