ಸಲ್ಮಾನ್​ ಖಾನ್ ಮನೆ ಹೊರಗೆ ಗುಂಡಿನ ದಾಳಿ: ಹೊಣೆ ಹೊತ್ತ ಗ್ಯಾಂಗ್​ಸ್ಟರ್​ ಸಹೋದರ

ಇಂದು ಬೆಳಗ್ಗೆ ಇಬ್ಬರು ಆಗಂತುಕರು ಸಲ್ಮಾನ್‌ ಖಾನ್‌ ಅವರ ನಿವಾಸದೆದುರು 6 ಸುತ್ತು ಗುಂಡಿನ ಮಳೆಗೆರೆದಿದ್ದರು.;

Update: 2024-04-14 13:29 GMT
ನಟ ಸಲ್ಮಾನ್‌ ಖಾನ್‌

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಬಳಿ ನಡೆದ ದುಂಡಿನ ದಾಳಿಯ ಹೊಣೆಯನ್ನು ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಹೊತ್ತುಕೊಂಡಿದ್ದಾನೆ. ಅನ್ಮೋಲ್ ಈಗ ಅಮೆರಿಕದಲ್ಲಿದ್ದು, ಸಲ್ಮಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆ ಹೊತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾನೆ.

ಇಂದು ಬೆಳಗ್ಗೆ ಇಬ್ಬರು ಆಗಂತುಕರು ಸಲ್ಮಾನ್‌ ಖಾನ್‌ ಅವರ ನಿವಾಸದೆದುರು 6 ಬಾರಿ ಗುಂಡಿನ ಮಳೆಗೆರೆದಿದ್ದರು. ಬಳಿಕ ಅವರು ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಅನ್ಮೋಲ್‌ನ ಫೇಸ್‌ಬುಕ್‌ ಪೇಜ್‌ನಲ್ಲಿ ‘ಈ ಘಟನೆ ಟ್ರೈಲರ್‌ ಮಾತ್ರ. ಇದಕ್ಕಿಂತಲೂ ಭೀಕರ ಪರಿಣಾಮವನ್ನು ಮುಂದೆ ಎದುರಿಸಬೇಕಾಗುತ್ತದೆʼ ಎಂದು ಸಲ್ಮಾನ್‌ ಖಾನ್‌ಗೆ ಎಚ್ಚರಿಕೆ ನೀಡಲಾಗಿದೆ. ಈ ಪೋಸ್ಟ್‌ ಅನ್ನು ಭಾನುವಾರ ಬೆಳಿಗ್ಗೆ ಸುಮಾರು 11.30ಕ್ಕೆ ಪೋಸ್ಟ್‌ ಮಾಡಲಾಗಿದೆ. ಅಂದರೆ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಗುಂಡಿನ ದಾಳಿ ನಡೆದ ಸುಮಾರು 5 ಗಂಟೆಗಳ ನಂತರ ಈ ಪೋಸ್ಟ್‌ ಶೇರ್‌ ಮಾಡಲಾಗಿದೆ.

ಯಾರು ಈ ಅನ್ಮೋಲ್‌?

ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ನ ಸಹೋದರ ಈ ಅನ್ಮೋಲ್‌ ಬಿಷ್ಣೋಯ್‌. ಸದ್ಯ ಈತ ಕ್ಯಾಲಿಫೋರ್ನಿಯಾದಲ್ಲಿದ್ದಾನೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲೂ ಆತನ ಕೈವಾಡವಿತ್ತು ಎನ್ನಲಾಗಿದೆ. ಸಿಧು ಮೂಸೆವಾಲಾ ಹತ್ಯೆಯ ಬಳಿಕ ಅನ್ಮೋಲ್‌ ನಕಲಿ ಪಾಸ್‌ಪೋರ್ಟ್‌ ಬಳಸಿ ಭಾರತದಿಂದ ವಿದೇಶಕ್ಕೆ ಪರಾರಿಯಾಗಿದ್ದ. ಕಳೆದ ವರ್ಷ ಆತ ಅಜರ್‌ಬೈಜಾನ್‌ನಲ್ಲಿ ಪತ್ತೆಯಾಗಿದ್ದರೂ ಅಲ್ಲಿಂದ ತಪ್ಪಿಸಿಕೊಂಡಿದ್ದ. ಬಳಿಕ ಅಮೆರಿಕದಲ್ಲಿ ಕಂಡುಬಂದಿದ್ದ. ಮದುವೆ ಸಮಾರಂಭಕ್ಕೆ ಆತ ತೆರಳಿದ್ದ ವಿಡಿಯೊ ವೈರಲ್‌ ಆಗಿತ್ತು.

 

ಯಾಕೆ ಈ ದ್ವೇಷ ?

ಸಲ್ಮಾನ್‌ ಖಾನ್‌ ಅವರು 1998ರಲ್ಲಿ ಹಮ್‌ ಸಾಥ್‌ ಸಾಥ್‌ ಹೈ ಚಿತ್ರದ ಚಿತ್ರೀಕರಣಕ್ಕೆಂದು ರಾಜಸ್ಥಾನದ ಜೋಧ್‌ಪುರಕ್ಕೆ ಹೋಗಿದ್ದರು. ಇದೇ ವೇಳೆ ಸಫಾರಿಗೆ ಹೋದ ಅವರು ಒಂದು ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಈ ಕೃಷ್ಣಮೃಗವನ್ನು ಬಿಷ್ಣೋಯಿ ಸಮುದಾಯದವರು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಭಾವಿಸುತ್ತಾರೆ. ಅಂಥ ಕೃಷ್ಣಮೃಗವನ್ನು ಕೊಂದ ಸಲ್ಮಾನ್​ ಖಾನ್​ರನ್ನು ಹತ್ಯೆ ಮಾಡಿಯೇ ತೀರುತ್ತೇನೆ ಎಂಬುದು ಲಾರೆನ್ಸ್​ ಬಿಷ್ಣೋಯಿ ಶಪಥ ಮಾಡಿದ್ದ. ಈಗಾಗಲೇ ಆತ ಹಲವು ಸಲ ಸಲ್ಮಾನ್ ಖಾನ್​ಗೆ ಜೀವ ಬೆದರಿಕೆ ಹಾಕಿದ್ದಾನೆ. ಇತ್ತೀಚೆಗೆ ಜೈಲಲ್ಲೇ ಕುಳಿತು ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲೂ ಸಲ್ಮಾನ್ ಖಾನ್ ಹತ್ಯೆಯೇ ಗುರಿ ಎಂದು ಹೇಳಿದ್ದ.

Tags:    

Similar News