ದೆಹಲಿ ಚಲೋ: ಹೃದಯಾಘಾತದಿಂದ ರೈತ ಸಾವು, ಬಿಜೆಪಿ ನಾಯಕರ ಮನೆ ಮುಂದೆ ರೈತರ ಪ್ರತಿಭಟನೆ
ಐದನೇ ದಿನಕ್ಕೆ ಕಾಲಿರಿಸಿದ ದೆಹಲಿ ಚಲೋ | ಇಂದು ಕೇಂದ್ರ ಸಚಿವರಿಂದ ರೈತರೊಂದಿಗೆ ಮಾತುಕತೆ;
ರೈತರು ಬೆಳೆದ ಬೆಳಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿ ಜಾರಿ ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ದೇಶದ ವಿವಿಧ ರಾಜ್ಯಗಳ ರೈತರು ನಡೆಸುತ್ತಿರುವ ದೆಹಲಿ ಚಲೋ ಐದನೇ ದಿನಕ್ಕೆ ಕಾಲಿಟ್ಟಿದೆ.
ಪಂಜಾಬ್‌ನಲ್ಲಿ ಶನಿವಾರ ಭಾರತೀಯ ಕಿಸಾನ್ ಯೂನಿಯನ್ (Bharatiya Kisan Union)ನ ವತಿಯಿಂದ ಬಿಜೆಪಿಯ ಮೂವರು ಹಿರಿಯ ನಾಯಕರ ಮನೆ ಮುಂದೆ ಪ್ರತಿಭಟನೆ ನಡೆಯಿತು.
ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಬಿಜೆಪಿಯ ಪಂಜಾಬ್ ಘಟಕದ ಮುಖ್ಯಸ್ಥ ಸುನೀಲ್ ಜಾಖರ್ ಮತ್ತು ಹಿರಿಯ ನಾಯಕ ಕಿವಾಲ್ ಸಿಂಗ್ ಧಿಲ್ಲೋನ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್‌ನ ವತಿಯಿಂದ ರೈತರು ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ಹೆದ್ದಾರಿ ಹಾಗೂ ಟೋಲ್ ಪ್ಲಾಜಾಗಳಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈ ಮೂಲಕ ದೆಹಲಿ ಚಲೋಗೆ ಬೆಂಬಲ ನೀಡಲಾಗುತ್ತಿದೆ.
ಐದನೇ ದಿನಕ್ಕೆ ದೆಹಲಿ ಚಲೋ
ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ವತಿಯಿಂದ ಕರೆ ನೀಡಲಾಗಿರುವ ದೆಹಲಿ ಚಲೋ ಇಂದಿಗೆ ಐದನೇ ದಿನಕ್ಕೆ ತಲುಪಿದೆ. ಪಂಜಾಬ್ ಮತ್ತು ಹರಿಯಾಣದ ಗಡಿಗಳಲ್ಲಿ ಜಮಾಯಿಸಿರುವ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ಪಂಜಾಬ್ ಹಾಗೂ ಹರಿಯಾಣದಿಂದ ರೈತರು ದೆಹಲಿಗೆ ತಲುಪಲು ಮುಂದಾಗುತ್ತಿದ್ದರೂ ಅವರನ್ನು ಗಡಿಗಳಲ್ಲೇ ತಡೆಯಲಾಗುತ್ತಿದೆ. ಹರಿಯಾಣದ ಗುರ್ನಾಮ್ ಸಿಂಗ್ ಚಾರುಣಿ ಹಾಗೂ ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ಶನಿವಾರ ಸಾವಿರಾರು ರೈತರು ಟ್ರಾಕ್ಟರ್ ರ‍್ಯಾಲಿ ನಡೆಯಲಿದೆ.
ರೈತರೊಂದಿಗೆ ಕೇಂದ್ರ ಸರ್ಕಾರದ ಮಾತುಕತೆ
ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ರೈತರೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ.
ಇದೀಗ ರೈತರೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆಗಾಗಿ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರೈ ಮತ್ತು ರೈತ ಮುಖಂಡರು ಭಾನುವಾರ ಭೇಟಿಯಾಗಲಿದ್ದಾರೆ.
ರೈತರೊಂದಿಗೆ ಫೆಬ್ರವರಿ 8, 12 ಮತ್ತು 15ರಂದು ಕೇಂದ್ರ ಸರ್ಕಾರದ ಪ್ರಮುಖ ಸಚಿವರು ಸಭೆ ನಡೆಸಿದ್ದರು. ಆದರೆ, ಸಭೆಯಲ್ಲಿ ಯಾವುದೇ ಸೂಕ್ತ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಹರಿಯಾಣದ ಶಂಭು ಗಡಿಯಲ್ಲಿ ರೈತರು ಕಲ್ಲು ತೂರಾಟ ಮಾಡಲು ಮುಂದಾಗಿದ್ದು, ಭದ್ರತಾ ಸಿಬ್ಬಂದಿಯನ್ನು ಪ್ರಚೋದಿಸಲು ಪ್ರಯತ್ನಿಸಿದರು ಎಂದು ಆರೋಪಿಸಿ ಹರಿಯಾಣದ ಪೊಲೀಸರು ಶುಕ್ರವಾರ ಸರಣಿ ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿದ್ದರು.
ಈ ಸಂಬಂಧ ಏಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಪೊಲೀಸರು ರೈತರು ಚಳವಳಿಯ ಹೆಸರಿನಲ್ಲಿ ಆಕ್ರಮಣಕಾರಿಯಾಗಿ ವರ್ತಿಸುವುದನ್ನು ಸಮ್ಮತಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರೈತರೊಂದಿಗೆ ನಡೆದ ಘರ್ಷಣೆಯಲ್ಲಿ 25 ಭದ್ರತಾ ಸಿಬ್ಬಂದಿ, ಹರಿಯಾಣದ 18 ಪೊಲೀಸರು ಹಾಗೂ ಏಳು ಅರೆಸೇನಾ ಪಡೆಯ ಯೋಧರು ಗಾಯಗೊಂಡಿದ್ದಾರೆ ಎಂದಿದ್ದಾರೆ.
ದೆಹಲಿ ಚಲೋ ಮುಂದಾಳತ್ವವನ್ನು ವಹಿಸಿಕೊಂಡಿರುವ ರೈತ ಮುಖಂಡರು ಹರಿಯಾಣದ ಭದ್ರತಾ ಸಿಬ್ಬಂದಿಯ ಮೇಲೆ ಬಲ ಪ್ರಯೋಗಿಸುತ್ತಿದ್ದಾರೆ. ಇದರಿಂದ ಹಲವು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹೃದಯಾಘಾತ ರೈತ ಸಾವು
ಇನ್ನು ಪ್ರತಿಭಟನಾ ನಿರತ ರೈತರೊಬ್ಬರು ಮೃತಪಟ್ಟಿರುವ ದಾರುಣ ಘಟನೆಯೂ ನಡೆದಿದೆ. ಶಂಭು ಗಡಿಯಲ್ಲಿ ಪ್ರತಿಭಟನಾ ನಿರತರಾಗಿದ್ದ 63 ವರ್ಷದ ರೈತ ಶುಕ್ರವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಜಿಯಾನ್ ಸಿಂಗ್ ಅವರಿಗೆ ಶುಕ್ರವಾರ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಅವರನ್ನು ಪಂಜಾಬ್‌ನ ರಾಜಪುರದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಪಟಿಯಾಲಾದ ರಾಜೀಂದ್ರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಅವರು ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಹೃದಯಾಘಾತದಿಂದ ಸಾವನ್ನಪ್ಪಿದ ಸಿಂಗ್ ಅವರಿಗೆ ಪ್ರತಿಭಟನಾ ನಿರತ ರೈತರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಭದ್ರತೆಗೆ ನಿಯೋಜಿಸಿದ್ದ ಇನ್ಸ್‌ಪೆಕ್ಟರ್ ಸಾವು
ಇನ್ನು ಇದೇ ಸಂದರ್ಭದಲ್ಲಿ ಶಂಭು ಗಡಿಯಲ್ಲಿ ಭದ್ರತೆಗೆ ನಿಯೋಜಿತರಾಗಿದ್ದ 52 ವರ್ಷದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಹ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹೀರಾ ಲಾಲ್ ಅವರನ್ನು ಶಂಭು ಗಡಿಯಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿತ್ತು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಕರ್ತವ್ಯದಲ್ಲಿದ್ದ ಅವರ ಆರೋಗ್ಯದಲ್ಲಿ ದಿಢೀರ್ ವ್ಯತ್ಯಾಸವಾಗಿತ್ತು ಎಂದು ಹೇಳಿದ್ದಾರೆ.
ಕೇಂದ್ರದಿಂದ ಮಾಹಿತಿ ತಡೆ: ಆರೋಪ
ಕೇಂದ್ರ ಸರ್ಕಾರವು ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ರೈತರು ಮತ್ತು ಯೂಟ್ಯೂಬರ್‌ಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷ್ಕ್ರೀಯಗೊಳಿಸಲಾಗುತ್ತಿದೆ.
ಈ ಮೂಲಕ ರೈತರ ಹೋರಾಟವನ್ನು ಮೊಟಕುಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಆರೋಪಿಸಿದ್ದಾರೆ.
ರೈತರ ಪ್ರಮುಖ ಬೇಡಿಕೆಗಳು ಏನು
ಎಂಎಸ್‌ಪಿಗೆ ಕಾನೂನು ಖಾತರಿಯುನ್ನು ನೀಡಬೇಕು, ಎಂ.ಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ವಿದ್ಯುತ್ ದರ ಹೆಚ್ಚಳ ಮಾಡುವುದನ್ನು ತಡೆಯಬೇಕು, ರೈತರ ಮೇಲೆ ಇರುವ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು 2021ರ ಲಖೀಂಪುರ ಸಂತ್ರಸ್ತರಿಗೆ ನ್ಯಾಯ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಿಸಾನ್ ಯೂನಿಯನ್ ಮೋರ್ಚಾ ಸೇರಿದಂತೆ ವಿವಿಧ ರೈತ ಸಂಘಟನೆಗಳು ದೆಹಲಿ ಚಲೋಗೆ ಕರೆ ನೀಡಿವೆ.
ಕೇಜ್ರಿವಾಲ್‌ಗೆ ಇಡಿ ಸಮನ್ಸ್: ವೈಯಕ್ತಿಕ ಹಾಜರಾತಿ ನ್ಯಾಯಾಲಯ ವಿನಾಯಿತಿ
ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗೆ ನೀಡಲಾದ ಸಮನ್ಸ್‌ಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಇಡಿ ಸಲ್ಲಿಸಿದ ದೂರಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ದಿಲ್ಲಿ ನ್ಯಾಯಾಲಯ ಶನಿವಾರ ಖುದ್ದು ಹಾಜರಾಗುವುದರಿಂದ ವಿನಾಯಿತಿ ನೀಡಿದೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಲು ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರು ಕೇಜ್ರಿವಾಲ್‌ಗೆ ವಿನಾಯಿತಿ ನೀಡಿದ್ದಾರೆ.
ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿರುವುದರಿಂದ ನ್ಯಾಯಾಲಯದ ಮುಂದೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಕೇಜ್ರಿವಾಲ್ ನ್ಯಾಯಾಲಯಕ್ಕೆ ತಿಳಿಸಿದ್ದರು.
ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಮೇಶ್ ಗುಪ್ತಾ ಅವರು, ಮುಂದಿನ ವಿಚಾರಣೆಯ ದಿನಾಂಕದಂದು ದೆಹಲಿ ಮುಖ್ಯಮಂತ್ರಿ ಖುದ್ದು ಹಾಜರಾಗಲಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಉದ್ದೇಶಪೂರ್ವಕವಾಗಿ ಸಮನ್ಸ್‌ಗಳನ್ನು ಪಾಲಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ (ಇಡಿ) ತನ್ನ ದೂರಿನಲ್ಲಿ ಆರೋಪಿಸಿತ್ತು.
ಇನ್ನು ಎಎಪಿ ಸಂಚಾಲಕರು ಈ ಹಿಂದೆ ಇಡಿಗೆ ಪತ್ರ ಬರೆದಿದ್ದು, ಅವರಿಗೆ ನೀಡಲಾದ ಸಮನ್ಸ್‌ಗಳನ್ನು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಆರೋಪಿಸಿತ್ತು.
ಚುನಾವಣಾ ಪ್ರಚಾರಕ್ಕೆ ಬರದಂತೆ ತಡೆಯುವ ಉದ್ದೇಶದಿಂದ ಸಮನ್ಸ್ ನೀಡಲಾಗಿದೆ ಎಂದು ಅವರು ಆರೋಪಿಸಿದ್ದರು.