ಪೊಲೀಸರೊಂದಿಗಿನ ಘರ್ಷಣೆಯಲ್ಲಿ ರೈತ ಸಾವು: ಆಂದೋಲನ ಮತ್ತೆ ಸ್ಥಗಿತ
ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖಾನೌರಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಾ ನಿರತ ರೈತರ ನಡುವಿನ ಘರ್ಷಣೆಯ ನಂತರ 21 ವರ್ಷದ ರೈತ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.;
ಪಂಜಾಬ್-ಹರಿಯಾಣ ಗಡಿಯಲ್ಲಿರುವ ಎರಡು ಪ್ರತಿಭಟನಾ ಸ್ಥಳಗಳಲ್ಲಿ ಒಂದಾದ ಖಾನೌರಿಯಲ್ಲಿ ನಡೆದ ಘರ್ಷಣೆಯಲ್ಲಿ ಪ್ರತಿಭಟನಾಕಾರರೊಬ್ಬರು ಸಾವನ್ನಪ್ಪಿದ ಮತ್ತು ಸುಮಾರು 12 ಪೊಲೀಸ್ ಸಿಬ್ಬಂದಿ ಗಾಯಗೊಂಡ ನಂತರ ರೈತ ಮುಖಂಡರು ʼದೆಹಲಿ ಚಲೋʼ ಮೆರವಣಿಗೆಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಿದ್ದಾರೆ. ಮುಂದಿನ ಕ್ರಮವನ್ನು ಶುಕ್ರವಾರ (ಫೆಬ್ರವರಿ 23) ಸಂಜೆ ನಿರ್ಧರಿಸುತ್ತೇವೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಶಂಭುದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಕೃಷಿ ಸಾಲ ಮನ್ನಾ ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರೈತರು ನಡೆಸುತ್ತಿರುವ ಆಂದೋಲನದ ಭಾಗವಾಗಿ ಸಾವಿರಾರು ರೈತರು ಎರಡು ಗಡಿ ಕೇಂದ್ರಗಳಲ್ಲಿ ಬಿಡಾರ ಹೂಡಲಿದ್ದಾರೆ. ಹರ್ಯಾಣ ಭದ್ರತಾ ಸಿಬ್ಬಂದಿಯೊಂದಿಗಿನ ಘರ್ಷಣೆಯಲ್ಲಿ ರೈತ ಮೃತಪಟ್ಟ ಖಾನೌರಿ ಗಡಿಯಲ್ಲಿನ ಬೆಳವಣಿಗೆಗಳನ್ನು ರೈತರು ಪರಿಶೀಲಿಸಲಿದ್ದಾರೆ ಎಂದು ಪಂಧೇರ್ ಹೇಳಿದರು.
ಖಾನೌರಿ ಘಟನೆಯನ್ನು ಪರಿಶೀಲಿಸಿದ ನಂತರ ನಾವು ಮುಂದಿನ ಕ್ರಮವನ್ನು ನಿರ್ಧರಿಸುತ್ತೇವೆ. ಎರಡು ದಿನಗಳ ಕಾಲ ದೆಹಲಿ ಮೆರವಣಿಗೆಗೆ ತಡೆ ನೀಡಲಾಗುವುದು ಎಂದು ಅವರು ತಿಳಿಸಿದರು. ಮಾತುಕತೆಗೆ ಕೇಂದ್ರದ ಆಹ್ವಾನದ ವಿಚಾರವಾಗಿ ಮಾತನಾಡಿದ ಅವರು, ಎಂಎಸ್‌ಪಿ ಸಮಸ್ಯೆ ಪರಿಹಾರಕ್ಕಾಗಿ ಸಭೆ ನಡೆಸಬೇಕು ಎಂದು ರೈತರು ಆಗ್ರಹಿಸಿರುವುದಾಗಿ ತಿಳಿಸಿದ್ದಾರೆ.ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖಾನೌರಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಾ ನಿರತ ರೈತರ ನಡುವಿನ ಘರ್ಷಣೆಯ ನಂತರ 21 ವರ್ಷದ ರೈತ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಶಂಭು ಮತ್ತು ಖಾನೌರಿ ಗಡಿಯಲ್ಲಿ ರೈತರ ಮೇಲೆ ಬಲಪ್ರಯೋಗ ಮಾಡಿದಕ್ಕಾಗಿ ಪಂಧೇರ್ ಕೇಂದ್ರ ಮತ್ತು ಹರಿಯಾಣದ ಭದ್ರತಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಖಾನೌರಿಯಲ್ಲಿ ಮೂವರು ವ್ಯಕ್ತಿಗಳು ಗಾಯಗೊಂಡು ಯುವ ರೈತ ಮೃತಪಟ್ಟಿದ್ದಾರೆ. ರೈತರು ಹಿಂಸಾತ್ಮಕವಾಗಿ ವರ್ತಿಸಿರಲಿಲ್ಲ. ಯುವ ರೈತನ ಸಾವಿಗೆ ಆತನ ತಲೆಗೆ ಗುಂಡೇಟು ಬಿದ್ದಿರುವುದೇ ಕಾರಣ ಎಂದು ಪಂಧೇರ್ ಹೇಳಿದ್ದಾರೆ.
ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖಾನೌರಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಾ ನಿರತ ರೈತರ ನಡುವಿನ ಘರ್ಷಣೆಯ ನಂತರ 21 ವರ್ಷದ ರೈತ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಪರಿಸ್ಥಿತಿಯನ್ನು ಅವಲೋಕಿಸಲು ಖಾನೌರಿಗೆ ಹೋಗಿದ್ದಾರೆ. ನಮ್ಮ ಆಂದೋಲನವನ್ನು ಹಳಿತಪ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
ಪಂಜಾಬ್‌ನಲ್ಲಿ ಹರಿಯಾಣ ಪೊಲೀಸರು?
ಹರಿಯಾಣದ ಭದ್ರತಾ ಸಿಬ್ಬಂದಿ ಪಂಜಾಬ್ ಪ್ರದೇಶದ ತಮ್ಮ ಶಿಬಿರವನ್ನು ಪ್ರವೇಶಿಸಿ, ಅಶ್ರುವಾಯು ಬಳಸಿದ್ದು, ಸುಮಾರು 100 ರೈತರು ಗಾಯಗೊಂಡಿದ್ದಾರೆ. ಪಂಜಾಬ್ ಪ್ರಾಂತ್ಯದಲ್ಲಿ ನಿಲ್ಲಿಸಲಾಗಿದ್ದ ಸುಮಾರು 25 ಟ್ರ್ಯಾಕ್ಟರ್ ಟ್ರಾಲಿಗಳನ್ನು ಹರಿಯಾಣ ಭದ್ರತಾ ಸಿಬ್ಬಂದಿ ಹಾನಿಗೊಳಿಸಿದ್ದಾರೆ ಎಂದು ಇನ್ನೊಬ್ಬ ರೈತ ನಾಯಕ ಆರೋಪಿಸಿದ್ದಾರೆ.
ಔಷಧಿ ತೆಗೆದುಕೊಂಡು ಹೋಗಿ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಮಲಗಿದ್ದ ವೃದ್ಧರನ್ನು ಥಳಿಸಿದ್ದಾರೆ ಎಂದು ರೈತ ಮುಖಂಡರು ದೂರಿದ್ದಾರೆ.
ಹರ್ಯಾಣ ಭದ್ರತಾ ಸಿಬ್ಬಂದಿ ಪಂಜಾಬ್ ಪ್ರದೇಶವನ್ನು ಪ್ರವೇಶಿಸುವುದನ್ನು ಗಮನಿಸಬೇಕೆಂದು ರೈತ ಮುಖಂಡರು ಪಂಜಾಬ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೃತ ರೈತನನ್ನು ಪಂಜಾಬ್‌ನ ಬಟಿಂಡಾ ಜಿಲ್ಲೆಯ ಬಲ್ಲೋ ಗ್ರಾಮದ ನಿವಾಸಿ ಸುಭಕರನ್ ಸಿಂಗ್ (21) ಎಂದು ಗುರುತಿಸಲಾಗಿದೆ.
ಪಟಿಯಾಲ ಮೂಲದ ರಾಜೀಂದ್ರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಎಚ್‌ಎಸ್ ರೇಖಿ ಸುದ್ದಿಗಾರರೊಂದಿಗೆ ಮಾತನಾಡಿ, ಮೂವರನ್ನು ಖಾನೌರಿಯಿಂದ ಆಸ್ಪತ್ರೆಗೆ ಕರೆತರಲಾಯಿತು, ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಮೃತರ ತಲೆಗೆ ಗಾಯವಾಗಿದ್ದು, ಇನ್ನಿಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಹರ್ಯಾಣ ಪೊಲೀಸ್ ಅಧಿಕಾರಿಯೊಬ್ಬರು ಲಾಠಿ ಮತ್ತು ಕಲ್ಲು ತೂರಾಟದಿಂದ ಸುಮಾರು 12 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ಸುತ್ತುವರಿದ ನಂತರ ಪ್ರತಿಭಟನಾಕಾರರು ಮೆಣಸಿನ ಪುಡಿ ಸುರಿದು ಬೆಂಕಿ ಹಚ್ಚಿದರು. ಹೊಗೆಯಿಂದಾಗಿ, ಪ್ರದೇಶದಲ್ಲಿ ನಿಯೋಜಿಸಲಾದ ಸಿಬ್ಬಂದಿಗಳಿಗೆ ಉಸಿರಾಟದ ತೊಂದರೆ ಮತ್ತು ಕಣ್ಣುಗಳಲ್ಲಿ ಉರಿ ಸಮಸ್ಯೆಯನ್ನು ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ರೈತರ ವಿರುದ್ಧ ರಬ್ಬರ್ ಬುಲೆಟ್?
ಹರಿಯಾಣ ಪೊಲೀಸರು ಅಶ್ರುವಾಯು ಶೆಲ್‌ಗಳಲ್ಲದೆ ರಬ್ಬರ್ ಬುಲೆಟ್‌ಗಳನ್ನು ಹಾರಿಸಿದ್ದಾರೆ ಎಂದು ರೈತರು ಹೇಳಿದ್ದಾರೆ. ಬ್ಯಾರಿಕೇಡ್‌ಗಳ ಇನ್ನೊಂದು ಬದಿಯಲ್ಲಿ ರೈತರ ಚಟುವಟಿಕೆಗಳ ಮೇಲೆ ಕಣ್ಣಿಡಲು ಮತ್ತು ಅಶ್ರುವಾಯು ಶೆಲ್‌ಗಳನ್ನು ಬೀಳಿಸಲು ಪೊಲೀಸರು ಡ್ರೋನ್‌ಗಳನ್ನು ಬಳಸಿದ್ದಾರೆ.
ರೈತರ ಸಾವಿಗೆ ಸಂತಾಪ
ರೈತನ ಸಾವಿಗೆ ಹಲವಾರು ರೈತ ಸಂಘಟನೆಗಳು ಸಂತಾಪ ಸೂಚಿಸಿವೆ.
ಈ ಪರಿಸ್ಥಿತಿಗೆ ಸರ್ಕಾರವೇ ಹೊಣೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಗುರುವಾರ ಸಭೆ ಕರೆದಿದೆ. "ಹರಿಯಾಣ-ಪಂಜಾಬ್ ಗಡಿಯಲ್ಲಿ ರೈತ ಸುಭಕರನ್ ಸಿಂಗ್ ಅವರ ಹತ್ಯೆಯನ್ನು ಮತ್ತು ಪೊಲೀಸರ ಕ್ರೂರ ದಬ್ಬಾಳಿಕೆ ಎಸ್‌ಕೆಎಂ ಬಲವಾಗಿ ಪ್ರತಿಭಟಿಸುತ್ತದೆ" ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಪ್ರತಿಭಟನೆಯ ನೇತೃತ್ವ ವಹಿಸಿವೆ.
ಕೇಂದ್ರದ ವಿರುದ್ಧ ಕಿಡಿ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರೈತನ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಬಿಜೆಪಿಯಿಂದ ನಡೆದ ರೈತರ ಹತ್ಯೆಗಳ ಲೆಕ್ಕವನ್ನು ಇತಿಹಾಸವು ಖಂಡಿತವಾಗಿಯೂ ಕೇಳುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.
ಮರಣೋತ್ತರ ಪರೀಕ್ಷೆಯ ನಂತರ ಪ್ರಕರಣವನ್ನು ದಾಖಲಿಸಲಾಗುವುದು ಮತ್ತು ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಂಜಾಬ್ ಸಿಎಂ ಭಗವಂತ ಮಾನ್ ಹೇಳಿದ್ದಾರೆ.
“ಪಂಜಾಬ್‌ನ ಯುವಕ ಸುಭ್‌ಕರನ್ ಸಾವು ತುಂಬಾ ದುಃಖಕರವಾಗಿದೆ. ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಈ ದಿನಕ್ಕಾಗಿಯೇ?, ಮುಂದೊಂದು ದಿನ ನಮ್ಮ ದೇಶದಲ್ಲಿ ನಮ್ಮಿಂದ ಆಯ್ಕೆಯಾದ ಸರ್ಕಾರಗಳು ಬ್ರಿಟಿಷರಂತೆ ನಮ್ಮ ಮಕ್ಕಳನ್ನೇ ಹುತಾತ್ಮರನ್ನಾಗಿಸುತ್ತವೆಯೇ? ನಾವು ಸಂಪೂರ್ಣವಾಗಿ ಸುಭ್ಕರನ್ ಜೊತೆಗಿದ್ದೇವೆ ಮತ್ತು ಅವರ ಕೊಲೆಗಾರರಿಗೆ ಕಠಿಣ ಶಿಕ್ಷೆಯನ್ನು ಖಚಿತಪಡಿಸುತ್ತೇವೆ” ಎಂದು ಕೇಜ್ರಿವಾಲ್ ಅವರು ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಹರಿಯಾಣ ಪೊಲೀಸರ ವಿರುದ್ಧ ಪಂಜಾಬ್ ಸಿಎಂ ಆರೋಪ
ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿದೆ ಎಂದು ಹೇಳಿದ ಮಾನ್, ಖಾನೌರಿ ಘಟನೆಯನ್ನು ಉಲ್ಲೇಖಿಸಿ, ಹರಿಯಾಣ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತಂದಿದ್ದಾರೆ ಎಂದು ಆರೋಪಿಸಿದರು.
ರೈತರು ತಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರ ರಾಜಧಾನಿಗೆ ಏಕೆ ಹೋಗಬಾರದು ಎಂದು ಪ್ರಶ್ನಿಸಿದ ಪಂಜಾಬ್ ಸಿಎಂ, “ಹರಿಯಾಣ ಅವರನ್ನು ಏಕೆ ತಡೆದಿದೆ? ಅವರು ಶಾಂತಿಯುತ ರೀತಿಯಲ್ಲಿ ಹರಿಯಾಣ ಗಡಿ ತಲುಪಿದ್ದಾರೆ. ಹರಿಯಾಣ ಸರ್ಕಾರವು ಅವರನ್ನು ತಡೆಯದಿದ್ದರೆ, ಅವರು ರಾಷ್ಟ್ರ ರಾಜಧಾನಿಗೆ ಹೋಗಬಹುದಿತ್ತು. ಅಲ್ಲಿ ಅವರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಲು ಕೇಂದ್ರವು ಅವರಿಗೆ ಸ್ಥಳವನ್ನು ನೀಡಬೇಕಿತ್ತು” ಎಂದು ಹೇಳಿದರು.