Caste Census | ತೆಲಂಗಾಣ ಜಾತಿಗಣತಿಗೆ ರಾಹುಲ್ ಗಾಂಧಿ ಮಣೆ: ಕರ್ನಾಟಕದ ಗಣತಿಗೆ ಅಸಮ್ಮತಿಯೆ?
ಜಾತಿಗಣಗತಿ ಮೊದಲು ಮಾಡಿದ ರಾಜ್ಯವೇ ಬಿಹಾರ. ನಂತರ ಕರ್ನಾಟಕವಾದರೂ ಇದುವರೆಗೆ ಜಾರಿಯಾಗಿಲ್ಲ. ತೆಲಂಗಾಣದಲ್ಲಿ ವರ್ಷದ ಹಿಂದೆ ಆರಂಭಿಸಿ ಕೆಲವೇ ತಿಂಗಳಲ್ಲಿ ಮುಗಿಸಿ ಜಾರಿಗೆ ತರಲಾಗಿದೆ. ಹೀಗಾಗಿ ರಾಹುಲ್ ಗಾಂಧಿ ತೆಲಂಗಾಣದ ಜಾತಿ ಗಣತಿಯನ್ನು 'ರಾಷ್ಟ್ರೀಯ ಮಾದರಿ' ಎಂಬುದಾಗಿ ಪ್ರತಿಪಾದಿಸಿದ್ದಾರೆ.;
ಕೇಂದ್ರ ಸರ್ಕಾರ ಜನಗಣತಿ ಜತೆಗೇ ಜಾತಿ ಗಣತಿಗೆ ನಡೆಸಲು ನಿರ್ಧರಿಸಿದ ತಕ್ಷಣ ಕಾಂಗ್ರೆಸ್ ಪಕ್ಷ ಅದರ ಸಂಪೂರ್ಣ ಶ್ರೇಯಸ್ಸು ತನ್ನದೆಂದು ಹೇಳಿಕೊಳ್ಳುತ್ತಿದೆ. "ಜಾತಿ ಗಣತಿ ನಮ್ಮ ಅಜೆಂಡಾ, ಅದನ್ನು ನಿರಂತರವಾಗಿ ಬೆಂಬಲಿಸಿದ್ದೇವೆ, ಆದರೆ, ಬಿಜೆಪಿ ವಿರೋಧಿಸಿಕೊಂಡೇ ಬಂದಿದೆ," ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಜಾತಿ ಗಣತಿಗೆ ಕೇಂದ್ರ ಒಪ್ಪಿದ ತಕ್ಷಣವೇ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ಪ್ರತಿ ಪಕ್ಷ ನಾಯಕ ರಾಹುಲ್ ಗಾಂಧಿ ಸುದ್ದಿಗೋಷ್ಠಿ ಕರೆದು, ಈ ವಿಚಾರದಲ್ಲಿ ಪ್ರಧಾನಿ ಮೋದಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದ್ದರು. ಇದೇ ವೇಳೆ ಅವರು ಜಾತಿಗಣತಿಗೆ ಕಾಲಮಿತಿ ನಿಗದಿಪಡಿಸುವಂತೆ ಒತ್ತಾಯಿಸಿ, ತೆಲಂಗಾಣ ಮಾದರಿ ಅನುಸರಿಸುವಂತೆ ಸಲಹೆ ಕೊಟ್ಟಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಜಾತಿ ಗಣತಿ ಸಿದ್ಧಪಡಿಸಿ ಜಾರಿಗೊಳಿಸಿದೆ. ಅದನ್ನೇ ಮಾದರಿಯಾಗಿಟ್ಟುಕೊಂಡು ಗಣತಿ ಮಾಡಿ ಮತ್ತು ಅದರಂತೆಯೇ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಗಣತಿಯೂ ಆಗಲಿ ಎಂದು ಒತ್ತಾಯಿಸಿದ್ದಾರೆ. ಹಾಗಾದರೆ, ರಾಹುಲ್ ಗಾಂಧಿ ಮೆಚ್ಚಿರುವ 'ತೆಲಂಗಾಣ ಮಾದರಿ' ಎಂದರೆ ಏನು? ಅದು, ಜಾತಿ ಗಣತಿ ನಡೆಸಿರುವ ಇನ್ನುಳಿದ ರಾಜ್ಯಗಳಾದ ಬಿಹಾರ ಹಾಗೂ ಕರ್ನಾಟಕಕ್ಕಿಂತ ಹೇಗೆ ಭಿನ್ನ ಎಂಬ ವಿಶ್ಲೇಷಣೆ ಇಲ್ಲಿದೆ.
ಜಾತಿಗಣಗತಿಗೆ ಮೊದಲು ಮುಂದಾಗಿದ್ದೇ ಕರ್ನಾಟಕ. ಆದರೆ ಇನ್ನೂ ಜಾರಿಯಾಗಿಲ್ಲ. ಮೊದಲು ಜಾರಿ ಮಾಡಿದ ರಾಜ್ಯವೇ ಬಿಹಾರ. ತೆಲಂಗಾಣದಲ್ಲಿ ವರ್ಷದ ಹಿಂದೆ ಆರಂಭಿಸಿ ಕೆಲವೇ ತಿಂಗಳಲ್ಲಿ ಮುಗಿಸಿ ಜಾರಿಗೆ ತರಲಾಗಿದೆ. ಹೀಗಾಗಿ ರಾಹುಲ್ ಗಾಂಧಿ ತೆಲಂಗಾಣದ ಜಾತಿ ಗಣತಿಯನ್ನು 'ರಾಷ್ಟ್ರೀಯ ಮಾದರಿ' ಎಂಬುದಾಗಿ ಪ್ರತಿಪಾದಿಸಿದ್ದಾರೆ.
ತೆಲಂಗಾಣ ಜಾತಿ ಗಣತಿ ನಡೆಸಿದ್ದು ಹೇಗೆ?
ತೆಲಂಗಾಣ ಸರ್ಕಾರ 2024ರ ಅಕ್ಟೋಬರ್ 10ರಂದು ಜಾತಿ ಗಣತಿ ನಡೆಸಲು ನಿರ್ಧರಿಸಿ, ನವೆಂಬರ್ 6ರಿಂದ ಡಿಸೆಂಬರ್ 25ರವರೆಗೆ ಎರಡು ಹಂತಗಳಲ್ಲಿ ನಡೆಸಿದೆ. ಮೊದಲ ಹಂತದಲ್ಲಿ ನವೆಂಬರ್ 6ರಿಂದ 8ರವರೆಗೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ವಿವರಗಳನ್ನು ಸಂಗ್ರಹಿಸಲಾಗಿದೆ. ಎರಡನೇ ಹಂತದಲ್ಲಿ ನವೆಂಬರ್ 9ರಿಂದ ಡಿಸೆಂಬರ್ 25ರವರೆಗೆ 57 ಪ್ರಶ್ನೆಗಳನ್ನು ಒಳಗೊಂಡ 8 ಪುಟಗಳ ಪ್ರಶ್ನಾವಳಿ ತಯಾರಿಸಿ ಮನೆಗಳಿಗೆ ಭೇಟಿ ನೀಡಿ ಗಣತಿ ನಡೆಸಲಾಗಿದೆ. ರಾಜ್ಯದ 75 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 94,750 ಗಣತಿದಾರರು ಮತ್ತು 9,478 ಮೇಲ್ವಿಚಾರಕರು ಗಣತಿಯಲ್ಲಿ ಪಾಲ್ಗೊಂಡಿದ್ದು, ಪ್ರತಿ 150ರಿಂದ 175 ಮನೆಗಳಿಗೆ ಒಬ್ಬ ಗಣತಿದಾರ ಭೇಟಿ ನೀಡಿದ್ದಾರೆ.
ಗಣತಿ ವೇಳೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಸ್ಥಿತಿಗತಿಗಳ ಜೊತೆಗೆ ಭೂಮಿ, ಆಸ್ತಿ, ಶಿಕ್ಷಣ ಮಟ್ಟ, ಔಷಧ, ಸಾಲ, ವಲಸೆ, ಮತ್ತು ಜಾತಿ-ಸಂಬಂಧಿತ ಮಾಹಿತಿ ಸಂಗ್ರಹಿಸಲಾಗಿದೆ. ಯೋಜನಾ ಇಲಾಖೆಯನ್ನೇ ನೋಡಲ್ ಏಜೆನ್ಸಿಯಾಗಿ ಮಾಡಲಾಗಿತ್ತು. ಈ ಗಣತಿಯಲ್ಲಿ 'ಜಾತಿ ಇಲ್ಲ' ಮತ್ತು 'ಧರ್ಮ ಇಲ್ಲ' ಎಂಬ ಕಾಲಂ ಕೂಡ ನೀಡಿದ್ದು ವಿಶೇಷವಾಗಿತ್ತು. ರಾಜ್ಯದ 1.17 ಕೋಟಿ ಕುಟುಂಬಗಳ 3.54 ಕೋಟಿ ಜನರನ್ನು ಗಣತಿಗೆ ಒಳಪಡಿಸಲಾಗಿದ್ದು, ಅದು ಒಟ್ಟು ಜನಸಂಖ್ಯೆಯ ಶೇಕಡಾ 96.9ರಷ್ಟಾಗುತ್ತದೆ.
ಈ ಗಣತಿ ಪ್ರಕಾರ ರಾಜ್ಯದಲ್ಲಿ ಶೇಕಡಾ 56.33ರಷ್ಟು ಮುಸ್ಲಿಮ್ ಸೇರಿದಂತೆ ಹಿಂದುಳಿದ ಜಾತಿಗಳು, ಶೇ.17.43ರಷ್ಟು ಪರಿಶಿಷ್ಟ ಜಾತಿ, ಶೇ.10.45ರಷ್ಟು ಪರಿಶಿಷ್ಟ ಪಂಗಡ ಹಾಗೂ ಶೇಕಡಾ 13.31ರಷ್ಟು ಇತರ ಜಾತಿಗಳಿವೆ.
ಬಿಹಾರ ಮತ್ತು ಕರ್ನಾಟಕದ ಗಣತಿ ಸಮರ್ಪಕವಲ್ಲವೇ?
ಬಿಹಾರ ವಿಧಾನಸಭೆಯು ಫೆಬ್ರವರಿ 2020ರಲ್ಲಿ ಜಾತಿ ಗಣತಿಗೆ ಮುಂದಾಗಿ, 2023ರಲ್ಲಿ ಪ್ರಕ್ರಿಯೆ ಮುಗಿಸಿತ್ತು. ಇಲ್ಲೂ ಎರಡು ಹಂತದಲ್ಲಿ ನಡೆಸಲಾಗಿದ್ದು, ಮನೆಗಳಿಗೆ ಭೇಟಿ ನೀಡಿ ಸದಸ್ಯರ ಸಂಖ್ಯೆಯನ್ನು ಸಂಗ್ರಹಿಸಿ ಬಳಿಕ ಎರಡನೇ ಹಂತದಲ್ಲಿ ಜಾತಿ ಮತ್ತು ಸಾಮಾಜಿಕ-ಆರ್ಥಿಕ ಮಾಹಿತಿ ಸಂಗ್ರಹಿಸಲಾಗಿದೆ. ಆದರೆ, ಇಲ್ಲಿ ಬಳಸಿರುವ ಪ್ರಶ್ನಾವಳಿಗಳು ಅತ್ಯಂತ ಸರಳ ಹಾಗೂ ತೆಲಂಗಾಣದಷ್ಟು ವಿವರಗಳನ್ನು ಹೊಂದಿಲ್ಲ. ಅಲ್ಲದೆ, ಗಣತಿದಾರರಿಗೆ ನಿರ್ದಿಷ್ಟ 214 ಜಾತಿಗಳ ಪಟ್ಟಿ ನೀಡಿ ಮಾಹಿತಿ ಸಂಗ್ರಹಿಸಿ ಉಳಿದವರನ್ನು 'ಇತರ ಜಾತಿಗಳು' ಎಂಬ ವರ್ಗವನ್ನು ಸೇರಿಸಲಾಗಿತ್ತು. ಹಿಂದುಳಿದ ವರ್ಗ ಶೇಕಡಾ 63.13, ಪರಿಶಿಷ್ಟ ಜಾತಿ 19.65, ಪರಿಶಿಷ್ಟ ಪಂಗಡ 1.68 ಹಾಗೂ ಶೇಕಡಾ 15.52 ಮೇಲ್ಜಾತಿಗಳು ಎಂದು ವರ್ಗೀಕರಣ ಮಾಡಲಾಗಿದೆ. ಇಲ್ಲಿ ಎಷ್ಟು ಗಣಿತದಾರರು ಇದ್ದರು ಎಂಬ ಮಾಹಿತಿ ಇಲ್ಲ. ಗಣತಿ ಆಧಾರದ ಮೇಲೆ ಬಿಹಾರ ಮೀಸಲಾತಿಯನ್ನು ಶೇಕಡಾ 50ರಿಂದ ಶೇಕಡಾ 65ಕ್ಕೆ ಏರಿಸಿದೆ. ಪಟಾನಾ ಹೈಕೋರ್ಟ್ ಇದನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿದ್ದು, ವಿಷಯ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ರಾಜಕೀಯವಾಗಿ ಪ್ರಬಲವಾಗಿರುವ ಜಾಟ್‌ಗಳು ಮತ್ತು ಇತರ ಪ್ರಬಲ ಜಾತಿಗಳ ಹಿತಾಸಕ್ತಿಗಳಿಗೆ ಒತ್ತು ನೀಡಲಾಗಿದೆ ಎಂಬ ಆರೋಪವೂ ಈ ಗಣತಿ ಮೇಲಿದೆ.
ಕರ್ನಾಟಕದಲ್ಲಿ ಹೇಗಿದೆ ಗಣತಿ ಪ್ರಕ್ರಿಯೆ?
ಕರ್ನಾಟಕದಲ್ಲಿ ಸಾಮಾಜಿಕ- ಆರ್ಥಿಕ ಮತ್ತು ಶೈಕ್ಷಣಿಕ ಗಣತಿಯನ್ನು ಕಾಂತರಾಜ್ ಆಯೋಗ 2015ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ ಆರಂಭಿಸಲಾಗಿತ್ತು. ಆರಂಭದಲ್ಲೇ ಅದಕ್ಕೆ ವಿರೋಧ ವ್ಯಕ್ತವಾಗಿತ್ತು. ಸುದೀರ್ಘ ಕಾಲ ತೆಗೆದುಕೊಂಡ ಆಯೋಗ 2018ರಲ್ಲಿ ವರದಿ ಸಿದ್ಧಪಡಿಸಿತ್ತು. ಸಿಎಂ ಸಿದ್ದರಾಮಯ್ಯ ಸಮೇತ ಮುಂದಿನ ಮುಖ್ಯಮಂತ್ರಿಗಳು ಅದನ್ನು ಸ್ವೀಕರಿಸಲು ಧೈರ್ಯ ಮಾಡಲಿಲ್ಲ. ಬಳಿಕ 2020ರ ನವೆಂಬರ್ನಲ್ಲಿ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗಕ್ಕೆ ನೀಡಲಾಯಿತು. ಅವರು 2024ರಲ್ಲಿ ಮಾರ್ಚ್ನಲ್ಲಿ ಪರಿಷ್ಕೃತ ವರದಿ ಸಲ್ಲಿಸಿದ್ದರು. 2025ರ ಏಪ್ರಿಲ್ 11ರಂದು ಸಚಿವರ ಸಂಪುಟಕ್ಕೆ ವರದಿಯನ್ನು ಒಪ್ಪಿಸಲಾಗಿತ್ತು. ಆ ಬಳಿಕ ಏಪ್ರಿಲ್ 17ರಂದು ವಿಶೇಷ ಕ್ಯಾಬಿನೆಟ್ ಸಭೆ ಕರೆದು ಚರ್ಚಿಸಲಾಗಿದೆ.
1.38 ಕೋಟಿ ಕುಟುಂಬಗಳ ಒಟ್ಟು 5.98 ಕೋಟಿ ಜನರನ್ನು (ಜನಸಂಖ್ಯೆಯ ಶೇಕಡಾ 94.77) ಗಣತಿಗೆ ಒಳಪಡಿಸಲಾಗಿದೆ. 1.6 ಲಕ್ಷ ಅಧಿಕಾರಿಗಳು, 79 ಐಎಎಸ್ ಅಧಿಕಾರಿಗಳು, 1,33,825 ಶಿಕ್ಷಕರು ಮತ್ತು 22,190 ಇತರ ಇಲಾಖೆ ಸಿಬ್ಬಂದಿಯನ್ನು ಮನೆಮನೆಗೆ ಕಳುಹಿಸಿ ಗಣತಿ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ ಪ್ರಶ್ನಾವಳಿಯ ವಿವರಗಳು ಸಾರ್ವಜನಿಕವಾಗಿ ಲಭ್ಯವಿಲ್ಲ. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ಗಣತಿಯನ್ನು "ಅವೈಜ್ಞಾನಿಕ ಮತ್ತು ಹಳೆಯದು" ಎಂದು ಟೀಕಿಸಿವೆ. ತಮ್ಮ ಜನಸಂಖ್ಯೆಯನ್ನು ತಪ್ಪಾಗಿ ಲೆಕ್ಕಹಾಕಲಾಗಿದೆ ಎಂಬ ಆರೋಪಿಸಿದೆ.
ಬಿಹಾರ ಹಾಗೂ ಕರ್ನಾಟಕದಲ್ಲಿ ಕೊರತೆಗಳು ಇರುವ ಕಾರಣ ರಾಹುಲ್ ಗಾಂಧಿ ತೆಲಂಗಾಣದ ಜಾತಿ ಗಣತಿಯನ್ನು ರಾಷ್ಟ್ರೀಯ ಮಾದರಿಯಾಗಿ ಪ್ರತಿಪಾದಿಸುತ್ತಿದ್ದಾರೆ. ತ್ವರಿತ ಜಾರಿ, ವ್ಯಾಪ್ತಿ ಮತ್ತು ಸ್ಪಷ್ಟ ದತ್ತಾಂಶಗಳ ಕಾರಣಕ್ಕೆ ರಾಹುಲ್ ಗಾಂಧಿಯವರು ಅದನ್ನೇ ಮಾದರಿ ಎನ್ನುತ್ತಿದ್ದಾರೆ.