ಪ್ರತಿ ಬೂತ್‌ನಲ್ಲಿ 370 ಹೆಚ್ಚು ಮತದ ಗುರಿ: ಅಮಿತ್ ಶಾ

Update: 2024-02-25 11:32 GMT

ಗ್ವಾಲಿಯರ್, ಫೆ 25 -ಕಳೆದ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಪ್ರತಿ ಬೂತ್‌ನಲ್ಲಿ 370 ಹೆಚ್ಚುವರಿ ಮತಗಳನ್ನು ಪಡೆಯಲು ಶ್ರಮಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಕಾರ್ಯಕರ್ತರಿಗೆ ಭಾನುವಾರ ಕರೆ ನೀಡಿದರು. 

ಮೊರೆನಾ, ಭಿಂಡ್, ಗುಣಾ ಮತ್ತು ಗ್ವಾಲಿಯರ್ ಲೋಕಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಮಧ್ಯಪ್ರದೇಶದ ಗ್ವಾಲಿಯರ್-ಚಂಬಲ್ ಕ್ಲಸ್ಟರ್‌ನ ಬೂತ್ ನಿರ್ವಹಣೆ ಸಮಿತಿಯ 400 ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. 

ಕಳೆದ ಚುನಾವಣೆಗೆ ಹೋಲಿಸಿದರೆ ಪ್ರತಿ ಬೂತ್‌ನಲ್ಲಿ ಹೆಚ್ಚುವರಿ 370 ಮತಗಳನ್ನು ಪಡೆಯಬೇಕು. ಲೋಕಸಭೆ ಚುನಾವಣೆಗೆ ಸುಮಾರು 100 ದಿನ ಉಳಿದಿದೆ. ಕೇಂದ್ರ ಸಚಿವರು ಮತ್ತು ಮುಖಂಡರು ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಸ್ಥಳೀಯ ಪರಿಸ್ಥಿತಿಯನ್ನು ತಿಳಿದುಕೊಳ್ಳುತ್ತಾರೆ ಎಂದ ಅವರು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ತಂತ್ರಗಳ ಬಗ್ಗೆ ಚರ್ಚಿಸಿದರು. 

ಮುಖ್ಯಮಂತ್ರಿ ಮೋಹನ್ ಯಾದವ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ವಿ.ಡಿ. ಶರ್ಮಾ ಅವರು ಷಾ ಅವರಿಗೆ ಆತ್ಮೀಯ ಸ್ವಾಗತ ನೀಡಿದರು. ನಂತರ ಷಾ ಅವರು ಖಜುರಾಹೊಗೆ ತೆರಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯಲ್ಲಿ ಬಿಜೆಪಿ 370 ಸ್ಥಾನಗಳ ಗಡಿ ದಾಟಲಿದೆ ಮತ್ತು ಆಡಳಿತ ಒಕ್ಕೂಟವು 400 ಕ್ಕೂ ಹೆಚ್ಚು ಸ್ಥಾನ ಪಡೆಯುತ್ತದೆ ಎಂದು ಹೇಳಿದ್ದರು.

ಮಧ್ಯಪ್ರದೇಶದ ಎಲ್ಲ 29 ಲೋಕಸಭೆ ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ. 2019ರಲ್ಲಿ ಬಿಜೆಪಿ 28 ಸ್ಥಾನ ಗೆದ್ದಿತ್ತು.ಕಾಂಗ್ರೆಸ್‌ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಭದ್ರಕೋಟೆಯಾದ ಛಿಂದ್ವಾರಾದಲ್ಲಿ ಮಾತ್ರ ಗೆಲುವು ಸಾಧಿಸಿತ್ತು.

Tags:    

Similar News