ಉತ್ತರಾಖಂಡ: ಭಾರೀ ಮಳೆಗೆ 14 ಸಾವು, ಕೇದಾರನಾಥ ಯಾತ್ರೆ ಸ್ಥಗಿತ

Update: 2024-08-02 07:27 GMT

ಡೆಹ್ರಾಡೂನ್, ಆಗಸ್ಟ್ 1- ಉತ್ತರಾಖಂಡದಲ್ಲಿ ಭಾರಿ ಮಳೆಯಿಂದ ಹಲವಾರು ನದಿಗಳಲ್ಲಿ ಪ್ರವಾಹ ಉಂಟಾಗಿದ್ದು, ಮನೆಗಳ ಕುಸಿತದಿಂದ 14 ಜನ ಸಾವನ್ನಪ್ಪಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಭಾರೀ ಮಳೆಯಿಂದ ಹಲವೆಡೆ ಭೂಕುಸಿತ ಉಂಟಾಗಿದೆ. ಘೋರಪರವ್, ಲಿಂಚೋಲಿ, ಬಡಿ ಲಿಂಚೋಲಿ ಮತ್ತು ಭೀಮಾಲಿಯಲ್ಲಿ ಬಂಡೆಗಳು ಉರುಳಿದ್ದು, ಚಾರಣವನ್ನು ನಿರ್ಬಂಧಿಸಲಾಗಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಅಗತ್ಯವಿರುವ ಎಲ್ಲ ನೆರವಿನ ಭರವಸೆಯನ್ನು ಪಿಎಂಒ ನೀಡಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಕೂಡ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ. 

14 ಮಂದಿ ಸಾವು: ಮಳೆ ಸಂಬಂಧಿತ ಘಟನೆಗಳಲ್ಲಿ 14 ಜನರು ಸಾವನ್ನಪ್ಪಿದ್ದಾರೆ - ಡೆಹ್ರಾಡೂನ್‌ನಲ್ಲಿ ನಾಲ್ಕು, ಹರಿದ್ವಾರದಲ್ಲಿ ಆರು, ತೆಹ್ರಿಯಲ್ಲಿ ಮೂರು ಮತ್ತು ಚಮೋಲಿಯಲ್ಲಿ ಒಬ್ಬರು.ನೈನಿತಾಲಿನ ಹಲ್ದ್ವಾನಿಯಲ್ಲಿ ನೀರು ತುಂಬಿದ ಚರಂಡಿಯಲ್ಲಿ ಮಗುವೊಂದು ಕೊಚ್ಚಿ ಹೋಗಿದೆ. ರಾಯ್‌ಪುರ ಪ್ರದೇಶದ ಕಾಲುವೆಯಲ್ಲಿ ಬುಧವಾರ ರಾತ್ರಿ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಡೆಹ್ರಾಡೂನ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ತಿಳಿಸಿದ್ದಾರೆ. ಸುಂದರ್ ಸಿಂಗ್ ಮತ್ತು ಅರ್ಜುನ್ ಸಿಂಗ್ ರಾಣಾ ಮೃತರು. ಡೆಹ್ರಾಡೂನ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಸಹಸ್ರಧಾರಾ ಪಾರ್ಕಿಂಗ್ ಬಳಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಇಬ್ಬರು ನೀರಿನಲ್ಲಿ ಕೊಚ್ಚಿಹೋದರು. ದೆಹಲಿಯ ಸುಲ್ತಾನ್‌ಪುರಿ ನಿವಾಸಿಗಳಾದ ಇಂದ್ರಪಾಲ್ (40) ಮತ್ತು ಭೂಪೇಂದ್ರ ಸಿಂಗ್ ರಾಣಾ (43) ಮೃತರು. ಹರಿದ್ವಾರ ಜಿಲ್ಲೆಯ ರೂರ್ಕಿ ಪ್ರದೇಶದ ಭರ್ಪುರ್ ಗ್ರಾಮದಲ್ಲಿ ಮನೆ ಕುಸಿದು ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಎಂಟು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಮತ್ತೊಂದು ಘಟನೆಯಲ್ಲಿ ಬುಧವಾರ ರಾತ್ರಿ 11:30 ರ ಸುಮಾರಿಗೆ ರೂರ್ಕಿ ಬಸ್ ನಿಲ್ದಾಣದಲ್ಲಿ ಇಬ್ಬರು ಜನರು ವಿದ್ಯುತ್ ಸ್ಪರ್ಶಿಸಿದ್ದಾರೆ. ತೆಹ್ರಿ ಜಿಲ್ಲೆಯ ಘನ್ಸಾಲಿ ಪ್ರದೇಶದ ಜಖನ್ಯಾಲಿ ಗ್ರಾಮದಲ್ಲಿ ಮೇಘಸ್ಫೋಟದ ನಂತರ ಸಂಭವಿಸಿದ ಭೂಕುಸಿತದಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು - ಭಾನು ಪ್ರಸಾದ್ (50), ಅವರ ಪತ್ನಿ ನೀಲಂ ದೇವಿ (45) ಮತ್ತು ಮಗ ವಿಪಿನ್ (28) ಸಾವನ್ನಪ್ಪಿದ್ದಾರೆ. ಚಮೋಲಿ ಜಿಲ್ಲೆಯ ಗೈರ್‌ಸೈನ್ ತೆಹಸಿಲ್‌ನ ಕುಂಖೇಟ್ ಗ್ರಾಮದಲ್ಲಿ ಬುಧವಾರ ಬೆಟ್ಟದ ಅವಶೇಷಗಳು ಮನೆ ಮೇಲೆ ಬಿದ್ದು, ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಡೆಹ್ರಾಡೂನ್‌ನಲ್ಲಿ ಬುಧವಾರದಿಂದ 172 ಮಿಮೀ, ಹರಿದ್ವಾರದ ರೋಶನಾಬಾದ್ 210 ಮಿಮೀ, ರೈವಾಲಾ 163 ಮಿಮೀ, ಹಲ್ದ್ವಾನಿ 140 ಮಿಮೀ, ರೂರ್ಕಿ 112 ಮಿಮೀ, ನರೇಂದ್ರ ನಗರದಲ್ಲಿ 107 ಮಿಮೀ, ಧನೋಲ್ಟಿ 98 ಮಿಮೀ, ಚಕ್ರತಾಲ್ 92 ಮಿಮೀ, ನೈನಿತಾಲ್ 92 ಮಿಮೀ ಮಳೆ ದಾಖಲಾಗಿದೆ.

ಕೇದಾರ ಯಾತ್ರೆ ಸ್ಥಗಿತ: ರುದ್ರಪ್ರಯಾಗವನ್ನು ತಲುಪಿರುವ ಕೇದಾರನಾಥ ಯಾತ್ರಾರ್ಥಿಗಳು ಹವಾಮಾನದಲ್ಲಿ ಸುಧಾರಣೆ ಮತ್ತು ರಸ್ತೆಗಳ ಮರುಸ್ಥಾಪನೆ ಆಗುವವರೆಗೆ ಇರುವಲ್ಲೇ ಉಳಿದುಕೊಳ್ಳಬೇಕೆಂದು ಸೂಚಿಸಲಾಗಿದೆ. ರುದ್ರಪ್ರಯಾಗದಲ್ಲಿ ಮಂದಾಕಿನಿ ಮತ್ತು ಅಲಕನಂದಾ ನದಿಗಳು ಅಪಾಯದ ಅಂಚಿನಲ್ಲಿ ಹರಿಯುತ್ತಿವೆ. 

Tags:    

Similar News