Maha Kumbh Stampede: ಕುಂಭಮೇಳದಲ್ಲಿ ದುರಂತ ಇದೇ ಮೊದಲೆಲ್ಲ; ಇಲ್ಲಿದೆ ಹಿಂದಿನ ವಿವರ
Maha Kumbh Stampede: ಇವೆಲ್ಲದರ ನಡುವೆಯೂ ಕುಂಭಮೇಳ ನಡೆಯುವ ಸ್ಥಳಗಳಲ್ಲಿ ಕಾಲ್ತುಳಿತದಂತಹ ದುರಂತ ಸಂಭವಿಸುತ್ತಿರುವುದು ಇದೇ ಮೊದಲಲ್ಲ ಎಂಬುದನ್ನು ಸ್ಮರಿಸಬೇಕಾಗುತ್ತದೆ. 1954ರಿಂದಲೂ ಹಲವು ಬಾರಿ ಕಾಲ್ತುಳಿತ ಉಂಟಾಗಿ, ಯಾತ್ರಿಕರು ಅಸುನೀಗಿದ ಘಟನೆಗಳು ವರದಿಯಾಗಿವೆ.;
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ ನಡೆಯುತ್ತಿರುವ ತ್ರಿವೇಣಿ ಸಂಗಮದಲ್ಲಿ ಮಂಗಳವಾರ ರಾತ್ರಿ ಭೀಕರ ಕಾಲ್ತುಳಿತ ಸಂಭವಿಸಿದೆ. (Maha Kumbh Stampede) ಘಟನೆಯಲ್ಲಿ 15ಕ್ಕೂ ಹೆಚ್ಚು ಜನ ಮೃತಪಟ್ಟಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಘಟನೆ ದೇಶವನ್ನೇ ಆತಂಕಕ್ಕೆ ದುಡಿದೆ. ದೇಶದ ಮೂಲೆಮೂಲೆಗಳಿಂದ ಈ ಪವಿತ್ರ ಪ್ರದೇಶದಲ್ಲಿ ಜನರು ಹೋಗಿರುವುದರಿಂದ ಮನೆಯವರಿಗೆ ಒಂದು ಕಡೆ ಚಿಂತೆಯಾದರೆ ಮಹಾನ್ ಧಾರ್ಮಿಕ ಕೂಟದಲ್ಲಿ ಇಂಥದ್ದು ನಡೆಯಬಾರದಾಗಿದ್ದು ಎಂಬ ಬೇಸರವೂ ಮೂಡಿದೆ.
ಪ್ರಯಾಗ್ರಾಜ್ ನಗರದಲ್ಲೀಗ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಹಲವಾರು ದಿನಗಳಿಂದ ಜಮಾಯಿಸಿರುವ ಸಾಧು-ಸಂತರು ಕೂಡ ಆತಂಕ್ಕಕೀಡಾಗಿದ್ದಾರೆ. ಇವೆಲ್ಲದರ ನಡುವೆಯೂ ಕುಂಭಮೇಳ ನಡೆಯುವ ಸ್ಥಳಗಳಲ್ಲಿ ಕಾಲ್ತುಳಿತದಂತಹ ದುರಂತ ಸಂಭವಿಸುತ್ತಿರುವುದು ಇದೇ ಮೊದಲಲ್ಲ ಎಂಬುದನ್ನು ಸ್ಮರಿಸಬೇಕಾಗುತ್ತದೆ. 1954ರಿಂದಲೂ ಹಲವು ಬಾರಿ ಕಾಲ್ತುಳಿತ ಉಂಟಾಗಿ, ಯಾತ್ರಿಕರು ಅಸುನೀಗಿದ ಘಟನೆಗಳು ವರದಿಯಾಗಿವೆ.
800 ಮಂದಿ ದುರ್ಮರಣ (1954)
1954ರ ಫೆಬ್ರವರಿ 3ರಂದು ಪ್ರಯಾಗರಾಜ್ ನಲ್ಲಿ (ಹಿಂದಿನ ಅಲಹಾಬಾದ್) ಮೌನಿ ಅಮಾವಾಸ್ಯೆ ದಿನವೇ ದೊಡ್ಡ ಪ್ರಮಾಣದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಪುಣ್ಯಸ್ನಾನ ಮಾಡುವ ವೇಳೆ ಸಂಭವಿಸಿದ ಇದೇ ಮಾದರಿ ಘಟನೆಯಲ್ಲಿ ಸುಮಾರು 800 ಕ್ಕೂ ಅಧಿಕ ಮಂದಿ ಅಸುನೀಗಿದ್ದರು ಎಂಬುದಾಗಿ ವರದಿಯಾಗಿದೆ. ಸಾವಿರಾರು ಜನ ದುರಂತದಲ್ಲಿ ಗಾಯಗೊಂಡಿದ್ದರು ಎಂದು ಹೇಳಲಾಗಿದೆ.
ಹರಿದ್ವಾರದಲ್ಲಿ 200 ಮಂದಿ ಸಾವು (1986)
1986ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದ ವೇಳೆಯೂ ಜನರಿಂದ ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು ಎಂಬುದು ದಾಖಲಾಗಿದೆ.
ನಾಸಿಕ್ 39 ಮಂದಿ ಬಲಿ (2003)
ಮಹಾರಾಷ್ಟ್ರದ ನಾಸಿಕ್ ನಲ್ಲಿ 2003ರಲ್ಲಿ ಕುಂಭಮೇಳ ನಡೆದಿತ್ತು. ಅಲ್ಲಿಯೂ ಕಾಲ್ತುಳಿತದ ದುರಂತ ಸಂಭವಿಸಿತ್ತು. ಗೋದಾವರಿ ನದಿಯಲ್ಲಿ ಪುಣ್ಯಸ್ನಾನ ಮಾಡುವಾಗ ನೂಕುನುಗ್ಗಲು ಉಂಟಾಗಿ ದೊಡ್ಡ ದುರಂತ ಸಂಭವಿಸಿತ್ತು ಮಹಿಳೆಯರು ಸೇರಿ 39 ಮಂದಿ ಮೃತಪಟ್ಟಿರುವುದು ವರದಿಯಾಗಿತ್ತು.
ಪ್ರಯಾಗ್ರಾಜ್ನಲ್ಲಿ 42 ಮಂದಿ ಸಾವು (2013)
2013ರಲ್ಲಿ ಪ್ರಯಾಗರಾಜ್ನಲ್ಲಿ ಕುಂಭಮೇಳ ನಡೆದಾಗ ವೇಳೆ ಅಲ್ಲಿಒನ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಘಟಿಸಿತ್ತು. ಈ ದುರ್ಘಟನೆಯಲ್ಲಿ 42 ಜನ ಮೃತಪಟ್ಟು, 45 ಮಂದಿ ಗಾಯಗೊಂಡಿದ್ದರು.
ಈಗ ನಡೆದಿದ್ದು ಏನು?
ಮೌನಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಗಂಗಾ, ಯಮುನಾ, ಸರಸ್ವತಿಯ ಸಂಗಮ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲೆಂದು ದೇಶದ ಮೂಲೆ ಮೂಲೆಗಳಿಂದಲೂ ಸಾಗರದಂತೆ ಜನ ಪ್ರಯಾಗ್ ರಾಜ್ ಗೆ ಹರಿದುಬಂದಿದ್ದರು. ಸಂಗಮ ಹಾಗೂ ಘಾಟ್ನ ಸುಮಾರು 12 ಕಿ.ಮೀ. ತೀರದುದ್ದಕ್ಕೂ ಕೋಟ್ಯಂತರ ಮಂದಿ ನೆರೆದಿದ್ದರು. ಜನದಟ್ಟಣೆ ಹೇಗಿತ್ತೆಂದರೆ ಪರಸ್ಪರರನ್ನು ತಳ್ಳಿಕೊಂಡೇ ಮುಂದೆ ಸಾಗುವಂಥ ಸ್ಥಿತಿ ನಿರ್ಮಾಣವಾಗಿತ್ತು. ತಡರಾತ್ರಿಯಾದರೂ ಭಕ್ತಾದಿಗಳು ಹರಿದುಬರುತ್ತಲೇ ಇದ್ದು, ರಾತ್ರಿ 1ರಿಂದ 2 ಗಂಟೆಯ ವೇಳೆಗೆ ಘೋರ ದುರಂತವೊಂದು ಸಂಭವಿಸಿತು.