ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್​ ಮುಖಂಡ ಕೆ.ಸಿ. ವೇಣುಗೋಪಾಲ್

ಕೆ.ಸಿ. ವೇಣುಗೋಪಾಲ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, "ತಾಂತ್ರಿಕ ದೋಷದ ಶಂಕೆ ಮತ್ತು ಹದಗೆಟ್ಟ ಹವಾಮಾನದ ಕಾರಣದಿಂದ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಚೆನ್ನೈಗೆ ತಿರುಗಿಸಲಾಯಿತು ಎಂದು ಹೇಳಿದೆ.;

Update: 2025-08-11 06:31 GMT

ಕೇರಳದ ತಿರುವನಂತಪುರದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ, ವಿಮಾನವನ್ನು ಭಾನುವಾರ ಸಂಜೆ ಚೆನ್ನೈಗೆ ತುರ್ತಾಗಿ ಮಾರ್ಗ ಬದಲಾಯಿಸಲಾಗಿದೆ. ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರು, "ನಾವು ಕೂದಲೆಳೆ ಅಂತರದಲ್ಲಿ ಭೀಕರ ದುರಂತದಿಂದ ಪಾರಾಗಿದ್ದೇವೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಘಟನೆಯನ್ನು ವಿವರಿಸಿದ ವೇಣುಗೋಪಾಲ್, "ನಾನು, ಹಲವು ಸಂಸದರು ಮತ್ತು ನೂರಾರು ಪ್ರಯಾಣಿಕರಿದ್ದ ಏರ್ ಇಂಡಿಯಾ AI 2455 ವಿಮಾನವು ಇಂದು ಭೀಕರ ದುರಂತಕ್ಕೆ ಈಡಾಗುತ್ತಿತ್ತು. ತಡವಾಗಿ ಟೇಕ್-ಆಫ್ ಆದ ವಿಮಾನವು, ಮೇಲೇರಿದ ಕೆಲವೇ ಕ್ಷಣಗಳಲ್ಲಿ ಹಿಂದೆಂದೂ ಕಂಡರಿಯದ ತೀವ್ರ ತಲ್ಲಣಕ್ಕೆ (turbulence) ಸಿಲುಕಿತು. ಸುಮಾರು ಒಂದು ಗಂಟೆಯ ನಂತರ, ಪೈಲಟ್ ಅವರು ವಿಮಾನದಲ್ಲಿ ಸಿಗ್ನಲ್ ದೋಷವಿದೆ ಎಂದು ಘೋಷಿಸಿ, ಚೆನ್ನೈಗೆ ಮಾರ್ಗ ಬದಲಾಯಿಸಿದರು" ಎಂದು ಹೇಳಿದ್ದಾರೆ.

ಲ್ಯಾಂಡಿಂಗ್ ವೇಳೆಯೂ ಆಘಾತ

"ನಾವು ಸುಮಾರು ಎರಡು ಗಂಟೆಗಳ ಕಾಲ ಚೆನ್ನೈ ವಿಮಾನ ನಿಲ್ದಾಣದ ಮೇಲೆ ಸುತ್ತುತ್ತಾ ಲ್ಯಾಂಡಿಂಗ್‌ಗೆ ಅನುಮತಿಗಾಗಿ ಕಾದೆವು. ಮೊದಲ ಬಾರಿ ಲ್ಯಾಂಡ್ ಮಾಡಲು ಯತ್ನಿಸಿದಾಗ, ಅದೇ ರನ್‌ವೇಯಲ್ಲಿ ಮತ್ತೊಂದು ವಿಮಾನವಿತ್ತು. ಆ ಕ್ಷಣದಲ್ಲಿ ಪೈಲಟ್ ತೆಗೆದುಕೊಂಡ ಕ್ಷಿಪ್ರ ನಿರ್ಧಾರದಿಂದ ವಿಮಾನವನ್ನು ಮೇಲಕ್ಕೆ ಹಾರಿಸಿ ನಮ್ಮೆಲ್ಲರ ಪ್ರಾಣ ಉಳಿಸಿದರು. ಎರಡನೇ ಪ್ರಯತ್ನದಲ್ಲಿ ವಿಮಾನವು ಸುರಕ್ಷಿತವಾಗಿ ಇಳಿಯಿತು. ನಾವು ಪೈಲಟ್‌ನ ಕೌಶಲದಿಂದ ಬದುಕುಳಿದೆವು. ಪ್ರಯಾಣಿಕರ ಸುರಕ್ಷತೆ ಅದೃಷ್ಟವನ್ನು ಅವಲಂಬಿಸಿರಬಾರದು. ಈ ಬಗ್ಗೆ ತುರ್ತು ತನಿಖೆ ನಡೆಸಬೇಕು" ಎಂದು ವೇಣುಗೋಪಾಲ್ ಆಗ್ರಹಿಸಿದ್ದಾರೆ.

ಏರ್ ಇಂಡಿಯಾ ಸ್ಪಷ್ಟನೆ

ಕೆ.ಸಿ. ವೇಣುಗೋಪಾಲ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, "ತಾಂತ್ರಿಕ ದೋಷದ ಶಂಕೆ ಮತ್ತು ಹದಗೆಟ್ಟ ಹವಾಮಾನದ ಕಾರಣದಿಂದ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಚೆನ್ನೈಗೆ ತಿರುಗಿಸಲಾಯಿತು. ರನ್‌ವೇಯಲ್ಲಿ ಮತ್ತೊಂದು ವಿಮಾನವಿದ್ದ ಕಾರಣದಿಂದಲ್ಲ, ಬದಲಾಗಿ ಚೆನ್ನೈ ಎಟಿಸಿಯ (Air Traffic Control) ಸೂಚನೆಯಂತೆ 'ಗೋ-ಅರೌಂಡ್' (ಲ್ಯಾಂಡಿಂಗ್ ರದ್ದುಗೊಳಿಸಿ ಮತ್ತೆ ಸುತ್ತು ಬರುವುದು) ಮಾಡಲಾಯಿತು. ನಮ್ಮ ಪೈಲಟ್‌ಗಳು ಇಂತಹ ಸಂದರ್ಭಗಳನ್ನು ನಿಭಾಯಿಸಲು ಉತ್ತಮ ತರಬೇತಿ ಪಡೆದಿದ್ದಾರೆ ಮತ್ತು ಅವರು ಪ್ರಮಾಣಿತ ಕಾರ್ಯವಿಧಾನಗಳನ್ನು ಅನುಸರಿಸಿದ್ದಾರೆ" ಎಂದು ಸ್ಪಷ್ಟಪಡಿಸಿದೆ.

ಏರ್‌ಬಸ್ A320 ಮಾದರಿಯ ಈ ವಿಮಾನವು ಎರಡು ಗಂಟೆಗೂ ಹೆಚ್ಚು ಕಾಲ ಹಾರಾಟ ನಡೆಸಿತ್ತು. ತಿರುವನಂತಪುರದಿಂದ ರಾತ್ರಿ 8 ಗಂಟೆಗೆ ಹೊರಟಿದ್ದ ವಿಮಾನವು ರಾತ್ರಿ 10.35ರ ಸುಮಾರಿಗೆ ಚೆನ್ನೈನಲ್ಲಿ ಇಳಿದಿದೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಏರ್ ಇಂಡಿಯಾ ತಿಳಿಸಿದೆ. 

Tags:    

Similar News