NAAC Grading Scam: ನ್ಯಾಕ್ ಮಾನ್ಯತೆ ನೀಡಲು ಲಂಚ; ಏನಿದು ಶೈಕ್ಷಣಿಕ ಕ್ಷೇತ್ರದ ಭ್ರಷ್ಟಾಚಾರ? ಇಲ್ಲಿದೆ ವಿವರ
NAAC Grading Scam: ಈ ಭ್ರಷ್ಟಾಚಾರದ ಜಾಲದಲ್ಲಿ ನ್ಯಾಕ್ ಸಮಿತಿಯ ಸದಸ್ಯೆಯಾದ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಅವರೂ ಇದ್ದಾರೆ. ಈ ಮೂಲಕ ಭ್ರಷ್ಟಾಚಾರದ ಕಳಂಕವನ್ನು ಅವರು ಕರ್ನಾಟಕಕ್ಕೂ ಅಂಟಿಸಿದ್ದಾರೆ.;
ಕಾಲೇಜುಗಳಿಗೆ ಮಾನ್ಯತೆ ನೀಡುವ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ಎನ್ಎಎಸಿ) ಪರಿಶೀಲನಾ ಸಮಿತಿಯ ಹತ್ತು ಸದಸ್ಯರು ಭಾಗಿಯಾಗಿರುವ ಬೃಹತ್ ಹಗರಣವೊಂದನ್ನು ಕೇಂದ್ರ ತನಿಖಾ ದಳ (ಸಿಬಿಐ) ಶುಕ್ರವಾರ ಬಹಿರಂಗ ಮಾಡಿದೆ. ಶಿಕ್ಷಣ ಸಂಸ್ಥೆಗೆ ಎ ++ ನ್ಯಾಕ್ ರೇಟಿಂಗ್ ನೀಡುವುದಕ್ಕೆ ಪ್ರತಿಯಾಗಿ ಈ ಎಲ್ಲ ಆರೋಪಿಗಳು ಲಂಚ ಸ್ವೀಕರಿಸಿದ್ದಾರೆ ಎಂಬುದು ಗೊತ್ತಾಗಿದೆ. ದಾಳಿಯ ವೇಳೆ ಸಿಬಿಐ ದೊಡ್ಡ ಮೊತ್ತದ ನಗದು, ಚಿನ್ನದ ನಾಣ್ಯಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಭ್ರಷ್ಟಾಚಾರದ ಜಾಲದಲ್ಲಿ ನ್ಯಾಕ್ ಸಮಿತಿಯ ಸದಸ್ಯೆಯಾದ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಅವರೂ ಇದ್ದಾರೆ. ಈ ಮೂಲಕ ಭ್ರಷ್ಟಾಚಾರದ ಕಳಂಕವನ್ನು ಅವರು ಕರ್ನಾಟಕಕ್ಕೂ ಅಂಟಿಸಿದ್ದಾರೆ. ಗಾಯತ್ರಿ ಅವರು ದಾವಣಗೆರೆ ವಿಶ್ವವಿದ್ಯಾಲಯದ ಮಾಜಿ ರಿಜಿಸ್ಟ್ರಾರ್ (ಆಡಳಿತ) ಆಗಿದ್ದು, ಸೂಕ್ಷ್ಮ ಜೀವವಿಜ್ಞಾನ ಅಧ್ಯಯನ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕಿ.
ಹಲವರ ವಿರುದ್ಧ ಎಫ್‌ಐಆರ್
ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಮತ್ತು ನ್ಯಾಕ್ ಪರಿಶೀಲನಾ ತಂಡದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ದೃಢಪಡಿಸಿದೆ. ಜತೆಗೆ ಲಂಚ ನೀಡಿದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಮೇಲೂ ಕೇಸ್ ದಾಖಲಾಗಿದೆ. ಉತ್ತಮ ಗ್ರೇಡ್ ಪಡೆಯಲು ಇನ್ನಷ್ಟು ದುಡ್ಡು ನೀಡಿರುವ ಇನ್ನಷ್ಟು ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಸಿಬಿಐ ಹೇಳಿದೆ.
ವಿಜಯವಾಡ, ಚೆನ್ನೈ, ಬೆಂಗಳೂರು, ಪಲಮು, ಸಂಬಲ್ಪುರ, ಭೋಪಾಲ್, ಬಿಲಾಸ್‌ಪುರ, ಗೌತಮ್ ಬುದ್ಧ ನಗರ ಮತ್ತು ನವದೆಹಲಿ ಸೇರಿದಂತೆ ವಿವಿಧ ನಗರಗಳಾದ್ಯಂತ 20 ಸ್ಥಳಗಳಲ್ಲಿ ತನಿಖಾ ಸಂಸ್ಥೆ ದಾಳಿ ನಡೆಸಿದೆ.
ಲಂಚದ ದುಡ್ಡು ವಶಕ್ಕೆ
ಸಿಬಿಐ ಅಧಿಕಾರಿಗಳು 37 ಲಕ್ಷ ರೂಪಾಯಿ, 6 ಲ್ಯಾಪ್‌ಟಾಪ್‌ಗಳು, ಒಂದು ಮೊಬೈಲ್ ಫೋನ್ ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 14 ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಸಿಬಿಐ ಹೇಳಿದೆ. ತನಿಖೆ ನಡೆದರೆ ಇನ್ನಷ್ಟು ವ್ಯಕ್ತಿಗಳು ಬಂಧನಕ್ಕೆ ಒಳಗಾಗುವ ಸಾಧ್ಯತೆಗಳಿವೆ. ವಂಚನೆಯ ಯೋಜನೆಯಲ್ಲಿ ಹಲವಾರು ಪ್ರಮುಖ ಶಿಕ್ಷಣ ತಜ್ಞರು ಮತ್ತು ಆಡಳಿತಗಾರರು ಭಾಗಿಯಾಗಿರುವುದನ್ನು ತನಿಖೆಯು ಬಹಿರಂಗಪಡಿಸಿದೆ.
ಬಂಧಿತ ವ್ಯಕ್ತಿಗಳ ಪಟ್ಟಿ
- ಮಾನಸ್ ಕುಮಾರ್ ಮಿಶ್ರಾ- ನಿರ್ದೇಶಕ, ಜಿಎಲ್ ಬಜಾಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ನ್ಯಾಕ್ ಪರಿಶೀಲನಾ ಸಮಿತಿ ಸದಸ್ಯ
- ಜಿ.ಪಿ.ಸಾರಥಿ ವರ್ಮಾ - ಉಪಕುಲಪತಿ, ಕೆಎಲ್ ಎಜುಕೇಶನ್ ಫೌಂಡೇಶನ್ (ಕೆಎಲ್ಇಎಫ್), ಗುಂಟೂರು
- ಕೊನೇರು ರಾಜಾ ಹರೀನ್ - ಉಪಾಧ್ಯಕ್ಷ, ಕೆಎಲ್ಇಎಫ್
- ಎ. ರಾಮಕೃಷ್ಣ - ನಿರ್ದೇಶಕರು, ಕೆಎಲ್ ವಿಶ್ವವಿದ್ಯಾಲಯ, ಹೈದರಾಬಾದ್
- ಸಮ್ರೇಂದ್ರ ನಾಥ್ ಸಹಾ- ಉಪಕುಲಪತಿ, ರಾಮಚಂದ್ರ ಚಂದ್ರವಂಶಿ ವಿಶ್ವವಿದ್ಯಾಲಯ ಮತ್ತು ನ್ಯಾಕ್ ಪರಿಶೀಲನಾ ಸಮಿತಿ ಅಧ್ಯಕ್ಷ
- ರಾಜೀವ್ ಸಿಜಾರಿಯಾ- ಪ್ರೊಫೆಸರ್, ಜೆಎನ್‌ಯು, ದೆಹಲಿ ಮತ್ತು ನ್ಯಾಕ್ ಪರಿಶೀಲನಾ ಸಮಿತಿಯ ಸದಸ್ಯ ಸಂಯೋಜಕ
- ಡಿ.ಗೋಪಾಲ್ - ಡೀನ್, ಭಾರತ್ ಇನ್‌ಸ್ಟಿಟ್ಯೂಟ್ ಆಫ್ ಲಾ ಮತ್ತು ನ್ಯಾಕ್ ಪರಿಶೀಲನಾ ಸಮಿತಿ ಸದಸ್ಯ
- ರಾಜೇಶ್ ಸಿಂಗ್ ಪವಾರ್ - ಡೀನ್, ಜಾಗರಣ್ ಲೇಕ್ಸಿಟಿ ವಿಶ್ವವಿದ್ಯಾಲಯ, ಭೋಪಾಲ್ ಮತ್ತು ನ್ಯಾಕ್ ಪರಿಶೀಲನಾ ಸಮಿತಿ ಸದಸ್ಯ
- ಗಾಯತ್ರಿ ದೇವರಾಜ್ - ಪ್ರಾಧ್ಯಾಪಕರು, ದಾವಣಗೆರೆ ವಿಶ್ವವಿದ್ಯಾಲಯ ಮತ್ತು ನ್ಯಾಕ್ ಪರಿಶೀಲನಾ ಸಮಿತಿ ಸದಸ್ಯೆ
- ಬುಲು ಮಹಾರಾಣಾ - ಪ್ರೊಫೆಸರ್, ಸಂಭಲ್‌ಪುರ ವಿಶ್ವವಿದ್ಯಾಲಯ ಮತ್ತು ನ್ಯಾಕ್ ಪರಿಶೀಲನಾ ಸಮಿತಿ ಸದಸ್ಯ
ನ್ಯಾಕ್ ಗ್ರೇಡಿಂಗ್ ಹಗರಣ ನಡೆದಿದ್ದು ಹೇಗೆ?
ನ್ಯಾಕ್ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು, ಸಿಕ್ಕಿರುವ ಮಾನ್ಯತೆ ಬದಲಾಯಿಸಲು ಅಥವಾ ಹೆಚ್ಚಿನ ಗ್ರೇಡ್‌ನ ಮಾನ್ಯತೆ ಪಡೆಯಲು ಸಿದ್ಧರಿರುವ ಶಿಕ್ಷಣ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಸಲಹೆಗಾರರು ಸೇರಿದಂತೆ ಪರಿಶೀಲನಾ ಸಮಿತಿಯ ಸದಸ್ಯರು ಹಗರಣಕ್ಕೆ ಅನುಕೂಲ ಮಾಡಿಕೊಡಲು ಮಾತುಕತೆ ನಡೆಸಿದ್ದಾರೆ. ನಿಜವಾದ ಮಾನ್ಯತೆ ಮಾನದಂಡಗಳನ್ನು ಪೂರೈಸಲು ವಿಫಲಗೊಂಡಿರುವ ಸಂಸ್ಥೆಗಳು ಲಂಚ ನೀಡಿ ಉತ್ತಮ ಮಾನದಂಡಗಳನ್ನು ಪಡೆದುಕೊಂಡಿರುವುದೇ ಹಗಣದ ಸಾರಾಂಶ .
ಸಂಸ್ಥೆಗಳು ಹೆಚ್ಚಿನ ಶ್ರೇಣಿಗಳನ್ನು ಪಡೆಯಲು ಬಯಸಿದರೆ ಮೊದಲು ಬೆಲೆಯ ಬಗ್ಗೆ ಮಾತುಕತೆ ನಡೆಸಲಾಗುತ್ತದೆ. ಅಗತ್ಯವಿರುವ ನ್ಯಾಕ್ ಗ್ರೇಡ್ (ಎ, ಎ+, ಎ++) ಆಧಾರದ ಮೇಲೆ ಲಂಚದ ಮೊತ್ತ ಅಂತಿಮಗೊಳಿಸಲಾಗುತ್ತಿತ್ತು. ಬಳಿ ಪಾವತಿ ವಿಧಾನಗಳನ್ನು ನಿರ್ಧರಿಸಲಾಗುತ್ತದೆ. ನಗದು, ಚಿನ್ನ ಅಥವಾ ಇತರ ಪರೋಕ್ಷ ರೀತಿಯಲ್ಲಿ ಲಂಚ ಸಂದಾಯ ಮಾಡಲಾಗುತ್ತದೆ. ಕೆಲವು ಸಂಸ್ಥೆಗಳು ತಪಾಸಣೆಗೆ ಮುಂಚಿತವಾಗಿ ಮುಂಗಡ ಪಾವತಿ ಮಾಡಿವೆ.
ಪೂರ್ವನಿಯೋಜಿತ ನ್ಯಾಕ್ ತಪಾಸಣೆ
ಮೌಲ್ಯಮಾಪನಕ್ಕಾಗಿ ಸಂಸ್ಥೆಗಳಿಗೆ ಭೇಟಿ ನೀಡಲು ನ್ಯಾಕ್ ಪೀರ್ ರಿವ್ಯೂ ತಂಡಗಳನ್ನು ನಿಯೋಜಿಸಲಾಗುತ್ತದೆ. ಹಗರಣದಲ್ಲಿ ಭಾಗಿಯಾಗಿರುವ ಸಂಸ್ಥೆಗಳ ಬಗ್ಗೆ ಭ್ರಷ್ಟ ತಂಡದ ಸದಸ್ಯರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ. ನ್ಯಾಕ್ ಮಾನದಂಡಗಳಿಗೆ ಅನುಗುಣವಾಗಿ ತಿರುಚಿದ ಡೇಟಾ, ಮೂಲಸೌಕರ್ಯ ಮತ್ತು ದಾಖಲೆಗಳನ್ನು ನೀಡಲು ಸಂಸ್ಥೆಗಳು ತಯಾರಿ ನಡೆಸುತ್ತವೆ. ಕೆಲವು ಸಂದರ್ಭಗಳಲ್ಲಿ, ಭೌತಿಕ ತಪಾಸಣೆಗಳು ಕೇವಲ ಔಪಚಾರಿಕವಾಗಿರುತ್ತವೆ. ವರದಿಗಳನ್ನು ಮೊದಲೇ ನಿರ್ಧರಿಸಲಾಗುತ್ತದೆ.
ಲಂಚ ಪಡೆದ ನ್ಯಾಕ್ ಅಧಿಕಾರಿಗಳು ಮೌಲ್ಯಮಾಪನ ವರದಿಗಳಲ್ಲಿ ಹೆಚ್ಚಿನ ಅಂಕಗಳನ್ನು ನೀಡುತ್ತಾರೆ. ಈ ವೇಳೆ ಸಂಶೋಧನೆ, ಬೋಧಕವರ್ಗದ ಅರ್ಹತೆಗಳು, ಮೂಲಸೌಕರ್ಯ ಮತ್ತು ಶೈಕ್ಷಣಿಕ ಕಾರ್ಯಕ್ಷಮತೆಯಲ್ಲಿನ ಕೊರತೆಗಳನ್ನು ಕಡೆಗಣಿಸಲಾಗುತ್ತದೆ.
ಲಂಚದ ಹಣವನ್ನು ನಗದು ರೂಪದಲ್ಲಿ ಅಥವಾ ಮೋಸದ ಕಂಪನಿಗಳ ಮೂಲಕ ವರ್ಗಾಯಿಸುವ ಮೂಲಕ ಅಧಿಕಾರಿಗಳಿಗೆ ವಿತರಿಸಲಾಗುತ್ತದೆ. ಅಕ್ರಮ ವಹಿವಾಟುಗಳನ್ನು ಮರೆಮಾಚಲು ಕೆಲವು ಹಣವನ್ನು ಚಿನ್ನ ಅಥವಾ ಆಸ್ತಿ ಅಥವಾ ರಿಯಲ್ ಎಸ್ಟೇಟ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಮಧ್ಯವರ್ತಿಗಳು ಮತ್ತು ಸಲಹೆಗಾರರು ಹಗರಣಕ್ಕೆ ಪೂರಕವಾಗಿ ತಮ್ಮ ಕಮಿಷನ್ ಪಡೆದುಕೊಳ್ಳುತ್ತಾರೆ.
ಈ ಹಗರಣವು ಭಾರತದ ಶಿಕ್ಷಣ ಮಾನ್ಯತೆ ವ್ಯವಸ್ಥೆಯ ಸಮಗ್ರತೆಯ ಬಗ್ಗೆ ಗಂಭೀರ ಕಳವಳ ಹುಟ್ಟುಹಾಕಿದೆ. ವಂಚನೆಯ ಪೂರ್ಣ ವ್ಯಾಪ್ತಿಯನ್ನು ಬಹಿರಂಗಪಡಿಸಲು ಮತ್ತು ಪಿತೂರಿಯಲ್ಲಿ ಭಾಗಿಯಾಗಿರುವ ಇತರ ಯಾವುದೇ ವ್ಯಕ್ತಿಗಳನ್ನು ಗುರುತಿಸಲು ಸಿಬಿಐ ತನ್ನ ತನಿಖೆಯನ್ನು ಮುಂದುವರಿಸಿದ್ದು, ಇನ್ನಷ್ಟು ಭ್ರಷ್ಟಾಚಾರಿಗಳ ಬಣ್ಣ ಬಯಲಾಗಲಿದೆ.
ನ್ಯಾಕ್ ಎಂದರೇನು?
ನ್ಯಾಕ್ ಎಂದರೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ. ಇದು ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳನ್ನು (ಎಚ್ಇಐ) ಮೌಲ್ಯಮಾಪನ ಮಾಡುವ ಮತ್ತು ಮಾನ್ಯತೆ ನೀಡುವ ಸರ್ಕಾರಿ ಸಂಸ್ಥೆಯಾಗಿದೆ. ಎನ್ಎಎಸಿ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಇದಕ್ಕೆ ಅನುದಾನ ನೀಡುತ್ತದೆ. ನ್ಯಾಕ್ ಮಂಡಳಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಂತಹ ಎಚ್ಇಐಗಳ ಗುಣಮಟ್ಟವನ್ನು ನಿರ್ಣಯಿಸುತ್ತದೆ