Prashant Kishor: 100 ಕೋಟಿ ರೂ.ಗೂ ಅಧಿಕ ; ಚುನಾವಣಾ ಕಾರ್ಯತಂತ್ರ ಶುಲ್ಕದ ವಿವರ ಬಹಿರಂಗಪಡಿಸಿದ ಪ್ರಶಾಂತ್ ಕಿಶೋರ್
ತಮ್ಮ ರಾಜಕೀಯ ಅಭಿಯಾನಗಳ ಹಣದ ಮೂಲದ ಬಗ್ಗೆ ಜನರು ಆಗಾಗ್ಗೆ ಪ್ರಶ್ನಿಸುತ್ತಿದ್ದರು. ಅದು ನನ್ನ ಕಾರ್ಯತಂತ್ರ ಸಲಹೆಯ ದುಡಿಮೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.;
ಬಿಹಾರದಲ್ಲಿ ತಮ್ಮ ರಾಜಕೀಯ ಪಕ್ಷ ʼಜನ್ ಸೂರಜ್ʼ ಪಕ್ಷ ಸ್ಥಾಪಿಸುವ ಮೊದಲು ಪ್ರಶಾಂತ್ ಕಿಶೋರ್ ಪಕ್ಷಗಳಿಗೆ ಚುನಾವಣಾ ಕಾರ್ಯತಂತ್ರ ರೂಪಿಸಿಕೊಡುತ್ತಿದ್ದರು. ಅದಕ್ಕಾಗಿ ಅವರು ಎಷ್ಟು ಮೊತ್ತ ಪಡೆಯುತ್ತಿದ್ದರು ಎಂಬ ಪಶ್ನೆ ಹಲವು ಕಾಲಗಳಿಂದ ಚಾಲ್ತಿಯಲ್ಲಿದೆ. ಈ ಪ್ರಶ್ನೆಗೆ ಅವರೀಗ ಉತ್ತರ ಕೊಟ್ಟಿದ್ದಾರೆ. ಬಿಹಾರ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಪರ ರ್ಯಾಲಿಯಲ್ಲಿ ಮಾತನಾಡಿದ ಅವರು, ಒಂದು ಚುನಾವಣಾಯ ಸಲಹೆಗಾಗಿ 100 ಕೋಟಿ ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚು ಪಡೆಯುತ್ತಿದ್ದೆ ಎಂಬುದಾಗಿ ಬಹಿರಂಗಪಡಿಸಿದ್ದಾರೆ.
ಅಕ್ಟೋಬರ್ 31 ರಂದು ನಡೆದ ಬಿಹಾರ ಉಪಚುನಾವಣೆಯ ಪ್ರಚಾರದ ಸಮಯದಲ್ಲಿ ಕಿಶೋರ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬೆಲಗಂಜ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ಅಭಿಯಾನಗಳ ಹಣದ ಮೂಲದ ಬಗ್ಗೆ ಜನರು ಆಗಾಗ್ಗೆ ಪ್ರಶ್ನಿಸುತ್ತಿದ್ದರು. ಅದು ನನ್ನ ಕಾರ್ಯತಂತ್ರ ಸಲಹೆಯ ದುಡಿಮೆ ಎಂದು ಹೇಳಿದ್ದಾರೆ.
ವಿವಿಧ ರಾಜ್ಯಗಳ ಹತ್ತು ಸರ್ಕಾರಗಳು ನನ್ನ ಕಾರ್ಯತಂತ್ರಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ. ನನ್ನ ಪಕ್ಷದ ಪ್ರಚಾರಕ್ಕಾಗಿ ಶಾಮಿಯಾನ ಮತ್ತು ಕ್ಯಾನೋಪಿಗಳನ್ನು ಹಾಕಲು ನನ್ನ ಬಳಿ ಸಾಕಷ್ಟು ಹಣವಿಲ್ಲ ಎಂದು ನೀವು ಭಾವಿಸುತ್ತೀರಾ? ನಾನು ಅಷ್ಟೊಂದು ದುರ್ಬಲ ಎಂದು ನೀವು ಅಂದುಕೊಳ್ಳಬಾರದು. ಯಾಕೆಂದರೆ ನನ್ನ ಶುಲ್ಕದ ಬಗ್ಗೆ ಯಾರಿಗೂ ಗೊತ್ತಿಲ್ಲ. ಕೇವಲ ಒಂದು ಚುನಾವಣೆಯಲ್ಲಿ ನಾನು ಯಾರಿಗಾದರೂ ಸಲಹೆ ನೀಡಿದರೆ ನನ್ನ ದರ 100 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು. ಒಂದು ಚುನಾವಣಾ ಸಲಹೆಯ ಮೂಲಕ ನಾನು ಮುಂದಿನ ಎರಡು ವರ್ಷ ನನ್ನ ಪಕ್ಷದ ಪ್ರಚಾರಕ್ಕೆ ಹಣ ವಿನಿಯೋಗಿಸುವುದನ್ನು ಮುಂದುವರಿಸಬಹುದು" ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಬೆಲಗಂಜ್ ಹೊರತುಪಡಿಸಿ, ಇಮಾಮ್‌ಗಂಜ್ , ರಾಮ್‌ಗಢ್ ಮತ್ತು ತರಾರಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ವರ್ಷದ ಆರಂಭದಲ್ಲಿ ಲೋಕಸಭೆಗೆ ಆಯ್ಕೆಯಾದ ಆಯಾ ಶಾಸಕರು ರಾಜೀನಾಮೆ ನೀಡಿದಾಗ ಈ ಎಲ್ಲಾ ಸ್ಥಾನಗಳು ಖಾಲಿಯಾಗಿದ್ದವು. ಜನ್ ಸೂರಜ್ ಉಪಚುನಾವಣೆಗೆ ತಯಾರಿ ನಡೆಸುತ್ತಿದ್ದು. ಪ್ರಶಾಂತ್ ಕಿಶೋರ್ ಎಲ್ಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕಡೆಗೆ ಗಮನ ಹರಿಸಿದ್ದಾರೆ.
ಮುಸ್ಲಿಂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಹೊರತು ಕೇಂದ್ರವು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಜನ್ ಸೂರಜ್ ಮುಖ್ಯಸ್ಥರು ಶುಕ್ರವಾರ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ, ಕಾನೂನನ್ನು ಪರಿಚಯಿಸುವ ಮೊದಲು ಸರ್ಕಾರವು ಅದರಿಂದ ಪರಿಣಾಮ ಬೀರುವ ಜನರ ವಿಶ್ವಾಸ ಗಳಿಸಬೇಕು ಎಂದು ಸಲಹೆ ನೀಡಿದ್ದಾರೆ.
ಹಲವು ಪಕ್ಷಗಳೊಂದಿಗೆ ಕೆಲಸ
ಪ್ರಶಾಂತ್ ಕಿಶೋರ್ ಭಾರತದ ಹಲವಾರು ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ರಾಜಕೀಯ ತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದ ಪ್ರಮುಖ ತಂತ್ರಜ್ಞರಾಗುವ ಮೂಲಕ ಅವರು ಬೆಳಕಿಗೆ ಬಂದರು, ಇದು ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಾಧಿಸಲು ಸಹಾಯ ಮಾಡಿತ್ತು.
ಪ್ರಶಾಂತ್ ಕಾಂಗ್ರೆಸ್‌ನೊಂದಿಗೂ ಕೆಲಸ ಮಾಡಿದ್ದರು. 2017 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ದಾರಿ ಮಾಡಿಕೊಟ್ಟಿದ್ದರು. 2019 ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗೆ ಅವರು ಜಗನ್ ಮೋಹನ್ ರೆಡ್ಡಿ ಅವರಿಗೆ ಸಲಹೆ ನೀಡಿದ್ದರು. ಇದರ ಪರಿಣಾಮವಾಗಿ ವೈಎಸ್‌ಆರ್‌ಪಿಗೆ ದೊಡ್ಡ ಗೆಲುವು ಸಿಕ್ಕಿತ್ತು. 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಅಧಿಕಾರವನ್ನು ಉಳಿಸಿಕೊಳ್ಳಲು ಸಹಾಯ ಮಾಡುವಲ್ಲಿ ಅವರ ಕಾರ್ಯತಂತ್ರವು ಪ್ರಮುಖ ಪಾತ್ರ ವಹಿಸಿದೆ.