ನವದೆಹಲಿ, ಜೂನ್ 26- ತುರ್ತು ಪರಿಸ್ಥಿತಿಯನ್ನು ಸದನದಲ್ಲಿ ಖಂಡಿಸಿದ ಸ್ಪೀಕರ್ ಓಂ ಬಿರ್ಲಾ ಅವರನ್ನು ಶ್ಲಾಘಿಸಿದ ಪ್ರಧಾನಿ, ಆ ದಿನಗಳಲ್ಲಿ ನೋವು ಅನುಭವಿಸಿದ ಎಲ್ಲರನ್ನು ಗೌರವಿಸಲು ಒಂದು ಕ್ಷಣ ಮೌನಾಚರಣೆ ಮಾಡುವುದು ಪ್ರಶಂಸನೀಯ ವರ್ತನೆಯಾಗಲಿದೆ ಎಂದು ಬುಧವಾರ ಹೇಳಿದರು.
ಬಿರ್ಲಾ ಅವರು ಸ್ಪೀಕರ್ ಆಗಿ ಆಯ್ಕೆಯಾದ ಸ್ವಲ್ಪ ಸಮಯದ ನಂತರ ತುರ್ತು ಪರಿಸ್ಥಿತಿಯನ್ನು ಖಂಡಿಸುವ ನಿರ್ಣಯವನ್ನು ಓದಿದರು ಮತ್ತು ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಅಂದಿನ ಸರ್ಕಾರದ ವಿರುದ್ಧ ಛೀಮಾರಿ ಹಾಕಿದರು.
ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆಯ ನಡುವೆಯೇ ಹೆಚ್ಚಿನ ಸಂಖ್ಯೆಯ ಸಂಸದರು ಎದ್ದು ನಿಂತು ಕೆಲವು ಕ್ಷಣ ಮೌನಾಚರಣೆ ಮಾಡಿದರು.
ʻಗೌರವಾನ್ವಿತ ಸ್ಪೀಕರ್ ಅವರು ತುರ್ತು ಪರಿಸ್ಥಿತಿಯನ್ನು ಬಲವಾಗಿ ಖಂಡಿಸಿದ್ದಾರೆ. ಆ ದಿನಗಳಲ್ಲಿ ನಡೆದ ಅತಿರೇಕಗಳನ್ನು ಎತ್ತಿ ತೋರಿಸಿದ್ದಾರೆ ಮತ್ತು ಪ್ರಜಾಪ್ರಭುತ್ವವನ್ನು ಕತ್ತು ಹಿಸುಕಿದ ವಿಧಾನವನ್ನು ಉಲ್ಲೇಖಿಸಿದ್ದಾರೆ. ಇದರಿಂದ ನನಗೆ ಸಂತೋಷವಾಗಿದೆ,ʼ ಎಂದು ಮೋದಿ ಎಕ್ಸ್ ನಲ್ಲಿ ಬರೆದಿದ್ದಾರೆ.
ʻ50 ವರ್ಷ ಹಿಂದೆ ತುರ್ತುಪರಿಸ್ಥಿತಿಯನ್ನು ಹೇರಲಾಗಿತ್ತು. ಇಂದಿನ ಯುವಕರು ಅದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ, ಸಂವಿಧಾನವನ್ನು ತುಳಿದಾಗ, ಸಾರ್ವಜನಿಕ ಅಭಿಪ್ರಾಯವನ್ನು ಹತ್ತಿಕ್ಕಿದಾಗ ಮತ್ತು ಸಂಸ್ಥೆಗಳು ನಾಶವಾದಾಗ ಏನಾಗುತ್ತದೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆ,ʼ ಎಂದು ಅವರು ಹೇಳಿದರು.
ʻತುರ್ತುಪರಿಸ್ಥಿತಿ ಸಂದರ್ಭದಲ್ಲಿ ನಡೆದ ಘಟನೆಗಳು ಸರ್ವಾಧಿಕಾರ ಹೇಗಿರುತ್ತದೆ ಎನ್ನುವುದಕ್ಕೆ ನಿದರ್ಶನ,ʼ ಎಂದು ಮೋದಿ ಹೇಳಿದರು.