Election 2024| ಮಹಾರಾಷ್ಟ್ರ- ಮಹಾಯುತಿಯಲ್ಲಿ ಆಂತರಿಕ ಕಲಹ

ಬಿಜೆಪಿ ಪರವಾಗಿ ಸಂಧಾನದ ನೇತೃತ್ವ ವಹಿಸಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಹೆಚ್ಚು ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವ ಇಬ್ಬರು ಪಾಲುದಾರರನ್ನು ಸಮಾಧಾನ ಪಡಿಸುವುದು ಕಷ್ಟದ ಕೆಲಸವಾಗಿದೆ.;

Update: 2024-08-27 12:39 GMT

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಘೋಷಣೆ ಆಗಬೇಕಿದೆ. ಬಿಜೆಪಿ, ಶಿವಸೇನೆ (ಶಿಂಧೆ ಬಣ) ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಒಳಗೊಂಡಿರುವ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿನ ಬಿರುಕು ಕಳೆದ ಕೆಲವು ವಾರಗಳಿಂದ ಮುನ್ನೆಲೆಗೆ ಬರುತ್ತಿದೆ. 

ಮಹಾಯುತಿ ಪಾಲುದಾರರು ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ವಿರುದ್ಧ ಸ್ಪರ್ಧಿಸಲಿದ್ದಾರೆ. ಸೀಟು ಹಂಚಿಕೆ ಸಮಾಲೋಚನೆ ನಡೆಯುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಬಿರುಕು ಇನ್ನಷ್ಟು ಹೆಚ್ಚ ಬಹುದು. ಬಿಜೆಪಿ ಪರವಾಗಿ ಸಂಧಾನದ ನೇತೃತ್ವ ವಹಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಹೆಚ್ಚು ಸ್ಥಾನಕ್ಕೆ ಪ್ರಯತ್ನಿಸುತ್ತಿರುವ ಇಬ್ಬರು ಪಾಲುದಾರರನ್ನು ಸಮಾಧಾನಪಡಿಸುವುದು ಕಷ್ಟದ ಕೆಲಸವಾಗಿದೆ. 

ಮಹಾಯುತಿ ಮಿತ್ರರಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತು ರಾಜಕೀಯ ವಲಯದಲ್ಲಿ ಈಗಾಗಲೇ ಇದೆ. ಕಳೆದ ವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರತ್ನಗಿರಿಯಲ್ಲಿ ಜನಪ್ರಿಯ ಯೋಜನೆ 'ಮಝಿ ಲಡ್ಕಿ ಬಹಿನ್' (ನನ್ನ ಪ್ರೀತಿಯ ಸಹೋದರಿ)ಯ ಉತ್ತೇಜನಕ್ಕೆ ನಡೆಸಿದ ಕಾರ್ಯಕ್ರಮದಲ್ಲಿ ಎನ್‌ಸಿಪಿ ನಾಯಕರು ಭಾಗವಹಿಸಿದ್ದರು; ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಶಿಂಧೆ ವಾಗ್ದಾಳಿ: ಕೊಂಕಣ ಪ್ರದೇಶದ ಹಿರಿಯ ಶಿವಸೇನಾ (ಶಿಂಧೆ ಬಣ) ನಾಯಕ ರಾಮದಾಸ್ ಕದಂ ಅವರು ಇತ್ತೀಚೆಗೆ ಮುಂಬೈ-ಗೋವಾ ಹೆದ್ದಾರಿಯ ದಯನೀಯ ಸ್ಥಿತಿ ಬಗ್ಗೆ ಮಾತನಾಡುವಾಗ ಬಿಜೆಪಿ ನಾಯಕ ಮತ್ತು ಲೋಕೋಪಯೋಗಿ ಸಚಿವ ರವೀಂದ್ರ ಚವಾಣ್ ಅವರನ್ನು ʻನಿಷ್ಪ್ರಯೋಜಕ ಮಂತ್ರಿʼ ಎಂದು ಕರೆದರು. 

ʻ14 ವರ್ಷಗಳ ಕಾಯುವಿಕೆಯ ನಂತರ ಭಗವಾನ್ ರಾಮನ ವನವಾಸ ಕೊನೆಗೊಂಡಿತು. ಆದರೆ, ಮುಂಬೈ-ಗೋವಾ ಹೆದ್ದಾರಿಯಲ್ಲಿ ಸಮಸ್ಯೆಗಳು ಮುಂದುವರಿದಿವೆ. ನಾವು ಉತ್ತಮ ರಸ್ತೆಗಳಿಂದ ವಂಚಿತರಾಗಿದ್ದೇವೆ. ಸಚಿವ ರವೀಂದ್ರ ಚವಾಣ್‌ ನಿಷ್ಪ್ರಯೋಜಕರು. ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಚವಾಣ್ ಅವರ ರಾಜೀನಾಮೆ ಕೇಳಬೇಕು ಎಂದು ಕೋರುತ್ತೇನೆ,ʼ ಎಂದು ಹೇಳಿದರು. 

ಅಸಮಾಧಾನಗೊಂಡ ಚವಾಣ್, ಕದಂ ಅವರನ್ನು ʻಅನಕ್ಷರಸ್ಥʼ ಎಂದು ಕರೆದರು. ʻನೀವು ನಿಮ್ಮ ಭಾಷೆ ಸರಿಪಡಿಸಿಕೊಳ್ಳಿ. ನಾನು ಯಾರಿಂದಲೂ ಇಂತಹ ನಿಂದನೆ ಸಹಿಸುವುದಿಲ್ಲ. ನಿಮಗೆ ಧೈರ್ಯವಿದ್ದರೆ ಖುದ್ದಾಗಿ ಬಂದು ನನ್ನನ್ನು ಭೇಟಿ ಮಾಡಿ. ಈ ವಿಷಯ ರಾಷ್ಟ್ರೀಯ ಹೆದ್ದಾರಿಗಳ ಕೇಂದ್ರ ಸಚಿವಾಲಯಕ್ಕೆ ಸಂಬಂಧಿಸಿದೆ. 15 ವರ್ಷ ಸಚಿವರಾಗಿದ್ದ ಕದಂ, ಕೊಂಕಣಕ್ಕೆ ಏನು ಮಾಡಿದ್ದಾರೆ? ನಾನು ಅವರ ಭಾಷೆಯನ್ನೇ ಮಾತನಾಡಬಲ್ಲೆ,ʼ ಎಂದು ಹೇಳಿದರು. 

ಇಬ್ಬರು ಹಿರಿಯ ನಾಯಕರ ಮಾತಿನ ಚಕಮಕಿ ಫಡ್ನವೀಸ್‌ ಅವರಿಗೆ ಸರಿ ಹೋಗಲಿಲ್ಲ. ʻಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಜೊತೆ ಈ ಬಗ್ಗೆ ಮಾತಾಡುತ್ತೇನೆ. ಸಾರ್ವಜನಿಕವಾಗಿ ಇಂತಹ ಹೇಳಿಕೆ ನೀಡುವಾಗ ಕದಂ ಯಾವ ಮೈತ್ರಿ ತತ್ವವನ್ನು ಅನುಸರಿಸುತ್ತಾರೆ? ಅವರು ನನಗೆ ವಿಷಯ ತಿಳಿಸಬಹುದಿತ್ತು. ಅದೇನೇ ಇದ್ದರೂ, ಅವರು ಪ್ರಸ್ತಾಪಿಸಿದ ಸಮಸ್ಯೆಗಳನ್ನು ನಾನು ಪರಿಶೀಲಿಸುತ್ತೇನೆ,ʼ ಎಂದು ಸುದ್ದಿಗಾರರಿಗೆ ತಿಳಿಸಿದರು. 

ಉನ್ನತ ಹುದ್ದೆಗೆ ಪೈಪೋಟಿ: 2022 ರಲ್ಲಿ ಶಿವಸೇನೆಯನ್ನು ವಿಭಜಿಸಿದ ಏಕನಾಥ್ ಶಿಂಧೆ ಮುಖ್ಯಮಂತ್ರಿ ಆಗಬೇಕೆಂಬ ಆಸೆಯನ್ನು ಈಡೇರಿಸಿಕೊಂಡಿದ್ದರೆ, ದೀರ್ಘಾವಧಿಯಿಂದ ಈ ಹುದ್ದೆ ಮೇಲೆ ಕಣ್ಣಿಟ್ಟಿರುವ ಅಜಿತ್ ಪವಾರ್ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.

ಈ ನಾಯಕರ ನಡುವೆ ಮೌನ ಜಗಳ ನಡೆಯುತ್ತಿದೆ ಎಂದು ವರದಿಗಳು ಸೂಚಿಸುತ್ತವೆ. ನಿರ್ಣಾಯಕ ಹಣಕಾಸು ಖಾತೆಯ ಸಚಿವರಾದ ಅಜಿತ್ ಅವರು ವಿಧಾನಸಭೆ ಚುನಾವಣೆಗೆ ಮುನ್ನ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. 

ಅಜಿತ್ ಅವರು ತಮ್ಮ ಮಹತ್ವಾಕಾಂಕ್ಷೆ ಬಗ್ಗೆ ಮುಕ್ತವಾಗಿದ್ದಾರೆ. ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಫಡ್ನವೀಸ್ ಮತ್ತು ಶಿಂಧೆ ಅವರ ಉಪಸ್ಥಿತಿಯಲ್ಲಿ ಸುದೀರ್ಘವಾಗಿ ಮಾತನಾಡಿದ್ದಾರೆ. ಅವರ ʻಕಿರಿಯʼ ಮುಂದೆ ಹೋಗಿ ಮುಖ್ಯಮಂತ್ರಿಯಾದರು. ತಾನು ಹಿಂದೆ ಉಳಿದೆ ಎಂದು ಹೇಳಿದರು. ಫಡ್ನವೀಸ್ ಅವರು 2014 ರಿಂದ 2019 ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದರು.

ʻಲಡ್ಕಿ ಬಹಿನ್ʼ ಯೋಜನೆಯ ಶ್ರೇಯಕ್ಕಾಗಿ ಶಿಂಧೆ ಮತ್ತು ಅಜಿತ್ ಸ್ಪರ್ಧಿಸುತ್ತಿದ್ದಾರೆ. ಅಜಿತ್ ಅದನ್ನು ʻಮಝಿ ಲಡ್ಕಿ ಬಹಿನ್ʼ (ನನ್ನ ಪ್ರೀತಿಯ ಸಹೋದರಿ) ಎಂದು ಪ್ರಚಾರ ಮಾಡುತ್ತಿದ್ದಾರೆ. ಶಿಂಧೆ ಅದೇ ಯೋಜನೆಯನ್ನು ʻಮುಖ್ಯಮಂತ್ರಿ ಲಡ್ಕಿ ಬಹಿನ್ ಯೋಜನೆ' ಎಂದು ಪ್ರಚಾರ ಮಾಡುತ್ತಿದ್ದಾರೆ.

ಇಬ್ಬರ ನಡುವಿನ ಶೀತಲ ಸಮರ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ಅಜಿತ್ ಮತ್ತು ಶಿಂಧೆ ಪರಸ್ಪರ ಸ್ವೀಕರಿಸುವ ಕಡತಗಳನ್ನು ವಾರಗಟ್ಟಲೆ ಇರಿಸಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ. ಶಿಂಧೆ ಬಣದ ಶಾಸಕರು ಅಜಿತ್ ಪವಾರ್ ಅವರು ತಮ್ಮ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಹಣ ಮಂಜೂರು ಮಾಡಿದರು ಮತ್ತು ಮುಖ್ಯಮಂತ್ರಿಗಳ ಅಡಿಯಲ್ಲಿರುವ ನಗರಾಭಿವೃದ್ಧಿ ಮತ್ತು ಇತರ ಇಲಾಖೆಗಳಿಗೆ ಅನುದಾನ ನಿರಾಕರಿಸಿದರು ಎಂದು ಆರೋಪಿಸಿದ್ದಾರೆ.

ಪುಣೆಯಲ್ಲಿ ಬಿಜೆಪಿ ವಿರುದ್ಧ ಎನ್‌ಸಿಪಿ: ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕಳೆದ ಕೆಲವು ವಾರಗಳಲ್ಲಿ ಪುಣೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಮುಖಾಮುಖಿಯಾಗಿವೆ.

ಇತ್ತೀಚೆಗೆ ಪುಣೆ ಜಿಲ್ಲೆಯ ಜುನ್ನಾರ್ ಪ್ರದೇಶದಲ್ಲಿ ಅಜಿತ್ ಪವಾರ್ ಅವರ ಜನ್ ಸಮ್ಮಾನ್ ಯಾತ್ರೆಗೆ ಬಿಜೆಪಿ‌ ಗುಂಪು ಕಪ್ಪು ಬಾವುಟ ಬೀಸಿತು. ಅಜಿತ್ ಪವಾರ್ ಅವರು ಅಧಿಕೃತ ಕಾರ್ಯಕ್ರಮಕ್ಕೆ ಮಿತ್ರಪಕ್ಷಗಳನ್ನು ʻಬದಿಗೆ ಸರಿಸಿದರುʼ ಎಂದು ದೂಷಿಸಿದರು. 

ಈ ಕಾರ್ಯಕ್ರಮಗಳಲ್ಲಿ ಅಣುಶಕ್ತಿ ನಗರದ ಎನ್‌ಸಿಪಿ ಶಾಸಕ ನವಾಬ್ ಮಲಿಕ್ ಅವರ ಉಪಸ್ಥಿತಿಯು ಬಿಜೆಪಿಗೆ ಇಷ್ಟವಾಗಿರಲಿಕ್ಕಿಲ್ಲ. ಮಲಿಕ್ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿದ್ದು, ಪ್ರಸ್ತುತ ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ. ಅಜಿತ್ ಪವಾರ್ ಅವರು ಮಲಿಕ್ ಅವರ ಪುತ್ರಿ ಸನಾ ಅವರನ್ನು ಪಕ್ಷದ ವಕ್ತಾರರನ್ನಾಗಿ ನೇಮಿಸಿದ್ದಾರೆ. ಆಡಳಿತಾರೂಢ ಮೈತ್ರಿಕೂಟದಲ್ಲಿ ಮಲಿಕ್ ಅವರನ್ನು ಸೇರಿಸಿಕೊ‌ಳ್ಳಬಾರದು ಎಂದು ಫಡ್ನವೀಸ್ ಕಳೆದ ವರ್ಷ ಅಜಿತ್‌ಗೆ ಪತ್ರ ಬರೆದಿದ್ದರು.

ಮತ್ತೊಂದು ನಿದರ್ಶನವೆಂದರೆ, ಬಿಜೆಪಿಯ ಮಾಜಿ ಶಾಸಕ ಜಗದೀಶ್ ಮುಲಿಕ್ ಅವರು ಎನ್‌ಸಿಪಿ ವಡ್ಗಾಂವ್ ಶೇರಿ ಶಾಸಕ ಸುನೀಲ್ ಟಿಂಗ್ರೆ ಅವರು ಅಭಿವೃದ್ಧಿ ಕಾರ್ಯಗಳಲ್ಲಿ ಮೈತ್ರಿ ಪಾಲುದಾರರಿಗೆ ಶ್ರೇಯಸ್ಸು ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ವಡ್ಗಾಂವ್ ಶೇರಿಯಲ್ಲಿ ಇತ್ತೀಚೆಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು 300 ಕೋಟಿ ರೂ. ಸರ್ಕಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಆದರೆ, ಈ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳಲ್ಲಿ ಮಹಾಯುತಿ ಪಾಲುದಾರರ ನಾಯಕರ ಹೆಸರು ಇರಲಿಲ್ಲ.

ಮತದಾರರ ನಕಲಿ ನೋಂದಣಿ: ಮಹಾರಾಷ್ಟ್ರದ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ಮತ್ತು ಶಿಂಧೆ ನೇತೃತ್ವದ ಶಿವಸೇನೆಯ ನಾಯಕ ಅಬ್ದುಲ್ ಸತ್ತಾರ್ ವಿರುದ್ಧ ಮತದಾರರ ನಕಲಿ ನೋಂದಣಿಗೆ ಅನುಕೂಲ ಮಾಡಿದ್ದಾರೆ ಎಂದು ಆರೋಪಿಸಿ, ಬಿಜೆಪಿ ನಾಯಕರು ದೂರು ದಾಖಲಿಸಿದ್ದಾರೆ. 

ಸತ್ತಾರ್‌ ಅವರ ಕ್ಷೇತ್ರದಲ್ಲಿ 50,000 ಮತದಾರರು ಸೇರ್ಪಡೆಗೊಂಡಿದ್ದಾರೆ. ಅವರೆಲ್ಲರು ಸಂಬಂಧಿಕರು ಅಥವಾ ಅವರ ಸಂಸ್ಥೆಗಳ ನೌಕರರು ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿಯ ರಾಜ್ಯ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ಇದ್ರಿಸ್ ಮುಲ್ತಾನಿ ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿ ಸುರೇಶ್ ಬಣಕಾರ್ ಅವರು ಛತ್ರಪತಿ ಸಂಭಾಜಿ ನಗರ ಜಿಲ್ಲಾಧಿಕಾರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

ಸತ್ತಾರ್ ಪ್ರತಿನಿಧಿಸುವ ಸಿಲ್ಲೋಡ್ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಬೇಕು ಎಂದು ಇದ್ರಿಸ್ ಮುಲ್ತಾನಿ ಒತ್ತಾಯಿಸಿದ್ದಾರೆ. ‌ʻಅದನ್ನು ಶಿಂಧೆ ಬಣಕ್ಕೆ ನೀಡಬಾರದು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ರಾವ್ಸಾಹೇಬ್ ದಾನ್ವೆ ಪರ ಸತ್ತಾರ್ ಕೆಲಸ ಮಾಡಲಿಲ್ಲ,ʼ ಎಂದು ಮುಲ್ತಾನಿ ಹೇಳಿದ್ದರು.


Tags:    

Similar News