Badlapur Encounter| ಆರೋಪಿ ಸಾವು; ಪ್ರತಿಪಕ್ಷಗಳಿಂದ ತನಿಖೆಗೆ ಆಗ್ರಹ
ಮುಂಬೈ: ಬದ್ಲಾಪುರ ಶಾಲೆಯ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್ ಶಿಂಧೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಪ್ರತಿಪಕ್ಷಗಳು ದೂರಿವೆ.
ಆತ್ಮರಕ್ಷಣೆಗೆ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಉಪ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದರು.
ಅಕ್ಷಯ್ ಶಿಂಧೆಯನ್ನು ತನಿಖೆಗೆ ತಲೋಜಾ ಜೈಲಿನಿಂದ ಬದ್ಲಾಪುರಕ್ಕೆ ಕರೆದೊಯ್ಯುತ್ತಿದ್ದಾಗ, ಮುಂಬ್ರಾ ಬೈಪಾಸ್ ಸಮೀಪ ಪೊಲೀಸರಿಂದ ಬಂದೂಕು ಕಸಿದುಕೊಂಡು ಸಹಾಯಕ ಇನ್ಸ್‌ಪೆಕ್ಟರ್ ಮೇಲೆ ಗುಂಡು ಹಾರಿಸಿದ್ದಾನೆ. ಬೆಂಗಾವಲು ತಂಡದಲ್ಲಿದ್ದ ಪೊಲೀಸ್ ಅಧಿಕಾರಿ ಹಾರಿಸಿದ ಗುಂಡಿಗೆ ಬಲಿಯಾದರು ಎಂದು ಪೊಲೀಸರು ಹೇಳಿದ್ದರು.
ʻಅಕ್ಷಯ್ ಶಿಂಧೆ ಅವರ ಮಾಜಿ ಪತ್ನಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ತನಿಖೆಗೆ ಕರೆದೊಯ್ಯುತ್ತಿದ್ದಾಗ ಪೊಲೀಸ್ ಸಿಬ್ಬಂದಿಯ ಗನ್ ಕಸಿದುಕೊಂಡು ಗುಂಡು ಹಾರಿಸಿದ್ದಾರೆ. ಪೊಲೀಸರು ಆತ್ಮರಕ್ಷಣೆಗೆ ಹಾರಿಸಿದ ಗುಂಡಿಗೆ ಬಲಿಯಾಗಿದ್ದಾರೆ,ʼ ಎಂದು ಸಿಎಂ ಶಿಂಧೆ ತಿಳಿಸಿದ್ದರು.
ಸಾಕ್ಷ್ಯ ನಾಶಪಡಿಸುವ ಪ್ರಯತ್ನ: ರಾಷ್ಟ್ರೀಯ ಆಕ್ರೋಶಕ್ಕೆ ಕಾರಣವಾದ ಪ್ರಕರಣದಲ್ಲಿ ಸಾಕ್ಷ್ಯವನ್ನು ನಾಶಪಡಿಸುವ ಕ್ರಮ ಇದಾಗಿದೆ ಎಂದು ಪ್ರತಿಪಕ್ಷಗಳು ಕೇಳಿವೆ.
ʻಅಕ್ಷಯ್ ಶಿಂಧೆ ಅವರ ಕೈಗಳನ್ನು ಪೊಲೀಸರು ಕಟ್ಟಿರಲಿಲ್ಲವೇ? ಅವರು ಬಂದೂಕನ್ನು ಹೇಗೆ ಕಿತ್ತುಕೊಂಡರು? ಈ ಪ್ರಕರಣದ ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತೇವೆ,ʼ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷದ ವಿಜಯ್ ವಾಡೆತ್ತಿವಾರ್ ಹೇಳಿದರು.
ʻಬಿಜೆಪಿ ಸಂಯೋಜಿತ ಶಾಲೆಯ ಆಡಳಿತದ ವಿರುದ್ಧ ಯಾವುದೇ ಕ್ರಮವಿಲ್ಲ. ಆದರೆ, ಆರೋಪಿಯನ್ನು ಅನುಮಾನಾಸ್ಪದವಾಗಿ ಗುಂಡಿಕ್ಕಿ ಕೊಲ್ಲಲಾಗಿದೆ. ನಮಗೆ ಬದ್ಲಾಪುರ ಪೊಲೀಸರ ಮೇಲೆ ನಂಬಿಕೆ ಇಲ್ಲ,ʼ ಎಂದು ಹೇಳಿದರು.
ಶಿವಸೇನೆ (ಯುಬಿಟಿ) ವಕ್ತಾರೆ ಸುಷ್ಮಾ ಅಂಧಾರೆ ಅವರು 2019ರಲ್ಲಿ ತೆಲಂಗಾಣದಲ್ಲಿ ನಾಲ್ವರು ಅತ್ಯಾಚಾರ ಆರೋಪಿಗಳನ್ನು ಗುಂಡಿಕ್ಕಿ ಹತ್ಯೆಗೈದ ಘಟನೆಯೊಂದಿಗೆ ಪ್ರಕರಣವನ್ನು ಹೋಲಿಸಿದ್ದಾರೆ.
ʻಅಲ್ಲಿಯೂ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸುವುದಾಗಿ ಹೇಳಿದ್ದರು. ಆದರೆ, ಸತ್ಯ ಹೊರಬರಲಿಲ್ಲ. ಬದ್ಲಾಪುರ್ ವಿಷಯದಲ್ಲೂ ಅದೇ ಆಗಿದೆ. ಕೈಕೋಳ ಹಾಕಿದ್ದರೂ ಅಕ್ಷಯ್ ಶಿಂಧೆ ಬಂದೂಕನ್ನು ಕಸಿದುಕೊಂಡಿದ್ದು ಹೇಗೆ ಮತ್ತು ಬಂದೂಕು ಚಲಾಯಿಸಲು ಅವರಿಗೆ ಹೇಗೆ ಗೊತ್ತು?,ʼ ಎಂದು ಅಂಧಾರೆ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪ್ರತಿಕ್ರಿಯೆ: ಘಟನೆ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಹೇಳಿದ್ದಾರೆ.
ʻಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಕೊಲ್ಲಲ್ಪಟ್ಟಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಸರ್ಕಾರದಿಂದ ಹೆಣ್ಣುಮಕ್ಕಳಿಗೆ ರಕ್ಷಣೆ ಅಥವಾ ನ್ಯಾಯ ನೀಡುವುದಿಲ್ಲ,ʼ ಎಂದು ಹೇಳಿದರು.
ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ, ʻಬದ್ಲಾಪುರ ಪ್ರಕರಣದ ಆರೋಪಿ ಗಲ್ಲಿಗೇರಿಸಲು ಅರ್ಹ. ಆದರೆ, ಈಗ ನಡೆದಿರುವುದು ಅಜಾಗರೂಕ ಮತ್ತು ಅನುಮಾನಾಸ್ಪದ ಘಟನೆ. ಈ ಬಗ್ಗೆ ತನಿಖೆ ನಡೆಸಬೇಕು,ʼ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.
ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ʻಶಿಂಧೆಯನ್ನು ತಲೋಜಾ ಜೈಲಿನಿಂದ ವರ್ಗಾಯಿಸುವ ಗೃಹ ಇಲಾಖೆಯ ಕ್ರಮಗಳು ಪ್ರಶ್ನಾರ್ಹವಾಗಿವೆ,ʼ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.
ಸಿಎಂ ಪ್ರತಿಕ್ರಿಯೆ: ಪ್ರತಿಕ್ರಿಯಿಸಿರುವ ಸಿಎಂ ಶಿಂಧೆ, ʻವಿರೋಧ ಪಕ್ಷಗಳು ಅಕ್ಷಯ್ ಶಿಂಧೆಯನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದ್ದವು. ಈಗ ಅವರ ಪರ ವಹಿಸಿಕೊಂಡು, ಮಹಾರಾಷ್ಟ್ರ ಪೊಲೀಸರ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿವೆ. ವಿರೋಧ ಪಕ್ಷಗಳ ಇಂತಹ ಕೃತ್ಯ ಖಂಡನೀಯ ಮತ್ತು ದುರದೃಷ್ಟಕರ,ʼ ಎಂದು ಹೇಳಿದರು.
ರಾಜಕೀಯ ಅನುಕಂಪ ಪಡೆಯಲು ಆರೋಪಿಯನ್ನು ಹತ್ಯೆ ಮಾಡಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪದ ಬಗ್ಗೆ ಕೇಳಿದಾಗ, ʻಸರ್ಕಾರದ ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆಯ ಯಶಸ್ಸಿನಿಂದ ಪ್ರತಿಪಕ್ಷಗಳು ನಲುಗಿಹೋಗಿವೆ. ಹಾಗಾಗಿ ಇಂತಹ ಅಸೂಕ್ಷ್ಮ ಆರೋಪ ಮಾಡುತ್ತಿವೆ,ʼ ಎಂದು ಶಿಂಧೆ ಹೇಳಿದರು.
ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದು, ಅಕ್ಷಯ್ ಶಿಂಧೆ ಮೃತಪಟ್ಟಿದ್ದಾರೆ ಎಂದು ಉಪಮುಖ್ಯಮಂತ್ರಿ ಫಡ್ನವೀಸ್ ಹೇಳಿದ್ದಾರೆ.