ಹೊಸೂರಿನ ಟಾಟಾ ಎಲೆಕ್ಟ್ರಾನಿಕ್ಸ್ ಮಹಿಳಾ ಹಾಸ್ಟೆಲ್‌ನಲ್ಲಿ ಹಿಡನ್ ಕ್ಯಾಮೆರಾ: ಇಬ್ಬರ ಬಂಧನ

ಕೃಷ್ಣಗಿರಿ ಜಿಲ್ಲೆಯ ನಾಗಮಂಗಲಂನಲ್ಲಿರುವ 'ವಿದಿಯಾಳ್ ರೆಸಿಡೆನ್ಸಿ' ಎಂಬ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. 11 ಅಂತಸ್ತಿನ ಈ ಹಾಸ್ಟೆಲ್‌ನಲ್ಲಿ 8 ಬ್ಲಾಕ್‌ಗಳಿದ್ದು, 6,000ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ವಾಸವಾಗಿದ್ದಾರೆ.

Update: 2025-11-06 11:19 GMT

ಹೊಸೂರಿನ ನಾಗಮಂಗಲಂನಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಹಿಳಾ ಹಾಸ್ಟೆಲ್‌ನ ಸ್ನಾನಗೃಹದಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ್ದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಮಹಿಳಾ ಉದ್ಯೋಗಿ ಮತ್ತು ಆಕೆಯ ಬೆಂಗಳೂರಿನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ನೂರಾರು ಮಹಿಳಾ ಉದ್ಯೋಗಿಗಳು ಹಾಸ್ಟೆಲ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಕೃಷ್ಣಗಿರಿ ಜಿಲ್ಲೆಯ ನಾಗಮಂಗಲಂನಲ್ಲಿರುವ 'ವಿದಿಯಾಳ್ ರೆಸಿಡೆನ್ಸಿ' ಎಂಬ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. 11 ಅಂತಸ್ತಿನ ಈ ಹಾಸ್ಟೆಲ್‌ನಲ್ಲಿ 8 ಬ್ಲಾಕ್‌ಗಳಿದ್ದು, 6,000ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ವಾಸವಾಗಿದ್ದಾರೆ. ಹಾಸ್ಟೆಲ್‌ನ ಸ್ನಾನಗೃಹವೊಂದರಲ್ಲಿ ಹಿಡನ್ ಕ್ಯಾಮೆರಾ ಪತ್ತೆಯಾಗುತ್ತಿದ್ದಂತೆ, ನೂರಾರು ಮಹಿಳಾ ಉದ್ಯೋಗಿಗಳು ತಮ್ಮ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿ, ತಡರಾತ್ರಿಯವರೆಗೆ ಪ್ರತಿಭಟನೆ ನಡೆಸಿದರು.

ಆರೋಪಿಗಳ ಬಂಧನ

ಪೊಲೀಸರ ಪ್ರಕಾರ, ಬಂಧಿತ ಆರೋಪಿಗಳನ್ನು ಟಾಟಾ ಎಲೆಕ್ಟ್ರಾನಿಕ್ಸ್ ಉದ್ಯೋಗಿ, ಒಡಿಶಾ ಮೂಲದ ನೀಲುಕುಮಾರಿ ಗುಪ್ತಾ (22) ಮತ್ತು ಆಕೆಯ ಬೆಂಗಳೂರಿನ ಸ್ನೇಹಿತ ಸಂತೋಷ್ (25) ಎಂದು ಗುರುತಿಸಲಾಗಿದೆ. ನೀಲುಕುಮಾರಿ, ತನ್ನ ಸ್ನೇಹಿತ ಸಂತೋಷ್‌ನ ಪ್ರಚೋದನೆಯಿಂದ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 2ರಂದು, ನೀಲುಕುಮಾರಿ ವಾಸವಿದ್ದ ಕೋಣೆಯ ಸ್ನಾನಗೃಹದಲ್ಲಿ ಈ ಕ್ಯಾಮೆರಾವನ್ನು ಅಳವಡಿಸಲಾಗಿತ್ತು. ಇದೇ ಕೋಣೆಯಲ್ಲಿ ಉತ್ತರ ಭಾರತದ ಇತರ ಮಹಿಳೆಯರೂ ವಾಸವಾಗಿದ್ದರು. ಸ್ನಾನಗೃಹದಲ್ಲಿ ಕ್ಯಾಮೆರಾ ಇರುವುದನ್ನು ಗಮನಿಸಿದ ಇತರ ಮಹಿಳೆಯರು, ತಕ್ಷಣವೇ ಹಾಸ್ಟೆಲ್ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ

ಈ ಘಟನೆಯ ನಂತರ, ಉದನಪಲ್ಲಿ ಪೊಲೀಸರ ತಂಡವು ನವೆಂಬರ್ 5ರಂದು ಬೆಂಗಳೂರಿನಲ್ಲಿ ಸಂತೋಷ್‌ನನ್ನು ಬಂಧಿಸಿದೆ. ನೀಲುಕುಮಾರಿಯನ್ನು ಸಹ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಅಧಿಕಾರಿಗಳ ಭೇಟಿ, ಭರವಸೆ

ಮಹಿಳಾ ಉದ್ಯೋಗಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಹೊಸೂರಿನ ಹೆಚ್ಚುವರಿ ಜಿಲ್ಲಾಧಿಕಾರಿ ಆಕೃತಿ ಸೇಠಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಪಿ. ತಂಗದುರೈ ಅವರು ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾನಿರತ ಮಹಿಳೆಯರೊಂದಿಗೆ ಚರ್ಚೆ ನಡೆಸಿದರು. ಅವರ ಸುರಕ್ಷತೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಹಾಸ್ಟೆಲ್ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಮಹಿಳಾ ಉದ್ಯೋಗಿಗಳ ಪೋಷಕರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸಪಟ್ಟರು. ಈ ಘಟನೆಯಿಂದ ಆತಂಕಗೊಂಡ ಸುಮಾರು 200ಕ್ಕೂ ಹೆಚ್ಚು ಮಹಿಳೆಯರು ತಮ್ಮ ಊರುಗಳಿಗೆ ವಾಪಸಾಗಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಕಾರ, ಹಾಸ್ಟೆಲ್‌ನ ಇತರ ಕಡೆಗಳಲ್ಲಿಯೂ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು, ಮಹಿಳಾ ಪೊಲೀಸ್ ತಂಡಗಳಿಂದ ಸಂಪೂರ್ಣ ಆವರಣವನ್ನು ತಪಾಸಣೆ ನಡೆಸಲಾಗುತ್ತಿದೆ. ವಶಪಡಿಸಿಕೊಂಡಿರುವ ಕ್ಯಾಮೆರಾದಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Tags:    

Similar News