Maha Kumbh: ಕುಂಭ ಮೇಳದಲ್ಲಿ ಗಮನ ಸೆಳೆದ ʼಐಐಟಿ ಬಾಬಾʼನನ್ನು ಹೊರಗಟ್ಟಿದ ಜುನಾ ಅಖಾಡ

Maha Kumbh: ಅಖಾಡದಲ್ಲಿರುವ ಶ್ರೀಗಳು ತಮ್ಮ ಬಗ್ಗೆ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ ಐಐಟಿ ಬಾಬಾ, ತಮ್ಮನ್ನು ಅಖಾಡದಿಂದ ಹೊರಹಾಕಲಾಗಿದೆ ಎಂಬ ಆರೋಪಗಳನ್ನು ನಿರಾಕರಿಸಿದ್ದಾರೆ.;

Update: 2025-01-19 12:41 GMT
ಐಐಟಿ ಬಾಬಾ ಅಜಯ್‌ ಸಿಂಗ್‌.

ಮಹಾ ಕುಂಭ ಮೇಳದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಐಐಟಿ ಬಾಂಬೆಯ ಮಾಜಿ ಏರೋಸ್ಪೇಸ್ ಎಂಜಿನಿಯರ್ ಅಭಯ್ ಸಿಂಗ್ ಅಲಿಯಾಸ್ ʼಐಐಟಿ ಬಾಬಾʼ ಅವರನ್ನು ಜುನಾ ಅಖಾಡದಿಂದ ಹೊರಹಾಕಲಾಗಿದೆ ಎಂಬುದಾಗಿ ವರದಿಯಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಅಭಯ್‌ ಸಿಂಗ್‌ ಅವರು ತಮ್ಮ ಗುರು ಮಹಂತ್ ಸೋಮೇಶ್ವರ ಪುರಿ ವಿರುದ್ಧ ನಿಂದನಾತ್ಮಕ ಭಾಷೆ ಬಳಸಿದ್ದಾರೆ. ಹೀಗಾಗಿ ಜುನಾ ಅಖಾಡ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವೇಶಿಸದಂತೆ ನಿಷೇಧಿಸಲಾಗಿದೆ.

ಜುನಾ ಅಖಾಡದ ಸದಸ್ಯರೊಬ್ಬರು ಅಭಯ್‌ ಸಿಂಗ್‌ ಜತೆಗೆ ತಮಗೆ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. . "ಅವರು ನಮ್ಮನ್ನೇ ದೂಷಿಸುತ್ತಿದ್ದರು" ಎಂದು ಅವರು ಎನ್‌ಡಿಟಿಗೆ ತಿಳಿಸಿದ್ದಾರೆ. "ಅಭಯ್‌ ಸಿಂಗ್‌ ಒಬ್ಬ ಅಲೆಮಾರಿ, ಸಾಧುವಲ್ಲ. ಅವರು ಟಿವಿ ಕ್ಯಾಮೆರಾಗಳ ಮುಂದೆ ಬೇಕಾಬಿಟ್ಟಿ ಮಾತನಾಡುತ್ತಿದ್ದರು. ಹೀಗಾಗಿ ಅವರನ್ನು ಹೊರಗೆ ಅಟ್ಟಲಾಗಿದೆ. ಅವರು ಯಾರ ಶಿಷ್ಯರೂ ಆಗಿರಲಿಲ್ಲ,ʼʼ ಎಂದು ಹೇಳಿದ್ದಾರೆ.

ಆರೋಪಗಳನ್ನು ನಿರಾಕರಿಸಿದ ಐಐಟಿ ಬಾಬಾ

ತಮ್ಮನ್ನು ಹೊರಕ್ಕೆ ಹಾಕಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ 'ಐಐಟಿ ಬಾಬಾ' ಸುಳ್ಳು ಸುದ್ದಿ ಎಂದಿದ್ದಾರೆ. ಶುಕ್ರವಾರ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಅಖಾಡದಲ್ಲಿರುವ ಸಂತರು ಅನಗತ್ಯ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

"ನಾನು ಜನಪ್ರಿಯನಾಗಿದ್ದೇನೆ ಮತ್ತು ನಾನು ಅವರ ಬಗ್ಗೆ ಸತ್ಯ ಬಾಯಿ ಬಿಡಬಹುದು ಎಂಬ ಭಯವಿದೆ. ಆದ್ದರಿಂದ ನಾನು ರಹಸ್ಯ ಧ್ಯಾನಕ್ಕೆ ಹೋಗಿದ್ದೇನೆ ಎಂದು ಸುಳ್ಳು ಸುದ್ದಿ ಹೇಳುತ್ತಿದ್ದಾರೆ. ಅಲ್ಲಿನ ಜನರು ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ" ಎಂದು ಸಿಂಗ್ ಕಿಡಿ ಕಾರಿದ್ದಾರೆ.

ಹರಿಯಾಣದ ನಿವಾಸಿ

ಹರಿಯಾಣದ ನಿವಾಸಿಯಾಗಿರುವ ಸಿಂಗ್ ಅವರನ್ನು 'ಎಂಜಿನಿಯರ್ ಬಾಬಾ' ಎಂದೂ ಕರೆಯಲಾಗುತ್ತದೆ. ಆಧ್ಯಾತ್ಮಕ್ಕಾಗಿ ತಾವು ವಿಜ್ಞಾನದ ಮಾರ್ಗ ತೊರೆದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. "ವಿಜ್ಞಾನವು ಭೌತಿಕ ಜಗತ್ತನ್ನು ಅರಿಯಲು ಸಹಾಯ ಮಾಡುತ್ತದೆ. ಆ ಬಗ್ಗೆ ಆಳ ಅಧ್ಯಯನವು ಒಬ್ಬನನ್ನು ಆಧ್ಯಾತ್ಮಿಕತೆಯತ್ತ ಕರೆದೊಯ್ಯುತ್ತದೆ. ಜೀವನದ ನಿಜವಾದ ತಿಳುವಳಿಕೆ ಅಂತಿಮವಾಗಿ ಆಧ್ಯಾತ್ಮದ ಸಮೀಪಕ್ಕೆ ಕೊಂಡೊಯ್ಯುತ್ತದೆ" ಎಂದು ಅವರು ಅವರು ಹೇಳುತ್ತಿದ್ದರು.

ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ ಅವರು, "ವಿಧಿ ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ ನಾನು ಹೋಗುತ್ತೇನೆ. ನಾನು ಬಾಗಿಲುಗಳನ್ನು ತೆರೆದಿಡುತ್ತೇನೆ. ಇತರರ ಅಭಿಪ್ರಾಯಗಳನ್ನು ಲೆಕ್ಕಿಸದೆ ತಾನು ಆರಿಸಿಕೊಂಡ ಆಧ್ಯಾತ್ಮಿಕ ಮಾರ್ಗದಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯಿಂದ ಏರೋಸ್ಪೇಸ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರುವುದಾಗಿ 36 ವರ್ಷದ ಅವರು ಹೇಳಿಕೊಂಡಿದ್ದಾರೆ. 

Tags:    

Similar News