Amit Shah : ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಗೃಹ ಸಚಿವ ಅಮಿತ್‌ ಶಾ

Amit Shah : ಪವಿತ್ರ ಸ್ನಾನದ ನಂತರ ಅಮಿತ್‌ ಶಾ ಕುಟುಂಬ ಬಡೇ ಹನುಮಾನ್ ಜಿ ದೇವಸ್ಥಾನ ಮತ್ತು ಅಭಯವತ್‌ಗೆ ಭೇಟಿ ನೀಡಿತು. ಮಹಾರಾಜ್ ಮತ್ತು ಜುನಾ ಅಖಾಡ ಇತರ ಸಂತರನ್ನು ಭೇಟಿ ಮಾಡಿ ಅವರೊಂದಿಗೆ ಭೋಜನ ಸ್ವೀಕರಿಸಿದರು.;

Update: 2025-01-27 12:54 GMT
ಮಹಾ ಕುಂಭ ಮೇಳದ ಜಾಗಕ್ಕೆ ಭೇಟಿ ನೀಡಿದ ಅಮಿತ್‌ ಶಾ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸೋಮವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಿದರು. ತ್ರಿವೇಣಿ ಸಂಗಮದಲ್ಲಿ ಸಾಧುಗಳ ಜೊತೆಗೆ ಪವಿತ್ರ ಸ್ನಾನ ಮಾಡಿದ್ದು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, (Yogi Adityanath) ಬಾಬಾ ರಾಮ್ ದೇವ್ ಸೇರಿದಂತೆ ಹಲವರಿದ್ದರು.

ಐಸಿಸಿ ಅಧ್ಯಕ್ಷರೂ ಆಗಿರುವ ಪುತ್ರ ಜಯ್ ಶಾ ಸೇರಿದಂತೆ ಗೃಹ ಸಚಿವರ ಕುಟುಂಬ ಸದಸ್ಯರು ಸಂಗಮದಲ್ಲಿ 'ಆರತಿ' ಸೇರಿದಂತೆ ಎಲ್ಲ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡರು. ಅಮಿತ್ ಶಾ ಅವರ ಪತ್ನಿ ಸೋನಾಲ್, ಸೊಸೆ ರಿಷಿತಾ ಮತ್ತು ಮೊಮ್ಮಕ್ಕಳು ಸಹ ಆಚರಣೆಗಳಲ್ಲಿ ಭಾಗವಹಿಸಿದ್ದರು.

ಜಯ್ ಶಾ ಮತ್ತು ರಿಶಿತಾ ಅವರು ನವಜಾತ ಶಿಶುವನ್ನು ಕರೆದುಕೊಂಡು ಬಂದಿದ್ದರು. ಸ್ನಾನಕ್ಕೂ ಮೊದಲು, ಅಮಿತ್ ಶಾ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಯಾಗ್‌ರಾಜ್‌ನಲ್ಲಿರುವ ಸಾಧುಗಳ ಜತೆ ಸಂವಾದ ನಡೆಸಿದರು.

ಭೇಟಿಗೆ ಮೊದಲು ಗೃಹ ಸಚಿವರು ಎಕ್ಸ್‌ನಲ್ಲಿ ಪೋಸ್ಟ್ ಹಾಕಿ, "ಮಹಾಕುಂಭವು ಸನಾತನ ಸಂಸ್ಕೃತಿಯ ವಿಶಿಷ್ಟ ಸಂಕೇತ. ಕುಂಭಮೇಳವು ಸಾಮರಸ್ಯದಲ್ಲಿ ಬೇರೂರಿರುವ ಸನಾತನ ಧರ್ಮದ ಜೀವನ ತತ್ವವನ್ನು ಪ್ರದರ್ಶಿಸುತ್ತದೆ. ಏಕತೆ ಮತ್ತು ಸಮಗ್ರತೆಯ ಈ ದೊಡ್ಡ ಉತ್ಸವವಾಗಿರುವ ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಲು ಮತ್ತು ಸಂತರಿಂದ ಆಶೀರ್ವಾದ ಪಡೆಯಲು ನಾನು ಕಾತರನಾಗಿದ್ದೇನೆ" ಎಂದು ಹೇಳಿದ್ದರು.

ದೇವಸ್ಥಾನಕ್ಕೆ ಭೇಟಿ

ಪವಿತ್ರ ಸ್ನಾನದ ನಂತರ ಅಮಿತ್‌ ಶಾ ಕುಟುಂಬ ಬಡೇ ಹನುಮಾನ್ ಜಿ ದೇವಸ್ಥಾನ ಮತ್ತು ಅಭಯವತ್‌ಗೆ ಭೇಟಿ ನೀಡಿತು. ಮಹಾರಾಜ್ ಮತ್ತು ಜುನಾ ಅಖಾಡ ಇತರ ಸಂತರನ್ನು ಭೇಟಿ ಮಾಡಿ ಅವರೊಂದಿಗೆ ಭೋಜನ ಸ್ವೀಕರಿಸಿದರು.

ಅಮಿತ್‌ ಶಾ ಅವರು ಶರಣಾನಂದ ಜಿ ಅವರ ಆಶ್ರಮಕ್ಕೆ ಭೇಟಿ ಮಾಡಿ ಗುರು ಶರಣಾನಂದ ಮತ್ತು ಗೋವಿಂದ ಗಿರಿ ಜಿ ಮಹಾರಾಜ್ ಜೊತೆ ಮಾತುಕತೆ ನಡೆಸಿದ್ದಾರೆ.

ಎರಡು ದಿನಗಳ ಹಿಂದೆ ಉತ್ತರ ಪ್ರದೇಶ ಸರ್ಕಾರದ ಸಚಿವರೆಲ್ಲರೂ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಫೆ 5 ರಂದು ಮಹಾಕುಂಭ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಪುಣ್ಯ ಸ್ನಾನ ಮಾಡಲಿದ್ದಾರೆ.

ರಾಜ್ಯ ಸರ್ಕಾರದ ಪ್ರಕಾರ, ಸೋಮವಾರ ಬೆಳಿಗ್ಗೆ 10 ಗಂಟೆಯ ವೇಳೆಗೆ 53.29 ಲಕ್ಷಕ್ಕೂ ಹೆಚ್ಚು ಜನರು ಮಹಾ ಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಮೇಳದ ಪ್ರದೇಶವು 10 ಲಕ್ಷಕ್ಕೂ ಮಂದಿಗೆ ಆತಿಥ್ಯ ವಹಿಸುತ್ತದೆ. ಜನವರಿ 13ರಂದು ಕುಂಭ ಮೇಳ ಆರಂಭವಾದಾಗಿನಿಂದ ಇಲ್ಲಿಯವರೆಗೆ 13.21 ಕೋಟಿಗೂ ಹೆಚ್ಚು ಜನರು ಪುಣ್ಯ ಸ್ನಾನ ಮಾಡಿದ್ದಾರೆ. 

Tags:    

Similar News