ಆದಿತ್ಯ ಎಲ್ -1 ಉಡಾವಣೆ ದಿನವೇ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್‌ಗೆ ಕ್ಯಾನ್ಸರ್ ಪತ್ತೆ
ತಮಗೆ ಕ್ಯಾನ್ಸರ್ ಇರುವುದು ಭಾರತದ ಸನ್ ಮಿಷನ್ ಆದಿತ್ಯ ಎಲ್ -1 ಉಡಾವಣೆ ದಿನವೇ ಪತ್ತೆಯಾಗಿತ್ತು ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ.;
ಭಾರತದ ಸನ್ ಮಿಷನ್ ಆದಿತ್ಯ ಎಲ್ -1 ಉಡಾವಣೆ ದಿನದಂದೇ ತಮಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
ಇತ್ತೀಚೆಗೆ ಅವರು ಇಂಗ್ಲಿಷ್ ನಿಯತಕಾಲಿಕವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
2023 ರ ಮಧ್ಯಭಾಗದಲ್ಲಿ ಚಂದ್ರಯಾನ-3 ಉಡಾವಣೆಯಾದ ಸಮಯದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಕಂಡುಬಂದಿದ್ದವು. ಅಲ್ಲಿಯವರೆಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿರಲಿಲ್ಲ. ಆದರೆ ಆದಿತ್ಯ-ಎಲ್1 ಉಡಾವಣೆ ದಿನದಂದೇ ಈ ಕಾಯಿಲೆ ಇರುವುದು ಪತ್ತೆಯಾಯಿತು. ಇದಕ್ಕಾಗಿ ಶಸ್ತ್ರಚಿಕಿತ್ಸೆ ಮತ್ತು ಕೀಮೋಥೆರಪಿಗೆ ಒಳಪಡಬೇಕಾಯಿತು ಎಂದು ಹೇಳಿದರು.
“ಆದಿತ್ಯ-ಎಲ್1 ಉಡಾವಣೆಯ ಬೆಳಿಗ್ಗೆ ನಾನು ಸ್ಕ್ಯಾನ್ ಮಾಡಿಸಿಕೊಂಡೆ. ನನ್ನ ಹೊಟ್ಟೆಯಲ್ಲಿ ಬೆಳವಣಿಗೆಯಾಗಿರುವ ಬಗ್ಗೆ ಅರಿತುಕೊಂಡೆ. ಉಡಾವಣೆಯ ತಕ್ಷಣ ನನಗೆ ಕ್ಯಾನ್ಸರ್‌ನ ಸುಳಿವು ಸಿಕ್ಕಿತು. ಲಾಂಚ್ ಆದ ತಕ್ಷಣ ನಾನು ಚೆನ್ನೈಗೆ ಹೋಗಿ ಸ್ಕ್ಯಾನ್ ಮಾಡಿಸಿಕೊಂಡು ಸಮಸ್ಯೆಯ ಬಗ್ಗೆ ಖಚಿತಪಡಿಸಿಕೊಂಡೆ. ನಂತರ ನಾನು ಉಳಿದ ಪರೀಕ್ಷೆಗಳಿಗೆ ಒಳಗಾದೆ ”ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.
'ನಾನು ನಿಯಮಿತವಾಗಿ ತಪಾಸಣೆ ಮತ್ತು ಸ್ಕ್ಯಾನ್‌ಗೆ ಒಳಗಾಗುತ್ತೇನೆ. ಈಗ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ ಮತ್ತು ನನ್ನ ಕರ್ತವ್ಯವನ್ನು ಪುನರಾರಂಭಿಸಿದ್ದೇನೆ' ಎಂದು ಸೋಮನಾಥ್ ತಿಳಿಸಿದ್ದಾರೆ.