Haryana polls| ಕಾಂಗ್ರೆಸ್‌ನಿಂದ ಎಂಎಸ್‌ಪಿ ಕಾನೂನು, ಜಾತಿ ಸಮೀಕ್ಷೆ ಸೇರಿದಂತೆ 7 ಗ್ಯಾರಂಟಿ

Update: 2024-09-18 10:29 GMT

ಹೊಸದಿಲ್ಲಿ: ಹರಿಯಾಣದಲ್ಲಿ ಅಧಿಕಾರಕ್ಕೆ ಬಂದರೆ ಎಂಎಸ್‌ಪಿ ಖಾತ್ರಿ ಕಾನೂನು, ಜಾತಿ ಸಮೀಕ್ಷೆ ಸೇರಿದಂತೆ ಏಳು ಭರವಸೆಗಳನ್ನುಈಡೇರಿಸುವುದಾಗಿ ಕಾಂಗ್ರೆಸ್‌ ಹೇಳಿದೆ. 

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್, ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಹರಿಯಾಣ ಚುನಾವಣೆ ಎಐಸಿಸಿ ಹಿರಿಯ ವೀಕ್ಷಕರಾದ ಅಶೋಕ್ ಗೆಹ್ಲೋಟ್, ಅಜಯ್ ಮಾಕೆನ್ ಮತ್ತು ಪ್ರತಾಪ್ ಸಿಂಗ್ ಬಾಜ್ವಾ ಅವರ ಸಮ್ಮುಖದಲ್ಲಿ ಖಾತರಿಗಳನ್ನು ಪ್ರಕಟಿಸಲಾಯಿತು. 

ಮಹಿಳೆಯರ ಸಬಲೀಕರಣ, ಸಾಮಾಜಿಕ ಭದ್ರತೆ ಬಲಪಡಿಸುವುದು, ಯುವಜನರಿಗೆ ಸುರಕ್ಷಿತ ಭವಿಷ್ಯ, ಕುಟುಂಬಗಳ ಕಲ್ಯಾಣ ಮತ್ತು ಬಡವರಿಗೆ ಮನೆಗಳು ಉಳಿದ ಗ್ಯಾರಂಟಿಗಳಾಗಿವೆ. ಈ ಖಾತ್ರಿಗಳಿಗೆ ʻಸಾತ್ ವಾದೆ, ಪಕ್ಕೆ ಇರಾದೆʼ ಎಂದು ಹೆಸರಿಟ್ಟಿದ್ದೇವೆ ಎಂದು ಖರ್ಗೆ ಹೇಳಿದರು. 

ಮಹಿಳಾ ಸಬಲೀಕರಣದಡಿ 18-60 ವರ್ಷ ನಡುವಿನ ಪ್ರತಿ ಮಹಿಳೆಗೆ ಮಾಸಿಕ 2,000 ರೂ., 500 ರೂ.ಗೆ ಗ್ಯಾಸ್ ಸಿಲಿಂಡರ್‌, ಸಾಮಾಜಿಕ ಭದ್ರತೆಯನ್ನು ಬಲಪಡಿಸಲು ಹಿರಿಯ ನಾಗರಿಕರು, ವಿಶೇಷಚೇತನರು ಮತ್ತು ವಿಧವೆಯರಿಗೆ ಮಾಸಿಕ 6,000 ರೂ. ಪಿಂಚಣಿ, ಹಳೆಯ ಪಿಂಚಣಿ ಯೋಜನೆಯ ಮರುಸ್ಥಾಪನೆ, 300 ಯೂನಿಟ್ ಉಚಿತ ವಿದ್ಯುತ್, 25 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ, ರೈತರ ಕಲ್ಯಾಣದ ಅಡಿಯಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ಖಾತರಿ, ಜಾತಿ ಸಮೀಕ್ಷೆ ಮತ್ತು ಕೆನೆಪದರದ ಮಿತಿಯನ್ನು 6 ಲಕ್ಷದಿಂದ 10 ಲಕ್ಷ ರೂ.ಗೆ ಹೆಚ್ಚಿಸಲಾಗುವುದು ಎಂದು ಕಾಂಗ್ರೆಸ್‌ ಭರವಸೆ ನೀಡಿದೆ. 

90 ಸದಸ್ಯ ಬಲದ ವಿಧಾನಸಭೆಗೆ ಅಕ್ಟೋಬರ್ 5 ರಂದು ಮತದಾನ ಹಾಗೂ ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.

Tags:    

Similar News