ಎಂಜಿನ್‌ನಲ್ಲಿ ಬೆಂಕಿ: ದೆಹಲಿಯಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ಸಂಸ್ಥೆಯು ಖಚಿತಪಡಿಸಿದೆ.;

Update: 2025-08-31 04:45 GMT

ದೆಹಲಿಯಿಂದ ಇಂದೋರ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು, ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ, ಪೈಲಟ್‌ಗೆ ವಿಮಾನದ ಎಂಜಿನ್‌ನಲ್ಲಿ "ಬೆಂಕಿಯ ಸೂಚನೆ" ಸಿಕ್ಕ ಕಾರಣದಿಂದ, ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದೆ. ಪೈಲಟ್‌ನ ಸಮಯಪ್ರಜ್ಞೆಯಿಂದಾಗಿ, ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ.

ಆಗಸ್ಟ್ 31 ರಂದು (ಭಾನುವಾರ) ದೆಹಲಿಯಿಂದ ಇಂದೋರ್‌ಗೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನ AI2913 ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ, ವಿಮಾನದ ಬಲ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಕಾಕ್‌ಪಿಟ್ ಸಿಬ್ಬಂದಿಗೆ ಎಚ್ಚರಿಕೆಯ ಸೂಚನೆ (Fire Indication) ಲಭಿಸಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಪೈಲಟ್‌ಗಳು, ಅಂತಾರಾಷ್ಟ್ರೀಯ ಸುರಕ್ಷತಾ ನಿಯಮಗಳ ಪ್ರಕಾರ, ಸೂಚನೆ ಬಂದ ಎಂಜಿನ್ ಅನ್ನು ಆಫ್ ಮಾಡಿ, ವಿಮಾನವನ್ನು ತುರ್ತಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ವಾಪಸ್ ತಂದು, ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ್ದಾರೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ಸಂಸ್ಥೆಯು ಖಚಿತಪಡಿಸಿದೆ.

ಏರ್ ಇಂಡಿಯಾದಿಂದ ಸ್ಪಷ್ಟನೆ

ಈ ಘಟನೆಯ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಏರ್ ಇಂಡಿಯಾ ಸಂಸ್ಥೆ, "ವಿಮಾನವನ್ನು ತಾಂತ್ರಿಕ ತಪಾಸಣೆಗಾಗಿ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ತುರ್ತು ಪರಿಸ್ಥಿತಿಯಲ್ಲಿ ವೃತ್ತಿಪರವಾಗಿ ಕಾರ್ಯನಿರ್ವಹಿಸಿದ ನಮ್ಮ ಸಿಬ್ಬಂದಿಗೆ ಧನ್ಯವಾದಗಳು. ಎಲ್ಲಾ ಪ್ರಯಾಣಿಕರನ್ನು ಪರ್ಯಾಯ ವಿಮಾನದಲ್ಲಿ ಸುರಕ್ಷಿತವಾಗಿ ಇಂದೋರ್‌ಗೆ ಕಳುಹಿಸಲಾಗುವುದು," ಎಂದು ತಿಳಿಸಿದೆ.

Tags:    

Similar News