ಅಸ್ಸಾಂ ಗಾಯಕ ಜುಬೀನ್ ಗರ್ಗ್​​ ಸ್ಮರಣಾರ್ಥ ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗಿ

ಜುಬೀನ್ ಗರ್ಗ್​​ ಅವರು ತಮ್ಮ ಸಂಗೀತದ ಮೂಲಕ ಕೇವಲ ಅಸ್ಸಾಂ ಅಷ್ಟೇ ಅಲ್ಲದೆ, ವಿವಿಧ ಪ್ರಾದೇಶಿಕ ಸಂಸ್ಕೃತಿಗಳನ್ನು ಒಂದುಗೂಡಿಸಿದವರಾಗಿದ್ದು ಕನ್ನಡದ ಗೀತೆಗಳನ್ನೂ ಹಾಡಿದ್ದಾರೆ.

Update: 2025-10-01 11:29 GMT

ಖ್ಯಾತ ಗಾಯಕ, ಅಸ್ಸಾಂನ ಸಾಂಸ್ಕೃತಿಕ ರಾಯಭಾರಿ ದಿವಂಗತ ಜುಬೀನ್ ಗರ್ಗ್​​ ಅವರ ಸ್ಮರಣಾರ್ಥ ಅಸ್ಸಾಂನ ಜೋರ್ಹಟ್‌ನಲ್ಲಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿ, ಗೌರವ ನಮನ ಸಲ್ಲಿಸಿದರು.

ಸೆಪ್ಟೆಂಬರ್ 19ರಂದು ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ನಡೆಸುವಾಗ 52 ವರ್ಷದ ಜುಬೀನ್ ಗರ್ಗ್​​ ಅವರು ನಿಧನರಾಗಿದ್ದರು. ಅವರ ನಿಧನವು ಇಡೀ ದೇಶದ ಸಂಗೀತಾಸಕ್ತರಿಗೆ, ವಿಶೇಷವಾಗಿ ಈಶಾನ್ಯ ಭಾರತಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿತ್ತು.

ಜುಬೀನ್ ಗರ್ಗ್​​ ಅವರು ತಮ್ಮ ಸಂಗೀತದ ಮೂಲಕ ಕೇವಲ ಅಸ್ಸಾಂ ಅಷ್ಟೇ ಅಲ್ಲದೆ, ವಿವಿಧ ಪ್ರಾದೇಶಿಕ ಸಂಸ್ಕೃತಿಗಳನ್ನು ಒಂದುಗೂಡಿಸಿದವರು. ಅವರ "ಯಾ ಅಲಿ" ಯಂತಹ ಬಾಲಿವುಡ್ ಹಿಟ್ ಗೀತೆಗಳ ಜೊತೆಗೆ, ಅವರು ಕನ್ನಡದಲ್ಲಿಯೂ ಹಲವು ಗೀತೆಗಳನ್ನು ಹಾಡಿದ್ದರು. ಈ ಮೂಲಕ ಕರ್ನಾಟಕದಲ್ಲಿಯೂ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದರು. ಇದೇ ಕಾರಣದಿಂದಾಗಿ, ಮತ್ತೊಂದು ರಾಜ್ಯದ ಗಾಯಕನಿಗೆ ಕರ್ನಾಟಕದ ಉಪಮುಖ್ಯಮಂತ್ರಿಗಳು ಖುದ್ದಾಗಿ ತೆರಳಿ ಗೌರವ ಸಲ್ಲಿಸಿದ್ದಾರೆ.

ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ಜುಬೀನ್ ಗರ್ಗ್​​ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಭೇಟಿಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶಿವಕುಮಾರ್ ಅವರು ಹಂಚಿಕೊಂಡಿದ್ದಾರೆ.  

Tags:    

Similar News