Delhi stampede : ದೆಹಲಿ ಕಾಲ್ತುಳಿತಕ್ಕೆ ಕಾರಣವೇನು? ತಾಳೆಯಾಗದ ಅಧಿಕಾರಿಗಳ, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು...
Delhi stampede : ರೈಲ್ವೆ ಅಧಿಕಾರಿಗಳ ಹೇಳುವ ಪ್ರಕಾರ, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಪ್ರಯಾಣಿಕರನ್ನು ವಿಶೇಷ ರೈಲುಗಳ ಮೂಲಕ ತಮ್ಮ ಗಮ್ಯ ತಾಣಗಳಿಗೆ ಕಳುಹಿಸಲಾಗಿದೆ. ರೈಲುಗಳ ಸಂಚಾರ ಯಥಾವತ್ ಮುಂದುವರಿದಿದೆ.;
ನವ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿರುವ ಭೀಕರ ಕಾಲ್ತುಳಿತದಲ್ಲಿ (Delhi stampede) 18 ಮಂದಿ ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯ ಬಗ್ಗೆ ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ.
ರೈಲ್ವೆ ಅಧಿಕಾರಿಗಳ ಹೇಳುವ ಪ್ರಕಾರ, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಪ್ರಯಾಣಿಕರನ್ನು ವಿಶೇಷ ರೈಲುಗಳ ಮೂಲಕ ತಮ್ಮ ಗಮ್ಯ ತಾಣಗಳಿಗೆ ಕಳುಹಿಸಲಾಗಿದೆ. ರೈಲುಗಳ ಸಂಚಾರ ಯಥಾವತ್ ಮುಂದುವರಿದಿದೆ.
ಪ್ಲಾಟ್‌ಫಾರ್ಮ್ ಸಂಖ್ಯೆ 14 ಮತ್ತು 15ರಲ್ಲಿ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಆದರೆ, ಈ ಘಟನೆಗೆ ನಿಜವಾಗಿ ಕಾರಣವೇನು ಎಂಬುದರ ಕುರಿತು ಇನ್ನೂ ಗೊಂದಲಗಳಿವೆ. ಅಧಿಕಾರಿಗಳು ಒಂದು ರೀತಿಯ ಕಾರಣ ಕೊಟ್ಟರೆ, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಭಿನ್ನವಾಗಿವೆ. ಒಂದಕ್ಕೊಂದು ತಾಳೆಯಾಗುತ್ತಿಲ್ಲ.
ಪ್ರತ್ಯಕ್ಷದರ್ಶಿಗಳು ಹೇಳುವುದೇನು?
ರೈಲ್ವೆ ಅಧಿಕಾರಿಗಳು ಹೆಚ್ಚುವರಿ ಜನಸಂದಣಿ ನಿಯಂತ್ರಿಸಲು ಮತ್ತು ವಾರಾಂತ್ಯದ ಪ್ರಯಾಣಿಕರ ಹೆಚ್ಚಳವನ್ನು ನಿಭಾಯಿಸುವಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ಹೆಚ್ಚುವರಿ ರೈಲುಗಳನ್ನು ಓಡಿಸುವುದಾಗಿ ಅಧಿಕಾರಿಗಳು ಭರವಸೆ ಕೊಟ್ಟಿರುವ ಹೊರತಾಗಿಯೂ ನಿಲ್ದಾಣದಲ್ಲಿ ಜನದಟ್ಟಣೆ ನಿಯಂತ್ರಿಸಲು ಸಿಬ್ಬಂದಿ ಕೊರತೆಯಿತ್ತು.,
ರೈಲುಗಳ ಆಗಮನ ಮತ್ತು ನಿರ್ಗಮನ ವಿಳಂಬವಾಗುತ್ತಿದ್ದ ಕಾರಣ ಕೆಲವು ಪ್ರದೇಶದಲ್ಲಿ ಭಾರೀ ಜನಸಂದಣಿ ಉಂಟಾಗಿ ಆತಂಕದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಪರಿಣಾಮವಾಗಿ, ಹಲವರು ಉಸಿರುಗಟ್ಟಿ ಕುಸಿದು ಬಿದ್ದರು. ಈ ವೇಳೆ ಗೊಂದಲ ಸೃಷ್ಟಿಯಾಗಿ ನೂಕು ನುಗ್ಗಲು ಉಂಟಾಗಿತ್ತು. ಹೀಗಾಗಿ ಜನರು ಓಡಲು ಪ್ರಾರಂಭಿಸಿ ಬಿದ್ದವರ ಮೇಲೆ ನಡೆಯಲು ಶುರು ಮಾಡಿದರು. ಹೀಗಾಗಿ ಕೆಳಗೆ ಬಿದ್ದವರು ಕಾಲಡಿಗೆ ಸಿಲುಕಿ ಮೃತಪಟ್ಟರೆ ಹಲವಾರು ಮಂದಿ ಗಾಯಗೊಂಡಿದ್ದಾರೆ.
ರೈಲ್ವೆ ಸಚಿವಾಲಯವು, ಈ ಘಟನೆಗೆ ಪ್ರಯಾಣಿಕರ ಸಂಖ್ಯೆ ಏಕಾಏಕಿ ಏರಿಕೆಯಾಗಿದ್ದೇ ಕಾರಣವೆಂದು ತಿಳಿಸಿದೆ. ಒಮ್ಮೆಯೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಸ್ಥಳದಲ್ಲಿ ಆತಂಕ ಉಂಟಾಗಿದ್ದರಿಂದ ನೂಕು ನುಗ್ಗಲು ಉಂಟಾಯಿತು ಎಂದು ಇಲಾಖೆ ಹೇಳಿದೆ.
ರಾತ್ರಿ 9 ಗಂಟೆ ವೇಳೆಗೆ ಪರಿಸ್ಥಿತಿ ನಿಯಂತ್ರಣ ಮಾಡಲು ಸಾಧ್ಯವಾಗದಷ್ಟು ಭಯಾನಕವಾಯಿತು. ಆ ಸಮಯದಲ್ಲಿ ಸಹಾಯ ಮಾಡಲು ಯಾರಿಗೂ ಸಾಧ್ಯವಾಗಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರೈಲ್ವೆ ನಿಲ್ದಾಣದ ಕೂಲಿಗಳು ಕೆಳಗೆ ಬಿದ್ದವರನ್ನು ರಕ್ಷಿಸಲು ಧಾವಿಸಿದರು. ಜನಸಂದಣಿ ಮಿತಮೀರಿದ ಕಾರಣ ಅಲ್ಲಿಗೆ ಹೋಗಲು ಸಾಧ್ಯವೂ ಆಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ಲಾಟ್‌ಫಾರ್ಮ್ ಬದಲಾವಣೆಯ ಗೊಂದಲ
ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಆರಂಭದಲ್ಲಿ ಪ್ಲಾಟ್‌ಫಾರ್ಮ್ ಸಂಖ್ಯೆ 12ಕ್ಕೆ ಆಗಮಿಸಲಿದೆ ಎಂದು ಪ್ರಕಟಿಸಿದ್ದ ರೈಲು, ಸ್ವಲ್ಪ ಹೊತ್ತಿನ ಬಳಿಕ ಪ್ಲಾಟ್‌ಫಾರ್ಮ್ 16ಕ್ಕೆ ಬರುವುದಾಗಿ ಘೋಷಿಸಲಾಯಿತು. ಹೀಗಾಗಿ ಜನರ ನಡುವೆ ಗೊಂದಲ ಉಂಟಾಯಿತು. ಹೀಗಾಗಿ ಜನರು ಪ್ಲ್ಯಾಟ್ಫಾರ್ಮ್ ಬದಲಾಯಿಸಲು ಓಡಿದಾಗಲೂ ನೂಕು ನುಗ್ಗಲು ಉಂಟಾಗಿದೆ. ಆದರೆ, ರೈಲ್ವೆ ಇಲಾಖೆ ಈ ಹೇಳಿಕೆಯನ್ನು ತಳ್ಳಿ ಹಾಕಿದೆ.
ಭಾರತೀಯ ವಾಯುಪಡೆ ಅಧಿಕಾರಿಯೊಬ್ಬರು ಎಎನ್ಐ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆ ಪ್ರಕಾರ, ಜನಸಂದಣಿ ನಿಯಂತ್ರಿಸಲು ಹಲವಾರು ಬಾರಿ ಎಚ್ಚರಿಕೆ ಘೋಷಣೆಗಳನ್ನು ಮಾಡಲಾಗಿತ್ತು. ಆದರೆ, ಜನರು ಮಾತುಗಳನ್ನು ಕೇಳದೆ, ದೊಡ್ಡ ಗುಂಪುಗಳಾಗಿ ಒಂದೇ ಸ್ಥಳದಲ್ಲಿ ಸೇರುತ್ತಿದ್ದರು. ಕೊನೆಗೆ ಪ್ರಯಾಣಿಕರ ಮೇಲೆ ನಿಯಂತ್ರಣ ಇಲ್ಲದಂತಾಯಿತು.
ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಹಬ್ಬ-ಹರಿದಿನಗಳಲ್ಲಿಯೂ ರೈಲು ನಿಲ್ದಾಣದಲ್ಲಿ ಇಷ್ಟೊಂದು ದೊಡ್ಡ ಜನಸಂದಣಿ ನೋಡಿರಲಿಲ್ಲ. ಆದರೆ, ನಿರ್ವಹಣೆ ಸಿಬ್ಬಂದಿ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಅಲ್ಲಿದ್ದರೂ, ಅವರಿಗೆ ಪ್ರಯಾಣಿಕರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ರೈಲು ಹತ್ತಲು ಗಲಾಟೆ
ವರದಿಯೊಂದರ ಪ್ರಕಾರ, ಮಗಧ್ ಎಕ್ಸ್‌ಪ್ರೆಸ್ ರೈಲು ಪ್ಲಾಟ್‌ಫಾರ್ಮ್ 15ರಲ್ಲಿ ನಿರ್ಧಿಷ್ಟ ಸಮಯಕ್ಕಿಂತ ಮೊಲದೇ ಬಂದಿತ್ತು. ಈ ವೇಳೆ ರೈಲು ಹತ್ತಲು ಜನರ ನಡುವೆ ಗಲಾಟೆ ಶುರುವಾಯಿತು. ಹಲವರು ಕೋಚ್ನಿಂದ ಕೋಚ್ಗೆ ನುಗ್ಗಲು ಶುರುಮಾಡಿದ್ದರು. ಈ ನಡುವೆ ಕಾಲ್ತುಳಿತ ಸಂಭವಿಸಿದೆ.
ಪ್ರಯಾಗರಾಜ್ ಕಡೆಗೆ ಹೊರಟಿದ್ದ ಇನ್ನೊಬ್ಬರು, ಇಂಡಿಯಾ ಟುಡೆ ಟಿವಿಗೆ ಹೇಳಿಕೆ ನೀಡಿ, ಪ್ಲಾಟ್‌ಫಾರ್ಮ್ ಸಂಖ್ಯೆ 14ರ ಮೆಟ್ಟಿಲುಗಳ ಬಳಿ ಗಲಾಟೆ ಸಂಭವಿಸಿದೆ. ಒತ್ತಾಟ ಮತ್ತು ತಳ್ಳಾಟದಲ್ಲಿ ಜನರು ನೆಲಕ್ಕೆ ಬಿದ್ದರು. ರೈಲು ಹತ್ತುವ ಧಾವಂತದಲ್ಲಿ ಪ್ರಯಾಣಿಕರು ಅವರ ಮೇಲೆಯೇ ಕಾಲಿಟ್ಟುಕೊಂಡು ಹೋದರು ಎಂಬುದಾಗಿ ಹೇಳಲಾಗಿದೆ.
ರೈಲುಗಳ ವಿಳಂಬವೇ ದೊಡ್ಡ ಸಮಸ್ಯೆಗೆ ಕಾರಣ ಎಂಬುದು ಬಹುತೇಕರ ಅಭಿಪ್ರಾಯ.
ಅಧಿಕೃತ ಮಾಹಿತಿಯೇನು?
ರೈಲ್ವೆ ಸಚಿವಾಲಯವು ಈ ಘಟನೆ "ಏಕಾಏಕಿ ಜನಸಂದಣಿ ಏರಿಕೆ"ಯಿಂದ ಉಂಟಾಗಿದೆ ಎಂದು ಹೇಳಿದೆ.
ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಿಮಾಂಶು ಶೇಖರ್ ಉಪಾಧ್ಯಾಯ ಪ್ರಕಾರ, "ಈ ದುರ್ಘಟನೆ ಸಂಭವಿಸಿದಾಗ, ಪಟ್ನಾ ಕಡೆಗೆ ಹೋಗುತ್ತಿದ್ದ ಮಗಧ್ ಎಕ್ಸ್‌ಪ್ರೆಸ್ ಪ್ಲಾಟ್‌ಫಾರ್ಮ್ 14ರಲ್ಲಿ ನಿಂತುಕೊಂಡಿತ್ತು. ಜೊತೆಗೆ, ಜಮ್ಮುವಿಗೆ ತೆರಳುತ್ತಿದ್ದ ಉತ್ತರ ಸಂಪರ್ಕ ಕ್ರಾಂತಿ ಪ್ಲಾಟ್‌ಫಾರ್ಮ್ 15ರಲ್ಲಿ ಇತ್ತು.
ಆ ಸಮಯದಲ್ಲಿ, ಪ್ಲಾಟ್‌ಫಾರ್ಮ್ 14-15 ಕಡೆಗೆ ಬರುತ್ತಿದ್ದ ಪ್ರಯಾಣಿಕರೊಬ್ಬರು ಕಾಲು ಜಾರಿ ಬಿದ್ದಿದ್ದರು. ಇದರಿಂದ ಜನರು ಒಬ್ಬೊಬ್ಬರಾಗಿಯೇ ಜಾರಿ ಬಿದ್ದರು. ಕಾಲಡಿಗೆ ಸಿಕ್ಕವರು ಮೃತಪಟ್ಟಿದ್ದಾರೆ. ಕುರಿತು ಉನ್ನತ ಮಟ್ಟದ ಸಮಿತಿ ತನಿಖೆ ನಡೆಸಲಾಗುತ್ತಿ ಎಂದು ಹೇಳಿದ್ದಾರೆ.
ಸಂಪರ್ಕಾಧಿಕಾರಿ ಪ್ರಕಾರ, ಯಾವುದೇ ರೈಲು ರದ್ದುಗೊಂಡಿಲ್ಲ. ಕೊನೇ ಕ್ಷಣದಲ್ಲಿ ಪ್ಲಾಟ್‌ಫಾರ್ಮ್ ಕೂಡ ಬದಲಾವಣೆ ಆಗಲಿಲ್ಲ.
"ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಸಮಿತಿ ವರದಿ ಸಲ್ಲಿಸಿದ ನಂತರ ಸ್ಪಷ್ಟ ಚಿತ್ರಣ ಲಭ್ಯವಾಗುತ್ತದೆ. ಈಗ ಪ್ಲಾಟ್‌ಫಾರ್ಮ್‌ನ ಪರಿಸ್ಥಿತಿ ಸಾಮಾನ್ಯವಾಗಿದೆ. ಎಲ್ಲಾ ರೈಲುಗಳು ನಿಯಮಿತ ಸಮಯಕ್ಕೆ ಸಂಚರಿಸುತ್ತಿವೆ," ಎಂದು ಅವರು ಮಾಹಿತಿ ನೀಡಿದ್ದಾರೆ.
ರೈಲ್ವೆ ಡಿಸಿಪಿ ಕೆ.ಪಿ.ಎಸ್. ಮಲ್ಹೋತ್ರಾ ಮಾಧ್ಯಮಗಳಿಗೆ ಮಾಹಿತಿ ನೀಡಿ; "ಪ್ಲಾಟ್‌ಫಾರ್ಮ್ 14ರಲ್ಲಿ ಒಂದು ಕಡೆ ಮತ್ತು ಪ್ಲಾಟ್‌ಫಾರ್ಮ್ 16 ಸಮೀಪದ ಎಸ್ಕಲೇಟರ್ ಬಳಿ ಮತ್ತೊಂದು ಗಲಾಟೆ ಸಂಭವಿಸಿದೆ ," ಎಂದು ಅವರು ಹೇಳಿದರು.