ದೆಹಲಿ: ಕೋಚಿಂಗ್ ಸೆಂಟರ್ ನೆಲಮಾಳಿಗೆಯಲ್ಲಿ ತುಂಬಿದ ಮಳೆನೀರು| ಮೂವರು ಐಎಎಸ್ ಆಕಾಂಕ್ಷಿಗಳು ಸಾವು
24 ಗಂಟೆಗಳ ಒಳಗೆ ತನಿಖೆ ಆರಂಭಿಸಿ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ಕಂದಾಯ ಸಚಿವ ಅತಿಶಿ ನಿರ್ದೇಶನ ನೀಡಿದ್ದಾರೆ.
ಮಧ್ಯ ದೆಹಲಿಯ ಓಲ್ಡ್ ರಾಜಿಂದರ್ ನಗರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಇಲ್ಲಿನ ಕೋಚಿಂಗ್ ಸೆಂಟರ್ ಇರುವ ಕಟ್ಟಡವೊಂದಕ್ಕೆ ಮಳೆ ನೀರು ತುಂಬಿ ನಾಗರಿಕ ಸೇವೆಗಳಿಗೆ ತರಬೇತಿ ಪಡೆಯುತ್ತಿದ್ದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳು ಕೆಲ ಗಂಟೆಗಳ ಕಾಲ ನೀರಿನಲ್ಲಿ ಸಿಲುಕಿಕೊಂಡಿದ್ದು, ಬಳಿಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಕೋಚಿಂಗ್ ಸೆಂಟರ್ ಇರುವ ಕಟ್ಟಡ ಸಂಪೂರ್ಣ ಜಾಲಾವೃತಗೊಂಡಿರುವ ಬಗ್ಗೆ ಹಾಗೂ ಇನ್ನೂ ಕೆಲವರು ಸಿಲುಕಿಕೊಂಡಿರುವ ಬಗ್ಗೆ ನಮಗೆ ಕರೆ ಬಂತು. ಆದರೆ ಈ ಸಂಪೂರ್ಣ ನೆಲಮಾಳಿಗೆ ಹೇಗೆ ಪ್ರವಾಹಕ್ಕೆ ಸಿಲುಕಿಕೊಂಡಿತ್ತು ಎಂಬುವುದರ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ನೆಲಮಾಳಿಗೆಯು ಅತೀ ವೇಗವಾಗಿ ಜಲಾವೃತಗೊಂಡಿತ್ತು. ಹೀಗಾಗಿ ಕೆಲ ಜನ ಅಲ್ಲಿ ಸಿಲುಕಿಕೊಂಡರು ಎಂದು ಡಿಸಿಪಿ (ಮಧ್ಯ ದೆಹಲಿ) ಎಂ ಹರ್ಷವರ್ಧನ್ ಸುದ್ದಿಗಾರರಿಗೆ ತಿಳಿಸಿದರು.
ಒಟ್ಟು ಐದು ಅಗ್ನಿಶಾಮಕ ಮತ್ತು ತುರ್ತುಸೇವೆ ತುಕಡಿಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಂಡ ಬಂದಾಗ ನೆಲಮಾಳಿಗೆಯಲ್ಲಿ ನೀರು ತುಂಬಿತ್ತು. ಎನ್‌ಡಿಆರ್‌ಎಫ್, ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ರಕ್ಷಣಾ ಕಾರ್ಯಾಚರಣೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಮತ್ತು ಒಬ್ಬ ವಿದ್ಯಾರ್ಥಿಯ ಮೃತದೇಹಗಳನ್ನು ಸ್ಥಳದಿಂದ ಹೊರತೆಗೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮೃತರ ಗುರುತುಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಮಧ್ಯರಾತ್ರಿ ಕಳೆದರೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿತ್ತು.
ಸಾವಿನ ವಿರುದ್ಧ ಪ್ರತಿಭಟನೆ, ತನಿಖೆಗೆ ಆದೇಶ
ನೆಲಮಾಳಿಗೆಯಿಂದ ನೀರನ್ನು ಹೊರಬಿಡಲಾಗುತ್ತಿದ್ದು, ಇನ್ನೂ 7 ಅಡಿ ನೀರಿನ ಮಟ್ಟ ಇದೆ ಎಂದು ಡಿಸಿಪಿ ಹರ್ಷವರ್ಧನ್ ಸುದ್ದಿಗಾರರಿಗೆ ತಿಳಿಸಿದರು. ನಾಗರಿಕ ಸೇವಾ ಆಕಾಂಕ್ಷಿಗಳ ಸಾವು ಖಂಡಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಘಟನೆಯ ಕುರಿತು ತನಿಖೆ ಆರಂಭಿಸಿ 24 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಕಂದಾಯ ಸಚಿವ ಅತಿಶಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ಸೂಚಿಸಿದರು.
ಈ ಘಟನೆ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಸಲು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಈ ಘಟನೆಗೆ ಕಾರಣರಾದವರನ್ನು ಬಿಡುವುದಿಲ್ಲ ಎಂದು ಅತಿಶಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಮತ್ತು ನವದೆಹಲಿ ಸಂಸದ ಬಾನ್ಸುರಿ ಸ್ವರಾಜ್ ಸ್ಥಳಕ್ಕೆ ಭೇಟಿ ನೀಡಿ ಘಟನೆಗೆ ಎಎಪಿ ಆಡಳಿತವನ್ನು ದೂಪಿಷಿದ್ದಾರೆ. ಸ್ಥಳೀಯ ಶಾಸಕರು ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಸ್ಥಳೀಯರು ಪದೇ ಪದೇ ಮಾಡಿದ ಮನವಿಗಳನ್ನು ಮಾಡಿದ್ದರೂ ಆ ಮನವಿಯನ್ನು ಅವರು ನಿರ್ಲಕ್ಷಿಸಿದ್ದಾರೆ ಎಂದು ಹೇಳಿದರು.
"ದೆಹಲಿ ಸರ್ಕಾರದ ಕ್ರಿಮಿನಲ್ ನಿರ್ಲಕ್ಷ್ಯವು ಈ ಅವಘಡಕ್ಕೆ ಕಾರಣವಾಗಿದೆ. ಜಲ ಮಂಡಳಿಯ ಸಚಿವ ಅತಿಶಿ ಮತ್ತು ಸ್ಥಳೀಯ ಶಾಸಕ ದುರ್ಗೇಶ್ ಪಾಠಕ್ ಜವಾಬ್ದಾರಿ ವಹಿಸಿ ರಾಜೀನಾಮೆ ನೀಡಬೇಕು" ಎಂದು ಸಚ್‌ದೇವ ಹೇಳಿದರು.
ವಿದ್ಯಾರ್ಥಿಗಳು ನೆಲಮಾಳಿಗೆಯಲ್ಲಿ ಏಕೆ ಇದ್ದರು?
ನೆಲಮಾಳಿಗೆಯಲ್ಲಿ ಗ್ರಂಥಾಲಯ ಇರುವುದರಿಂದ ಹಲವಾರು ವಿದ್ಯಾರ್ಥಿಗಳು ಈ ಮಾಳಿಗೆಯಲ್ಲೇ ಇದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ನೆಲಮಾಳಿಗೆಯಲ್ಲಿ ನೀರು ಇದ್ದಕ್ಕಿದ್ದಂತೆ ಹರಿಯಲಾರಂಭಿಸಿತು. ಸಿಕ್ಕಿಬಿದ್ದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಹಗ್ಗಗಳನ್ನು ಬಳಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಚಿಂಗ್ ಸೆಂಟರ್‌ನಲ್ಲಿನ ಪೀಠೋಪಕರಣಗಳು ಪ್ರವಾಹಕ್ಕೆ ಸಿಲುಕಿ ತೇಲುತ್ತಿದ್ದವು. ಹೀಗಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ಅಡಚಣೆಯನ್ನು ಉಂಟುಮಾಡಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.