ಛತ್ತೀಸಗಢದ ಕಥೆಗಾರ ವಿನೋದ್ ಕುಮಾರ್ ಶುಕ್ಲಾಗೆ 59ನೇ ಜ್ಞಾನಪೀಠ ಪ್ರಶಸ್ತಿ

ಜ್ಞಾನಪೀಠ ಪ್ರಶಸ್ತಿಯು ₹11 ಲಕ್ಷ ನಗದು ಮತ್ತು ಸರಸ್ವತಿ ದೇವಿಯ ಕಂಚಿನ ಪ್ರತಿಮೆ ಹೊಂದಿದ್ದು, ಭಾರತದ ಸಾಹಿತ್ಯ ಕ್ಷೇತ್ರದ ಅತಿ ಮಹತ್ವದ ಗೌರವಗಳಲ್ಲಿ ಒಂದಾಗಿದೆ.;

Update: 2025-03-22 14:55 GMT

ಛತ್ತೀಸಗಢದ ಹಿರಿಯ ಕಥೆಗಾರ ಹಾಗೂ ಕವಿ ವಿನೋದ್ ಕುಮಾರ್ ಶುಕ್ಲಾ ಅವರು 59ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದು ಛತ್ತೀಸಗಢ ರಾಜ್ಯದ لأيವುದಕ್ಕೂ ಮೊದಲ ಬಾರಿಗೆ ಲಭಿಸುತ್ತಿರುವ ಜ್ಞಾನಪೀಠ ಗೌರವವಾಗಿದೆ. ಹಿಂದಿ ಸಾಹಿತ್ಯದ ಸಮಕಾಲೀನ ಬರಹಗಾರರಲ್ಲಿ 88 ವರ್ಷದ ವಿನೋದ್‌ ಪ್ರಮುಖ ಹೆಸರಾಗಿದ್ದು, ಅವರು ಕಥೆ, ಕವಿತೆ, ಪ್ರಬಂಧ ಸೇರಿದಂತೆ ಹಲವು ಪ್ರಕಾರಗಳಲ್ಲಿ ಬರವಣಿಗೆ ನಡೆಸಿದ್ದಾರೆ.

ಜ್ಞಾನಪೀಠ ಪ್ರಶಸ್ತಿಯು ₹11 ಲಕ್ಷ ನಗದು ಮತ್ತು ಸರಸ್ವತಿ ದೇವಿಯ ಕಂಚಿನ ಪ್ರತಿಮೆ ಹೊಂದಿದ್ದು, ಭಾರತದ ಸಾಹಿತ್ಯ ಕ್ಷೇತ್ರದ ಅತಿ ಮಹತ್ವದ ಗೌರವಗಳಲ್ಲಿ ಒಂದಾಗಿದೆ. ಹಿಂದಿ ಭಾಷೆಗೆ ಇದು 12ನೇ ಜ್ಞಾನಪೀಠ ಪ್ರಶಸ್ತಿಯಾಗಿದೆ.

ಆಯ್ಕೆ ಸಮಿತಿ ಹೇಳಿದ್ದೇನು?

ಈ ವರ್ಷದ ಪ್ರಶಸ್ತಿ ಆಯ್ಕೆ ಸಮಿತಿಗೆ ಕಥೆಗಾರ್ತಿ ಪ್ರತಿಭಾ ರಾಯ್‌ ನೇತೃತ್ವ ವಹಿಸಿದ್ದರು. ಸಮಿತಿಯು "ಹಿಂದಿ ಸಾರಸ್ವತ ಲೋಕಕ್ಕೆ ವಿನೋದ್‌ ಅವರ ಅನನ್ಯ ಕೊಡುಗೆ, ಸಾಹಿತ್ಯದಲ್ಲಿ ಅವರ ಕ್ರಿಯಾತ್ಮಕ ಶಕ್ತಿ ಮತ್ತು ವಿಶಿಷ್ಟ ಬರಹ ಶೈಲಿ"ಯನ್ನು ಪರಿಗಣಿಸಿ ಅವರನ್ನು ಆಯ್ಕೆ ಮಾಡಿದೆ.

“ನಿಜಕ್ಕೂ ಇದು ದೊಡ್ಡ ಪ್ರಶಸ್ತಿ. ನನಗೆ ಇಂಥ ಪ್ರಶಸ್ತಿ ಸಿಗುತ್ತದೆ ಎಂಬ ನಿರೀಕ್ಷೆ ಇಲ್ಲ. ನಾನು ಪ್ರಶಸ್ತಿಗಳಿಗೆ ಅಷ್ಟು ಪ್ರಾಮುಖ್ಯತೆ ನೀಡಿದವನು ಅಲ್ಲ. ಕೆಲವರು ‘ನೀನು ಜ್ಞಾನಪೀಠಕ್ಕೆ ಅರ್ಹ’ ಎನ್ನುತ್ತಿದ್ದರೆ, ನಾನು ಏನು ಉತ್ತರಿಸಬೇಕೆಂದು ತಿಳಿಯದೆ ನಿಶ್ಶಬ್ದವಾಗಿರುತ್ತಿದ್ದೆ. ಬರವಣಿಗೆಯ ಕೆಲಸ ಸಣ್ಣದಲ್ಲ,” ಎಂದು ಅವರು ಹೇಳಿದ್ದಾರೆ.

ಅವರ ಪ್ರಮುಖ ಕೃತಿಗಳು

ದಿವಾರ್‌ ಮೇ ಏಕ್‌ ಖಿಡಕಿ ರಹತೀ ಥಿ’ ಕೃತಿಗೆ ವಿನೋದ್‌ ಅವರಿಗೆ 1999ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ‘ನೌಕರ್‌ ಕಿ ಕಮೀಜ್‌’ (1979) ಅವರ ಪ್ರಮುಖ ಕೃತಿಯಾಗಿದೆ. ಈ ಕಾದಂಬರಿಯನ್ನೇ ಇಟ್ಟುಕೊಂಡು, ಇದೇ ಹೆಸರಿನ ಸಿನಿಮಾವನ್ನು ಮೌನಿ ಕೌಲ್‌ ಅವರು ನಿರ್ದೇಶಿಸಿದ್ದಾರೆ. ‘ಸಬ್‌ ಕುಚ್‌ ಹೋನಾ ಬಚಾ ರಹೇಗಾ’ (1992) ಅವರ ಪ್ರಮುಖ ಕವನ ಸಂಕಲನವಾಗಿದೆ.

Tags:    

Similar News