ವಯನಾಡ್ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರ ಪರಿಶೀಲನೆ: ಸುರೇಶ್ ಗೋಪಿ
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 219 ದೇಹಗಳು ಮತ್ತು 154 ಕ್ಕೂ ಹೆಚ್ಚು ದೇಹದ ಭಾಗಗಳನ್ನು ಪಡೆಯಲಾಗಿದ್ದು, ಸುಮಾರು 206 ಜನರು ಇನ್ನೂ ಕಾಣೆಯಾಗಿದ್ದಾರೆ.
ಕೇರಳದ ವಯನಾಡಿನಲ್ಲಿ ನೂರಾರು ಜನರನ್ನು ಬಲಿ ತೆಗೆದುಕೊಂಡಿರುವ ಭೂಕುಸಿತ ಪ್ರಕರಣವನ್ನು ರಾಷ್ಟ್ರೀಯ ವಿಪತ್ತು ಎಂದು ವರ್ಗೀಕರಿಸಲು ವಿವಿಧ ವಲಯಗಳ ಬೇಡಿಕೆಯ ಹಿಂದಿನ ಕಾನೂನುಬದ್ಧತೆಯನ್ನು ಕೇಂದ್ರವು ಪರಿಶೀಲಿಸಲಿದೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಭಾನುವಾರ ಹೇಳಿದ್ದಾರೆ.
ಅವರು ಭಾನುವಾರ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಶೋಧ ಕಾರ್ಯಾಚರಣೆಗಳ ವಿವಿಧ ಅಂಶಗಳ ಕುರಿತು ರಕ್ಷಣಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶಗಳಲ್ಲಿ ನೂರಾರು ಮನೆಗಳನ್ನು ನಾಶಪಡಿಸಿದ ಭೂಕುಸಿತದ ಮೌಲ್ಯಮಾಪನವನ್ನು ನಡೆಸಿದ ನಂತರ ಕೇಂದ್ರ ಸರ್ಕಾರವು ಅದರ ಕಾನೂನು ಅಂಶಗಳನ್ನು ಪರಿಶೀಲಿಸುತ್ತದೆ. ಇದರ ಪರಿಣಾಮ ಅಧ್ಯಯನ ಆಗಬೇಕಿದೆ ಎಂದರು.
ವಿಪತ್ತು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ತಾವು ನೋಡಿದ ಮತ್ತು ಅರ್ಥಮಾಡಿಕೊಂಡ ಎಲ್ಲವನ್ನೂ ಕೇಂದ್ರ ಸರ್ಕಾರದ ಮುಂದೆ ಮಂಡಿಸುತ್ತೇನೆ. ಕೇರಳಕ್ಕೆ ಕೇಂದ್ರದಿಂದ ನೀಡಲಾಗುವ ನೆರವಿಗೆ ಸಂಬಂಧಿಸಿದಂತೆ ರಾಜ್ಯವು ಭೂಕುಸಿತದ ಪರಿಣಾಮವನ್ನು ಅಂದಾಜು ಮಾಡಿ ಮನವಿ ಸಲ್ಲಿಸಬೇಕಾಗಿದೆ. ರಾಜ್ಯವು ಕೇಂದ್ರಕ್ಕೆ ತಿಳಿಸಬೇಕು, ನಂತರ ಮಾತ್ರ ನೆರವು ನೀಡುವ ಬಗ್ಗೆ ಏನು ಹೇಳಬಹುದು ಎಂದು ಅವರು ತಿಳಿಸಿದರು.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಇದುವರೆಗೆ 219 ದೇಹಗಳು ಮತ್ತು 154 ಕ್ಕೂ ಹೆಚ್ಚು ದೇಹದ ಭಾಗಗಳನ್ನು ಪಡೆದುಕೊಳ್ಳಲಾಗಿದೆ. ಸುಮಾರು 206 ಜನರು ಇನ್ನೂ ನಾಪತ್ತೆಯಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದ್ದು, ಎನ್‌ಡಿಆರ್‌ಎಫ್, ಕೆ-9 ಶ್ವಾನದಳ, ಸೇನೆ, ವಿಶೇಷ ಕಾರ್ಯಾಚರಣೆ ಗುಂಪು, ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್, ಪೊಲೀಸ್, ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಸೇರಿದಂತೆ ವಿವಿಧ ಪಡೆಗಳ ನೂರಾರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.