'ಪಾಕಿಸ್ತಾನಿ' ಎಂದು ಕರೆಯುವುದು ಅಪರಾಧವಲ್ಲ, ಆದರೆ...: ಸುಪ್ರೀಂ ಕೋರ್ಟ್
ಉರ್ದು ಭಾಷಾಂತರಕಾರರೊಬ್ಬರನ್ನು ಸರ್ಕಾರಿ ಅಧಿಕಾರಿಯೊಬ್ಬರು ಪಾಕಿಸ್ತಾನಿ ಎಂದು ಕರೆದಿದ್ದರು. ಇದು ತಮ್ಮ ಧರ್ಮಕ್ಕೆ ಮಾಡಿರುವ ಅಪಮಾನ ಎಂದು ಅವರು ದೂರು ದಾಖಲಿಸಿದ್ದರು. ಆ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿದೆ.;
ಭಾರತದಲ್ಲಿ ಯಾವುದೇ ವ್ಯಕ್ತಿಯನ್ನು 'ಮಿಯಾ -ತಿಯಾ' ಅಥವಾ 'ಪಾಕಿಸ್ತಾನಿ' ಎಂದು ಕರೆಯುವುದು ಹೇಳಿದವರ ಕಳಪೆ ನಡತೆಯಾಗಿರುತ್ತದೆಯೇ ಹೊರತು ಅದು ಧಾರ್ಮಿಕ ಭಾವನೆಗಳನ್ನು ನೋಯಿಸುವ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾರ್ಚ್ 4ರಂದು) ಅಭಿಪ್ರಾಯಪಟ್ಟಿದೆ.
ಮುಸ್ಲಿಂ ಸರ್ಕಾರಿ ನೌಕರನನ್ನು 'ಪಾಕಿಸ್ತಾನಿ' ಎಂದು ಕರೆದ ಆರೋಪದ ಮೇಲೆ ಹಿಂದೂ ವ್ಯಕ್ತಿಯ ಮೇಲೆ ದಾಖಲಾಗಿದ್ದ ಪ್ರಕರಣವನ್ನು ಇತ್ಯರ್ಥಗೊಳಿಸಿದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ನ್ಯಾಯಪೀಠ ಈ ಹೇಳಿಕೆ ನೀಡಿದೆ.
"ದೂರುದಾರರ ಪರ ವಕೀಲರು, 'ಮಿಯಾ-ತಿಯಾ' ಮತ್ತು 'ಪಾಕಿಸ್ತಾನಿ' ಎಂದು ಕರೆಯುವ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ,'' ಎಂದು ನ್ಯಾಯಪೀಠಕ್ಕೆ ಅರಿಕೆ ಮಾಡಿದ್ದರು.
ವಿಚಾರಣೆ ವೇಳೆ ನ್ಯಾಯಪೀಠ, "ನಿಸ್ಸಂದೇಹವಾಗಿ ಆರೋಪಿ ನೀಡಿದ ಹೇಳಿಕೆಗಳು ಕಳಪೆ ಅಭಿರುಚಿ ಹೊಂದಿವೆ. ಆದಾಗ್ಯೂ, ಇದು ದೂರುದಾರರ ಧಾರ್ಮಿಕ ಭಾವನೆಗಳನ್ನು ನೋಯಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ" ಎಂದು ಅಭಿಪ್ರಾಯಪಟ್ಟಿತು.
ಏನಿದು ಘಟನೆ?
ಜಾರ್ಖಂಡ್ನಲ್ಲಿ ಉರ್ದು ಭಾಷಾಂತರಕಾರ ಮತ್ತು ಗುಮಾಸ್ತರಾಗಿರುವ ದೂರುದಾರರು, ಹರಿ ನಂದನ್ ಸಿಂಗ್ ಎಂಬುವರನ್ನು ಭೇಟಿ ಮಾಡಿ ಮಾಹಿತಿ ಹಕ್ಕು (ಆರ್ಟಿಐ) ಅರ್ಜಿಯೊಂದರ ಬಗ್ಗೆ ಮಾಹಿತಿ ಕೇಳಿದ್ದರು.
ಸಿಂಗ್, ಮಾಹಿತಿ ನೀಡುವ ಬದಲಾಗಿ ಅರ್ಜಿದಾರರ ಧರ್ಮವನ್ನು ಉಲ್ಲೇಖಿಸುವ ಮೂಲಕ ನಿಂದಿಸಿದ್ದರು. ತಮ್ಮ ಕರ್ತವ್ಯ ಮಾಡದೇ ಕ್ರಿಮಿನಲ್ ಬಲ ಪ್ರಯೋಗ ಮಾಡಿದ್ದಾರೆ ಎಂದು ಪೊಲೀಸ್ ದೂರು ದಾಖಲಾಗಿತ್ತು.
ಸಿಂಗ್, ಆರ್ಟಿಐ ಅರ್ಜಿದಾರರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಪ್ರಚೋದಿಸುವ ಉದ್ದೇಶದಿಂದ ಅವಮಾನವನ್ನು ಉಂಟುಮಾಡಿದ್ದಾರೆ. ಸರ್ಕಾರಿ ನೌಕರರ ವಿರುದ್ಧ ಕ್ರಿಮಿನಲ್ ಬಲ ಪ್ರಯೋಗ ಮಾಡಿದ್ದಾರೆ ಎಂದು ದೂರಲಾಗಿತ್ತು. ಜಾರ್ಖಂಡ್ ಹೈಕೋರ್ಟ್ ಸಿಂಗ್ ತಪ್ಪಿತಸ್ಥ ಎಂಬುದಾಗಿ ಆದೇಶ ಹೊರಡಿಸಿತ್ತು.
ಪ್ರಕರಣ ಮುಕ್ತಾಯಗೊಳಿಸಿದ ಸುಪ್ರೀಂ ಕೋರ್ಟ್
ಜಾರ್ಖಂಡ್ ಹೈಕೋರ್ಟ್ನ ಆದೇಶ ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಶಾಂತಿ ಉಲ್ಲಂಘನೆ ಮಾಡುವ ಅಥವಾ ಪ್ರಚೋದಿಸುವ ಯಾವುದೇ ಕೃತ್ಯ ಆರೋಪಿ ಕಡೆಯಿಂದ ನಡೆದಿಲ್ಲ ಎಂದು ಹೇಳಿತು. ಅಲ್ಲದೆ, ಸಿಂಗ್ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಿತು.
ಆರೋಪ ಸಮರ್ಥಿಸಲು ಹಲ್ಲೆ ಅಥವಾ ಬಲಪ್ರಯೋಗದ ನಡೆಸಿದ ಯಾವುದೇ ಪುರಾವೆಗಳಿಲ್ಲ ಎಂದು ಉನ್ನತ ನ್ಯಾಯಾಲಯ ತೀರ್ಪು ನೀಡಿದೆ