ರಾಜ್ಯದ ಹೆಸರಿನ ಅಧಿಕೃತ ಸಂಕ್ಷಿಪ್ತ ರೂಪ ಬದಲಿಸಿದ ತೆಲಂಗಾಣ

ತೆಲಂಗಾಣದ ಅಧಿಕೃತ ಸಂಕ್ಷಿಪ್ತ ರೂಪವನ್ನು 'ಟಿಎಸ್' ಬದಲಾಗಿ 'ಟಿಜಿ' ಎಂದು ಮಾರ್ಪಡಿಸಲು ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ನೇತೃತ್ವದ ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

Update: 2024-02-06 06:21 GMT
ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ

ತೆಲಂಗಾಣದ ಅಧಿಕೃತ ಸಂಕ್ಷಿಪ್ತ ರೂಪವನ್ನು 'ಟಿಎಸ್' ಬದಲಾಗಿ 'ಟಿಜಿ' ಎಂದು ಮಾರ್ಪಡಿಸಲು ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ನೇತೃತ್ವದ ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

ಆಡಳಿತಾರೂಢ ಕಾಂಗ್ರೆಸ್ ಸಚಿವ ಸಂಪುಟವು ವಾಹನ ನೋಂದಣಿ ಸಂಖ್ಯೆ ಫಲಕಗಳಲ್ಲಿ ರಾಜ್ಯದ ಹೆಸರನ್ನು ಸೂಚಿಸುವ 'ಟಿಎಸ್' ಅನ್ನು 'ಟಿಜಿ' ಎಂದು ಬದಲಿಸಿಕೊಂಡಿದೆ.

ಈ ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ಸರ್ಕಾರವು ತನ್ನ ಪಕ್ಷದ ಹೆಸರಿನೊಂದಿಗೆ ಹೋಲುವಂತೆ ರಾಜ್ಯದ ಸಂಕ್ಷಿಪ್ತ ರೂಪವನ್ನು ಹೊಂದಾಣಿಕೆ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಎಲ್ಲಾ ಭಾರತೀಯ ರಾಜ್ಯಗಳಿಗೆ ಎರಡು ಅಕ್ಷರಗಳ ಸಂಕ್ಷಿಪ್ತಗಳಿದ್ದು, ಕರ್ನಾಟಕಕ್ಕೆ 'ಕೆಎ', ತಮಿಳುನಾಡಿಗೆ 'ಟಿಎನ್', ಕೇರಳಕ್ಕೆ 'ಕೆಎಲ್' ಹೀಗೆ ಎರಡು ಅಕ್ಷರಗಳ ಸಂಕ್ಷೇಪಣಗಳನ್ನು ರಾಜ್ಯಗಳು ಹೊಂದಿವೆ.

ಅಧಿಕೃತ ನಾಡಗೀತೆ

ಕವಿ ಅಂದೇ ಶ್ರೀ ಬರೆದ ಜನಪ್ರಿಯ ಗೀತೆ 'ಜಯ ಜಯ ಹೇ ತೆಲಂಗಾಣ'ವನ್ನು ಅಧಿಕೃತ ನಾಡಗೀತೆಯಾಗಿ ಅಳವಡಿಸಿಕೊಳ್ಳಲು ಸಂಪುಟ ಸಭೆ ನಿರ್ಧರಿಸಿದೆ.

ಅಲ್ಲದೆ, ತೆಲಂಗಾಣ ಕ್ಯಾಬಿನೆಟ್ ಫೆಬ್ರವರಿ 8 ರಿಂದ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ನಡೆಸಲು ನಿರ್ಧರಿಸಿದ್ದು, ಅಧಿವೇಶನದ ಸಮಯದಲ್ಲಿ ಇನ್ನೂ ಎರಡು ಚುನಾವಣಾ 'ಖಾತರಿ'ಗಳನ್ನು ಘೋಷಿಸಲು ತೀರ್ಮಾನಿಸಿದೆ.

ಸಂಪುಟ ಸಭೆಯ ನಂತರ ಭಾನುವಾರ ರಾತ್ರಿ ಸುದ್ದಿಗಾರರಿಗೆ ಮಾಹಿತಿ ನೀಡಿದ ರಾಜ್ಯ ಐಟಿ ಸಚಿವ ಡಿ ಶ್ರೀಧರ್ ಬಾಬು, ಫೆಬ್ರವರಿ 8 ರಿಂದ ವಿಧಾನಸಭೆ ಅಧಿವೇಶನ ನಡೆಯಲಿದ್ದು, ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರ ಭಾಷಣದೊಂದಿಗೆ ಪ್ರಾರಂಭವಾಗುತ್ತದೆ ಎಂದು ತಿಳಿಸಿದ್ದಾರೆ.

ತೆಲಂಗಾಣ ಆಂದೋಲನದ ಆಶಯಗಳನ್ನು ಪ್ರತಿನಿಧಿಸುವ ಸಲುವಾಗಿ, ರಾಜ್ಯದ ಅಧಿಕೃತ ಚಿಹ್ನೆಯನ್ನು "ರಾಜಪ್ರಭುತ್ವದ ಯಾವುದೇ ಕುರುಹು ಇಲ್ಲದೆ ಜನರನ್ನು ಪ್ರತಿಬಿಂಬಿಸುವ" ರೀತಿಯಲ್ಲಿ ಬದಲಾಯಿಸಲು ಸಂಪುಟ ನಿರ್ಧರಿಸಿದೆ ಎಂದು ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.

ಗ್ಯಾರಂಟಿ ಘೋಷಣೆ

ಇನ್ನೂ ಎರಡು 'ಗ್ಯಾರಂಟಿ'ಗಳ ಅನುಷ್ಠಾನವನ್ನು ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಘೋಷಿಸಲಿದ್ದಾರೆ ಎಂದು ಶ್ರೀಧರ್ ಬಾಬು ಹೇಳಿದರು.

ಕಾಂಗ್ರೆಸ್ ಘೋಷಿಸಿದ ಆರು ಚುನಾವಣಾ 'ಖಾತರಿ'ಗಳಲ್ಲಿ, ಸರ್ಕಾರವು ಈ ಹಿಂದೆ ಎರಡು ಭರವಸೆಗಳ ಅನುಷ್ಠಾನವನ್ನು ಪ್ರಾರಂಭಿಸಿತ್ತು. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮತ್ತು ಬಡವರಿಗೆ 10 ಲಕ್ಷ ರೂಪಾಯಿಗಳ ಆರೋಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡಿದೆ.

ಈ ಹಿಂದೆ ಘೋಷಿಸಲಾಗಿದ್ದ ರಾಜ್ಯದಲ್ಲಿ ಜಾತಿ ಗಣತಿ ನಡೆಸುವ ಸರ್ಕಾರದ ನಿರ್ಧಾರಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ರಾಜ್ಯ ಸ್ವಾಮ್ಯದ ನಿಜಾಮ್ ಶುಗರ್ಸ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಮತ್ತು ಕೊಡಂಗಲ್ ಪ್ರದೇಶಾಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲು ಸಂಪುಟ ನಿರ್ಧರಿಸಿದೆ. ಕೊಡಂಗಲ್‌ ಕ್ಷೇತ್ರವನ್ನು ಸಿಎಂ ರೇವಂತ್ ರೆಡ್ಡಿ ಪ್ರತಿನಿಧಿಸುತ್ತಿದ್ದಾರೆ.

Tags:    

Similar News